ಯಶಸ್ಸಿಗೆ ಬೇಕು ಇ.ಕ್ಯೂ. ಹೇಮಂತ್ ಶಾಲಾ ದಿನಗಳಲ್ಲಿ ಯಾವಾಗಲೂ ಫಸ್ಟ್; ಆದರೆ, ಎಂಜಿನಿಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿದ ಅವನು ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಸರಿಯಾಗಿ ಹೊಂದಿಕೊಳ್ಳಲಿಲ್ಲ. ಆ ಕೆಲಸ ಬಿಟ್ಟು ಮತ್ತೊಂದು ಕೆಲಸಕ್ಕೆ ಸೇರಿದ. ಅಲ್ಲೂ ಯಶಸ್ವಿಯಾಗದೆ ಈಗ ನಿರುದ್ಯೋಗಿಯಾಗಿ ಕಾಲ ಕಳೆಯುತ್ತಿದ್ದಾನೆ. ಅವನ ಕೌಟುಂಬಿಕ ಜೀವನವೂ ಸುಖಕರವಾಗಿಲ್ಲ; ಪತ್ನಿಯೊಂದಿಗೆ ಸರಿಯಾಗಿ ಹೊಂದಿಕೊಳ್ಳಲಾರದೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಪ್ರಕರಣ ಕೋರ್ಟ್‌ನಲ್ಲಿದೆ. ಹೇಮಂತ್ ಬುದ್ಧಿವಂತನಾಗಿದ್ದರೂ, ತನ್ನ ಜೀವನದಲ್ಲಿ ಯಶಸ್ಸು ಗಳಿಸದೇ ಇರುವುದಕ್ಕೆ ಕಾರಣವಾದ ಅಂಶ ಯಾವುದು?ಅವನಂತೆಯೇ ಅನೇಕರು ಉತ್ತಮ ಬುದ್ಧಿಶಕ್ತಿ ಹೊಂದಿದ್ದರೂ ಬದುಕಿನಲ್ಲಿ ಯಶಸ್ವಿಯಾಗುವುದಿಲ್ಲ ಏಕೆ? ಈ ಕುರಿತು ಕುತೂಹಲ ಹೊಂದಿದ್ದ ಮನೋವಿಜ್ಞಾನಿಗಳು ಹಲವಾರು ದಶಕಗಳ ಕಾಲ ಸಂಶೋಧನೆ ನಡೆಸಿ ಕಂಡುಕೊಂಡ ಸತ್ಯವೆಂದರೆ, ಉತ್ತಮ ಯಶಸ್ಸು ಪಡೆಯಲು ಬುದ್ಧಿಶಕ್ತಿ ಮಾತ್ರ ಕಾರಣವಲ್ಲ ಎಂಬ ಅಂಶ! ಭಾವನಾತ್ಮಕ ಬುದ್ಧಿಶಕ್ತಿ ಹೊಂದಿರುವವರು ಜೀವನದಲ್ಲಿ ಅತಿ ಹೆಚ್ಚಿನ ಯಶಸ್ಸು ಗಳಿಸುತ್ತಾರೆ ಎಂಬ ಪ್ರಮುಖ ಅಂಶವನ್ನು ಅವರು ಈ ಸಂದರ್ಭದಲ್ಲಿ ಹೊರಗೆಡವಿದ್ದಾರೆ. ನೀವು ನಿಮ್ಮ ವರ್ತನೆಯನ್ನು ಹೇಗೆ ನಿರ್ವಹಣೆ ಮಾಡುವಿರಿ, ಸಾಮಾಜಿಕ ಸಂಕೀರ್ಣತೆಗಳನ್ನು ಹೇಗೆ ನಿಭಾಯಿಸುವಿರಿ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ಯಾವ ರೀತಿಯ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ ಎಂಬುದನ್ನು ಭಾವನಾತ್ಮಕ ಬುದ್ಧಿಶಕ್ತಿಯು ( -) ಒಳಗೊಳ್ಳುತ್ತದೆ. ಭಾವನೆಗಳನ್ನು ಅವು ಜರುಗುತ್ತಿರುವ ಹಾಗೆಯೇ ಗ್ರಹಿಸಿ, ಎಚ್ಚರದ ಸ್ಥಿತಿಯಲ್ಲಿದ್ದು ನಿಮ್ಮ ವರ್ತನೆಗಳನ್ನು ನಿರ್ದೇಶಿಸುವ ಸಾಮರ್ಥ್ಯವು ವೈಯಕ್ತಿಕ ಸಾಮರ್ಥ್ಯ ಎನಿಸಿಕೊಳ್ಳುತ್ತದೆ. ಇತರ ವ್ಯಕ್ತಿಗಳಲ್ಲಿ ಉಂಟಾಗುವ ಭಾವನೆಗಳನ್ನು ನಿಖರವಾಗಿ ಗ್ರಹಿಸಿ, ಅದರೊಂದಿಗೆ ನಿಮ್ಮ ಭಾವನೆಗಳನ್ನೂ ಉಪಯೋಗಿಸಿಕೊಂಡು ಸಂಬಂಧಗಳನ್ನು ಉತ್ತಮವಾಗಿ ನಿರ್ವಹಿಸುವುದು ಸಾಮಾಜಿಕ ಸಾಮರ್ಥ್ಯ ಎನಿಸಿಕೊಳ್ಳುತ್ತದೆ. ಈ ಎರಡೂ ಸಾಮರ್ಥ್ಯಗಳು ಭಾವನಾತ್ಮಕ ಬುದ್ಧಿಶಕ್ತಿಯ ಭಾಗಗಳಾಗಿವೆ. ಮಕ್ಕಳಲ್ಲಿ ಇ.ಕ್ಯೂ. ಬೆಳೆಸಲು ಅಗತ್ಯವಾದ ಕೆಲವು ಟಿಪ್ಸ್‌ಗಳು ಇಲ್ಲಿವೆ: 1. ಭಾವನೆಗಳು, ಪ್ರತಿಕ್ರಿಯೆಗಳನ್ನು ಒಪ್ಪಿಕೊಳ್ಳಿ: `ಹೆಂಗಸಿನ ಹಾಗೆ ಅಳಬೇಡ' `ಅಂಜುಬುರುಕನಂತೆ ವರ್ತಿಸಬೇಡ' ಎಂದು ನೀವು ಪ್ರತಿಕ್ರಿಯಿಸುವುದು ಸಮಂಜಸ ಅಲ್ಲ. ಅದರ ಬದಲು `ಓಹ್! ನಿನಗೆ ಎಷ್ಟೊಂದು ದುಃಖ ಆಗಿದೆ ಎಂಬುದನ್ನು ನನಗೆ ತೋರಿಸುತ್ತಿರುವೆ' `ನಿನ್ನನ್ನು ಗಮನಿಸಿದರೆ ನೀನು ಭಯಗೊಂಡಂತೆ ಕಾಣಿಸುತ್ತಿದೆ' ಇತ್ಯಾದಿಯಾಗಿ ನೀವು ಪ್ರತಿಕ್ರಿಯಿಸುವುದು ಒಳಿತು. ಮಕ್ಕಳು ತೋರುವ ಭಾವನೆಗಳು ಹಾಗೂ ಪ್ರತಿಕ್ರಿಯೆಗಳನ್ನು ಒಪ್ಪಿಕೊಳ್ಳುವ ಮೂಲಕ, ಅವರೆಡೆ ಅನುಭೂತಿ ವ್ಯಕ್ತಪಡಿಸುವುದರಿಂದ ಅವರಿಗೂ ಸಮಾಧಾನ ಆಗುತ್ತದೆ ಹಾಗೂ ಅವರಲ್ಲೂ ಅನುಭೂತಿಯ ಭಾವನೆ ಬೆಳೆಯುತ್ತದೆ. 2. ಭಾವನೆ ಹಂಚಿಕೊಳ್ಳಲು ಅವಕಾಶ ನೀಡಿ: ಯಾವುದೇ ಭಾವನೆಗಳು ಅವಮಾನಕರ ಅಥವಾ ಕೆಟ್ಟವಲ್ಲ. ಮಕ್ಕಳು ತಮ್ಮಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸದಂತೆ ಒತ್ತಾಯಪೂರ್ವಕವಾಗಿ ದಮನ ಮಾಡಬಾರದು. ಹೀಗೆ ದಮನಿಸಿದ ಭಾವನೆಗಳು ಕೆಲವೊಮ್ಮೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಮಕ್ಕಳು ತಮ್ಮ ಭಾವನೆಗಳನ್ನು ಸಮಂಜಸವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸಬೇಕು. ಆಗ ಯಾವುದೇ ಭಾವನೆಯನ್ನು ಬೇಕಾದರೂ ನಿರ್ವಹಣೆ ಮಾಡಲು ನಿಮ್ಮ ಮಗು ಕಲಿಯುತ್ತದೆ. `ಪರೀಕ್ಷೆಯ ಫಲಿತಾಂಶದಿಂದ ನೀನು ಅವಮಾನಿತನಾಗಿರುವೆ ಎನಿಸುತ್ತದೆ. ನಾನು ಸಹ ಪದವಿ ತರಗತಿಯಲ್ಲಿ ಒಮ್ಮೆ ಫೇಲಾಗಿದ್ದೆ. ನಿನಗೆ ಅಳು ಬರುತ್ತಿದ್ದರೆ ಒಮ್ಮೆ ಅತ್ತು ಬಿಡುವುದು ಒಳ್ಳೆಯದು'- ಈ ರೀತಿಯ ಹೇಳಿಕೆಗಳಿಂದ ಮಕ್ಕಳು ತಮ್ಮ ಭಾವನೆಗಳನ್ನು ಗುರುತಿಸಿ, ಹಂಚಿಕೊಳ್ಳಲು ಅವಕಾಶ ಮಾಡಿಕೊಡಬೇಕು. 3. ಇತರರ ಭಾವನೆ ಗುರುತಿಸಲು ನೆರವಾಗಿ: ಕೆಲವು ಸನ್ನಿವೇಶ, ಸಂದರ್ಭಗಳಲ್ಲಿ ತನ್ನ ಗೆಳೆಯರು, ಶಿಕ್ಷಕರು, ತಂದೆ-ತಾಯಿ ಯಾವ ರೀತಿಯ ಭಾವನೆಗಳನ್ನು ಹೊಂದಿರಬಹುದೆಂದು ಗುರುತಿಸಲು ಮಕ್ಕಳಿಗೆ ಸಹಾಯ ಮಾಡಬೇಕು. ಆಗ ಅವರಲ್ಲಿ ಅನುಭೂತಿಯ ಭಾವನೆಗಳು ಬೆಳೆಯಲು ಹಾಗೂ ಇತರರ ಭಾವನೆಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಉದ್ಭವ ಆಗಬಹುದಾದ ಸಂಘರ್ಷಗಳು ಕಡಿಮೆಯಾಗುತ್ತವೆ. `ನಿಮ್ಮ ಸ್ನೇಹಿತರ ವರ್ತನೆಯಿಂದ ಶಿಕ್ಷಕರ ಮನಸ್ಸಿಗೆ ಎಷ್ಟು ನೋವಾಗಿರಬಹುದೆಂದು ಊಹಿಸುತ್ತೀಯಾ?' `ನಿನ್ನ ಮಾತಿನಿಂದ ನಿನ್ನ ಗೆಳೆಯನಿಗೆ ಬೇಜಾರಾಗಿರಬಹುದು ಎನಿಸುತ್ತಿದೆಯಾ?'- ಈ ರೀತಿಯ ಹೇಳಿಕೆಗಳು ಮಕ್ಕಳಿಗೆ ಇತರರ ಭಾವನೆಗಳನ್ನು ಗುರುತಿಸಲು ಹಾಗೂ ತನ್ಮೂಲಕ ಅವುಗಳನ್ನು ಗೌರವಿಸಲು ಅವಕಾಶ ದೊರೆಯುತ್ತದೆ. ಈ ಕಾರಣದಿಂದ ಒಬ್ಬ ಶಿಕ್ಷಕ ಅಥವಾ ಪೋಷಕರಾಗಿ ಮಕ್ಕಳಲ್ಲಿ ಇ.ಕ್ಯೂ. ಬೆಳೆಸುವುದು ಬಹು ಮುಖ್ಯ. ತಡವಾದರೂ ಪರವಾಗಿಲ್ಲ, ಅವರ ವರ್ತನೆಗಳನ್ನು ಗಮನಿಸಿ. ಅಗತ್ಯವಿರುವ ಸಂದರ್ಭಗಳಲ್ಲಿ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿ. ವಿವಿಧ ಉದ್ವೇಗದ ಸನ್ನಿವೇಶಗಳಲ್ಲಿ ಅವರ ಪ್ರತಿಕ್ರಿಯೆಗಳನ್ನು ಗಮನಿಸಿ. ನಮ್ರ ರೀತಿಯಲ್ಲಿ ಮಾರ್ಗದರ್ಶನ ನೀಡಲು ಹಿಂಜರಿಯದಿರಿ. 4. ಉದ್ವೇಗ/ ಒತ್ತಡ ಗುರುತಿಸಲಿ: ಮಕ್ಕಳು ಯಾವ ಸಂದರ್ಭದಲ್ಲಿ ತಮ್ಮ ಶಾಂತ ಮನಃಸ್ಥಿತಿ ಕಳೆದುಕೊಂಡು ಉದ್ವೇಗಕ್ಕೆ ಒಳಗಾಗುತ್ತಾರೆ, ಯಾವ ಕಾರಣದಿಂದ ಅವರಿಗೆ ಮಾನಸಿಕ ಒತ್ತಡ ಉಂಟಾಗುತ್ತದೆ ಎಂಬುದನ್ನು ಸ್ವತಃ ಗುರುತಿಸಿಕೊಳ್ಳುವುದನ್ನು ಕಲಿಸಿ. ಹೆಚ್ಚಿನ ವೇಳೆ ಒತ್ತಡದ ಮೂಲವನ್ನು ಅರಿತಾಗ ಅದರ ನಿರ್ವಹಣೆ ಸುಲಭವಾಗುತ್ತದೆ. 5. ತಾವೇ ಸಾಂತ್ವನಗೊಳ್ಳಲಿ: ತಮ್ಮ ತೀವ್ರ ರೀತಿಯ ಉದ್ವೇಗ ಅಥವಾ ಒತ್ತಡದ ಭಾವನೆಗಳಿಂದ ತಾವೇ ಹೊರಬಂದು ಶಾಂತಗೊಳ್ಳುವುದನ್ನು ಕಲಿಸುವುದು ಮುಖ್ಯ. ಇದರಿಂದ ವಿಪರೀತದ ಭಾವನೆಗಳಾದ ಕೋಪ, ಹತಾಶೆ, ಭಯ ಇತ್ಯಾದಿಗಳನ್ನು ಸ್ವತಃ ನಿರ್ವಹಿಸಿಕೊಳ್ಳುವುದನ್ನು ಹಂತ ಹಂತವಾಗಿ ಮಕ್ಕಳು ಕಲಿಯುತ್ತಾರೆ. ಕೆಲವೊಮ್ಮೆ ಅವರು ಯಾವುದಾದರೂ ಒತ್ತಡದ ಸನ್ನಿವೇಶದಲ್ಲಿ ವಿಪರೀತದ ವರ್ತನೆಯನ್ನು ತೋರ್ಪಡಿಸಿದಾಗ, ಆ ಸಂದರ್ಭದಲ್ಲಿ ಅವರು ಯಾವ ರೀತಿ ಪ್ರಬುದ್ಧತೆಯಿಂದ ವರ್ತಿಸಬಹುದಿತ್ತು ಎಂಬುದನ್ನು ಘಟನೆಯ ನಂತರ ಅವರೊಂದಿಗೆ ಚರ್ಚಿಸಿ. 6. ಸಮಸ್ಯೆಗಳ ನಿರ್ವಹಣೆ/ ಪರಿಹಾರ ಕಲಿಸಿ: ಭಾವನೆಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಒಪ್ಪಿಕೊಂಡಲ್ಲಿ ಭಾವನೆಗಳ ತೀವ್ರತೆ ತನ್ನಷ್ಟಕ್ಕೇ ಕಡಿಮೆಯಾಗುತ್ತದೆ. ಇದು ಸಮಸ್ಯೆಗಳ ನಿವಾರಣೆಗೆ ಅಗತ್ಯವಾದ ವೇದಿಕೆ ಸೃಷ್ಟಿಸುತ್ತದೆ. ಕೆಲವು ಸನ್ನಿವೇಶಗಳಲ್ಲಿ ಸಮಸ್ಯೆಗಳನ್ನು ಯಾವ ರೀತಿ ಪರಿಹರಿಸಬಹುದು ಅಥವಾ ನಿರ್ವಹಿಸಬಹುದು ಎಂಬ ಬಗ್ಗೆ ಉದಾಹರಣೆಗಳ ಸಹಿತ ತಿಳಿಸಿಕೊಡುವುದು ಒಳ್ಳೆಯದು. 7. ಮಾದರಿ ಇ.ಕ್ಯೂ.: ವಯಸ್ಕರಾಗಿ ಒತ್ತಡದ ಸನ್ನಿವೇಶದಲ್ಲಿ ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಮಕ್ಕಳು ತಮ್ಮ ವರ್ತನೆಗಳನ್ನು ತೋರ್ಪಡಿಸಿಕೊಳ್ಳುವುದನ್ನು ಕಲಿಯುತ್ತಾರೆ. ಒತ್ತಡದ ಸನ್ನಿವೇಶದಲ್ಲಿ ನೀವು ಕೂಗಾಡುವುದು ಅಥವಾ ಸಿಕ್ಕಿದ್ದನ್ನು ಎಸೆದರೆ ನಿಮ್ಮ ಮಕ್ಕಳೂ ಅಂತಹುದೇ ವರ್ತನೆಗಳನ್ನು ತೋರ್ಪಡಿಸುವ ಸಾಧ್ಯತೆ ಇರುತ್ತದೆ. ವಯಸ್ಕರು ಭಾವನೆಗಳನ್ನು ಆರೋಗ್ಯಕರವಾಗಿ ವ್ಯಕ್ತಪಡಿಸುವ ಮೂಲಕ ಮಕ್ಕಳಲ್ಲಿ ಮಾದರಿ ಇ.ಕ್ಯೂ. ಬೆಳೆಸಲು ಸಹಾಯ ಮಾಡಬೇಕು. 8. ಧನಾತ್ಮಕ ಮಾತು ಕಲಿಯಲಿ: ಧನಾತ್ಮಕ ಸ್ವಯಂ ಹೇಳಿಕೆಗಳು ಅಥವಾ ಮಾತುಗಳು ಮಕ್ಕಳಲ್ಲಿ ಇ.ಕ್ಯೂ. ಬೆಳೆಸಿಕೊಳ್ಳಲು ನೆರವಾಗುತ್ತವೆ. ಇದನ್ನು ನಾನು ಮಾಡಬಲ್ಲೆ, ಈ ಸನ್ನಿವೇಶವನ್ನು ನಾನು ನಿಭಾಯಿಸಬಲ್ಲೆ, ನಾನು ಸದಾ ಸಂತೋಷವಾಗಿ ಇರಬಲ್ಲೆ, ಇಂತಹ ಸವಾಲನ್ನು ನಾನು ಇಷ್ಟಪಡುತ್ತೇನೆ... ಇತ್ಯಾದಿ ಸ್ವಯಂ ಹೇಳಿಕೆಗಳನ್ನು ಮಕ್ಕಳು ಪುನರಾವರ್ತಿಸಿದರೆ ಪರಿಣಾಮಕಾರಿ ಆಗುತ್ತದೆ. 9. ಸಾಧನೆ ಪ್ರೇರೇಪಿಸಿ: ನಿಮ್ಮ ಮಗು ಯಾವುದರಿಂದ ಪ್ರೇರೇಪಣೆಗೊಳ್ಳುತ್ತದೆ ಎಂಬುದನ್ನು ಗುರುತಿಸಿ ಪ್ರೋತ್ಸಾಹಿಸಿ. `ನಿನ್ನ ಗುರಿ ಅದೆಷ್ಟೇ ಕಠಿಣವಿದ್ದರೂ ನೀನು ಸಾಧಿಸಿ ತೋರಿಸುತ್ತಿರುವುದು ನನಗೆ ಸಂತಸ ತಂದಿದೆ' ಇತ್ಯಾದಿ ಹೇಳಿಕೆಗಳ ಮೂಲಕ ಪ್ರಶಂಸಿಸಿ. 10. ಸಂಘರ್ಷಕ್ಕೆ ಪರಿಹಾರ: ಸಂಘರ್ಷಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬಹುದು ಎಂಬುದನ್ನು ಹಾಗೂ ಈ ರೀತಿ ಮಾಡುವುದರಿಂದ ಸರ್ವರಿಗೂ ಹಿತ ಎಂಬುದನ್ನು ಪ್ರಕರಣಗಳ ಸಹಿತ ಮನ ಮುಟ್ಟುವಂತೆ ವಿವರಿಸಿ. 11. ಪ್ರಶಂಸಿಸಿ: ಒತ್ತಡದ ಸನ್ನಿವೇಶದಲ್ಲಿ ನಿಮ್ಮ ಮಗು ತೀವ್ರ ರೀತಿಯ ಭಾವುಕತೆ ತೋರದೆ, ಸ್ವಯಂ ನಿರ್ವಹಣೆ ತೋರಿದಾಗ `ನಿನ್ನ ಸ್ನೇಹಿತ ಕೂಗಾಡುವಾಗ ನೀನು ಸಂಯಮದಿಂದ ಇದ್ದದ್ದು ನನಗೆ ಇಷ್ಟವಾಯಿತು' ಎಂಬಂತಹ ಮಾತುಗಳಿಂದ ಪ್ರಶಂಸೆ ಮಾಡಿ. ಆಗ ಸ್ವಯಂ ನಿರ್ವಹಣೆಯ ಕೌಶಲಗಳು ಪುನರ್‌ಬಲಗೊಳ್ಳುತ್ತವೆ. 12. ಪರ್ಯಾಯ ಇರಲಿ: ಕೆಲವರು ಕೋಪ ಅಥವಾ ಹತಾಶೆಗೊಂಡಾಗ ಹೊಡೆಯುವುದು, ಸಿಕ್ಕಿದ್ದನ್ನು ಎಸೆಯುವುದು ಮಾಡುತ್ತಾರೆ. ಅದಕ್ಕೆ ಬದಲಾಗಿ ಆರೋಗ್ಯಕರವಾದ ಪರ್ಯಾಯ ಮಾರ್ಗಗಳ ಮೂಲಕ ಭಾವನೆ ವ್ಯಕ್ತಪಡಿಸುವುದನ್ನು ತಿಳಿಸಿಕೊಡಿ. `ನಿನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ಮಾತಿನಲ್ಲಿ ಯಾವ ರೀತಿ ತಿಳಿಸಬಹುದು ಎಂಬುದನ್ನು ಆಲೋಚಿಸಿದ್ದೀಯಾ?' ಈ ರೀತಿಯ ಹೇಳಿಕೆಗಳ ಮೂಲಕ ಮಕ್ಕಳು ಆತ್ಮಾವಲೋಕನ ಮಾಡಿಕೊಂಡು ಕೋಪ, ಹತಾಶ ಭಾವನೆಗಳನ್ನು ಸೌಜನ್ಯಯುತವಾಗಿ ಹೊರಹಾಕುವುದನ್ನು ಕಲಿಯುತ್ತಾರೆ. ಆಧುನಿಕ ನಾಗರಿಕ ಸಮಾಜದಲ್ಲಿ ಮಕ್ಕಳು ತುಂಬಾ ಸೂಕ್ಷ್ಮ ಮನಃಸ್ಥಿತಿಯವರಾಗಿದ್ದಾರೆ. ಪೋಷಕರು ಅಥವಾ ಶಿಕ್ಷಕರು ಕೆಲವೊಮ್ಮೆ ಸಣ್ಣದಾಗಿ ಬೈದರೂ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಪ್ರಯತ್ನಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಮಕ್ಕಳಲ್ಲಿ ಇ.ಕ್ಯೂ. ಬೆಳೆಸುವುದು ಪ್ರಾಮುಖ್ಯತೆ ಪಡೆಯುತ್ತದೆ. ಎಷ್ಟೋ ವೇಳೆ ಹಿರಿಯರಾದ ನಾವು ಮಕ್ಕಳೊಂದಿಗೆ ಸಂಯಮದಿಂದ ವರ್ತಿಸದೆ ಕೂಗಾಡಿ ನಮ್ಮಳಗಿರುವ ಆತಂಕಗಳನ್ನು ಹೊರಹಾಕುತ್ತೇವೆ. ಇ.ಕ್ಯೂ. ಹೆಚ್ಚಿಸಿಕೊಳ್ಳಲು ನಾವೂ ಪ್ರಯತ್ನಿಸಿ, ನಮ್ಮ ಮಕ್ಕಳಲ್ಲೂ ಅದನ್ನು ಬೆಳೆಸಲು ಮುಂದಾದರೆ, ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಅಲ್ಲವೇ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.