| ಕ್ರಿಕೆಟ್ ಸೆಮಿಫೈನಲ್ ನಾಳೆ: ಭಾರತಕ್ಕೆ ಬಾಂಗ್ಲಾ ಸವಾಲು ಹಾಂಗ್‌ಝೌ: ಋತುರಾಜ್ ಗಾಯಕವಾಡ ನಾಯಕತ್ವದ ಭಾರತ ತಂಡವು ಶುಕ್ರವಾರ ಏಷ್ಯನ್ ಕ್ರೀಡಾಕೂಟದ ಟಿ20 ಕ್ರಿಕೆಟ್‌ ಸೆಮಿಫೈನಲ್‌ನಲ್ಲಿ ಬಾಂಗ್ಲಾ ವಿರುದ್ಧ ಆಡಲಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ನೇಪಾಳ ವಿರುದ್ಧ ಭಾರತ ತಂಡವು ಜಯಿಸಿತ್ತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶತಕ ಹೊಡೆದಿದ್ದರು. ಇದೇ ಮೊದಲ ಬಾರಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ತಂಡವು ಆಡುತ್ತಿದೆ. ಮಹಿಳೆಯರ ತಂಡವು ಈಚೆಗೆ ಚಿನ್ನದ ಪದಕ ಜಯಿಸಿತ್ತು. ಸಾಯಿಕಿಶೋರ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ರವಿ ಬಿಷ್ಣೋಯಿ ಮತ್ತು ಆವೇಶ್ ಖಾನ್ ಅವರಂತಹ ಅನುಭವಿಗಳು ತಂಡದಲ್ಲಿದ್ದಾರೆ. ಆದ್ದರಿಂದಾಗಿ ಬಾಂಗ್ಲಾ ಎದುರು ಗೆದ್ದು ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ. ಸೈಫ್ ಹುಸೇನ್ ನಾಯಕತ್ವದ ಬಾಂಗ್ಲಾ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿದ್ದಾರೆ. ದೇಶದ ಸೀನಿಯರ್ ತಂಡವು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದೆ. ಅದರಿಂದಾಗಿ ಉಭಯ ತಂಡಗಳಲ್ಲಿ ಭಾರತವೇ ಹೆಚ್ಚು ಬಲಶಾಲಿ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆರಂಭ: ಬೆಳಿಗ್ಗೆ 6.30 ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.