ರಾಹುಲ್ –ಶಿಖರ್ ಮುಖಾಮುಖಿ ಲಖನೌ (ಪಿಟಿಐ): ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡ ಈಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗಳಿಸಿದ್ದ ರೋಚಕ ಜಯದಿಂದಾಗಿ ಅಪಾರ ಆತ್ಮವಿಶ್ವಾಸದಲ್ಲಿದೆ. ಇದೇ ಹುಮ್ಮಸ್ಸಿನಲ್ಲಿ ಲಖನೌ ಶನಿವಾರ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್‌ ಎದುರು ಕಣಕ್ಕಿಳಿಯಲಿದೆ. ಲಖನೌ ಬಳಗವು ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಿಸಿದೆ. ಪಂಜಾಬ್ ಎರಡು ಗೆದ್ದು ಎರಡರಲ್ಲಿ ಸೋತಿದೆ. ಪಂಜಾಬ್ ತಂಡದ ಸೋಲುಗಳಿಗೆ ಬ್ಯಾಟರ್‌ಗಳ ವೈಫಲ್ಯ ಕಾರಣವಾಗಿತ್ತು. ಎಡಗೈ ಬ್ಯಾಟರ್ ಶಿಖರ್ ಮಾತ್ರ (40, ಆಜೇಯ 86 ಹಾಗೂ ಅಜೇಯ 99) ಉತ್ತಮ ಲಯದಲ್ಲಿದ್ದಾರೆ. ವೇಗಿಗಳಾದ ಸ್ಯಾಮ್‌ ಕರನ್ ಹಾಗೂ ಆರ್ಷದೀಪ್ ಸಿಂಗ್ ಅವರು ಉತ್ತಮ ಲಯದಲ್ಲಿದ್ದಾರೆ. ಸ್ಪಿನ್ನರ್‌ಗಳಾದ ಹರಪ್ರೀತ್ ಬ್ರಾರ್ ಹಾಗೂ ರಾಹುಲ್ ಚಾಹರ್ ಕೂಡ ಉತ್ತಮ ಕಾಣಿಕೆ ನೀಡಬಲ್ಲವರು. ಈ ಬೌಲಿಂಗ್ ಪಡೆಯ ಮುಂದೆ ಲಖನೌ ತಂಡದ ಬ್ಯಾಟಿಂಗ್‌ ಬಲವನ್ನು ನಿಯಂತ್ರಿಸುವ ಕಠಿಣ ಸವಾಲು ಇದೆ. ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಮಾರ್ಕಸ್ ಸ್ಟೋಯಿನಿಸ್ ಮತ್ತು ನಿಕೊಲಸ್ ಪೂರನ್ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಗಮನ ಸೆಳೆದಿತ್ತು. ಪೂರನ್ 19 ಎಸೆತಗಳಲ್ಲಿ 62 ರನ್‌ ಗಳಿಸಿದ್ದರು. ಅದರಿಂದಾಗಿ ತಂಡವು 213 ರನ್‌ಗಳ ಬೃಹತ್ ಗುರಿಯನ್ನು ಸಾಧಿಸಿತ್ತು. ಕೈಲ್ ಮೇಯರ್ಸ್‌ ಹಾಗೂ ಯುವ ಆಟಗಾರ ಆಯುಷ್ ಬಡೋಣಿ ಉತ್ತಮ ಲಯದಲ್ಲಿದ್ದಾರೆ. ತಂಡದ ಸ್ಪಿನ್ನರ್‌ಗಳಾದ ಅಮಿತ್ ಮಿಶ್ರಾ, ರವಿ ಬಿಷ್ಣೋಯಿ ಮತ್ತು ಕೃಣಾಲ್ ಪಾಂಡ್ಯ ಎದುರಾಳಿ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸಬಲ್ಲ ಸಮರ್ಥರಾಗಿದ್ದಾರೆ. ತಂಡಗಳು ಲಖನೌ ಸೂಪರ್‌ಜೈಂಟ್ಸ್: ಕೆ.ಎಲ್. ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಮಾರ್ಕಸ್ ಸ್ಟೊಯಿನಿಸ್, ನಿಕೊಲಸ್ ಪೂರನ್ (ವಿಕೆಟ್‌ಕೀಪರ್), ಆಯುಷ್ ಬಡೋಣಿ, ಜಯದೇವ್ ಉನದ್ಕತ್, ಮಾರ್ಕ್ ವುಡ್, ರವಿ ಬಿಷ್ಣೋಯಿ, ಆವೇಶ್ ಖಾನ್, ಅಮಿತ್ ಮಿಶ್ರಾ, ಕೆ.ಗೌತಮ್. ಪಂಜಾಬ್‌ ಕಿಂಗ್ಸ್: ಶಿಖರ್ ಧವನ್ (ನಾಯಕ), ಪ್ರಭಸಿಮ್ರನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರೂಕ್ ಖಾನ್, ಹರಪ್ರೀತ್ ಬ್ರಾರ್, ರಿಷಿ ಧವನ್, ಕಗಿಸೊ ರಬಾಡ, ಆರ್ಷದೀಪ್ ಸಿಂಗ್, ರಾಹುಲ್ ಚಾಹರ್. ಲಿಯಾಮ್ ಲಿವಿಂಗ್‌ಸ್ಟೋನ್. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ. ಜಿಯೊ ಸಿನೆಮಾ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.