–2023 | ರಾಜಸ್ಥಾನ ರಾಯಲ್ಸ್‌ಗೆ ಮಣಿದ ಚೆನ್ನೈ ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕನಾಗಿ 200ನೇ ಪಂದ್ಯವನ್ನಾಡಿದ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಗೆಲುವು ದಕ್ಕಲಿಲ್ಲ. ಧೋನಿ ಮತ್ತು ಜಡೇಜ ಜೊತೆಗೂಡಿ ಕೊನೆಯ ಐದು ಓವರ್‌ಗಳಲ್ಲಿ ವೀರೋಚಿತ ಹೋರಾಟ ತೋರಿದರೂ ಆತಿಥೇಯ ತಂಡ ಗೆಲ್ಲಲು ವಿಫಲವಾಯಿತು. ಚೆಪಾಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಮೂರು ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟ್‌ ಮಾಡಿದ ಸಂಜು ಸ್ಯಾಮ್ಸನ್‌ ಬಳಗ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 175 ರನ್‌ ಗಳಿಸಿತು. ಅದಕ್ಕುತ್ತರವಾಗಿ ಚೆನ್ನೈ 20 ಓವರ್‌ ಗಳಲ್ಲಿ ಆರು ವಿಕೆಟ್‌ಗೆ 172 ರನ್‌ ದಾಖಲಿಸಿತು. ಸವಾಲಿನ ಗುರಿ ಬೆನ್ನತ್ತಿದ್ದ ಚೆನ್ನೈ ತಂಡವು ಆರಂಭಿಕ ಆಟಗಾರ ಋತುರಾಜ್ ಗಾಯಕವಾಡ (8) ಅವರ ವಿಕೆಟ್‌ಅನ್ನು ಬೇಗ ಕಳೆದುಕೊಂಡಿತು. ಡೆವೊನ್ ಕಾನ್ವೆ (50) ಹಾಗೂ ಅಜಿಂಕ್ಯ ರಹಾನೆ (31) ಎರಡನೇ ವಿಕೆಟ್‌ಗೆ 68 ರನ್‌ ಸೇರಿಸಿ ತಂಡಕ್ಕೆ ಆಸರೆಯಾಗುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅಜಿಂಕ್ಯ ಅವರು ಆರ್‌.ಅಶ್ವಿನ್ (25ಕ್ಕೆ 2) ಅವರಿಗೆ ವಿಕೆಟ್‌ ಒಪ್ಪಿಸಿದ ಬಳಿಕ ತಂಡಕ್ಕೆ ನಿರೀಕ್ಷಿತ ಜೊತೆಯಾಟಗಳು ಮೂಡಿ ಬರಲಿಲ್ಲ. ಶಿವಂ ದುಬೆ, ಮೊಯೀನ್ ಅಲಿ ಮತ್ತು ಅಂಬಟಿ ರಾಯುಡು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಮುರಿಯದ ಏಳನೇ ವಿಕೆಟ್‌ಗೆ ರವೀಂದ್ರ ಜಡೇಜ (ಔಟಾಗದೆ 25) ಹಾಗೂ ಧೋನಿ (ಔಟಾಗದೆ 32) ಅಬ್ಬರದ ಆಟವಾಡಿದರು. ಇವರಿಬ್ಬರೂ ಕೊನೆಯ ಐದು ಓವರ್‌ಗಳಲ್ಲಿ 59 ರನ್‌ ದೋಚಿದರು. ಸಂದೀಪ್ ಶರ್ಮಾ ಎಸೆದ ಕೊನೆಯ ಓವರ್‌ನಲ್ಲಿ ಚೆನ್ನೈ ಜಯಕ್ಕೆ 21 ರನ್ ಬೇಕಿತ್ತು. ಧೋನಿ ಎರಡು ಸಿಕ್ಸರ್ ಸಿಡಿಸಿ ತೋಳ್ಬಲ ಪ್ರದರ್ಶಿಸಿದರೂ ಜಯದ ಕನಸು ಕೈಗೂಡಲಿಲ್ಲ. ಬಟ್ಲರ್‌ ಅರ್ಧಶತಕ: ಈ ಬಾರಿಯ ಟೂರ್ನಿಯಲ್ಲಿ ಮೂರನೇ ಅರ್ಧಶತಕ ಗಳಿಸಿದ ಜೋಸ್‌ ಬಟ್ಲರ್‌ (52 ರನ್‌, 36 ಎ., 4X1, 6X3) ಅವರು ರಾಯಲ್ಸ್‌ ಇನಿಂಗ್ಸ್‌ನಲ್ಲಿ ಗಮನ ಸೆಳೆದರು. ದೇವದತ್ತ ಪಡಿಕ್ಕಲ್‌, ಆರ್‌.ಅಶ್ವಿನ್‌ ಮತ್ತು ಶಿಮ್ರೊನ್‌ ಹೆಟ್ಮೆಯೆರ್‌ ಅವರೂ ಸ್ಕೋರ್‌ ಹೆಚ್ಚಲು ನೆರವಾದರು. ಚೆನ್ನೈ ಬೌಲರ್‌ಗಳಲ್ಲಿ ಮಿಂಚಿದ ರವೀಂದ್ರ ಜಡೇಜ 21 ರನ್‌ಗಳಿಗೆ ಎರಡು ವಿಕೆಟ್‌ ಪಡೆದರು. ಮಧ್ಯಮ ವೇಗಿಗಳಾದ ಅಕಾಶ್‌ ಸಿಂಗ್‌ ಮತ್ತು ತುಷಾರ್‌ ದೇಶಪಾಂಡೆ ಅವರೂ ತಲಾ ಎರಡು ವಿಕೆಟ್‌ ಗಳಿಸಿದರು. ಬಟ್ಲರ್‌ ಆಸರೆ: ಟಾಸ್‌ ಗೆದ್ದ ಧೋನಿ, ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಯಶಸ್ವಿ ಜೈಸ್ವಾಲ್‌ (10) ಅವರನ್ನು ರಾಯಲ್ಸ್‌ ತಂಡ ಬೇಗನೇ ಕಳೆದುಕೊಂಡಿತು. ತುಷಾರ್‌ ದೇಶಪಾಂಡೆ ಎಸೆತದಲ್ಲಿ ಶಿವಂ ದುಬೆಗೆ ಕ್ಯಾಚಿತ್ತು ಅವರು ನಿರ್ಗಮಿಸಿದರು. ಬಟ್ಲರ್‌ ಅವರನ್ನು ಕೂಡಿಕೊಂಡ ದೇವದತ್ತ ಪಡಿಕ್ಕಲ್‌ (38 ರನ್‌, 26 ಎ., 4X5) ಇನಿಂಗ್ಸ್‌ಗೆ ಬಲ ನೀಡಿದರು. ಎದುರಾಳಿ ತಂಡದ ಸ್ಪಿನ್ನರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದ ಈ ಜೋಡಿ ಎರಡನೇ ವಿಕೆಟ್‌ಗೆ 44 ಎಸೆತಗಳಲ್ಲಿ 71 ರನ್‌ ಸೇರಿಸಿತು. ಬಟ್ಲರ್‌ ಐಪಿಎಲ್‌ನಲ್ಲಿ 3,000 ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು. ರಾಯಲ್ಸ್‌ ತಂಡ ದೊಡ್ಡ ಮೊತ್ತ ಕಲೆ ಹಾಕುವ ಸೂಚನೆ ನೀಡಿದ್ದಾಗ, ಜಡೇಜ ಕೈಚಳಕ ಮೆರೆದರು. ಪಡಿಕ್ಕಲ್ ಮತ್ತು ನಾಯಕ ಸ್ಯಾಮ್ಸನ್‌ (0) ಅವರನ್ನು ಮೂರು ಎಸೆತಗಳ ಅಂತರದಲ್ಲಿ ಪೆವಿಲಿಯನ್‌ಗೆ ಅಟ್ಟಿದರು. ಆದರೆ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು ಬಂದ ಆರ್‌.ಅಶ್ವಿನ್‌ (30) ಅವರು ಬಟ್ಲರ್‌ಗೆ ತಕ್ಕ ಸಾಥ್‌ ನೀಡಿದರಲ್ಲದೆ, ಸ್ಕೋರಿಂಗ್‌ ವೇಗ ತಗ್ಗದಂತೆ ನೋಡಿಕೊಂಡರು. ಆಕಾಶ್‌ ಸಿಂಗ್‌ ಬೌಲಿಂಗ್‌ನಲ್ಲಿ ಅಶ್ವಿನ್‌ ಸತತ ಎರಡು ಸಿಕ್ಸರ್ ಸಿಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.