ಅರೆ ನಿರ್ವಾತ ಹೇಗೆ? ಸಾಮಗ್ರಿ: ಚಪ್ಪಲಿ ಅಥವಾ ಬೂಟಿನ ಪೆಟ್ಟಿಗೆ, ರಟ್ಟಿನ ಚಿಕ್ಕ ಸಿಲಿಂಡರ್‌ಗಳು, ಮೋಂಬತ್ತಿ, ಊದಿನ ಕಡ್ಡಿಗಳು, ಬೆಂಕಿ ಪೆಟ್ಟಿಗೆ, ಪ್ಲಾಸ್ಟಿಕ್ ಹಾಳೆ. ವಿಧಾನ 1. ಚಿತ್ರದಲ್ಲಿ ತೋರಿಸಿರುವಂತೆ ಚಪ್ಪಲಿ ಅಥವಾ ಬೂಟಿನ ಒಂದು ಖಾಲಿ ರಟ್ಟಿನ ಪೆಟ್ಟಿಗೆಯನ್ನು ತೆಗೆದುಕೊಳ್ಳಿ. 2. ಉದ್ದ ಹೆಚ್ಚಿರುವ ಕಡೆ ರಟ್ಟನ್ನು ಪೂರ್ಣ ಕತ್ತರಿಸಿ ತೆಗೆದು, ಆ ಭಾಗಕ್ಕೆ ಒಂದು ಪಾರದರ್ಶಕ ಪ್ಲಾಸ್ಟಿಕ್ ಹಾಳೆಯನ್ನು ಅಂಟಿಸಿ. 3. ಚಿತ್ರದಲ್ಲಿ ತೋರಿಸಿದಂತೆ ರಟ್ಟಿನ ಎರಡು ಚಿಕ್ಕ ಸಿಲಿಂಡರ್‌ಗಳ್ನು ಪೆಟ್ಟಿಗೆಯಲ್ಲಿ ಇಡಿ. 4. ಒಂದು ಉರಿಯುತ್ತಿರುವ ಮೋಂಬತ್ತಿಯನ್ನು `ಅ' ಸಿಲಿಂಡರ್‌ನ ಕೆಳಗೆ ಬರುವಂತೆ ಪೆಟ್ಟಿಗೆಯಲ್ಲಿ ಇಡಿ. 5. ಚಿತ್ರದಲ್ಲಿ ತೋರಿಸಿದಂತೆ `ಬ' ಸಿಲಿಂಡರ್‌ನ ಹತ್ತಿರ ಉರಿಯುತ್ತಿರುವ ಒಂದೆರಡು ಊದಿನ ಕಡ್ಡಿಗಳನ್ನು ಹಿಡಿದು ಊದಿ. ಉತ್ತರ ಮೋಂಬತ್ತಿ ಜ್ವಾಲೆಯ ಹತ್ತಿರದ ಗಾಳಿಯು ಬಿಸಿಯಾಗಿ `ಅ' ಸಿಲಿಂಡರ್‌ನ ಮುಖಾಂತರ ಹೊರಹೋಗುತ್ತದೆ. ಇದರಿಂದ ಪೆಟ್ಟಿಗೆಯಲ್ಲಿ ಸ್ವಲ್ಪ (ಅರೆ) ನಿರ್ವಾತ ನಿರ್ಮಾಣವಾಗುತ್ತದೆ. `ಬ'ದ ಕಡೆಗೆ ಹೊಗೆಯನ್ನು ಊದುವುದರಿಂದ ಅದು ಪೆಟ್ಟಿಗೆಯಲ್ಲಿ ಸೇರಿ `ಅ' ಕಡೆಯಿಂದ ಹೊರ ಹೋಗುತ್ತದೆ. ಅದೇ ರೀತಿ, ಹಗಲು ಸೂರ್ಯನ ಬಿಸಿಲಿನಿಂದ ಭೂಮಿ ಕಾಯ್ದು ಅರೆ ನಿರ್ವಾತ ಪ್ರದೇಶ ನಿರ್ಮಾಣವಾಗಿ, ಸಮುದ್ರದ ಕಡೆಯಿಂದ ಒತ್ತಡ ಹೆಚ್ಚಾಗಿ ತಂಪು ಗಾಳಿ ಬೀಸುತ್ತದೆ. ರಾತ್ರಿ ತಂಪು ಗಾಳಿ ಭೂಮಿಯ ಕಡೆಯಿಂದ ಸಮುದ್ರದ ಕಡೆ ಬೀಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.