ಎಂ. ಎಸ್. ಇ. ಕೋರ್ಸ್ ಪರಿವರ್ತನೆಯ ಗುರಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌ನಲ್ಲಿ ಮತ್ತೊಮ್ಮೆ ಸಂಭ್ರಮ ಮನೆ ಮಾಡಿದೆ. ಫೌಂಡೇಷನ್‌ನ ಡಿಸಿಎಸ್‌ಇ (ದೇಶಪಾಂಡೆ ಸೆಂಟರ್ ಫಾರ್ ಸೋಷಿಯಲ್ ಎಂಟರ್‌ಪ್ರನರ್‌ಶಿಪ್) ಶುರು ಮಾಡಿದ `ಸಾಮಾಜಿಕ ಉದ್ಯಮಶೀಲತೆ' ಸ್ನಾತಕೋತ್ತರ ಪದವಿ (ಮಾಸ್ಟರ್ ಆಫ್ ಸೋಷಿಯಲ್ ಎಂಟರ್‌ಪ್ರನರ್‌ಶಿಪ್- ಎಂ.ಎಸ್.ಇ.) ಕೋರ್ಸ್ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಖುಷಿಯಲ್ಲಿದ್ದಾರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು. ವಿಶ್ವವಿದ್ಯಾಲಯದ ಮಾನ್ಯತೆ ಪಡೆದು ಈ ಕೋರ್ಸ್ ನಡೆಸುವ ಮೊದಲ ಸಂಸ್ಥೆ ಈ ಫೌಂಡೇಷನ್. ಇದು ಅವರ ಸಂತೋಷಕ್ಕೆ ಪ್ರಮುಖ ಕಾರಣ. ತರಬೇತಿಯನ್ನೇ ಪ್ರಮುಖ ಉದ್ದೇಶವಾಗಿ ಇರಿಸಿಕೊಂಡು ದೇಶದ ವಿವಿಧೆಡೆ ಸಾಮಾಜಿಕ ಉದ್ಯಮಶೀಲತಾ ಕಾರ್ಯಕ್ರಮಗಳು ನಡೆಯುತ್ತಿವೆ. ಕೆಲವು ಸ್ವಾಯತ್ತ ಸಂಸ್ಥೆಗಳು ಕೂಡ ತರಬೇತಿ ನೀಡುತ್ತಿವೆ. ಆದರೆ ಎಂ.ಎಸ್.ಇ. ಯನ್ನು ಒಂದು ಕೋರ್ಸ್ ಆಗಿ ಕಲಿಯಲು ಅವಕಾಶ ಇರುವುದು ಇಲ್ಲಿ ಮಾತ್ರ. ಧಾರವಾಡದ ಕರ್ನಾಟಕ ವಿ.ವಿ. ಮಾನ್ಯತೆ ಪಡೆದ ಕೋರ್ಸ್‌ನ ಎರಡನೇ ತಂಡದ ಪ್ರವೇಶ ಪ್ರಕ್ರಿಯೆ ಆಗಸ್ಟ್ ಎರಡನೇ ವಾರ ಆರಂಭವಾಗಿದೆ. ಒಂದೇ ವರ್ಷದಲ್ಲಿ ಉದ್ಯಮ- ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ತಿಳಿದುಕೊಂಡಿರುವ, ಪ್ರಾಯೋಗಿಕವಾಗಿ ಆ ಕ್ಷೇತ್ರಕ್ಕೆ ಧುಮುಕಿರುವ ವಿದ್ಯಾರ್ಥಿಗಳು, ಬಾಕಿ ಉಳಿದಿರುವ ಒಂದು ವರ್ಷವನ್ನು ಪೂರ್ಣಗೊಳಿಸಿ ಉದ್ಯಮಪತಿಗಳಾಗಲು ಹಾತೊರೆಯುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ತೊದಲುಬಾಗೆ ಎಂಬ ಗ್ರಾಮದಿಂದ ಬಂದ ಸದಾಶಿವ ಜಿ.ಕಂಬಗಿ ಕೃಷ್ಣಾ ದಂಡೆಯಲ್ಲಿರುವ ಹೊಲದ ಒಂದು ಭಾಗದಲ್ಲಿ ಹೈನೋದ್ಯಮ ನಡೆಸಬೇಕೆಂಬ ಕನಸು ಹೊತ್ತುಕೊಂಡವರು. ಎಂ.ಎಸ್.ಇ. ಕೋರ್ಸ್‌ಗೆ ಸೇರಿ ವ್ಯವಹಾರ ಜ್ಞಾನ ವೃದ್ಧಿಸಿಕೊಂಡಿರುವ ಅವರು `ಈಗ ಉದ್ಯಮ ಆರಂಭಿಸಲು ಯಾವುದೇ ಆತಂಕ ಇಲ್ಲ' ಎಂದು ಹೇಳುತ್ತಾರೆ. ಕೋರ್ಸಿನ ಭಾಗವಾಗಿ ನಡೆದ ಮಾವಿನ ಹಣ್ಣು ವ್ಯಾಪಾರದ ಪ್ರಯೋಗದಲ್ಲಿ ಯಶಸ್ಸು ಗಳಿಸಿದ್ದಾರೆ. ಸಹಪಾಠಿ ಚನ್ನಬಸಪ್ಪ ಗುದ್ದಲಿ ಜೊತೆ ಸೇರಿಕೊಂಡು 6500 ರೂಪಾಯಿ ನೀಡಿ ಖರೀದಿಸಿದ ಮಾವಿನ ಹಣ್ಣುಗಳನ್ನು 20 ದಿನ ಮಾರಾಟ ಮಾಡಿ 3500 ರೂಪಾಯಿ ಲಾಭ ಗಳಿಸಿದ್ದಾರೆ. ಜಾರ್ಖಂಡ್‌ನ ಧನ್‌ಬಾಗ್‌ನಿಂದ ಬಂದಿರುವ ಅಥರ್ವ ತಾವೇ ಸ್ಥಾಪಿಸಿದ ಎರಡು ಸಾಮಾಜಿಕ ಸಂಘಟನೆಗಳನ್ನು ವಿಸ್ತರಿಸಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಉದ್ಯಮ ಕ್ಷೇತ್ರದಲ್ಲೂ ಬೆಳೆಯಬೇಕೆಂಬುದು ಅವರ ಆಸೆ. ಫೌಂಡೇಷನ್‌ನ ದೇಶಪಾಂಡೆ ಫೆಲೋಷಿಪ್ ಕಾರ್ಯಕ್ರಮ ಎಂ.ಎಸ್.ಇ. ಕೋರ್ಸ್ ಆರಂಭಿಸಲು ಪ್ರೇರಣೆ. ಎಂ.ಎಸ್.ಡಬ್ಲ್ಯು. ಮತ್ತು ಎಂ.ಬಿ.ಎ.ಯನ್ನು ಮಿಲಿತಗೊಳಿಸಿ ಸಿದ್ಧಪಡಿಸಲಾದ ಪಠ್ಯಕ್ರಮದ ಈ ಕೋರ್ಸ್, ಮಾರುಕಟ್ಟೆ ಹಾಗೂ ವ್ಯವಹಾರದಿಂದ ಶುರುವಾಗಿ ಮಾಹಿತಿ- ಸಂವಹನದವರೆಗೂ ವಿಷಯ ವ್ಯಾಪ್ತಿಯನ್ನು ಹೊಂದಿದೆ. ಡಾ. ನೀಲಂ ಮಹೇಶ್ವರಿ ಇದರ ಪ್ರಾಚಾರ್ಯೆ. ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಜಾ ಕೂಡ ಪಾಠ ಮಾಡುತ್ತಾರೆ. ಕಾಯಂ ಸಿಬ್ಬಂದಿ ಜೊತೆಯಲ್ಲಿ ಉದ್ಯಮಿ ಅರವಿಂದ ಚುಂಚುರೆ, ದೇಶ ಸುತ್ತಿ ಅಪಾರ ಅನುಭವ ಹೊಂದಿರುವ ಸುಶೀಲ್ ವಚನಿ ಮುಂತಾದವರು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾರೆ. ಕರ್ನಾಟಕ ಮಾತ್ರವಲ್ಲದೆ ಜಾರ್ಖಂಡ್, ಅಸ್ಸಾಂ ಮತ್ತಿತರ ರಾಜ್ಯಗಳ ವಿದ್ಯಾರ್ಥಿಗಳು, ಇಬ್ಬರು ವಿದ್ಯಾರ್ಥಿನಿಯರೂ ಇದ್ದಾರೆ. ಕಲಿಯುವ ವೇಳೆಯಲ್ಲೇ ಶಿಷ್ಯವೇತನ ಸಮೇತ ಪ್ರಾಯೋಗಿಕ ತರಬೇತಿ ಈ ಕೋರ್ಸ್‌ನ ವೈಶಿಷ್ಟ್ಯ. ಕೋರ್ಸ್ ಮುಗಿದ ನಂತರ ಸ್ವಂತ ಉದ್ದಿಮೆ ಆರಂಭಿಸಲು ಮುಂದಾಗುವವರಿಗೆ ವಿಶೇಷ ಯೋಜನೆಯಡಿ ನೆರವು ನೀಡುವ ಕಾರ್ಯಕ್ರಮವೂ ಇದೆ. `ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಕೋರ್ಸ್‌ಗೆ ಸೇರಬಹುದು. ಸಾಮಾಜಿಕ ಪರಿವರ್ತನೆಯನ್ನು ಗುರಿಯಾಗಿರಿಸಿಕೊಂಡು ಬಂದ ಯುವಕರೇ ಇಲ್ಲಿ ಹೆಚ್ಚು ಇದ್ದಾರೆ. ಕೋರ್ಸ್ ಮುಗಿಸಿ ಇವರು ಕಾರ್ಯಕ್ಷೇತ್ರಕ್ಕೆ ಇಳಿದಾಗ ಉದ್ಯೋಗ ಕ್ಷೇತ್ರದಲ್ಲಿ ಮತ್ತೊಂದು ಆಶಾದೀಪ ಬೆಳಗಿದಂತೆ ಆಗಲಿದೆ' ಎಂದು ಸಂಸ್ಥೆಯ ಮಾರ್ಕೆಟಿಂಗ್ ವಿಷಯದ ಉಪನ್ಯಾಸಕಿ ಆ್ಯನಿ ವಿಜಯಾ ಹೇಳುತ್ತಾರೆ. ಸಂಸ್ಥೆಯ ಸಂಪರ್ಕ: .. @. 0836-2378500 9686113996, 9686654750 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.