ಚಿನ್ನ ಉದ್ಯಮದಲ್ಲಿ ಮಿನುಗಿ ಭಾರತದಲ್ಲಿನ ಹರಳು ಮತ್ತು ಆಭರಣ ಉದ್ಯಮ ಕ್ಷೇತ್ರ 2011–13ರ ನಡುವಿನ ಅವಧಿಯಲ್ಲಿ ಶೇ 13ರಷ್ಟು ಪ್ರಗತಿ ದಾಖಲಿಸುವ ನಿರೀಕ್ಷೆ ಇದೆ. ಬ್ರಾಂಡೆಡ್ ಆಭರಣಗಳ ಮಾರುಕಟ್ಟೆ ಮುಂದಿನ ನಾಲ್ಕು ವರ್ಷಗಳಲ್ಲಿ ಶೇ 41ರಷ್ಟು ಬೆಳವಣಿಗೆ ಕಾಣಲಿದೆ. ದೇಶದಲ್ಲಿನ ಒಟ್ಟಾರೆ ಹರಳು ಮತ್ತು ಆಭರಣ ಉದ್ಯಮದ ಪ್ರಮಾಣ 3.50 ಸಾವಿರ ಕೋಟಿ. ಈ ಉದ್ಯಮ ದೇಶದ ಆರ್ಥಿಕ ಪ್ರಗತಿಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ಸಾಂಪ್ರದಾಯಿಕವಾಗಿ ಚಿನ್ನದ ಖರೀದಿ ಮತ್ತು ಆಮದು ವಹಿವಾಟಿನಲ್ಲಿ ಭಾರತ ವಿಶ್ವದಲ್ಲೇ ಅತಿ ದೊಡ್ಡ ಬಳಕೆದಾರ ದೇಶ ಎನಿಸಿಕೊಂಡಿದೆ. ದೇಶದ ಆಭರಣ ಮಾರುಕಟ್ಟೆಯಲ್ಲಿ ಚಿನ್ನ ಶೇ 80ರಷ್ಟು ದೊಡ್ಡ ಪಾಲು ಹೊಂದಿದೆ. ನಂತರದ ಸ್ಥಾನದಲ್ಲಿ ವಜ್ರ, ಹರಳು ಮೊದಲಾದವನ್ನು ಅಳವಡಿಸಿದ ಚಿನ್ನದ ಆಭರಣಗಳಿವೆ. ಪರಿಣಾಮವಾಗಿ, ಭಾರತ ವಿಶ್ವದಲ್ಲಿ ವಜ್ರವನ್ನು ಕತ್ತರಿಸಿ ಅಂದಗೊಳಿಸುವ ಉದ್ಯಮದಲ್ಲಿ ಮೊದಲ ಸ್ಥಾನದಲ್ಲಿದೆ. ಹರಳು ಮತ್ತು ಆಭರಣಗಳ ಮಾರುಕಟ್ಟೆಯನ್ನು `ಆಭರಣ ಮತ್ತು ಬಂಡವಾಳ ಹೂಡಿಕೆ' ಎಂದು ಎರಡು ಭಾಗವಾಗಿ ನೋಡಬಹುದು. ಹರಳು ಮತ್ತು ಆಭರಣಗಳ ರಫ್ತು ವಹಿವಾಟು ದೇಶದ ಒಟ್ಟಾರೆ ರಫ್ತು ಚಟುವಟಿಕೆಯಲ್ಲಿ ಶೇ 14ರಷ್ಟಿದೆ. ಹರಳು ಮತ್ತು ಆಭರಣಗಳ ರಫ್ತು ಉದ್ಯಮ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 34 ಲಕ್ಷ ಮಂದಿಗೆ ಉದ್ಯೋಗವನ್ನೂ ಒದಗಿಸಿದೆ. ಆಭರಣ ಉತ್ಪಾದನೆಗೆ ಕಡಿಮೆ ವೆಚ್ಚ, ಅತ್ಯಂತ ಮೇಲ್ದರ್ಜೆಯ ಆಭರಣ ತಯಾರಿಸುವ ಕುಶಲಕರ್ಮಿಗಳು, ಕಡಿಮೆ ಸಂಬಳಕ್ಕೆ ಲಭ್ಯವಿರುವ ಅನುಭವಿ ಚಿನಿವಾರರು ಮೊದಲಾದ ಸಂಗತಿಗಳಿಂದಾಗಿ ಭಾರತದ ಹರಳು, ಆಭರಣ ಉದ್ಯಮ ಮತ್ತು ಮಾರುಕಟ್ಟೆ ವಿಶ್ವದಲ್ಲೇ ಅತ್ಯಂತ ದೊಡ್ಡದು ಹಾಗೂ ಬಹಳ ಪ್ರಮುಖವಾದುದು ಎನಿಸಿಕೊಂಡಿದೆ. ಜತೆಗೆ ಸರ್ಕಾರದ ವತಿಯಿಂದ ಲಭ್ಯವಿರುವ ಉದ್ಯಮ ಉತ್ತೇಜಕ ಕೊಡುಗೆಗಳು, ವಿಶೇಷ ಆರ್ಥಿಕ ವಲಯದ ನೆರವು ಮೊದಲಾದ ಸಕಾರಾತ್ಮಕ ಅಂಶಗಳೂ ಈ ಉದ್ಯಮದ ಸಾಮರ್ಥ್ಯವನ್ನು ಹೆಚ್ಚಿಸಿವೆ. ಈಚೆಗೆ ಬಿಡುಗಡೆಯಾದ `ಭಾರತೀಯ ಆಭರಣ ಮಾರುಕಟ್ಟೆ- ನಿರೀಕ್ಷೆ ಮತ್ತು ಅವಕಾಶಗಳು; 2012–-17' ಶೀರ್ಷಿಕೆಯ ಅಧ್ಯಯನ ವರದಿ, ಜನರು ವರಮಾನದ ಒಂದಷ್ಟು ಭಾಗವನ್ನು ಚಿನ್ನ ಮತ್ತು ಆಭರಣಗಳಲ್ಲಿ ವಿನಿಯೋಗಿಸುತ್ತಿರುವುದು, ಹೆಚ್ಚು ಮಹಿಳೆಯರು ನೌಕರಿಗೆ ಸೇರುತ್ತಿರುವುದು, ಹೊಸ ಪ್ರತಿಭೆಗಳ ಉದಯ ಮೊದಲಾದ ಅಂಶಗಳು ದೇಶದ ಆಭರಣ ಉದ್ಯಮವನ್ನು ಉತ್ತುಂಗದೆಡೆಗೆ ಒಯ್ಯುತ್ತಿವೆ ಎಂದು ಹೇಳಿದೆ. ಆಭರಣ ಖರೀದಿಸುವವರ ಅಭಿರುಚಿ ಮತ್ತು ಆಯ್ಕೆಗಳೂ ಇತ್ತೀಚಿನ ದಿನಗಳಲ್ಲಿ ಬಹಳ ಬದಲಾಗುತ್ತಿವೆ. ಹುಟ್ಟುಹಬ್ಬ, ವಿವಾಹ ನಿಶ್ಚಿತಾರ್ಥ, ಮದುವೆ, ವಾರ್ಷಿಕೋತ್ಸವ, ಹಬ್ಬಗಳ ಸಂಭ್ರಮ ಮೊದಲಾದ ಸಂದರ್ಭಗಳಿಗೆ ಅನುಗುಣವಾಗಿ ಆಭರಣ ಪ್ರಿಯರ ಆಯ್ಕೆಗಳೂ, ಆದ್ಯತೆಗಳೂ ಬದಲಾಗುತ್ತಲೇ ಇರುತ್ತವೆ. ಇದು ಬ್ರಾಂಡೆಡ್ ಆಭರಣಗಳ ಮಾರುಕಟ್ಟೆಗೆ ವಿಪುಲ ಅವಕಾಶಗಳನ್ನು ಸೃಷ್ಟಿಸಿಕೊಡುತ್ತಿದೆ. ಈ ಎಲ್ಲ ಅಂಶಗಳಿಂದಾಗಿ ದೇಶದ ಹರಳು ಮತ್ತು ಆಭರಣ ಉದ್ಯಮ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಇದೇ ವೇಳೆ, ಸಾಕಷ್ಟು ವೃತ್ತಿಪರ ಹಾಗೂ ಸಂಘಟಿತ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಪರಿಣಾಮವಾಗಿ ಆಭರಣ ತಯಾರಿಕಾ ಕ್ಷೇತ್ರ ನಿಪುಣ ಕುಶಲಕ­ರ್ಮಿ­ಗಳನ್ನೂ, ಉತ್ತಮ ಕಸುಬುದಾರರನ್ನೂ ಬಯಸುತ್ತಿದೆ. 2011ರಲ್ಲಿ ದೇಶದ ಹರಳು ಮತ್ತು ಆಭರಣ ಮಾರುಕಟ್ಟೆ 3010 ಕೋಟಿ ಅಮೆರಿಕನ್ ಡಾಲರ್ (ಸುಮಾರು 1.64 ಲಕ್ಷ ಕೋಟಿ ರೂಪಾಯಿ) ವಹಿವಾಟು ನಡೆಸಿದೆ. ದೇಶದಲ್ಲಿನ ಹರಳು- ಆಭರಣಗಳಿಗೆ ಈಗ ಬೇಡಿಕೆ ಹೆಚ್ಚಲಾರಂಭಿಸಿರುವುದರಿಂದ 2015ರ ವೇಳೆಗೆ 4500 ಕೋಟಿ ಡಾಲರ್‌ಗೆ (2.45 ಲಕ್ಷ ಕೋಟಿ ರೂಪಾಯಿಗೆ) ವೃದ್ಧಿಯಾಗಲಿದೆ. ಪ್ರಸ್ತುತ ಹರಳು- ಆಭರಣ ತಯಾರಿಕೆ ವಲಯ 18 ಲಕ್ಷ ಮಂದಿಗೆ ಉದ್ಯೋಗ ಒದಗಿಸಿದ್ದು, ಮುಂದಿನ 5 ವರ್ಷಗಳಲ್ಲಿ ಮತ್ತೆ ಹೊಸದಾಗಿ 11 ಲಕ್ಷ ಉದ್ಯೋಗಗಳು ಈ ವಿಭಾಗದಲ್ಲಿ ಸೃಷ್ಟಿಯಾಗುವ ನಿರೀಕ್ಷೆ ಇದೆ. ವಿವಿಧ ತರಬೇತಿ ದೇಶದ ಹರಳು ಮತ್ತು ಆಭರಣ ಉದ್ಯಮ ಪ್ರವೇಶಿಸಲು ಬಯಸುವ ಪ್ರತಿಭೆಗಳಿಗೆ ಜೈನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬೆಂಗಳೂರಿನ `ಸಾಲಿಟೇರ್ ಡೈಮಂಡ್ ಇನ್‌ಸ್ಟಿಟ್ಯೂಟ್'ನಂತಹ (ಎಸ್‌ಡಿಐ) ಸಂಸ್ಥೆಗಳು ಶೈಕ್ಷಣಿಕ ತರಬೇತಿ ನೀಡುತ್ತಿವೆ. ಆಭರಣ ತಯಾರಿಕಾ ಕ್ಷೇತ್ರಕ್ಕೆ ಅತ್ಯಗತ್ಯವಾದ ಆಭರಣ ವಿನ್ಯಾಸ ಮತ್ತು ವಜ್ರಗಳನ್ನು ಕತ್ತರಿಸಿ ಹೊಳಪು ನೀಡುವ ತರಬೇತಿಯನ್ನು ಯುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಕೆಲವು ಸಂಸ್ಥೆಗಳು ಯುವ ಪ್ರತಿಭೆಗಳಿಗೆ ಉದ್ಯೋಗದ ಅವಕಾಶವನ್ನೂ ಒದಗಿಸುತ್ತಿವೆ. ವಿವಿಧ ಕೋರ್ಸ್ ಆಭರಣ ಉದ್ಯಮಕ್ಕೆ ಸಂಬಂಧಿಸಿದಂತೆ ಈ ಎಲ್ಲ ಕೋರ್ಸ್‌ಗಳೂ ಲಭ್ಯವಿವೆ: - ಡಿಪ್ಲೊಮಾ ಇನ್ ಡೈಮಂಡ್ ಗ್ರೇಡಿಂಗ್ - ಡಿಪ್ಲೊಮಾ ಇನ್ ಜ್ಯುವೆಲರಿ ಡಿಸೈನ್ - ಡಿಪ್ಲೊಮಾ ಇನ್ ಕಲರ್ ಸ್ಟೋನ್ ಐಡೆಂಟಿಫಿಕೇಷನ್ - ಡಿಪ್ಲೊಮಾ ಇನ್ ಕಂಪ್ಯೂಟರ್ ಏಯ್ಡೆಡ್ ಜುವೆಲರಿ ಡಿಸೈನಿಂಗ್ - ಸರ್ಟಿಫಿಕೇಟ್ ಇನ್ ಗೋಲ್ಡ್ ಅಪ್ರೈಸರ್ - ಅಲ್ಪಾವಧಿ ಕೋರ್ಸ್‌ಗಳು ಮತ್ತು ಕಾರ್ಪೊರೇಟ್ ಟ್ರೈನಿಂಗ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.