ಟೆಕ್ಕಿ ಹಾರುತಿದೆ ತಡೆಯುವಿರಾ? ನಮ್ಮ ಮಕ್ಕಳು ವಿದೇಶಗಳಿಗೆ ಹೋಗಿ ಕಲಿತು ವಾಪಸ್ ಬಂದರೆ ದೇಶ ಉದ್ಧಾರವಾಗುತ್ತದೆ. ಅದು ಬಿಟ್ಟು ಉನ್ನತ ಶಿಕ್ಷಣಕ್ಕೆಂದು ಪರ ದೇಶಕ್ಕೆ ಹೋಗಿ ಅಲ್ಲೇ ನೆಲೆ ನಿಂತರೆ, ಇಲ್ಲಿಂದ ಕಲಿತು ಹೋದದ್ದನ್ನೆಲ್ಲ ಆ ದೇಶ ಕಟ್ಟಲು ಧಾರೆ ಎರೆದಂತೆ ಆಗುತ್ತದೆ ಅಷ್ಟೆ. ಪ್ರಕರಣ 1 `ಈಗ ಎರಡನೇ ಪಿ.ಯು.ಸಿ. ಪರೀಕ್ಷೆ ಬರೆದಾಗಿದೆ'. `ಓಹೋ... ಸೈನ್ಸ್?' `ಹೌದು ಪಿ.ಸಿ.ಎಂ.ಬಿ. ಖಂಡಿತಾ ಡಿಸ್ಟಿಂಕ್ಷನ್ ಬರುತ್ತಂತೆ'. `ಗುಡ್, ಮುಂದೆ?' `ಸಿ.ಇ.ಟಿ. ತಗೊಳ್ದೆ ಇರೋಕಾಗುತ್ಯೇ ಹೇಳಿ ಈ ಕಾಲದಲ್ಲಿ?' `ಆಮೇಲೆ?' `ಇದೇನು ಹೀಗೆ ಕೇಳ್ತೀರಿ. ಬಿ.ಇ., ಎಂ,ಬಿ.ಬಿ.ಎಸ್., ಎಂ.ಬಿ.ಎ... ಎಲ್ಲರ ದಾರೀನೂ ಅದೇ ಅಲ್ವೇ?'. `ಸರಿ...' `ಅದಾದ್ಮೇಲೆ ಟೋಫೆಲ್, ಜಿ.ಆರ್.ಇ. ಮಾಡ್ಕೊಂಡ ಮೇಲೆ ತಾನೇ ಸಮುದ್ರದ ಮೇಲೆ ಕಣ್ಣು!' ಮಟಮಟ ಮಧ್ಯಾಹ್ನ ಉದ್ಯಾನವೊಂದರ ಮರದಡಿ ವಿರಮಿಸಿದ್ದ ನನಗೆ ಈ ಸಂಭಾಷಣೆ ಕಿವಿಗೆ ಬಿದ್ದು ಒಂದೆಡೆ ಕುತೂಹಲ, ಇನ್ನೊಂದೆಡೆ ಗಾಬರಿ. ತಮ್ಮ ಮಗನ ಬಗ್ಗೆ ಹೇಳಿಕೊಳ್ಳುತ್ತಾ ಸಮುದ್ರವನ್ನೇಕೆ ಮಧ್ಯ ತಂದರು? ಕಡೆಗೆ ಸಮುದ್ರ ಎಂದರೆ ವಿದೇಶ ಎನ್ನುವುದು ನನಗೆ ಅರ್ಥವಾಯಿತು. ಇಲ್ಲಿ ನನ್ನ ಪ್ರಶ್ನೆಯೆಂದರೆ, ನಮ್ಮ ಹೈಕಳು ಸಾಗರೋಲ್ಲಂಘನಕ್ಕೆ ರೆಕ್ಕೆ ಬಲಿಸಿಕೊಂಡು ಹೀಗೇಕೆ ಹಪಹಪಿಸುತ್ತಾರೆ ಎನ್ನುವುದು. ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ, ಕಿಸೆ ಬಿರಿಯುವಷ್ಟು ಪಗಾರ ತರುವ ನೌಕರಿ ಹೊಂದುವ ಅವರ ಆಕಾಂಕ್ಷೆ ಸಹಜವೇ. ಅಮೆರಿಕದತ್ತಲೇ ಹೆಚ್ಚಿನವರ ಚಿತ್ತ. ಅಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್. ಮುಗಿಸಿ ನೌಕರಿ ಹಿಡಿದರೆ ಪಿ.ಯು.ಸಿ.ಯಲ್ಲಿ ವಿಜ್ಞಾನ ವ್ಯಾಸಂಗ ಮಾಡಿದ್ದು ಸಾರ್ಥಕವಾಯಿತು ಎಂಬ ಭಾವನೆ. ಇದರಲ್ಲಿ ಗಂಡು ಹೆಣ್ಣೆಂಬ ಭೇದವಿಲ್ಲ. ಅಮೆರಿಕದ ವಿಶ್ವವಿದ್ಯಾನಿಲಯವೊಂದರಲ್ಲಿ ಪ್ರವೇಶ ದೊರೆತು, ಬ್ಯಾಂಕಿನಲ್ಲಿ ಸಾಲ ಮಂಜೂರಾಗಿಬಿಟ್ಟಾಗ ಕೇಳಬೇಕೇ `ಹಕ್ಕಿ'ಯ ಹಿಗ್ಗು. ಅಗಲಿಕೆಯ ವೇದನೆ ಮೀರಿ ಪೋಷಕರು ಸಡಗರಿಸುತ್ತಾರೆ. `ಓದಿ, ಒಂದೆರಡು ವರ್ಷ ನೌಕರಿ ಮಾಡಿ ಇಲ್ಲೇ ಬಂದುಬಿಡು' ಎನ್ನುವ (ಔಪಚಾರಿಕ!) ಮಾತು ಅವರಿಂದ ಬರುತ್ತದೆ. ಮಗ/ ಮಗಳು ಹೊರಡುವ ದಿನ ನಿಗದಿಯಾದಾಗ ಮನೆಯವರಲ್ಲಿ ಸಮ್ಮಿಶ್ರ ಸಂವೇದನೆ. ಅಂದಹಾಗೆ ವಿದೇಶಿ ವಿದ್ಯಾಭ್ಯಾಸದ ಶುಲ್ಕ ಅತಿ ದುಬಾರಿ. ಪಾಸ್‌ಪೋರ್ಟ್, ವೀಸಾ ಪಡೆದುಕೊಳ್ಳುವುದೇ ಯಜ್ಞ. ಅಮೆರಿಕದಲ್ಲಿ ವ್ಯಾಸಂಗದ ಅವಧಿಯಲ್ಲೇ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿ ಖರ್ಚಿಗೆ ಒಂದಷ್ಟು ಹಣ ಹೊಂದಿಸಿಕೊಳ್ಳಬಹುದು ಎನ್ನುವುದೇ ಭರವಸೆ, ಸಮಾಧಾನ. ಮಗ/ ಮಗಳನ್ನು ಮನೆಯವರು, ನೆಂಟರಿಷ್ಟರು ವಿಮಾನ ನಿಲ್ದಾಣದಲ್ಲಿ ಸೇರಿ ಬೀಳ್ಕೊಟ್ಟದ್ದಾಯಿತು. ಅಪ್ಪ, ಅಮ್ಮ, ಒಡಹುಟ್ಟಿದವರೆಲ್ಲರಿಗೂ ವಿಮಾನ ಮೇಲೇರುವ ತನಕವೂ `ಜೋಪಾನ, ಆರೋಗ್ಯ ಚೆನ್ನಾಗಿ ನೋಡಿಕೋ, ಚೆನ್ನಾಗಿ ಓದು, ಬೇಗ ಬಂದುಬಿಡು' ಮುಂತಾಗಿ ಹೇಳುತ್ತಲೇ ಇರುವ ತವಕ. ಪ್ರಕರಣ 2 ಮನೆಯವರಿಗೆ ಸದಾ ಕಾಲ ಡೆಸ್ಕ್‌ಟಾಪ್ ಮುಂದೆ ಕುಳಿತುಕೊಳ್ಳುವುದು ಬಿಟ್ಟರೆ ಅನ್ಯ ಕೆಲಸವೇ ಇಲ್ಲ. ವೆಬ್‌ಕ್ಯಾಂನಲ್ಲಿ ಮಗ/ ಮಗಳು ಅಡುಗೆ ಮಾಡಿಕೊಳ್ಳುವುದು, ಕಾಲೇಜಿಗೆ ಹೊರಡುವುದು, ಲೈಬ್ರರಿಯಲ್ಲಿ ಗ್ರಂಥ ಪರಾಮರ್ಶಿಸುವುದನ್ನು ಕಂಡು ಹಿಗ್ಗೋ ಹಿಗ್ಗು. ಒಗ್ಗರಣೆ ಸೀಯುತ್ತಿದೆ, ಹಾಲು ಉಕ್ಕುತ್ತಿದೆ, ಚಳಿ ಸ್ವೆಟರ್ ಧರಿಸು... ಎನ್ನುವುದನ್ನೂ ಇಲ್ಲಿಂದಲೇ ಅಮ್ಮ ನಿರ್ದೇಶಿಸುತ್ತಾಳೆ. ಅರೆಕಾಲಿಕ ಹುದ್ದೆ ಸಿಗುತ್ತದೆ. ತಿಂಗಳಿಗೆ 80 ಡಾಲರ್. `ಈಗಾಗಲೇ ನಿಮಗೆ ಹೊರೆ ಮಾಡಿದ್ದೇನೆ. ಸದ್ಯ ದಿನಸಿ, ಹಾಲು, ತರಕಾರಿಗೆ ಸಾಕಿಷ್ಟು. ಒಂದು ಒಂದೂವರೆ ವರ್ಷದ ನಂತರ ಎಂ.ಎಸ್. ಯಶಸ್ವಿಯಾಗಿ ಮುಗಿಯುತ್ತದೆ' ಎನ್ನುವ ಸಮಜಾಯಿಷಿ ಮಕ್ಕಳಿಂದ. `ಮಗು ಒಂದು ತಿಂಗಳ ಮಟ್ಟಿಗಾದರೂ ಬಂದು ಹೋಗು. ಎಷ್ಟೇ ಆಗಲಿ ಅದು ವೆಬ್‌ಕ್ಯಾಂ. ನಿನ್ನನ್ನು ತಬ್ಬಿಕೊಳ್ಳಲು ಸಾಧ್ಯವೇ ಹೇಳು?' ಸರಿ. ಮಗ/ ಮಗಳು ಸ್ವದೇಶಕ್ಕೆ ಬಂದು ಒಂದಷ್ಟು ದಿನವಿದ್ದು ವಾಪಸ್ಸಾಗಿದ್ದೂ ಆಯಿತು. ಪ್ರಕರಣ 3 `ನೌಕರಿ, ನವೀಕೃತ ವೀಸಾ ಎಲ್ಲ ಆಯಿತು. ಒಂದೆರಡು ವರ್ಷ ಒಂದಷ್ಟು ಸಂಪಾದಿಸಿ ವಾಪಸಾಗುವೆ. ಸಾಲ ತೀರಿಸಲಾದರೂ ಬೇಡವೇ ಸಾಕಷ್ಟು ದುಡ್ಡು? ಈಗ ನಾನೇ ನಿನಗೆ ಹಣ ಕಳಿಸುವ ಸಮಯ ಬಂತಲ್ಲ. ಅದೇ ಸಂತೋಷ. ಇನ್ನು ಆರು ತಿಂಗಳೊಳಗೆ ಭಾರತಕ್ಕೆ ಒಂದು ವಿಸಿಟ್ ಖಂಡಿತಾ' ಎಂಬ ಇ-ಮೇಲ್ ಕಂಡಾಗ ಕುಣಿದು ಕುಪ್ಪಳಿಸಿರುತ್ತಾರೆ ಎಲ್ಲರೂ. ಮಗ/ ಮಗಳು ಆರು ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ. `ಇದೇನಿದು ನಿನ್ನ ಸಾಫ್ಟ್‌ವೇರ್ ಆಯಿತು ನೀನಾಯಿತು. ನಿನಗೆ ಲೈಫ್‌ನಲ್ಲಿ ಸೆಟಲ್ ಆಗೋ ಯೋಚನೆ ಏನಾದ್ರೂ ಇದ್ಯಾ? ಈಗ್ಲಾದ್ರೂ ಮದ್ವೆ ಯೋಚನೆ ಬೇಡ್ವಾ. ದಿನಗಳು ಉರುಳ್ತಾ ಇವೆ. ಬೇಗ ವಾಪಸ್ಸು ಬಂದುಬಿಡು' ಎನ್ನುವುದು ಹೆತ್ತವರ ತಾಕೀತು, ಅಳಲು. ಪ್ರಕರಣ 4 `ಅಪ್ಪ, ಅಮ್ಮ, ಅಲ್ಲಿಗೆ ಬಂದು ನಾನೇನು ಮಾಡ್ಲಿ? ಇಲ್ಲಿ ಡಾಲರ್‌ಗೊಂದು ಟೂತ್‌ಪೇಸ್ಟ್, ಮೂರು ಡಾಲರ್‌ಗೆಲ್ಲ ಕಾಫಿ ಸಿಗುತ್ತೆ. ಅರ್ಥ ಮಾಡ್ಕೊಳ್ಳಿ. ನನ್ನ ಮಿಸ್ ಮಾಡ್ಕೊಳ್ಳೋದೇನಿದೆ? ಇ- ಮೇಲ್ ವೆಬ್‌ಕ್ಯಾಂ, ಚಾಟ್ ಎಲ್ಲ ಇದೆ. ಪ್ರಪಂಚವೇ ಸಣ್ಣ ಹಳ್ಳಿ ಈಗ ಅಂತ ನೀವೇ ಹೇಳ್ತೀರಿ. ಅಂದಹಾಗೆ ನಿಮ್ಮಿಬ್ಬರಿಗೂ ಟೆಕೆಟಿಂಗ್ ಆಗಿದೆ. ಮುಂದಿನ ತಿಂಗಳೇ ಬನ್ನಿ. ಹಾಯಾಗಿ ನಾಲ್ಕು ವಾರನಾದ್ರೂ ಇದ್ದು ಹೋಗಿ'. ಪ್ರಕರಣ 5 ಮಗ/ ಮಗಳ ವಿವಾಹ ನೆರವೇರುತ್ತದೆ. ಅಮೆರಿಕಕ್ಕೆ `ಬಾಣಂತನ ಭೇಟಿ' ಪೋಷಕರಿಗೆ ಇದ್ದದ್ದೇ. ಅಪ್ಪ, ಅಮ್ಮ, ಮಾವ, ಅತ್ತೆ ಇಲ್ಲಿಂದ ಉತ್ಸಾಹದಿಂದ ಅಲ್ಲಿಗೆ ಹೊರಡುತ್ತಾರೇನೋ ಸರಿ. ಆದರೆ ಅಲ್ಲಿ ಕಾಲ ಕಳೆಯುವುದೇ ದೊಡ್ಡ ಸವಾಲು. ಮಕ್ಕಳು ಉದ್ಯೋಗಕ್ಕೆ ಹೋಗಿರುತ್ತಾರೆ. ಇಲ್ಲಿನ ಹಾಗಲ್ಲವಲ್ಲ ಅಲ್ಲಿ. ಎಲ್ಲಕ್ಕೂ ಕಾರಿನದೇ ತಾನೇ ಕಾರುಬಾರು. ವಾಕಿಂಗ್‌ನಲ್ಲೇ ಬೆಳಿಗ್ಗೆ, ಸಂಜೆ ಕಳೆಯಬೇಕು. ಸಮೀಪದ ಗ್ರಂಥಾಲಯಕ್ಕೆ ಇಲ್ಲವೇ ಸಮುದಾಯ ಭವನಕ್ಕೆ ಮಗ/ ಮಗಳು (ಸೊಸೆ/ ಮಗ) ಕಚೇರಿಗೆ ಹೋಗುವಾಗ ಡ್ರಾಪ್ ಕೊಟ್ಟರೆ ಮಾತ್ರ ಸಮಯ ವಿನಿಯೋಗಿಸಬಹುದು. ಹೆಚ್ಚಿಗೆ ಕಲಿಯಲು ವಿದೇಶಗಳಿಗೆ ಹೋಗುವುದರಲ್ಲಿ ತಪ್ಪೇನಿಲ್ಲ. ಆದರೆ ಅಲ್ಲಿ ಕಲಿತದ್ದು ಇಲ್ಲಿ ಸರ್ವರಿಗೂ ಉಪಯೋಗ ಆಗಬೇಕು ಅಲ್ಲವೇ? ಆದರೆ ಹಾಗಾಗುತ್ತಿಲ್ಲ. ನಿಷ್ಠುರ ಮಾತೆಂದರೆ, ಇಲ್ಲಿ ನಮ್ಮ ಮಕ್ಕಳು ಕಲಿತದ್ದು ಅಲ್ಲಿನವರ ದೇಶ ಕಟ್ಟಲಿಕ್ಕೆ ಉಪಯೋಗವಾಗುತ್ತಿದೆ. ಇದಕ್ಕಿಂತ ವಿಪರ್ಯಾಸ ಇನ್ಯಾವುದಿದೆ? ಯು ಟ್ಯೂಬ್‌ನಲ್ಲಿ ಹೆಸರುವಾಸಿಯಾದ ಅನಿವಾಸಿ ಭಾರತೀಯ ಪ್ರೊಫೆಸರುಗಳು ಉಪನ್ಯಾಸ ನೀಡುವುದನ್ನು ಕಂಡಾಗ ಎಂಥವರಿಗಾದರೂ ಆನಂದ, ಹೆಮ್ಮೆಗಿಂತ ಹೆಚ್ಚಾಗಿ ತೀವ್ರ ವ್ಯಥೆಯೇ ಆಗುತ್ತದೆ. `ಛೆ! ಪ್ರತಿಭಾ ಪಲಾಯನ ಮಾಡದೆ ಇವರೆಲ್ಲ ಈ ನೆಲದಲ್ಲೇ ನಿಂತಿದ್ದರೆ ನಮ್ಮ ದೇಶಕ್ಕೆ ಎಂತಹ ಕೊಡುಗೆ ಕೊಡಬಹುದಿತ್ತು ಅಲ್ಲವೇ' ಎನಿಸುತ್ತದೆ. ಹಾಗಿದ್ದರೆ ರೆಕ್ಕೆ ಬಲಿತ `ಟೆಕ್ಕಿಗಳು' ಹೀಗೆ ಹಾರಿ ಹೋಗುವುದನ್ನು ತಡೆಯುವುದಾದರೂ ಹೇಗೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.