ಮೊಹಾಲಿಯಲ್ಲಿ ಇಂದು ಆರ್‌ಸಿಬಿಗೆ ಪಂಜಾಬ್‌ ಸವಾಲು; ಧವನ್‌ ಅನುಮಾನ ಮೊಹಾಲಿ: ಕಳೆದ ಪಂದ್ಯದಲ್ಲಿ ಗೆಲುವಿನ ದಡದಲ್ಲಿ ಎಡವಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದವರು ಐಪಿಎಲ್‌ ಪಂದ್ಯದಲ್ಲಿ ಗುರುವಾರ ಪಂಜಾಬ್‌ ಕಿಂಗ್ಸ್‌ ತಂಡದ ಸವಾಲು ಎದುರಿಸಲಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಫಫ್‌ ಡುಪ್ಲೆಸಿ ಬಳಗ ಎಂಟು ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಎದುರು ಸೋತಿತ್ತು. ಗೆಲುವಿಗೆ 227 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಆರ್‌ಸಿಬಿ, 8 ವಿಕೆಟ್‌ಗಳಿಗೆ 218 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಈ ಪಂದ್ಯದಲ್ಲೂ ಬೆಂಗಳೂರಿನ ತಂಡದ ನಿರೀಕ್ಷೆಯ ಭಾರ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಇದೆ. ವಿರಾಟ್‌ ಕೊಹ್ಲಿ, ಫಫ್‌ ಡುಪ್ಲೆಸಿ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್ ಅವರು ಅಬ್ಬರಿಸಿದರೆ ಮಾತ್ರ ಗೆಲುವು ಸಾಧ್ಯ ಎಂಬಂಥ ಪರಿಸ್ಥಿತಿ ಇದೆ. ಚೆನ್ನೈ ಎದುರಿನ ಪಂದ್ಯದಲ್ಲಿ ಕೊಹ್ಲಿ (6) ಮತ್ತು ಮಹಿಪಾಲ್‌ ಲೊಮ್ರೊರ್‌ (0) ವಿಫಲರಾಗಿದ್ದರು. ಇದರಿಂದ ಇನಿಂಗ್ಸ್‌ಗೆ ಬಲ ತುಂಬುವ ಒತ್ತಡ ಡುಪ್ಲೆಸಿ ಮತ್ತು ಮ್ಯಾಕ್ಸ್‌ವೆಲ್‌ ಮೇಲೆ ಬಿದ್ದಿತ್ತು. ಅವರಿಬ್ಬರು ಅಬ್ಬರದ ಆಟವಾಡಿ ತಂಡವನ್ನು ಗೆಲುವಿನ ಸನಿಹ ತಂದು ನಿಲ್ಲಿಸಿದ್ದರು. ಬಳಿಕದ ಬ್ಯಾಟರ್‌ಗಳು ಒತ್ತಡಕ್ಕೆ ಒಳಗಾದ್ದರಿಂದ ತಂಡಕ್ಕೆ ಜಯ ದಕ್ಕಿರಲಿಲ್ಲ. ದಿನೇಶ್‌ ಕಾರ್ತಿಕ್, ಶಹಬಾಜ್‌ ಅಹ್ಮದ್‌ ಮತ್ತು ಸುಯಶ್‌ ಪ್ರಭುದೇಸಾಯಿ ಅವರಿಂದ ಜವಾಬ್ದಾರಿಯುತ ಆಟ ಬರಬೇಕಿದೆ. ಪಂಜಾಬ್‌ ಕಿಂಗ್ಸ್‌ಗೆ ಹೋಲಿಸಿದರೆ ಆರ್‌ಸಿಬಿಯ ಬೌಲಿಂಗ್‌ ವಿಭಾಗ ಸ್ವಲ್ಪ ‘ದುರ್ಬಲ’ ಎನಿಸಿದೆ. ಆದರೂ ಮೊಹಮ್ಮದ್‌ ಸಿರಾಜ್‌, ಹರ್ಷಲ್‌ ಪಟೇಲ್‌ ಮತ್ತು ವೇಯ್ನ್‌ ಪಾರ್ನೆಲ್‌ ಅವರು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ಸಿರಾಜ್‌ ಎಲ್ಲ ಪಂದ್ಯಗಳಲ್ಲೂ ಪರಿಣಾಮಕಾರಿ ಎನಿಸಿದ್ದಾರೆ. ಐದು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ನಾಲ್ಕು ಪಾಯಿಂಟ್ಸ್‌ಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲಕ್ಕೇರಬೇಕಾದರೆ 2–3 ಪಂದ್ಯಗಳಲ್ಲಿ ಸತತ ಗೆಲುವು ಅನಿವಾರ್ಯ ಎನಿಸಿದೆ. ಪಂಜಾಬ್‌ ವಿರುದ್ಧದ ಪಂದ್ಯದೊಂದಿಗೆ ಗೆಲುವಿನ ಹಾದಿಗೆ ಮರಳುವ ವಿಶ್ವಾಸವನ್ನು ತಂಡ ಹೊಂದಿದೆ. ಶಿಖರ್‌ ಅನುಮಾನ: ನಾಯಕ ಶಿಖರ್‌ ಧವನ್‌ ಅವರು ಗಾಯಗೊಂಡಿರುವುದು ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಹಿನ್ನಡೆ ಉಂಟುಮಾಡಿದೆ. ಭುಜದ ನೋವಿನಿಂದ ಬಳಲುತ್ತಿರುವ ಅವರು ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧದ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಈ ಆರಂಭಿಕ ಬ್ಯಾಟರ್‌ ಗುರುವಾರ ಕಣಕ್ಕಿಳಿಯುವರೇ ಎಂಬುದು ಖಾತರಿಯಿಲ್ಲ. ಪಂದ್ಯ ಆರಂಭ: ಮಧ್ಯಾಹ್ನ 3.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ, ಜಿಯೊಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.