ಸ್ಪರ್ಧೆ : ಬರಿಗಾಲಲ್ಲಿ ಓಡಬೇಡಿ ರಾಮ ಹಾಗೂ ಶ್ಯಾಮ ಎಂಬ ಗೆಳೆಯರು ಒಮ್ಮೆ ಕಾಡಿಗೆ ಚಾರಣ ಹೋಗಿದ್ದರು. ಒಂದು ಸಿಂಹ ಅವರನ್ನು ಅಟ್ಟಿಸಿಕೊಂಡು ಬಂದಿತು. ಇಬ್ಬರೂ ಜೋರಾಗಿ ಓಡಲಾರಂಭಿಸಿದರು. ಸ್ವಲ್ಪ ದೂರದ ನಂತರ ಶ್ಯಾಮ ಥಟ್ಟನೆ ನಿಂತು, ತನ್ನ ಚೀಲದಲ್ಲಿದ್ದ ಶೂ ತೆಗೆದು ಹಾಕಿಕೊಳ್ಳಲಾರಂಭಿಸಿದ. ರಾಮನಿಗೆ ಅಚ್ಚರಿಯಾಯಿತು. ಸಿಂಹದ ಭಯದಿಂದ ಶ್ಯಾಮನಿಗೆಲ್ಲೋ ತಲೆಕೆಟ್ಟಿದೆ ಎನಿಸಿತು. ಆತ ಶ್ಯಾಮನನ್ನು ಕೇಳಿದ `ಅಲ್ಲಯ್ಯೊ, ಶೂ ಹಾಕಿಕೊಂಡರೆ ನೀನೇನು ಸಿಂಹಕ್ಕಿಂತ ವೇಗವಾಗಿ ಓಡಬಲ್ಲೆಯಾ?'. ಆಗ ಶ್ಯಾಮ ಉತ್ತರಿಸಿದ `ಸಿಂಹಕ್ಕಿಂತ ವೇಗವಾಗಿ ಓಡ್ತೀನೋ ಇಲ್ಲವೋ ಗೊತ್ತಿಲ್ಲ. ಆದರೆ ನಿನಗಿಂತ ಎರಡು ಹೆಜ್ಜೆ ಮುಂದೆ ಓಡಬಲ್ಲೆ. ಸದ್ಯಕ್ಕೆ ಅಷ್ಟು ಸಾಕು. ಯಾಕೇಂದ್ರೆ ಮೊದಲು ಸಿಗೋ ನಿನ್ನನ್ನು ಸಿಂಹ ಕಬಳಿಸುತ್ತೆ. ನಾನು ಬಚಾವಾಗ್ತೇನೆ!' ಇದು ಇಂದಿನ ಜಗತ್ತಿನಲ್ಲಿರುವ ಸ್ಪರ್ಧೆಗೆ ಉದಾಹರಣೆ. ಸ್ಪರ್ಧಾತ್ಮಕತೆ ಎಂಬುದು ಎಲ್ಲ ಕ್ಷೇತ್ರಗಳಲ್ಲೂ ಅತ್ಯಂತ ತೀವ್ರವಾಗಿದೆ. ರಾಮ, ಶ್ಯಾಮರ ಹಿಂದೆ ಬಿದ್ದ ಸಿಂಹದ ರೀತಿಯಲ್ಲಿ ಸ್ಪರ್ಧೆ ಎಂಬುದು ಎಲ್ಲರ ಹಿಂದೆಯೂ ಬಿದ್ದಿದೆ. ಯಾರು ಇದನ್ನು ಎದುರಿಸಲು ತಯಾರಿಲ್ಲವೋ ಅವರನ್ನು ಸೋಲು ಕಬಳಿಸುತ್ತಿದೆ. ಇಲ್ಲಿ ಶ್ಯಾಮ ಧರಿಸಿದ ಶೂ ಪ್ರತಿಯೊಬ್ಬರಿಗೂ ಅಗತ್ಯವಾದ ವಿಶೇಷ ಕೌಶಲಗಳನ್ನು ( )ಪ್ರತಿನಿಧಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತು ವೈಶಿಷ್ಟ್ಯವನ್ನು ನಿರೀಕ್ಷಿಸುತ್ತದೆ. ಶಿಕ್ಷಣ ಎಂಬುದು ಬರಿಗಾಲಿನ ಓಟವಾದರೆ, ವೃತ್ತಿ ಶಿಕ್ಷಣ ಅಥವಾ ವಿಶಿಷ್ಟ ಶಿಕ್ಷಣ ( ) ಶೂ ಧರಿಸಿದ ಓಟ. ಹತ್ತೆಡೆಯೊಳು ತೋಡಿ ಒಂದಡಿಯಷ್ಟನು ಬರಲಿಲ್ಲ ನೀರೆಂದೆನಬೇಡ ಒಂದೆಡೆಯೊಳು ತೋಡು ಹತ್ತಡಿಯಷ್ಟನು ಚಿಮ್ಮುವುದು ಉದಕವು ನೋಡ ಎನ್ನುತ್ತಾರೆ ಕವಿ ಎಸ್.ವಿ. ಪರಮೇಶ್ವರ ಭಟ್ಟ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ವಿಶೇಷ ಪರಿಣತಿ ಗಳಿಸಿಕೊಂಡರೆ ಮಾತ್ರ ಯಶಸ್ಸು. ಆದರೆ ಬರೀ ಶಿಕ್ಷಣವೊಂದೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆ ದೊರಕಿಸಿಕೊಡುವುದಿಲ್ಲ. ಬದುಕಿನಲ್ಲಿ ಯಶಸ್ಸು ದೊರಕಿಸಿ ಕೊಡುವ ಕೌಶಲ ವೃದ್ಧಿಗೆ ನಮ್ಮ ಅಂತರಾಳದ ಸಂಪತ್ತಾದ ವ್ಯಕ್ತಿತ್ವವನ್ನು ಜಾಗೃತಗೊಳಿಸಿಕೊಳ್ಳಬೇಕು. ಆತ್ಮವಿಶ್ವಾಸದ ಜ್ಯೋತಿ ಸದಾ ನಮ್ಮ ಎದೆಯಾಳದಲ್ಲಿ ಬೆಳಗುತ್ತಿರಬೇಕು. ಡಿ.ವಿ.ಜಿ ಯವರು ಹೇಳಿದಂತೆ ಸತ್ತೆನೆಂದೆನಬೇಡ, ಸೋತೆನೆಂದೆನಬೇಡ, ಬತ್ತಿತು ಎನ್ನೊಳು ಸತ್ವದೂಟೆ ಎಂದೆನಬೇಡ ಮೃತ್ಯು ತೆರೆ ಇಳಿತ, ತೆರೆ ಏರೆ ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ ನಮ್ಮಳಗಿನ ಸತ್ವದ ಮೂಟೆಯನ್ನು ಸದಾ ಬತ್ತದಂತೆ ಕಾಪಾಡಿಕೊಳ್ಳಬೇಕು. ಕತ್ತಲಾದ ಮೇಲೆ ಬೆಳಕು ಖಂಡಿತಾ ಇದೆ ಎಂಬ ಆತ್ಮವಿಶ್ವಾಸದಿಂದ ಈ ಸ್ಪರ್ಧಾತ್ಮಕ ಜಗತ್ತಿಗೆ ನಮ್ಮನ್ನು ನಾವು ಒಡ್ಡಿಕೊಳ್ಳಬಹುದು. ಸಿದ್ಧರಾಗುವ ಬಗೆ ನಿಮಗೆ ಆಸಕ್ತಿ ಇರುವ ವಿಷಯದಲ್ಲಿ ಪರಿಣತರಾಗಿ, ಆ ನಿಟ್ಟಿನಲ್ಲಿ ವಿಶೇಷ ಶಿಕ್ಷಣ ಪಡೆದುಕೊಳ್ಳಿ. ನಿಮ್ಮ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಅರಿವಿರಲಿ. ಒಂದು ವಿಷಯದಲ್ಲಿ ಪರಿಣತರಾದ ಮಾತ್ರಕ್ಕೆ ಅದೊಂದನ್ನು ಬಿಟ್ಟು ಬೇರೆ ವಿಷಯಗಳನ್ನು ತಿಳಿದುಕೊಳ್ಳಬಾರದು ಎಂದೇನಿಲ್ಲ. ಜಗತ್ತಿನ ಆಗುಹೋಗುಗಳ ಬಗೆಗೆ ಸಾಮಾನ್ಯ ಜ್ಞಾನ ಅತ್ಯಗತ್ಯ. ನಿಮ್ಮ ಜ್ಞಾನ, ತಿಳಿವಳಿಕೆ ಹೊರ ಜಗತ್ತಿಗೆ ಗೊತ್ತಾಗುವುದು ಸಂವಹನದ ಮೂಲಕ. ಪರಿಣಾಮಕಾರಿ ಸಂವಹನ ಕೌಶಲಗಳನ್ನು ನಿಮ್ಮದಾಗಿಸಿಕೊಳ್ಳಿ. ಅದು ನಿಮ್ಮನ್ನು ಮುಂಚೂಣಿಯಲ್ಲಿ ಇರಿಸುತ್ತದೆ. ಸ್ಪರ್ಧೆಯಷ್ಟೇ ಮುಖ್ಯವಾದುದು ಸ್ಪರ್ಧಾ ಮನೋಭಾವ. ಹೇಗೆ ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲವೋ ಹಾಗೆಯೇ ಎಲ್ಲರೂ ನಂ. 1 ಆಗಲು ಸಾಧ್ಯವಿಲ್ಲ. ಆದರೆ ಸ್ಪರ್ಧಾ ಮನೋಭಾವದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಸೋಲಿಗೆ ಅಂಜದಿರಿ. ಸೋಲನ್ನು ಸವಾಲಾಗಿ ಸ್ವೀಕರಿಸುವುದೇ ಸ್ಪರ್ಧಾತ್ಮಕ ಜಗತ್ತಿನಲ್ಲಿನ ಯಶಸ್ಸಿನ ಗುಟ್ಟು. ವೃತ್ತಿ ಶಿಕ್ಷಣದಷ್ಟೇ ಮುಖ್ಯ ಪ್ರವೃತ್ತಿ ಶಿಕ್ಷಣ. ಒಳ್ಳೆಯ ಸದಭಿರುಚಿಯ ಪ್ರವೃತ್ತಿಗಳು ನಿಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ. ಉತ್ತಮ ಓದು, ಸಂಗೀತ, ನಾಟಕ ಮುಂತಾದವು ನಿಮ್ಮ ಸಕಾರಾತ್ಮಕ ವ್ಯಕ್ತಿತ್ವಕ್ಕೆ ಪೂರಕವಾಗುತ್ತವೆ. ಇದು ನಿಮ್ಮನ್ನು ಎಂಥಾ ಸ್ಪರ್ಧೆಗೂ ಸಿದ್ಧಗೊಳಿಸುತ್ತದೆ. ಜಗತ್ತು ತೀವ್ರ ಸ್ಪರ್ಧಾತ್ಮಕವಾಗಿದೆ ಎಂದು ಆತಂಕ, ಉದ್ವೇಗಗಳಿಗೆ ಒಳಗಾಗಬೇಡಿ. ಇವು ನಿಮ್ಮ ಪ್ರಯತ್ನಗಳನ್ನು ಮಣ್ಣುಪಾಲು ಮಾಡುತ್ತವೆ. ನೀವು ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಿ. ಆಗ ನಿಮಗೆ ಸ್ಪರ್ಧೆಯನ್ನು ಎದುರಿಸಲು ಸ್ಫೂರ್ತಿ ಸಿಗುತ್ತದೆ. ಸ್ಪರ್ಧಾತ್ಮಕತೆ ಇಂದಿನ ಜೀವನದ ಅವಿಭಾಜ್ಯ ಅಂಗ. ಅದಕ್ಕೆ ಅನುಗುಣವಾಗಿ ನಮ್ಮ ವ್ಯಕ್ತಿತ್ವದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದೇ ಯಶಸ್ಸಿನ ಗುಟ್ಟು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.