2023: ಸೂಪರ್‌ ಜೈಂಟ್ಸ್‌ಗೆ ಮಣಿದ ರಾಯಲ್ಸ್‌ ಜೈಪುರ: ಬೌಲರ್‌ಗಳು ಮೇಲುಗೈ ಸಾಧಿಸಿದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡ, ರಾಜಸ್ಥಾನ ರಾಯಲ್ಸ್‌ ತಂಡವನ್ನು 10 ರನ್‌ಗಳಿಂದ ಮಣಿಸಿತು. ಇಲ್ಲಿಯ ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಖನೌ, ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 154 ರನ್‌ ಗಳಿಸಿತು. ಆ ಬಳಿಕ ಶಿಸ್ತುಬದ್ಧ ದಾಳಿ ನಡೆಸಿ ರಾಜಸ್ಥಾನ ತಂಡವನ್ನು 6 ವಿಕೆಟ್‌ಗಳಿಗೆ 144 ರನ್‌ಗಳಿಗೆ ನಿಯಂತ್ರಿಸಿತು. ನಾಲ್ಕು ವರ್ಷಗಳ ನಂತರ ತವರಿನ ಕ್ರೀಡಾಂಗಣದಲ್ಲಿ ಆಡಲು ಇಳಿದ ಸಂಜು ಸ್ಯಾಮ್ಸನ್‌ ಬಳಗ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿದರೂ, ಬ್ಯಾಟರ್‌ಗಳು ನಿರಾಸೆ ಉಂಟುಮಾಡಿದರು. ಸಾಧಾರಣ ಗುರಿ ಬೆನ್ನಟ್ಟಿದ ರಾಯಲ್ಸ್‌ ತಂಡಕ್ಕೆ ಯಶಸ್ವಿ ಜೈಸ್ವಾಲ್ (44) ಮತ್ತು ಜೋಸ್‌ ಬಟ್ಲರ್‌ (40) ಮೊದಲ ವಿಕೆಟ್‌ಗೆ 87 ರನ್‌ ಸೇರಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆ ಬಳಿಕ ಲಖನೌ ಬೌಲರ್‌ಗಳು ಅಮೋಘ ರೀತಿಯಲ್ಲಿ ಮರುಹೋರಾಟ ನಡೆಸಿದರು. ಆವೇಶ್‌ ಖಾನ್‌ (25ಕ್ಕೆ 3) ಮತ್ತು ಮಾರ್ಕಸ್‌ ಸ್ಟೊಯಿನಿಸ್‌ (28ಕ್ಕೆ 2) ಪರಿಣಾಮಕಾರಿ ದಾಳಿ ನಡೆಸಿದರೆ, ನವೀನ್‌ ಉಲ್‌ ಹಕ್‌ ಹಾಗೂ ರವಿ ಬಿಷ್ಣೋಯಿ ಅವರು ವಿಕೆಟ್‌ ಪಡೆಯದಿದ್ದರೂ ರನ್‌ ನಿಯಂತ್ರಿಸಿದರು. ಸ್ಟೊಯಿನಿಸ್‌ ಅವರು ಆರಂಭಿಕ ಬ್ಯಾಟರ್‌ಗಳನ್ನು ಪೆವಿಲಿಯನ್‌ಗಟ್ಟಿದರು. ಸಂಜು ರನೌಟ್‌ ಆದರೆ, ಶಿಮ್ರೊನ್‌ ಹೆಟ್ಮಯೆರ್‌ ವಿಕೆಟ್‌ಅನ್ನು ಆವೇಶ್‌ ಪಡೆದರು. ದೇವದತ್ತ ಪಡಿಕ್ಕಲ್‌ ಮತ್ತು ರಿಯಾನ್ ಪರಾಗ್‌ ಗೆಲುವಿಗೆ ನಡೆಸಿದ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಗೆಲುವಿಗೆ ಕೊನೆಯ ಎರಡು ಓವರ್‌ಗಳಲ್ಲಿ 29 ರನ್‌ಗಳು ಬೇಕಿದ್ದವು. ನವೀನ್‌ ಉಲ್‌ ಹಕ್‌ 19ನೇ ಓವರ್‌ನಲ್ಲಿ 10 ರನ್‌ ಮಾತ್ರ ಬಿಟ್ಟುಕೊಟ್ಟರು. ಆವೇಶ್ ಬೌಲ್‌ ಮಾಡಿದ ಕೊನೆಯ ಓವರ್‌ನ ಮೊದಲ ಎಸೆತವನ್ನು ರಿಯಾನ್‌ ಪರಾಗ್‌ ಬೌಂಡರಿಗಟ್ಟಿದರೆ, ಎರಡನೇ ಎಸೆತದಲ್ಲಿ ಒಂದು ರನ್‌ ಬಂತು. ಮುಂದಿನ ಎರಡು ಎಸೆತಗಳಲ್ಲಿ ಪಡಿಕ್ಕಲ್ ಮತ್ತು ಧ್ರುವ ಜುರೆಲ್‌ ಔಟಾಗುವುದರೊಂದಿಗೆ ಗೆಲುವಿನ ಆಸೆ ಕಮರಿತು. ಮೇಯರ್ಸ್‌ ಅರ್ಧಶತಕ: ಮೊದಲು ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಲಖನೌ ತಂಡದ ಪರ ಕೈಲ್‌ ಮೇಯರ್ಸ್‌ (51, 42 ಎಸೆತ) ಮತ್ತು ನಾಯಕ ಕೆ.ಎಲ್‌.ರಾಹುಲ್‌ (39, 32 ಎ) ಮೊದಲ ವಿಕೆಟ್‌ಗೆ 82 ರನ್‌ ಕಲೆಹಾಕಿದರು. ಮಧ್ಯಮ ಕ್ರಮಾಂಕ ವಿಫಲವಾದರೂ, ಮಾರ್ಕಸ್‌ ಸ್ಟೊಯಿನಿಸ್‌ (21) ಮತ್ತು ನಿಕೋಲಸ್‌ ಪೂರನ್‌ (29, 20ಎ) ತಂಡದ ಮೊತ್ತ 150 ದಾಟಲು ನೆರವಾದರು. ಟ್ರೆಂಟ್‌ ಬೌಲ್ಟ್‌ ಬಿಗು ದಾಳಿ ಸಂಘಟಿಸಿ ನಾಲ್ಕು ಓವರುಗಳಲ್ಲಿ ಬರೇ 16 ರನ್ನಿತ್ತು ಒಂದು ವಿಕೆಟ್‌ ಪಡೆದರು. ರವಿಚಂದ್ರನ್‌ ಅಶ್ವಿನ್‌ ಕೂಡ ಪರಿಣಾಮಕಾರಿ ದಾಳಿ ನಡೆಸಿ 23 ರನ್ನಿಗೆ 2 ವಿಕೆಟ್‌ ಗಳಿಸಿ ಎದುರಾಳಿಗಳ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ರಾಹುಲ್‌ ಕೇವಲ ಆರು ರನ್‌ ಗಳಿಸಿದ್ದಾಗ, ಸಂದೀಪ್ ಶರ್ಮಾ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಕ್ಯಾಚ್‌ ಕೈಚೆಲ್ಲಿದ್ದರು. 11ನೇ ಓವರ್‌ನಲ್ಲಿ ರಾಹುಲ್‌ ವಿಕೆಟ್‌ ಕಬಳಿಸಿದ ಜೇಸನ್‌ ಹೋಲ್ಡರ್‌ ಮೊದಲ ವಿಕೆಟ್‌ ಜೊತೆಯಾಟ ಮುರಿದರು. ಆಯುಷ್‌ ಬಡೋನಿ ಹಾಗೂ ದೀಪಕ್‌ ಹೂಡಾ ಎರಡಂಕಿ ಮೊತ್ತ ದಾಟಲಿಲ್ಲ. ಆಯುಷ್‌ ಅವರು ಬೌಲ್ಟ್‌ (16ಕ್ಕೆ 1) ಬೌಲಿಂಗ್‌ನಲ್ಲಿ ಬೌಲ್ಡ್‌ ಆದರೆ, ಹೂಡಾ ಅವರ ವಿಕೆಟ್‌ ಅಶ್ವಿನ್ ಪಾಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.