ನಿಮ್ಮ ಭವಿಷ್ಯವನ್ನುವಿನ್ಯಾಸಗೊಳಿಸಿ! ಯಾವುದೇ ಉದ್ಯಮದಲ್ಲಿ ಜಾಗತಿಕ ಮಟ್ಟದ ಟ್ರೆಂಡ್ ಅಥವಾ ಶೈಲಿಗಳು ಮುಖ್ಯವಾಗುತ್ತವೆ. ಆದರೆ ವಿನ್ಯಾಸ ಕ್ಷೇತ್ರದಲ್ಲಿ ಇದು ಎಲ್ಲಕ್ಕಿಂತ ಮುಖ್ಯವಾಗುತ್ತದೆ. ಮೇರಿ ವಾನ್ ಎಬೆನಾರ್ ಎಸ್ಚೆನ್‌ಬಾಚ್ ಹೇಳಿರುವ ಪ್ರಸಿದ್ಧ ನುಡಿಗಟ್ಟು ಇಂತಿದೆ- `ಶೀಘ್ರ ಗತಿಯಲ್ಲಿ ಫ್ಯಾಷನ್ ಸಾರ್ವತ್ರಿಕ ಆದಂತೆಲ್ಲ ಹಳತು ಎನಿಸುತ್ತದೆ'. ಕಳೆದ ಕೆಲವು ವರ್ಷಗಳಿಂದ ಭಾರತೀಯ ವಿನ್ಯಾಸಕಾರರು ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚುತ್ತಿದ್ದಾರೆ. ದಶಕದ ಹಿಂದೆ ಕೆಲವು ಹೆಸರುಗಳು ಮಾತ್ರ ಈ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದವು. ಇಂದು ಹಾಲಿವುಡ್‌ನ ಗಣ್ಯಾತಿಗಣ್ಯರು ಕೆಲವು ಭಾರತೀಯ ವಿನ್ಯಾಸಕಾರರು ಸಿದ್ಧಪಡಿಸಿದ ಉಡುಪು ಧರಿಸುವುದನ್ನು ಗಮನಿಸಬಹುದು. ಇದರಿಂದಾಗಿ ಪ್ರತಿಭಾವಂತರಿಗೆ ಹೇರಳ ಅವಕಾಶಗಳು ಸೃಷ್ಟಿಯಾಗುತ್ತಿವೆ. ಯೂರೋಪ್ ಮತ್ತು ಅಮೆರಿಕದಲ್ಲಿ ಏಷ್ಯನ್ನರ ಜನಸಂಖ್ಯೆ ವ್ಯಾಪಕವಾಗಿದೆ. ಇದರ ಪರಿಣಾಮವಾಗಿ ಯೂರೋಪ್ ಅಥವಾ ಆಸ್ಟ್ರೇಲಿಯಾದ ಜನಸಾಮಾನ್ಯರಿಂದ ಹಿಡಿದು ಅಮೆರಿಕದ ಹಾಲಿವುಡ್ ಗಣ್ಯರ ತನಕ ಭಾರತೀಯ ವಿನ್ಯಾಸಕಾರರ ಅಪೂರ್ವ ವಿನ್ಯಾಸಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬದಲಾವಣೆಯ ಪರಿಣಾಮವಾಗಿ ಸಾಗರೋತ್ತರ ಕಡೆಗಳಲ್ಲಿ ಏಷ್ಯನ್ ಮಳಿಗೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಭಾರತೀಯ ಸಾಂಪ್ರದಾಯಿಕ ಶೈಲಿ ಜನಪ್ರಿಯವಾಗುತ್ತಿದೆ. ಏಷ್ಯದಲ್ಲಿ ಪಾಶ್ಚಿಮಾತ್ಯರ ಪ್ರಭಾವವೂ ಶೈಲಿಗಳಲ್ಲಿ ಕಂಡು ಬರುತ್ತಿದೆ. ಏಷ್ಯನ್ ರಾಷ್ಟ್ರಗಳ ಆರ್ಥಿಕತೆಯೂ ಅಭಿವೃದ್ಧಿಯಾಗಿದೆ. ಈ ಹಿಂದೆ ಯಾವುದನ್ನು ಐಶಾರಾಮಿ ಎಂದು ಕರೆಯಲಾಗುತ್ತಿತ್ತೋ, ಅದು ಇಂದು ಸಾಮಾನ್ಯ ಆಗಿಬಿಟ್ಟಿದೆ. ಈ ಎಲ್ಲ ಬದಲಾವಣೆಗಳು ವಿನ್ಯಾಸಕಾರರಿಗೆ ಬೇಡಿಕೆಯನ್ನು ಸೃಷ್ಟಿಸಿಕೊಟ್ಟಿವೆ. ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ. ಏಷ್ಯನ್ನರ ಖರೀದಿ ಸಾಮರ್ಥ್ಯ ಹೆಚ್ಚಿದಂತೆ ವಿನ್ಯಾಸಕಾರರು ಬ್ರ್ಯಾಂಡ್ ಮತ್ತು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗಳನ್ನು ಸಿದ್ಧಪಡಿಸುತ್ತಾರೆ. ಇದು ಮುಖ್ಯವಾಗಿ ಭಾರತ ಮತ್ತು ಚೀನಾದಲ್ಲಿ ವಿನ್ಯಾಸ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚಲು ಪ್ರಮುಖ ಕಾರಣವಾಗಿದೆ. ವಿನ್ಯಾಸ ಕ್ಷೇತ್ರ ಈ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳ ಬಯಸುವ ಯುವಜನರು ಕಲೆ ಮತ್ತು ವಿನ್ಯಾಸದ ಬಗ್ಗೆ ಅಭಿರುಚಿ, ಆಸಕ್ತಿ ಹೊಂದಿರಬೇಕು. ಸೂಕ್ತವಾದ ಶಾಲೆಯಲ್ಲಿ ಅಭ್ಯಾಸ ಮಾಡಬೇಕು. ಅಲ್ಲಿ 2-ಡಿ ಸ್ಕೆಚ್ಚಿಂಗ್, ಲೈಫ್ ಡ್ರಾಯಿಂಗ್, ಅಬ್ಸರ್ವೇಶನಲ್ ಡ್ರಾಯಿಂಗ್, ಸ್ಕಲ್‌ಪ್ಟಿಂಗ್, ಒಳಾಂಗಣ ವಿನ್ಯಾಸ, ಫ್ಯಾಶನ್ ಡಿಸೈನ್ ಅಥವಾ ಗ್ರಾಫಿಕ್ ಡಿಸೈನ್ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆಯನ್ನು ಒದಗಿಸಲಾಗುತ್ತದೆ. ಒಳಾಂಗಣ ವಿನ್ಯಾಸ ಈ ಕ್ಷೇತ್ರವು ವಾಸಸ್ಥಳದ ವ್ಯವಸ್ಥೆ, ಸಂಘಟನೆ, ನಿರ್ವಹಣೆ, ಯೋಜನೆ, ಮನೆಯ ಕೊಠಡಿಗಳು, ಕಚೇರಿ, ಚಿಲ್ಲರೆ ಮಳಿಗೆಗಳು, ಶೋ ರೂಮ್, ಹೋಟೆಲ್, ವಸ್ತುಪ್ರದರ್ಶನ ಮಳಿಗೆಗಳು, ವಿಮಾನ ನಿಲ್ದಾಣ, ವಿಚಾರ ಸಂಕಿರಣ ಕೇಂದ್ರ, ಸಿನಿಮಾ ಮಂದಿರ, ಫಿಲ್ಮ್ ಸ್ಟುಡಿಯೊ, ವಾಣಿಜ್ಯ ಸಂಕೀರ್ಣ ಇತ್ಯಾದಿಗಳ ಒಳಾಂಗಣ ವಿನ್ಯಾಸಗಳನ್ನು ಒಳಗೊಂಡಿದೆ. ಸೂಕ್ತವಾದ ಬಜೆಟ್‌ನಲ್ಲಿ ಸರಿಯಾದ ಜಾಗವನ್ನು ಅನುಕೂಲಕರ ಮತ್ತು ಆಕರ್ಷಕವಾಗಿ ರೂಪಿಸುವುದು ಒಳಾಂಗಣ ವಿನ್ಯಾಸದ ಉದ್ದೇಶ. ಈ ಕ್ಷೇತ್ರ ಕಳೆದ ಕೆಲವು ವರ್ಷಗಳಿಂದ ಜನಪ್ರಿಯವಾಗುತ್ತಿದೆ. ಜನ ಈಗ ಹೆಚ್ಚು ಫ್ಯಾಶನ್ ಪ್ರಜ್ಞೆಯನ್ನು ಹೊಂದಿದ್ದಾರೆ. ವಿನ್ಯಾಸ, ಲೇಔಟ್, ಪ್ಲೇಸ್‌ಮೆಂಟ್ ಇತ್ಯಾದಿಗಳು ಕಚೇರಿ, ಕಾರ್ಖಾನೆಗಳಿಗೂ ಅನ್ವಯವಾಗುತ್ತಿವೆ. ಹೀಗಾಗಿ ಒಳಾಂಗಣ ವಿನ್ಯಾಸ ಇಂದು ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ವಲಯ ಮುಕ್ತವಾಗಿದ್ದು ಪ್ರತಿಭಾವಂತರನ್ನು ಕೈಬೀಸಿ ಕರೆಯುತ್ತಿದೆ. ಬಹುತೇಕ ಒಳಾಂಗಣ ವಿನ್ಯಾಸಕಾರರು ಒಂದಿಲ್ಲೊಂದು ವಿಷಯಗಳಲ್ಲಿ ಪರಿಣತಿ ಪಡೆದಿರುತ್ತಾರೆ. ಉದಾಹರಣೆಗೆ ಕೆಲವರು ಬ್ಯುಸಿನೆಸ್ ವಿನ್ಯಾಸ, ಮತ್ತೆ ಕೆಲವರು ವಸತಿ ವಿನ್ಯಾಸ, ಇನ್ನು ಕೆಲವರು ಲ್ಯಾಂಡ್‌ಸ್ಕೇಪ್ ವಿನ್ಯಾಸಗಳಲ್ಲಿ ಪ್ರಭುತ್ವ ಗಳಿಸಿರುತ್ತಾರೆ. ಕೆಲವರು ನಿರ್ದಿಷ್ಟ ಕೋಣೆ, ಅಡುಗೆ ಕೋಣೆ ಅಥವಾ ಬಾತ್ ರೂಮ್ ವಿನ್ಯಾಸಗಳಲ್ಲಿ ಪರಿಣತಿ ಸಾಧಿಸುತ್ತಾರೆ. ಒಳಾಂಗಣ ವಿನ್ಯಾಸಕಾರರು ಗ್ರಾಹಕರ ಬಜೆಟ್, ಅಭಿರುಚಿಗೆ ತಕ್ಕಂತೆ ವಿನ್ಯಾಸ ಸಿದ್ಧಪಡಿಸುತ್ತಾರೆ. ಡ್ರಾಯಿಂಗ್ ಸಿದ್ಧಪಡಿಸುತ್ತಾರೆ. ಗೋಡೆಗಳ ಅಲಂಕಾರ, ನೆಲ, ಛಾವಣಿ, ಕಿಟಕಿಗಳ ಅಲಂಕಾರ, ಪ್ಲೇಸ್‌ಮೆಂಟ್ ಮಾತ್ರವಲ್ಲದೆ, ಬೆಳಕು, ಧ್ವನಿಗ್ರಹಣ ಸಹ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ದೇಶದಲ್ಲಿ ಒಳಾಂಗಣ ವಿನ್ಯಾಸ ತರಬೇತಿ ನೀಡುವ ಕೆಲವು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಿವೆ. ಫ್ಯಾಷನ್ ಡಿಸೈನ್ ಇದು ಕಲಾತ್ಮಕವಾಗಿದ್ದು ಬಟ್ಟೆಬರೆ ಮತ್ತು ಲೈಫ್ ಸ್ಟೈಲ್ ಉತ್ಪನ್ನಗಳಿಗೆ ಸಂಬಂಧಿಸಿದ್ದು. ಕಲೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮಗಳ ಜೊತೆಗೆ ಜಾಗತೀಕರಣದ ಪ್ರಭಾವವೂ ಇದೆ. `ಫ್ಯಾಶನ್ ಡಿಸೈನ್' ಡಿಸೈನರ್ ಬಟ್ಟೆಗಳಿಂದ ಬಹುದೂರ ಸಾಗಿ ಬಂದಿದೆ. ಗ್ರಾಫಿಕ್ ಡಿಸೈನ್ ಗ್ರಾಫಿಕ್ ವಿನ್ಯಾಸಕಾರರು ಅಕ್ಷರಗಳು, ಬಣ್ಣಗಳು, ಪ್ಯಾಟರ್ನ್, ಇಲ್ಲಸ್ಟ್ರೇಷನ್, ಛಾಯಾಗ್ರಹಣ, ಮಾಹಿತಿ, ಭೌತಿಕ ವಸ್ತುಗಳು, ಸೃಜನಶೀಲತೆಯನ್ನು ಬಳಸಬೇಕಾಗುತ್ತದೆ. ವಾರ್ಷಿಕ ವರದಿಯಿಂದ ಹಿಡಿದು ಕಾರ್ಪೊರೇಟ್ ಲೋಗೊ, ಮ್ಯೋಪ್‌ಗಳು, ಡಯಾಗ್ರಾಮ್ ತನಕ, ಪುಸ್ತಕಗಳ ಮುಖಪುಟ, ರಕ್ಷಾ ಕವಚಗಳಿಂದ ಡಿಜಿಟಲ್ ಇಂಟರ್‌ಫೇಸ್ ತನಕ ವೈವಿಧ್ಯಮಯವಾಗಿ ಹರಡಿದೆ ಗ್ರಾಫಿಕ್ ಡಿಸೈನ್ ವಲಯ. ಕೆಲವು ಗ್ರಾಫಿಕ್ ವಿನ್ಯಾಸಕಾರರು ನಿರ್ದಿಷ್ಟ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡಿರುತ್ತಾರೆ. ಉದಾಹರಣೆಗೆ ಬುಕ್ ಶೆಲ್ಫ್, ಕಾರ್ಪೊರೇಟ್ ಐಡೆಂಟಿಟಿ, ಸ್ಕ್ರೀನ್ ಇತ್ಯಾದಿ. ಕೆಲವರು ನಿರ್ದಿಷ್ಟ ಉದ್ಯಮಗಳ ಗ್ರಾಫಿಕ್ ಡಿಸೈನ್‌ನಲ್ಲಿ ಖ್ಯಾತಿ ಗಳಿಸುತ್ತಾರೆ. ಎಫ್‌ಎಂಸಿಜಿ ಪ್ಯಾಕೇಜಿಂಗ್, ಪ್ರಾಪರ್ಟಿ ಅಭಿವೃದ್ಧಿಯಂತಹ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡಿರುತ್ತಾರೆ. ಗ್ರಾಫಿಕ್ ಆರ್ಟ್ ಮ್ಯೋನೇಜರ್, ಕ್ರಿಯೇಟಿವ್ ನಿರ್ದೇಶಕ, ಕಲಾ ನಿರ್ದೇಶಕ, ಕಲಾ ಉತ್ಪಾದನಾ ವ್ಯವಸ್ಥಾಪಕ, ಹ್ಯಾಂಡ್ಸ್ ಆನ್ ಗ್ರಾಫಿಕ್ ಡಿಸೈನರ್, ಬ್ರ್ಯಾಂಡ್ ಐಡೆಂಟಿಟಿ ಡೆವಲಪರ್, ಬ್ರಾಡ್‌ಕಾಸ್ಟ್ ಡಿಸೈನರ್, ಲೋಗೊ ಡಿಸೈನರ್ ಇಲ್ಲಸ್ಟ್ರೇಟರ್, ಮಲ್ಟಿ ಮೀಡಿಯಾ ಡೆವಲಪರ್, ಕಂಟೆಂಟ್ ಡೆವಲಪರ್, ವಿಶುಯಲ್ ಜರ್ನಲಿಸ್ಟ್, ಇಂಟರ್‌ಫೇಸ್ ಡಿಸೈನರ್, ವೆಬ್ ಡಿಸೈನರ್, ಪ್ಯಾಕೇಜ್ ಡಿಸೈನರ್ ಇತ್ಯಾದಿಯಾಗಿ ಭವಿಷ್ಯ ರೂಪಿಸಿಕೊಳ್ಳಬಹುದು. ಪ್ರಾಚೀನ ಶೈಲಿಯಿಂದ ಇಂದಿನ ಆಧುನಿಕ ಶೈಲಿಯ ತನಕ ಸುದೀರ್ಘ ಪರಂಪರೆಯನ್ನು ಕ್ರಮಿಸಿದೆ. ಇಂದು ಅತ್ಯಾಕರ್ಷಕ ಎನಿಸಿರುವ ಈ ಗ್ಲಾಮರಸ್ ಕ್ಷೇತ್ರ ಉದ್ಯೋಗಗಳನ್ನು ಹೇರಳವಾಗಿ ಸೃಷ್ಟಿಸುತ್ತಿದೆ. ನಿಮ್ಮಲ್ಲಿ ಸೃಜನಶೀಲತೆ, ಕಲಾಸಕ್ತಿ, ಅಭಿರುಚಿ ಇದ್ದರೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ಕಡೆ ಇದು ಜನಸಾಮಾನ್ಯರ ಅಗತ್ಯಗಳನ್ನು ಪೂರೈಸುತ್ತದೆ. ಮತ್ತೊಂದು ಕಡೆ ಗ್ಲಾಮರ್, ಕಲಾಭಿರುಚಿ, ಸೃಜನಶೀಲತೆಗೆ ಆಸ್ಪದ ನೀಡುತ್ತದೆ. ಕೀರ್ತಿ, ಯಶಸ್ಸು, ಸಂಪತ್ತು ತಂದುಕೊಡುತ್ತದೆ. ಫ್ಯಾಶನ್ ಡಿಸೈನರ್ ಆಗಲು ಸೃಜನಶೀಲತೆಯ ಜತೆಗೆ ಔದ್ಯಮಿಕ ಕೌಶಲವೂ ಅಗತ್ಯ. ಬಣ್ಣಗಳು, ಆಕಾರ ಮತ್ತು ವಿನ್ಯಾಸದಲ್ಲಿ ನೀವು ಮ್ಯೋಜಿಕ್ ಮಾಡಬಲ್ಲಿರಿ ಎಂದಾದರೆ ಈ ವೃತ್ತಿ ನಿಮಗೆ ಯಶಸ್ಸು ನೀಡಬಲ್ಲದು. ಉತ್ಪಾದನೆ ವಿನ್ಯಾಸ ನೀವು ಉತ್ಪನ್ನಗಳ ವಿನ್ಯಾಸಕಾರರಾಗಿ (ಪ್ರಾಡಕ್ಟ್ ಡಿಸೈನರ್) ಕಾರ್ಯ ನಿರ್ವಹಿಸಲು ಬಯಸುವುದಿದ್ದರೆ ಭಿನ್ನ ಮಾರ್ಗವನ್ನು ಅನುಸರಿಸಬೇಕು. ನಾವು ಬಳಸುವ ವಸ್ತುವಿನ ಬಗ್ಗೆ ಭಿನ್ನವಾದ ಮತ್ತು ಸೃಜನಶೀಲ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು. ದಿನನಿತ್ಯ ಬಳಸುವ ನೋಟ್‌ಬುಕ್‌ನಿಂದ ಸೆಲ್ ಫೋನ್ ತನಕ, ಕನ್ನಡಕದಿಂದ ನಾನಾ ಬಗೆಯ ಎಲೆಕ್ಟ್ರಿಕಲ್ ಬೋರ್ಡ್‌ಗಳ ತನಕ ಎಲ್ಲವನ್ನೂ ಸೃಜನಶೀಲವಾಗಿ ರೂಪಿಸಲು ಕಲಿಯಬೇಕು. ಪ್ರತಿಭೆ ಮತ್ತು ವಿನ್ಯಾಸದ ಸಂಗಮವೇ ಪ್ರಾಡಕ್ಟ್ ಡಿಸೈನ್‌ನ ಲಕ್ಷಣ. ಉತ್ಪನ್ನದ ಜಾಗತಿಕ ಮಟ್ಟದ ಅರಿವು, ಮಾರುಕಟ್ಟೆ ಪರಿಜ್ಞಾನ, ಗ್ರಾಹಕರ ಅಭಿರುಚಿ, ಹೊಸತನದ ಅಗತ್ಯ, ಉತ್ಪನ್ನಗಳನ್ನು ಹೊಸ ಖದರಿನಲ್ಲಿ ಪರಿಚಯಿಸುವಲ್ಲಿ ಪ್ರಾಡಕ್ಟ್ ಡಿಸೈನರ್ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಯಾವುದೇ ಸೂಕ್ತ ಸಂಸ್ಥೆಯಲ್ಲಿ ಎಂಟ್ರಿ ಮಟ್ಟದ ಪದವಿಯನ್ನು ಪಡೆದ ನಂತರ ಪ್ರಾಡಕ್ಟ್ ಡಿಸೈನರ್ ಆಗಿ ಭವಿಷ್ಯ ಆರಂಭಿಸಬಹುದು. ಉತ್ಪನ್ನಗಳನ್ನು ಸರಿಯಾಗಿ ಮನನ ಮಾಡಿಕೊಳ್ಳುವುದು ಇಲ್ಲಿ ಮುಖ್ಯ. ಪ್ರಾಡಕ್ಟ್ ಡಿಸೈನರ್‌ಗಳು ಮಾತ್ರವಲ್ಲದೆ ಕಮರ್ಶಿಯಲ್ ಆರ್ಟಿಸ್ಟ್, ಕಾಸ್ಟ್ ಎಸ್ಟಿಮೇಟರ್ಸ್‌, ಪ್ರಾಡಕ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ಎಕ್ಸಿಕ್ಯುಟಿವ್ ಇತ್ಯಾದಿಯಾಗಿ ಹೊರಹೊಮ್ಮಬಹುದು. ಪ್ರಾಡಕ್ಟ್ ವಿನ್ಯಾಸಕಾರ ಇಂತಿಷ್ಟೇ ಸಂಪಾದಿಸಬಹುದು ಎಂಬ ಮಿತಿ ಇಲ್ಲ. ತಮ್ಮ ಜ್ಞಾನವನ್ನು ಅನುಷ್ಠಾನ ಮಾಡುವುದರಿಂದ ಎಷ್ಟು ಬೇಕಾದರೂ ಬೆಳೆಯಲು ಅವಕಾಶ ಇರುತ್ತದೆ. -ಲೇಖಕರು ಬೆಂಗಳೂರಿನ ಲೀಸಾ ಸ್ಕೂಲ್ ಆಫ್ ಡಿಸೈನ್‌ನ ನಿರ್ದೇಶಕರು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.