ಕಲಿಕೆ: ಇಲ್ಲಿದೆ ರಹದಾರಿ ದೂರವಾಣಿಯಲ್ಲಿ ಮಾತನಾಡುತ್ತಿದ್ದ ಸ್ನೇಹಿತ ವಿಶಾಲ್‌ನ ಧ್ವನಿ ಭಾರವಾಗಿತ್ತು. ಏನು ಸಮಸ್ಯೆ ಎಂದಾಗ `ನನ್ನ ಮಗಳದ್ದೇ ಚಿಂತೆಯಾಗಿದೆ, 4ನೇ ತರಗತಿಯಲ್ಲಿರುವ ಅವಳು 6 ವಾಕ್ಯಗಳ ಒಂದು ಪ್ಯಾರಾವನ್ನೂ ಸರಿಯಾಗಿ ಕಲಿಯುತ್ತಿಲ್ಲ. ಬೆಳಿಗ್ಗೆ 5 ಗಂಟೆಗೆ ಅವಳನ್ನು ಎದುರಿಗೆ ಕೂರಿಸಿಕೊಂಡು ಕಲಿಸುವ ಪ್ರಯತ್ನ ಮಾಡಿದೆ. ಆದರೆ ಅವಳು ಕಲಿಯದಿರುವುದು ನೋಡಿ ನನಗೆ ದಿಕ್ಕೇ ತೋಚದಂತಾಗಿದೆ' ಎಂದು ಅಲವತ್ತುಕೊಂಡ. ಆ ಕ್ಷಣಕ್ಕೆ ಅವನಿಗೆ ಕೆಲವು ಸಮಾಧಾನದ ಮಾತುಗಳನ್ನು ಹೇಳಿದೆ. ವಿಶಾಲ್‌ನಂತಹ ಸಮಸ್ಯೆ ಅನೇಕ ಪೋಷಕರದ್ದು. ಹಲವು ಶಿಕ್ಷಕರು ಸಹ `ಈ ಮಕ್ಕಳಿಗೆ ಕಲಿಸುವುದು ಹೇಗೆ? ನಮ್ಮ ಕಷ್ಟ ಯಾರಿಗೂ ಬೇಡ' ಎಂದು ದೂರುತ್ತಾರೆ. ಹೌದು! ಮಕ್ಕಳಿಗೆ ಕಲಿಸುವುದು ಹೇಗೆ? ಕಲಿಯುವುದು ನಿಜಕ್ಕೂ ಕಷ್ಟದ ಕಾರ್ಯವೇ? ಮನೋವಿಜ್ಞಾನಿಗಳ ಪ್ರಕಾರ, ವರ್ತನೆಗಳ ಬದಲಾವಣೆಯೇ ಕಲಿಕೆ. ನಮ್ಮಲ್ಲಿರುವ ಮಾಹಿತಿ, ಕೌಶಲ, ವರ್ತನೆಯಲ್ಲಿ ಮಾರ್ಪಾ­ಡಾ­ದರೆ `ಕಲಿತಿದ್ದೇವೆ' ಎನ್ನುತ್ತೇವೆ. ಕಲಿಕೆಯ ಹಂತದಲ್ಲಿ ಒಂದಷ್ಟು ಬಿಕ್ಕಟ್ಟು, ಉದ್ವೇಗ ಸಾಮಾನ್ಯ. ಮರ್ಫಿ ಎಂಬ ಮನೋ­ವಿಜ್ಞಾನಿ `ಬಿಕ್ಕಟ್ಟು ಕಡಿಮೆಯಾಗುವ ಪ್ರಕ್ರಿಯೆಯೇ ಕಲಿಕೆ' ಎಂದಿದ್ದಾರೆ. ಸೈಕಲ್ ಕಲಿಯುವಾಗ ಹ್ಯಾಂಡಲ್‌ನ್ನು ಬಿಗಿಯಾಗಿ ಹಿಡಿದು­ಕೊಳ್ಳುತ್ತೇವೆ. ಕಲಿಯುತ್ತಾ ಹೋದಂತೆ ಹಿಡಿತ ಸಡಿಲವಾಗುತ್ತದೆ. ಅದೇ ರೀತಿ ಇತರ ಕಲಿಕೆಗಳಾದ ಈಜುವುದು, ಬರವಣಿಗೆ, ಕಾರ್ ಚಾಲನೆ ಇತ್ಯಾದಿಗಳಲ್ಲೂ ಕಲಿಕೆ ಸಾಗಿದಂತೆ ಸರಾಗವಾಗಿ ಕೌಶಲ ಸಿದ್ಧಿಸಿ­ಕೊಳ್ಳುವಲ್ಲಿ ನಿರತರಾಗುತ್ತೇವೆ. ಅದಕ್ಕೇ ಅಲ್ಲವೇ ಯಾವುದೇ ಆಗಲಿ ಕಲಿಯು­ವವರೆಗೆ ಕಷ್ಟ ಎನಿಸುವುದು, ಕಲಿತ ನಂತರ ಇಷ್ಟೆಯೇ ಎನಿಸುವುದು. ಕಲಿಯುವಿಕೆ ಜೀವನಪರ್ಯಂತ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಮನೋವಿಜ್ಞಾನಿಗಳ ಪ್ರಕಾರ, ಯಾವುದೇ ಕಲಿಕೆ ಉಂಟಾ­ಗಲು ಒಂದು ನಿರ್ದಿಷ್ಟ ಕಾರ್ಯದೆಡೆಗೆ ಸಾಗಲು ಅಗತ್ಯ­ವಾದ ಪ್ರೇರೇಪಣೆ ಅಥವಾ ತುಡಿತ, ಅದರ ಪರಿಣಾಮದಿಂದ ರೂಪಿಸಿ­ಕೊಂಡ ಆಕರ್ಷಕ ಗುರಿ, ಆ ಗುರಿ ತಲುಪಲು ಬರುವ ಅಡ್ಡಿ ಆತಂಕ­ಗಳನ್ನು ಸತತ ಪ್ರಯತ್ನಗಳ ಮೂಲಕ ನಿವಾರಿಸಿಕೊಳ್ಳಬೇಕು. ಯಾವುದೇ ಹೊಸ ಕಲಿಕೆಗೆ ಕಲಿಯಬೇಕೆಂಬ ಅದಮ್ಯ ಆಸೆ ಅಥವಾ ಆಕಾಂಕ್ಷೆ, ಅಗತ್ಯವಾದ ಮಾನಸಿಕ ಸಿದ್ಧತೆ, ದೈಹಿಕ ಪಕ್ವತೆ, ಕಲಿಕೆಗೆ ಪೂರಕವಾದ ಪೂರ್ವ ಜ್ಞಾನ ಅಥವಾ ಕೌಶಲ, ಎಲ್ಲಕ್ಕಿಂತ ಮುಖ್ಯವಾಗಿ ಗುರಿ ನಿಗದಿಗೊಳಿಸಿಕೊಳ್ಳುವಿಕೆ ಅಗತ್ಯ. ಎಲ್ಲ ಕಲಿಕೆ­ಗಳೂ ಒಂದೇ ರೀತಿಯಲ್ಲಿ ಆಗುವುದಿಲ್ಲ. ಒಂದು ಹೊಸ ಭಾಷೆ ಕಲಿಯುವುದು ಈಜು ಕಲಿಯುವುದಕ್ಕಿಂತ ಭಿನ್ನ. ಅದೇ ರೀತಿ ಹಾಡುವುದು ಅಥವಾ ಚಿತ್ರ ಬರೆಯುವುದು ವಿಜ್ಞಾನ ಕಲಿಯು­ವು­ದಕ್ಕಿಂತ ಸಂಪೂರ್ಣ ಭಿನ್ನ. ಈ ಹಿನ್ನೆಲೆಯಲ್ಲಿ ಮನೋವಿಜ್ಞಾನಿಗಳು ಪ್ರತಿಪಾದಿಸಿರುವಂತೆ ಕಲಿಯುವಿಕೆಯ ಹೂರಣದತ್ತ ಗಮನಹರಿ­ಸೋಣ. ಇದರಿಂದ ಮಕ್ಕಳು ಹೇಗೆ ಕಲಿಯುತ್ತಾರೆ ಹಾಗೂ ಹೇಗೆ ಕಲಿಸಬೇಕೆಂಬ ಒಳನೋಟ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. 1. ಕಲಿಯಲು ಪ್ರೇರೇಪಣೆ: ಶಿಕ್ಷಣ ತಜ್ಞ ಜಾನ್ ಹಾಲ್ಟ್ ಮಕ್ಕ­ಳಿಗೆ ಬೋಧಿಸುವುದನ್ನು ವಿರೋಧಿಸುತ್ತಾರೆ! ಅವರ ಪ್ರಕಾರ, ಮಕ್ಕಳು ಸ್ವಂತ ಪ್ರೇರೇಪಣೆಯಿಂದ ಪರಿಣಾಮಕಾರಿಯಾಗಿ ಕಲಿಯುತ್ತಾರೆ. ಅಂದರೆ ಅವರನ್ನು ಕಲಿಕೆಯೆಡೆಗೆ ಪ್ರೇರೇಪಿತರಾಗು­ವಂತೆ ಮಾಡುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ತರಗತಿಯಲ್ಲಿ ಕಲಿಕೆಯೆಡೆಗೆ ಪ್ರೇರೇಪಿಸಲು ಅಗತ್ಯ ಶ್ರಮ ವಹಿಸಿದರೆ ಯಾವ ಮಕ್ಕಳೂ ಕಲಿಕೆಯಲ್ಲಿ ಹಿಂದೆ ಬೀಳುವುದಿಲ್ಲ. 2. ಒತ್ತಡ ರಹಿತ ಕಲಿಕೆ: ತಮ್ಮ ಇಚ್ಛೆಗೆ ವಿರುದ್ಧವಾಗಿ ಕಲಿಯಲು ಮಕ್ಕಳ ಮೇಲೆ ಒತ್ತಡ ಹೇರಿದರೆ ಕಲಿಕೆ ಕನಸಾಗುತ್ತದೆ. ಅವರಲ್ಲಿ ಆಸಕ್ತಿ ಮೂಡಿಸಿ ಕಲಿಯುವಂತೆ ಮಾಡುವುದು ಅತಿ ಮುಖ್ಯ. 3. ಪಕ್ವತೆ: ನಿರ್ದಿಷ್ಟ ಕಲಿಕೆಗೆ ದೈಹಿಕ ಮತ್ತು ಮಾನಸಿಕ ಪಕ್ವತೆ ಅವಶ್ಯ. ಒಂದು ವರ್ಷದ ಮಗುವನ್ನು ಬರೆಯಲು ಒತ್ತಾಯಿಸಿದರೆ ಸಾಧ್ಯವಾಗದು. ಬರೆಯಲು ಅಗತ್ಯವಾದ ದೈಹಿಕ ಸಾಮರ್ಥ್ಯ ಅಥವಾ ಪಕ್ವತೆ ಆ ಮಗುವಿಗೆ ಇರುವುದಿಲ್ಲ. ಮಕ್ಕಳಿಗೆ `ಇಷ್ಟು ವಿಷಯವನ್ನು ಇಷ್ಟು ಸಮಯದಲ್ಲಿ ಕಲಿಯಿರಿ' ಎಂದು ಒತ್ತಾ­ಯಿಸುವುದು ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. 4. ಕಲಿಕೆಯ ಶೈಲಿ: ಪ್ರತಿ ಮಗುವಿನ ಕಲಿಕೆಯ ಶೈಲಿ ವಿಭಿನ್ನವಾಗಿ­ಇರುತ್ತದೆ. ಚಿತ್ರ, ಊಹೆ, ಬಿಂಬ, ಕೇಳಿಸಿಕೊಳ್ಳುವುದು, ಇಂದ್ರಿಯ­ಗಳನ್ನು ಸಕ್ರಿಯಗೊಳಿ­ಸುವ ಪ್ರಯೋಗಗಳ ಮೂಲಕ ಪರಿಣಾಮ­ಕಾರಿಯಾಗಿ ಕಲಿಯಬ­ಹುದು. ಮಕ್ಕಳ ಕಲಿಕೆಯ ಶೈಲಿಗೆ ತಕ್ಕಂತೆ ಅಗತ್ಯ ಸಾಧನ ಒದಗಿಸಿ ಪ್ರೋತ್ಸಾಹಿಸಿದರೆ ಕಲಿಕೆ ಕಷ್ಟವಾಗದು. 5. ಸಕ್ರಿಯ ಪಾಲ್ಗೊಳ್ಳುವಿಕೆ: ಉತ್ತಮ ಕಲಿಕೆಗೆ ಮಕ್ಕಳ ಸಕ್ರಿಯ, ಸೃಜನಶೀಲ ಪಾಲ್ಗೊಳ್ಳುವಿಕೆ ಅಗತ್ಯ. ತರಗತಿಯಲ್ಲಿ ಮಕ್ಕಳು ಮೂಕ ಪ್ರೇಕ್ಷಕರಂತಿದ್ದು, ಶಿಕ್ಷಕರು ನಿರಂತರ ಬೋಧನೆಯಲ್ಲಿ ತೊಡಗಿದ್ದರೆ ಉತ್ತಮ ಫಲಿತಾಂಶ ದೊರೆಯುವುದಿಲ್ಲ. ಇದಕ್ಕೆ ಬದಲಾಗಿ ಶಿಕ್ಷಕರು ಮಕ್ಕಳನ್ನು ಸಾಧ್ಯವಾದಾಗಲೆಲ್ಲ ಚರ್ಚೆ, ಪ್ರಶ್ನೆ, ಪ್ರಯೋಗ, ಪ್ರಾಜೆಕ್ಟ್ ಇತ್ಯಾದಿಗಳ ಮೂಲಕ ತೊಡಗಿಸಿಕೊಳ್ಳಬೇಕು. ಕೆಲವೊಮ್ಮೆ ಶಾಲೆಯ ಹೊರಗೆ ತೋಟ, ಮ್ಯೂಸಿಯಂ, ಕಾರ್ಖಾನೆ, ಉದ್ಯಾನವನ, ಬ್ಯಾಂಕ್ ಇತ್ಯಾದಿಗಳಿಗೆ ಕ್ಷೇತ್ರ ಭೇಟಿ ಆಯೋಜಿಸಿ, ತರಗತಿಯ ಕಲಿಕೆಗೂ ನೈಜ ಅನುಭವಕ್ಕೂ ಸಂಪರ್ಕ ಕಲ್ಪಿಸಬೇಕು. 6. ಸಾಮಾಜಿಕ ಪಾಲ್ಗೊಳ್ಳುವಿಕೆ: ಕಲಿಕೆಯು ಸಾಮಾಜಿಕ ಚಟುವಟಿಕೆಯಾಗಿದ್ದು, ತರಗತಿಯಲ್ಲಿ ಮಕ್ಕಳು ಇತರ ಮಕ್ಕಳೊಂದಿಗೆ ಬೆರೆಯಲು ಅವಕಾಶ ನೀಡಬೇಕು. ತರಗತಿಗಳಲ್ಲಿ ಭಯ ಅಥವಾ ಗಂಭೀರ ವಾತಾವರಣ ಇರದೆ ಸಹಕಾರ, ಸೌಹಾರ್ದ ಇರುವಂತೆ ನೋಡಿಕೊಂಡರೆ ಮಕ್ಕಳಲ್ಲಿ ಸಹಕಾರದ ಮೌಲ್ಯಗಳು ಹಾಗೂ ಸಾಮಾಜೀಕರಣದ ಕಲಿಕೆಗೆ ನೆರವಾಗುತ್ತದೆ. ಜೊತೆಗೆ ಸ್ಥಳೀಯ ಸಮುದಾಯಗಳ ಜೊತೆ ಮಕ್ಕಳು ಬೆರೆಯುವಂತೆ ಮಾಡು­ವು­ದರಿಂದ ಅವರನ್ನು ಸಮಾಜಮುಖಿಗಳನ್ನಾಗಿ ಮಾಡಲು ಸಾಧ್ಯ. 7. ಅರ್ಥಪೂರ್ಣ ಚಟುವಟಿಕೆ: ಅನೇಕ ಶಾಲಾ ಚಟುವಟಿಕೆಗಳು ವಿಷಯದೆಡೆಗೆ ಮಕ್ಕಳ ಆಸಕ್ತಿಯನ್ನು ಕುಂದಿಸುವಂತೆ ಇರುತ್ತವೆ. ಶಿಕ್ಷಕರು ಚರ್ಚೆ ವಿಧಾನ ಬಳಸಿ ಸಂವಹನ ಕೌಶಲ, ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವಂತಹ ಸೂಕ್ತ ಬೋಧನಾ ವಿಧಾನಗಳನ್ನು ರೂಪಿಸಿಕೊಳ್ಳಬೇಕು. 8. ಪೂರ್ವ ಜ್ಞಾನ: ಮಕ್ಕಳಲ್ಲಿರುವ ಪೂರ್ವ ಜ್ಞಾನ, ಪೂರ್ವಾ­ನುಭವ ಅಥವಾ ಮಾಹಿತಿ ಬಳಸಿಕೊಂಡು ಹೊಸ ವಿಷಯದ ಕಲಿಕೆಗೆ ಸಂಪರ್ಕ ಕಲ್ಪಿಸುವ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕು. 9. ಸುಲಭದಿಂದ ಕ್ಲಿಷ್ಟತೆಯೆಡೆಗೆ: ಸುಲಭ ವಿಷಯ ಅಥವಾ ಪರಿಕಲ್ಪನೆಯನ್ನು ಮೊದಲು ಕಲಿಸಿ, ಹಂತ ಹಂತವಾಗಿ ಕ್ಲಿಷ್ಟ ವಿಷಯವನ್ನು ಕಲಿಸುವ ಬೋಧನಾ ತಂತ್ರವನ್ನು ರೂಪಿಸಬೇಕು. ಎಲ್ಲ ವಿಷಯವನ್ನೂ ತಕ್ಷಣ ಕಲಿಯಬೇಕೆಂದು ಅಪೇಕ್ಷಿಸುವುದು ತಪ್ಪು. 10. ಯೋಜನೆ ಮತ್ತು ಸ್ವಯಂ ನಿಯಂತ್ರಣ: ಮಕ್ಕಳು ತಮ್ಮ ಕಲಿಕೆಗೆ ಅಗತ್ಯ ಯೋಜನೆ ರೂಪಿಸಲು, ಗುರಿ ನಿಗದಿಪಡಿಸಿಕೊಳ್ಳಲು ಹಾಗೂ ತಮ್ಮ ಕಲಿಕೆಯ ಪ್ರಗತಿಯನ್ನು ಸ್ವತಃ ಪರೀಕ್ಷಿಸಿಕೊಳ್ಳಲು ಸಮರ್ಥರಾಗುವಂತೆ ಅವರನ್ನು ಸಜ್ಜುಗೊಳಿಸಬೇಕು. ಶಿಕ್ಷಕರ ಅಥವಾ ಪೋಷಕರ ಒತ್ತಾಯಕ್ಕೆ ತಾನು ಕಲಿಯುತ್ತಿರುವೆ ಎಂಬ ಭಾವನೆ ಬಂದಲ್ಲಿ ಕಲಿಕೆ ಕುಂಠಿತಗೊಳ್ಳುತ್ತದೆ. 11. ಅರ್ಥಗ್ರಹಿಕೆ: ಕೆಲವು ವಿಷಯಗಳ ಕಲಿಕೆಗೆ ಕಂಠಪಾಠ ಉತ್ತಮ ವಿಧಾನವಾದರೂ ವಿಷಯವನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಕಲಿಯುವಂತೆ ಅಭ್ಯಾಸ ಮಾಡಿಸಬೇಕು. ತಾವು ಬೋಧಿಸಿದ ರೀತಿಯಲ್ಲೇ ಗಿಳಿಪಾಠ ಒಪ್ಪಿಸುವಂತೆ ಶಿಕ್ಷಕರು ಒತ್ತಾಯಿಸದೆ, ತಮ್ಮದೇ ವಾಕ್ಯಗಳಲ್ಲಿ, ತಮ್ಮದೇ ಶೈಲಿಯಲ್ಲಿ ವಿವರಿ­ಸು­ವಂತೆ ಪ್ರೇರೇಪಿಸಿದರೆ ಸ್ವಂತ ಹಾಗೂ ಸಹಜ ಕಲಿಕೆ ಸಾಧ್ಯ. ಮನೋವಿಜ್ಞಾನಿಗಳು ಮತ್ತು ತಜ್ಞರು ಏನೇ ಹೇಳಲಿ, ಪ್ರತಿ ಮಗುವಿನ ಕಲಿಕೆಯ ಸಾಮರ್ಥ್ಯ ಹಾಗೂ ವೇಗ ಭಿನ್ನವಾಗಿ ಇರು­ವು­ದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಆ ಮಗುವಿಗೆ ಸರಿಹೊಂದುವ ಕಲಿಕೆಯ ವಿಧಾನಗಳನ್ನು ಅಳವಡಿಸಿದರೆ ಯಶಸ್ವಿ ಕಲಿಕೆ ಕನಸೇನಲ್ಲ. ಮಕ್ಕಳು ತಕ್ಷಣ ಕಲಿಯಲು ಯಾವುದೇ ಮಂತ್ರದಂಡವಿಲ್ಲ ಹಾಗೂ ಸಿದ್ಧ ಸರಳ ಸೂತ್ರಗಳೂ ಇರುವುದಿಲ್ಲ. ಅವರು ಆಸಕ್ತಿಯಿಂದ, ಸ್ವಯಂ ಪ್ರೇರಣೆಯಿಂದ ಕಲಿಯಲು ಪೋಷಕರು ಹಾಗೂ ಶಿಕ್ಷಕರು ಸಮಾಧಾನ ಚಿತ್ತರಾಗಿ ಅವರೊಂದಿಗೆ ವ್ಯವಹರಿಸಿದರೆ ಉತ್ತಮ ಫಲಿತಾಂಶ ಕಾಣಲು ಸಾಧ್ಯವಿದೆ. ನಿರಂತರ ಪ್ರಯತ್ನ ಇರಲಿ ಮಕ್ಕಳು ಕಲಿಕೆಯಲ್ಲಿ ಹೆಚ್ಚು ಸಮಯ ಹಾಗೂ ಶ್ರಮ ವಿನಿಯೋಗಿಸುವಂತೆ, ನಿರಂತರ ಅಭ್ಯಾಸದಲ್ಲಿ ತೊಡಗುವಂತೆ ಮಾಡಬೇಕು. ಒಬ್ಬ ಚೆಸ್ ಮಾಸ್ಟರ್ ಆಗಲು ಅವನು ಅಂದಾಜು 50,000 ಗಂಟೆಗಳಷ್ಟು ಚೆಸ್ ಆಟ ಆಡಿರಬೇಕು. ಅಂದರೆ ತನ್ನ 5ನೇ ವಯಸ್ಸಿನಿಂದ 35ನೇ ವಯಸ್ಸಿನವರೆಗೆ ಪ್ರತಿ ದಿನ 5 ಗಂಟೆಗಳಷ್ಟು ಸಮಯವನ್ನು ಚೆಸ್ ಕಲಿಕೆಗೆ ವಿನಿಯೋಗಿಸಬೇಕು. ಈ ಅಂಶದ ಆಧಾರದ ಮೇಲೆ ಪ್ರಯತ್ನದ ಪ್ರಾಮುಖ್ಯತೆಯನ್ನು ತಿಳಿಯಬಹುದು. ಈ ನಿಟ್ಟಿನಲ್ಲಿ ಮಕ್ಕಳು ನಿರಂತರ ಪ್ರಯತ್ನ ಹಾಗೂ ಪುನರಾವರ್ತನೆಗಳನ್ನು ಮಾಡುವಂತೆ ಪ್ರೇರೇಪಿಸಬೇಕು. ಇಲ್ಲಿವೆ ನಿಯಮ ಮನೋವಿಜ್ಞಾನಿ ಥಾರ್ನ್‌ಡೈಕ್ ಅವರು ಮಕ್ಕಳ ಉತ್ತಮ ಕಲಿಕೆಗಾಗಿ ಪ್ರತಿಪಾದಿಸಿರುವ ಕೆಲವು ನಿಯಮಗಳು ಇಂತಿವೆ: ಸಿದ್ಧತಾ ನಿಯಮ ಕಲಿಯಲು ಮಾನಸಿಕ ಸಿದ್ಧತೆ ಅವಶ್ಯ. ಕುದುರೆಗಳನ್ನು ನೀರಿನವರೆಗೂ ಕರೆದುಕೊಂಡು ಹೋಗಬಹುದು, ಆದರೆ ನೀರು ಕುಡಿಯುವಂತೆ ಮಾಡಲು ಸಾಧ್ಯವಿಲ್ಲ ಎಂಬ ಮಾತಿನಂತೆ, ನೀವು ಎಷ್ಟೇ ಚೆನ್ನಾಗಿ ಬೋಧಿಸಿದರೂ, ಕಲಿಯುವ ಇಚ್ಛೆ ಇಲ್ಲದೇ ಹೋದರೆ ವ್ಯರ್ಥವಾಗುತ್ತದೆ. ಕಲಿಯಲು ಅಗತ್ಯ ಮಾನಸಿಕ ಸಿದ್ಧತೆಯನ್ನು ಮಕ್ಕಳಲ್ಲಿ ಮೂಡಿಸಿ, ನಂತರ ಕಲಿಸುವ ಬಗ್ಗೆ ಚಿಂತಿಸಬೇಕು. ಅಭ್ಯಾಸದ ನಿಯಮ ಕಲಿಯಬೇಕಾದ ವಿಷಯವನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ ಕಲಿಕೆ ಸರಳವಾಗುತ್ತದೆ. ಸೈಕಲ್ ಸವಾರಿ, ಈಜು, ಸುಂದರ ಬರವಣಿಗೆ, ಮಗ್ಗಿ ಇತ್ಯಾದಿಗಳನ್ನು ಅಭ್ಯಾಸದ ಮೂಲಕ ಕರಗತ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಮಕ್ಕಳು ಹೆಚ್ಚು ಅಭ್ಯಾಸ ಮಾಡುವಂತೆ, ತನ್ಮೂಲಕ ಉತ್ತಮವಾಗಿ ಕಲಿಯುವಂತೆ ಮಾಡಲು ಸಾಧ್ಯ. ಪರಿಣಾಮದ ನಿಯಮ ಮನಸ್ಸಿನ ಮೇಲೆ ಆಹ್ಲಾದಕರ ಪರಿಣಾಮ ಬೀರುವ ಅಂಶಗಳು ಮಕ್ಕಳ ಮೇಲುಂಟಾದರೆ ಕಲಿಕೆ ಗಟ್ಟಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಬಹುಮಾನ, ಪುರಸ್ಕಾರ, ಹೊಗಳಿಕೆಗಳು ಅವರಲ್ಲಿ ಉತ್ತಮ ಭಾವನೆ ಮೂಡಿಸಿ, ಕಲಿಯಲು ಪ್ರೇರೇಪಿಸುತ್ತವೆ. ಶಿಕ್ಷಕರು ಅಥವಾ ಪೋಷಕರು ಅಗತ್ಯವಿರುವೆಡೆ ಮಕ್ಕಳ ಕಲಿಕೆಯನ್ನು ಗುರುತಿಸಿ, ಸಾಂದರ್ಭಿಕವಾಗಿ ಅವರನ್ನು ಹೊಗಳುವುದು ಅಥವಾ ಚಿಕ್ಕಪುಟ್ಟ ಬಹುಮಾನ ನೀಡಿ ಪ್ರೋತ್ಸಾಹಿಸಿದರೆ ಕಲಿಕೆಯಲ್ಲಿ ಅವರು ಇನ್ನಷ್ಟು ಉತ್ತಮವಾಗಿ ತೊಡಗಿಕೊಳ್ಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.