ಪ್ರಶ್ನೆ ಉತ್ತರ ಜಾಹ್ನವಿ, ತುಮಕೂರು ನಾನು ಬಿ.ಇ. ಓದುತ್ತಿದ್ದೇನೆ. ನನಗೆ ಈ ವರ್ಷ ಪಾಸಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಾರಣ ನನಗೆ ಗಣಿತದ ವಿಷಯ ಅತ್ಯಂತ ಕಠಿಣ ಎನಿಸುತ್ತಿದೆ. ಓದಲು ಆಗುತ್ತಿಲ್ಲ. ಎರಡು ವರ್ಷದ ಹಿಂದೆ ಪಿ.ಯು.ಸಿ. ಮುಗಿಸಿದ್ದೆ. ಈಗ ಮತ್ತೆ ಸಿ.ಇ.ಟಿ. ಪರೀಕ್ಷೆ ತೆಗೆದುಕೊಂಡು ನನಗೆ ಅತೀವ ಇಷ್ಟವಾಗಿದ್ದ ವೈದ್ಯಕೀಯ ಕ್ಷೇತ್ರಕ್ಕೆ ಹೋಗಬಹುದೇ? - ನಿಮ್ಮ ಪರಿಸ್ಥಿತಿ, ಅನೇಕ ವಿದ್ಯಾರ್ಥಿಗಳು ಅಭಿರುಚಿ ಮತ್ತು ಗುರಿಯ ಸ್ಪಷ್ಟತೆ ಇಲ್ಲದೆ ಸಿಕ್ಕಿಕೊಳ್ಳುವ ಪಂಜರದಂತೆ ಆಗಿದೆ. ಆಸಕ್ತಿ ಬೇರೆಯೇ ಇದ್ದು, ಪರಿಸ್ಥಿತಿಗಳ ಒತ್ತಡದಿಂದ ಬೇರೆ ಆಯ್ಕೆ ಮಾಡಿಕೊಳ್ಳುವ ಅನೇಕ ವಿದ್ಯಾರ್ಥಿಗಳು ನಿಮ್ಮಂತೆಯೇ ಸಂಕಟದಲ್ಲಿದ್ದಾರೆ. ನಿಮಗೆ ಗಣಿತ ದುರ್ಗಮವಾಗಿದ್ದು ವೈದ್ಯಕೀಯ ಕ್ಷೇತ್ರ ಅತ್ಯಾಕರ್ಷಕವಾಗಿದ್ದರೆ, ಪುನಃ ಸಿ.ಇ.ಟಿ ಬರೆದು ವೈದ್ಯಕೀಯ ಕ್ಷೇತ್ರವನ್ನೇ ಆರಿಸಿಕೊಳ್ಳುವುದು ಸೂಕ್ತ. ತುಂಬಾ ಸ್ಪರ್ಧಾತ್ಮಕ ಆಗಿರುವ ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಲು ಎಂಜಿನಿಯರಿಂಗ್‌ಗಿಂತ ಉತ್ತಮ ರ‌್ಯಾಂಕ್‌ನ್ನು ನೀವು ಪಡೆಯಬೇಕಾಗುತ್ತದೆ. ಇದಕ್ಕೆ ಬಹಳಷ್ಟು ಪರಿಶ್ರಮ ಮತ್ತು ಯೋಜನಾಬದ್ಧ ಸಿದ್ಧತೆ ಬೇಕಾಗುತ್ತದೆ. ನೀವು ಈ ಬಗ್ಗೆ ಬೇಗ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ. ಶರತ್ ನಾನು ದೂರಶಿಕ್ಷಣ ಮಾಧ್ಯಮದಲ್ಲಿ ಮಧುರೆ ಕಾಮರಾಜ್ ವಿಶ್ವವಿದ್ಯಾಲಯದಲ್ಲಿ ಬಿ.ಬಿ.ಎ. (ಬಿಸಿನೆಸ್ ಅಡ್ಮಿನಿಸ್ಟ್ರೇಷನ್) ಮಾಡುತ್ತಿದ್ದೇನೆ. ಇದಕ್ಕೆ ಮೊದಲು ರೇಷ್ಮೆ (ಸಿರಿಕಲ್ಚರ್) ವಿಷಯದಲ್ಲಿ ಜೆ.ಒ.ಸಿ. ಕೋರ್ಸ್ ಮುಗಿಸಿದ್ದೇನೆ. ಈಗ ಸರ್ಕಾರಿ ಕೆಲಸಗಳಾದ ವಿ.ಎ., ಎಸ್.ಡಿ.ಎ. ಮುಂತಾದವುಗಳನ್ನು ಅರಸಬಹುದೇ? ಬಿ.ಬಿ.ಎ. ಮುಗಿಯದೆ ಸರ್ಕಾರಿ ಕೆಲಸ ಸಿಗಬಹುದೇ? -ನೀವು ಮಧುರೆ ಕಾಮರಾಜ್ ವಿಶ್ವವಿದ್ಯಾಲಯಲ್ಲಿ ಬಿ.ಬಿ.ಎ. ಮಾಡುತ್ತಿರುವುದು ಒಳ್ಳೆಯ ಸಂಗತಿ. ಸಿರಿಕಲ್ಚರ್ ವಿಷಯದಲ್ಲಿ ಜೆ.ಒ.ಸಿ ಕೋರ್ಸ್ ಮುಗಿಸಿರುವುದರಿಂದ ಈ ಕ್ಷೇತ್ರದಲ್ಲೂ ಉದ್ಯೋಗ ಅರಸಬಹುದು. ಬಿ.ಬಿ.ಎ. ಮುಗಿಸಿದ ನಂತರ ನೀವು ಖಾಸಗಿ ಕಂಪೆನಿಗಳಲ್ಲಿ ವಾಣಿಜ್ಯ ಸಂಬಂಧಿ ಉದ್ಯೋಗಗಳನ್ನು ಪಡೆಯಬಹುದು. ಸರ್ಕಾರಿ ಉದ್ಯೋಗಕ್ಕಾಗಿಯೇ ಕಾಯಬೇಕಾಗಿಲ್ಲ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಗಳು ವಿಪುಲವಾಗಿವೆ. ಸರ್ಕಾರಿ ಕ್ಷೇತ್ರದಲ್ಲಿ ಸೇವಾ ಭದ್ರತೆ ಮಾತ್ರ ಇರುತ್ತದೆ. ಆದರೆ ಖಾಸಗಿ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಪುರಸ್ಕಾರ ಮತ್ತು ಉದ್ಯೋಗಗಳನ್ನು ನಿಮ್ಮ ಇಚ್ಛೆಗೆ ತಕ್ಕಂತೆ ಬದಲಾಯಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ ನೀವು ಸರ್ಕಾರಿ ಉದ್ಯೋಗದ ಚಿಂತೆ ಬಿಟ್ಟು, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಸ್ಪರ್ಧೆಗೆ ಸಿದ್ಧರಾಗಿ. ಮೊಹಮದ್, ಮಂಗಳೂರು ನಾನು ಬಿ.ಬಿ.ಎಂ. ಮುಗಿಸಿದ್ದೇನೆ. ಮುಂದೆ ಎಂ.ಬಿ.ಎ. ಮಾಡಬೇಕು ಎಂದುಕೊಂಡಿದ್ದೇನೆ. ಆದರೆ ಆರ್ಥಿಕ ಅಡಚಣೆ ಇದೆ. ಆದರೂ ಉದ್ಯೋಗದಲ್ಲಿ ಇದ್ದುಕೊಂಡು ದೂರಶಿಕ್ಷಣದಲ್ಲಿ ಎಂ.ಬಿ.ಎ. ಮಾಡಬಹುದೇ? ಇದಕ್ಕೆ ಮಾನ್ಯತೆ ಇದೆಯೇ ಅಥವಾ ಅದಕ್ಕೆ ಸರಿಸಮನಾದ ಬೇರೆ ಯಾವುದಾದರೂ ಕೋರ್ಸುಗಳಿದ್ದರೆ ತಿಳಿಸಿ. -ದೂರ ಶಿಕ್ಷಣದ ಮೂಲಕವೂ ಎಂ.ಬಿ.ಎ. ಮಾಡಬಹುದು. ಆರ್ಥಿಕ ಅಡಚಣೆಗಳಿದ್ದರೆ ನೀವು ಬಿ.ಬಿ.ಎಂ. ನಂತರ ಉದ್ಯೋಗಕ್ಕೆ ಸೇರಬಹುದು. ಕೆಲವು ವರ್ಷ ಕೆಲಸ ಮಾಡಿ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡು, ಅದರಲ್ಲಿ ದೂರಶಿಕ್ಷಣದ ಮೂಲಕ ಎಂ.ಬಿ.ಎ. ಮಾಡಬಹುದು. ಸದಾಶಿವ ನಾನು 2004ರಲ್ಲಿ ಪಿ.ಸಿ.ಎಂ.ಇ. ವಿಭಾಗದಲ್ಲಿ ಪಿ.ಯು.ಸಿ. ಮುಗಿಸಿದೆ. ಕುಟುಂಬದ ಕೆಲವು ತೊಂದರೆಗಳಿಂದಾಗಿ ಮುಂದೆ ಓದಲು ಸಾಧ್ಯವಾಗಲಿಲ್ಲ. ಈಗ ಎಂ.ಎನ್.ಸಿ. ಕಂಪೆನಿಯೊಂದರಲ್ಲಿ ನಾನು ಓದಿದ ಐ.ಟಿ.ಐ. ಆಧಾರದ ಮೇಲೆ ಕೆಲಸದಲ್ಲಿದ್ದೇನೆ. ನನಗೆ ಈಗ ಓದನ್ನು ಮುಂದುವರಿಸಬೇಕು ಎನಿಸುತ್ತಿದೆ. ಆದರೆ ಯಾವ ವಿಷಯವನ್ನು ಆಯ್ದುಕೊಳ್ಳಲಿ ಎಂದು ತೋಚುತ್ತಿಲ್ಲ. ದಯಮಾಡಿ ಸೂಕ್ತ ಸಲಹೆ ಕೊಡಿ. -ನಿಮ್ಮ ಉದ್ಯೋಗದ ಜೊತೆಗೆ ಸಂಜೆ ಕಾಲೇಜಿನಲ್ಲಿ ಅಥವಾ ದೂರಶಿಕ್ಷಣದ ಮೂಲಕ ಡಿಪ್ಲೊಮಾ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ನಂತರ ಸಂಜೆ ಕಾಲೇಜಿನಲ್ಲಿ ಬಿ.ಇ. ಪದವಿಗಾಗಿ ವ್ಯಾಸಂಗ ಮಾಡಲು ಸಾಧ್ಯ. ನಿತಿನ್ ನಾನು ಈಗ ಅಂತಿಮ ವರ್ಷದ ಬಿ.ಎಸ್ಸಿ. (ಪಿ.ಎಂ.ಸಿಎಸ್) ಓದುತ್ತಿದ್ದೇನೆ. ಮುಂದೆ ವಿದೇಶಿ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದಿದ್ದೇನೆ. ಇದಕ್ಕೆ ಏನು ಮಾಡಬೇಕು? ನಮ್ಮ ಸರ್ಕಾರದಿಂದ ಇದಕ್ಕೆ ಸೌಲಭ್ಯ ದೊರಕುತ್ತದೆಯೇ? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಇದೆಯೇ? - ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುವ ಇಚ್ಛೆ ಇದ್ದರೆ ಅದಕ್ಕಾಗಿ ನಿಗದಿಯಾಗಿರುವ ಪರೀಕ್ಷೆಗಳನ್ನು ನಿಮ್ಮ ಪದವಿಯ ನಂತರ ತೆಗೆದುಕೊಳ್ಳಬೇಕು. ನೀವು ನಿಮ್ಮ ಪದವಿಯಲ್ಲಿ ಗಳಿಸಿರುವ ಅಂಕಗಳು ಮತ್ತು ನಿಗದಿತ ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಪ್ರವೇಶ ಪಡೆದು ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಆದರೆ ಇದಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯ ಇರುವುದಿಲ್ಲ ಮತ್ತು ಯಾವುದೇ ಪಂಗಡಕ್ಕೆ ಮಿಸಲಾತಿಯೂ ಇರುವುದಿಲ್ಲ. ಇದರ ಬದಲಾಗಿ ಬ್ಯಾಂಕುಗಳಲ್ಲಿ ಈ ವಿದ್ಯಾಭ್ಯಾಸಕ್ಕೆ ಸಾಲದ ಸೌಲಭ್ಯ ಇರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.