ಪದವಿ ಒಂದೇ ಸಾಲದು ಕಣಾ ಹಿಂದೆ ಒಂದು ಕಾಲವಿತ್ತು, ಬರೀ ಡಿಗ್ರಿ ಮಾಡಿದ್ದರೆ ಅಥವಾ ಸ್ನಾತಕೋತ್ತರ ಪದವಿ ಪೂರೈಸಿದ್ದರೆ ಸಾಕು ನೌಕರಿ ಸಿಕ್ಕಿಬಿಡುತ್ತಿತ್ತು. ಆದರೆ ಇಂದು ಹಾಗಲ್ಲ, `ನನ್ನದು ಡಿಗ್ರಿ ಆಗಿದೆ ಸಾರ್...' ಎಂದು ಯಾವುದಾದರೂ ಕಂಪೆನಿಯ ಸಂದರ್ಶನದಲ್ಲಿ ಹೇಳಿಕೊಂಡರೆ, ಅವರು ಕೇಳುವ ಮೊದಲ ಪ್ರಶ್ನೆ `ಅದು ಸರಿ, ನಿಮಗೆ ಕಂಪ್ಯೂಟರ್ ಬರುತ್ತಾ?'. ಒಂದು ವೇಳೆ ಅದಕ್ಕೆ ನಿಮ್ಮಿಂದ ನಕಾರಾತ್ಮಕ ಉತ್ತರವೇನಾದರೂ ಬಂದರೆ ಆ ಕ್ಷಣವೇ `ವಿ ಆರ್ ಸಾರಿ. ನಿಮಗೆ ಕೆಲಸ ಕೊಡೋಕಾಗಲ್ಲ. ಕಂಪ್ಯೂಟರ್ ಜ್ಞಾನ ಬೇಕೇ ಬೇಕು. ಇಟ್ ಈಸ್ ಮಸ್ಟ್' ಎಂದು ಹೇಳಿ ನಿಮ್ಮನ್ನು ಸಾಗಹಾಕಿ ಮತ್ತೊಬ್ಬ ಅಭ್ಯರ್ಥಿಗೆ ಬರ ಹೇಳುತ್ತಾರೆ. ಅದಕ್ಕೆಂದೇ ಇಂದಿನ ಜಮಾನದಲ್ಲಿ ಕೇವಲ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಎಂ.ಎ., ಎಂ.ಕಾಂ., ಎಂ.ಎಸ್ಸಿ., ಎಂಜಿನಿಯರಿಂಗ್ ಮಾಡಿದರೆ ಸಾಕಾಗುವುದಿಲ್ಲ. ಸಾಂಪ್ರದಾಯಿಕ ಶೈಲಿಯ ಈ ಪದವಿಗಳ ಜೊತೆಗೆ, ಕೆಲ ಹೆಚ್ಚುವರಿ ಶೈಕ್ಷಣಿಕ ಅರ್ಹತೆಗಳನ್ನೂ ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ: 1. ಬಿ.ಎ. ಜೊತೆಗೆ ಟೈಪಿಂಗ್, ಶಾರ್ಟ್‌ಹ್ಯಾಂಡ್ ಮಾಡಿಕೊಂಡರೆ ಹೆಚ್ಚು ಬೇಡಿಕೆ. 2. ಬಿ.ಕಾಂ. ಅಥವಾ ಎಂ.ಕಾಂ. ಮಾತ್ರ ಮಾಡಿಕೊಂಡರೆ ನಿಮ್ಮನ್ನು ಯಾರೂ ಕ್ಯಾರೇ ಅನ್ನದೇ ಇರಬಹುದು. ಅದರ ಜೊತೆಗೆ ಟ್ಯಾಲಿ ಕೋರ್ಸ್ ಪೂರೈಸಿದರೆ ಇಂದು ಎಲ್ಲ ಕಡೆ ಉದ್ಯೋಗವಿದೆ. 3. ಎಂಜಿನಿಯರಿಂಗ್ ಶಿಕ್ಷಣದ ಜೊತೆಗೆ ಎಂಬಿಎ ಮಾಡಿಕೊಂಡರೆ ಒಳ್ಳೆಯದು. 4. ಪದವಿ ಅಥವಾ ಸ್ನಾತಕೋತ್ತರ ಪದವಿ ಜೊತೆ ಕಂಪ್ಯೂಟರ್ ಜ್ಞಾನವಿದ್ದರೆ ಉತ್ತಮ. ಟೈಪಿಂಗ್, ಶೀಘ್ರಲಿಪಿ ಟೈಪಿಂಗ್ ಕಲಿತವರಿಗೆ ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆ ಇದೆ. ಸುಲಲಿತವಾಗಿ ಟೈಪಿಂಗ್ ಮಾಡುವವರಿದ್ದಾರೆ. ಟೈಪ್‌ರೈಟರ್‌ಗಳಾಗಿ, ಕಂಪೋಸರ್ ಆಗಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಕೆಲ ಸರ್ಕಾರಿ ಕಚೇರಿಗಳು, ನ್ಯಾಯಾಲಯಗಳು ಟೈಪಿಂಗ್ ಮಾಡಿರುವವರಿಗೆ ಆದ್ಯತೆ ನೀಡುತ್ತಿವೆ. ಹಾಗೆಯೇ ಶೀಘ್ರಲಿಪಿಗಾರರಿಗೂ (ಶಾರ್ಟ್‌ಹ್ಯಾಂಡ್) ಬೇಡಿಕೆ ಇದೆ. ನ್ಯಾಯಾಲಯಗಳು, ವಿಧಾನಸಭೆ, ವಿಧಾನಪರಿಷತ್ತುಗಳಲ್ಲಿ ಆಡು ಮಾತುಗಳನ್ನು, ಸದಸ್ಯರ ಭಾಷಣಗಳನ್ನು ಯಥಾವತ್ತಾಗಿ ಲಗುಬಗೆಯಿಂದ ಬರೆದುಕೊಳ್ಳಲು ಶೀಘ್ರಲಿಪಿ ಕಲಿತವರು ಅತ್ಯಗತ್ಯ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವಾರು ಉದ್ಯೋಗಗಳ ನೇಮಕಾತಿಯಲ್ಲಿ ಶೀಘ್ರಲಿಪಿ ಕಲಿಕೆ ಕಡ್ಡಾಯ ಎಂಬ ಅಂಶವನ್ನು ಗಮನಿಸಬಹುದು. ಟ್ಯಾಲಿ ಲೆಕ್ಕಪತ್ರಗಳ (ಅಕೌಂಟ್ಸ್) ನಿರ್ವಹಣೆಗೆ ಟ್ಯಾಲಿ ಬೇಕೇ ಬೇಕು ಎಂಬ ಅನಿವಾರ್ಯ ಇದೆ. ಟ್ಯಾಲಿ ಕ್ಷೇತ್ರದಲ್ಲಿ ಅನೇಕ ಉದ್ಯೋಗ ಅವಕಾಶಗಳಿವೆ. ಜಗತ್ತಿನಲ್ಲಿ ಇಂದು ಸುಮಾರು 60 ಲಕ್ಷ ಮಂದಿ ಟ್ಯಾಲಿ ತಂತ್ರಜ್ಞಾನ ಬಳಸುತ್ತಾರೆ. ಟ್ಯಾಲಿ ಕುರಿತು ಹಲವಾರು ಕಾಲೇಜುಗಳು, ಕಲಿಕಾ ಕೇಂದ್ರಗಳು ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಿವೆ. ಇದನ್ನೆಲ್ಲ ಗಮನಿಸಿದರೆ, ಇಂದು ವಿಶ್ವದಾದ್ಯಂತ ಟ್ಯಾಲಿ ತಂತ್ರಜ್ಞರಿಗೆ ಭಾರಿ ಬೇಡಿಕೆ ಇರುವುದು ತಿಳಿಯುತ್ತದೆ. ಯಾವುದೇ ಉದ್ಯಮಕ್ಕೆ ಕಾಲಿಡಿ, ಅಲ್ಲಿ ಟ್ಯಾಲಿ ತಂತ್ರಜ್ಞರಿಗೆ ಬೇಡಿಕೆ ಇದ್ದೇ ಇದೆ. ಹಲವಾರು ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಟ್ಯಾಲಿಯನ್ನು ಮುಖ್ಯ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಬೆಂಗಳೂರು ವಿ.ವಿ., ಶಿಮ್ಲಾ ವಿ.ವಿ., ರಾಜೀವ್ ಗಾಂಧಿ ವಿ.ವಿ., ದೆಹಲಿ ವಿ.ವಿ., ತಮಿಳುನಾಡು ಮುಕ್ತ ವಿ.ವಿ., ಕರ್ನಾಟಕ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಪಠ್ಯಕ್ರಮದಲ್ಲಿ ಟ್ಯಾಲಿ ಬಂದು ನಿಂತಿದೆ. ಟ್ಯಾಲಿಗೆ ಈಗ ಅಷ್ಟರಮಟ್ಟಿಗೆ ಪ್ರಾಮುಖ್ಯತೆ ಇದೆ. ಎಂಬಿಎ ಎಂಬ ಉಪ ಪದವಿ ಎಂಜಿನಿಯರಿಂಗ್ ಜೊತೆಗೆ ಎಂಬಿಎ ಮಾಡಿದವರಿಗೂ ಇಂದು ಬಲು ಬೇಡಿಕೆ ಬರುತ್ತಿದೆ. ತಾಂತ್ರಿಕ ಕೌಶಲದ ಜೊತೆಗೆ ನಿರ್ವಹಣೆ, ಮಾರುಕಟ್ಟೆ ಕ್ಷೇತ್ರದ ಜ್ಞಾನ ಹೊಂದಿದ `ಎಂಜಿನಿಯರಿಂಗ್ ಕಂ ಎಂಬಿಎ' ಪದವೀಧರರಿಗೆ ನೌಕರಿ ಕೊಡಲು ನಾ ಮುಂದು, ತಾ ಮುಂದು ಎಂದು ಕಂಪೆನಿಗಳು ಮುಂದೆ ಬರುತ್ತಿವೆ. ಎಂಬಿಎ ಒಂದು ವೃತ್ತಿಪರ ಕೋರ್ಸ್ ಆದರೂ, ಎಂಜಿನಿಯರಿಂಗ್ ಪದವೀಧರರು ಅದನ್ನು ಒಂದು ಉಪ ಪದವಿಯಾಗಿ ಸ್ವೀಕರಿಸಿದರೆ ಬೇಡಿಕೆ ಇದ್ದೇ ಇದೆ. ಕಂಪ್ಯೂಟರ್ ಜ್ಞಾನ ಮುಂದುವರಿದ ರಾಷ್ಟ್ರಗಳಲ್ಲಿ ಕಂಪ್ಯೂಟರ್ ಇಲ್ಲದೆ ಜಗತ್ತೇ ಇಲ್ಲ ಎನ್ನುವ ಸ್ಥಿತಿ ಬಂದಿದೆ. ಭಾರತದಲ್ಲೂ ಬಹುತೇಕ ಕೆಲಸಗಳು ಕಂಪ್ಯೂಟರ್‌ನಿಂದಲೇ ನಡೆಯು­ತ್ತಿವೆ. ಸಾಮಾನ್ಯವಾಗಿ ಎಲ್ಲ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳ ದಿನನಿತ್ಯದ ಕೆಲಸಗಳನ್ನು ಕಂಪ್ಯೂಟರ್ ಮೂಲಕ ಮಾಡಲಾಗುತ್ತದೆ. ಕೆಲಸ ಕೇಳಲು ಹೋದ­ಲ್ಲೆಲ್ಲ ಕಂಪ್ಯೂಟರ್ ಜ್ಞಾನದ ಬಗ್ಗೆ ಕೇಳೇ ಕೇಳಲಾಗುತ್ತದೆ. `ಗೊತ್ತಿಲ್ಲ' ಎಂದರೆ ಕೆಲಸ ಸಿಗಲು ಸಾಧ್ಯವಿಲ್ಲ. ಹೀಗಾಗಿ ಕಂಪ್ಯೂಟರ್ ಬಗ್ಗೆ ಪ್ರಾಥಮಿಕ ಜ್ಞಾನವನ್ನು ಪ್ರತಿಯೊಬ್ಬರೂ ಪಡೆದಿರಬೇಕು. ಇಂದು ಹಲವಾರು ವಿಶ್ವವಿದ್ಯಾಲಯಗಳು ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಪರಿಚಯಿ­ಸಿವೆ. ಹಾಗೇ ಮುಕ್ತ ವಿಶ್ವವಿದ್ಯಾ­ಲಯಗಳು ಕೂಡಾ ಪದವಿ ಪೂರೈಸಿದವರಿಗೆ ಕಂಪ್ಯೂಟರ್ ಕೋರ್ಸ್ ಅಳವಡಿಸಿವೆ. ಪುಟ ವಿನ್ಯಾಸ, ವಿದ್ಯುನ್ಮಾನ ಜ್ಞಾನ ಇಂದು ಪತ್ರಿಕೋದ್ಯಮಕ್ಕೆ ಬರುವವರಿಗೂ ಕಂಪ್ಯೂಟರ್ ಜ್ಞಾನ ಇರಬೇಕು. ಒಬ್ಬ ಪತ್ರಕರ್ತ ಸುದ್ದಿ ಬರೆಯುವುದಷ್ಟೇ ಅಲ್ಲ, ಪುಟ ವಿನ್ಯಾಸವನ್ನೂ ಮಾಡಬೇಕಾಗುತ್ತದೆ. ಪತ್ರಿಕೋದ್ಯಮ ಪದವೀಧರರು ಯಾವುದೇ ಪತ್ರಿಕಾಲಯಕ್ಕೆ ಸಂದರ್ಶನಕ್ಕೆ ಹೋಗಲಿ ಅಲ್ಲಿ ಕೇಳುವ ಪ್ರಶ್ನೆ. `ನಿಮಗೆ ಕಂಪ್ಯೂಟರ್ ಬರುತ್ತಾ?' `ಪುಟ ವಿನ್ಯಾಸ ಬಲ್ಲಿರಾ? ಎಂದು. ಒಂದು ವೇಳೆ `ಇಲ್ಲ' ಎಂಬ ಉತ್ತರ ಬಂದರೆ ನಿಮಗೆ ಅಲ್ಲಿ ಕೆಲಸ ಇಲ್ಲ ಎಂದೇ ಅರ್ಥ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿದ್ಯುನ್ಮಾನ ಮಾಧ್ಯಮದ ಅರಿವು ಸಹ ಅಗತ್ಯ. ಸುದ್ದಿವಾಚನ ಮಾಡುವುದು, ಘಟನಾ ಸ್ಥಳಕ್ಕೆ ಖುದ್ದಾಗಿ ಹೋಗಿ ವರದಿ ಮಾಡಿ `ಪಿ.ಟಿ.ಸಿ.' ನೀಡುವುದು, ಶೂಟಿಂಗ್, ಎಡಿಟಿಂಗ್ ಇತ್ಯಾದಿ ಜ್ಞಾನವನ್ನು ಹೊಂದುವುದು ಅಗತ್ಯ. ಒಟ್ಟಿನಲ್ಲಿ ಇಂದಿನ ದಿನಗಳಲ್ಲಿ ಯಾವ ಕೋರ್ಸ್ ಕಲಿತರೂ ತಪ್ಪಿಲ್ಲ. ಊಟಕ್ಕೆ ಅನ್ನ- ಸಾರು ಎಷ್ಟು ಮುಖ್ಯವೋ ಹಾಗೇ ನೆಂಚಿಕೊಳ್ಳಲು ಉಪ್ಪಿನಕಾಯಿಯೂ ಅಷ್ಟೇ ಮುಖ್ಯವಾಗುತ್ತದೆ. ಕೆಲಸವಿಲ್ಲದೆ ಕುಳಿತುಕೊಳ್ಳುವ ಬದಲು, ಇಂತಹ ಕೋರ್ಸ್‌ಗಳನ್ನು ಕಲಿತು ನಿರುದ್ಯೋಗವನ್ನು ಹೋಗಲಾಡಿಸಿಕೊಳ್ಳಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.