ಹೋಮ್ ವರ್ಕ್ ಎಂಬ ತಲೆನೋವು! ಐದನೇ ತರಗತಿಯ ಆ ಹುಡುಗನ ಹೆಸರು ಪ್ರವೀಣ. ಮಹಾನಗರವೊಂದರ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದಾನೆ. ಅವನ ಒಟ್ಟು ಶರೀರದ ತೂಕ 20 ಕೆ.ಜಿ. ಆದರೆ ಅವನು ದಿನಾ ಶಾಲೆಗೆ ಹೋಗುವಾಗ ಹೆಗಲಿಗೆ ಏರಿಸಿಕೊಂಡು ಹೋಗುವ ಬ್ಯಾಗ್‌ನ ತೂಕ ಮಾತ್ರ 10 ಕೆ.ಜಿ.ಗೂ ಹೆಚ್ಚಾಗಿರುತ್ತದೆ. ಅವಳ ಹೆಸರು ಪ್ರಗತಿ. ಅವಳು ಸಹ ಅಂತಹುದೇ ಮತ್ತೊಂದು ನಗರದ ಕಾನ್ವೆಂಟ್‌ನಲ್ಲಿ ಓದುತ್ತಾಳೆ. ಅವಳ ತೂಕ 15 ಕೆ.ಜಿ. ಆದರೆ ಅವಳು ಹೊರುವ ಬ್ಯಾಕ್‌ಪ್ಯಾಕ್‌ನ ತೂಕವೂ ಅಷ್ಟೇ. ಇದು ಕೇವಲ ಬೆಂಗಳೂರು, ಧಾರವಾಡ, ಬಿಜಾಪುರ, ಮಂಗಳೂರು, ಬೆಳಗಾವಿ, ಗುಲ್ಬರ್ಗದಂತಹ ನಮ್ಮ ನಗರಗಳ ಮಕ್ಕಳ ಕತೆಯಷ್ಟೇ ಅಲ್ಲ. ಇಡೀ ವಿಶ್ವದ ಬಹುತೇಕ ಶಾಲೆಗಳಲ್ಲಿ ಕಂಡುಬರುವ ಚಿತ್ರಣ. ಅಮೆರಿಕದಂತಹ ರಾಷ್ಟ್ರಗಳಲ್ಲಂತೂ ಅನೇಕ ಮಕ್ಕಳು ಬೆನ್ನು ನೋವಿನ ಸಮಸ್ಯೆಯಿಂದ ಬಳಲುವ ಬಗ್ಗೆ ವರದಿಗಳಿವೆ. ನಮ್ಮಲ್ಲೂ ಪರಿಸ್ಥಿತಿ ಹೊರತಾಗಿಲ್ಲ. ಮಕ್ಕಳು ಶಾಲೆಯಿಂದ ಮನೆಗೆ ಬರುವಾಗ ಮತ್ತು ಶಾಲೆಗೆ ತೆರಳುವಾಗ ಅವರು ಹೊರುವ ಮಣಭಾರವನ್ನು ಗಮನಿಸಿ ಪೋಷಕರು ಮರಮರ ಮರುಗುತ್ತಾರೆ. ಹಾಗೆಯೇ ವ್ಯವಸ್ಥೆಯ ಬಗ್ಗೆ ಸಿಡಿಮಿಡಿಗೊಳ್ಳುತ್ತಾರೆ. ಇದಕ್ಕೆ ಪ್ರಮುಖವಾಗಿ ಕಾರಣವಾಗಿರುವ ಇನ್ನೊಂದು ಸಮಸ್ಯೆ ಎಂದರೆ ಹೋಮ್‌ ವರ್ಕ್. ಖುಷಿಯಿಂದ ಮಕ್ಕಳೊಂದಿಗೆ ನಲಿಯ­ಬೇಕಾದ ಕುಟುಂಬದಲ್ಲಿ ವೈಮನಸ್ಸು ಮತ್ತು ಕಿರಿಕಿರಿ ತಳವೂರಲು ತೆಕ್ಕೆಗಟ್ಟಲೇ ಕೊಡುವ ಈ ಹೋಮ್‌ ವರ್ಕ್ ಎನ್ನುವ ಒತ್ತಡವೇ ಕಾರಣವಾಗಿದೆ. ಶೈಕ್ಷಣಿಕ ವಲಯದಲ್ಲಿ ಸಾರ್ವಜನಿಕವಾಗಿ ಇರ­ಬೇಕಾದ ಸಂಗತಿಯೊಂದು ಖಾಸಗಿ ಸಮಸ್ಯೆಯಾಗಿ, ಇಡೀ ಕುಟುಂಬದ ತಲೆನೋವಾಗಿ ಪರಿಣಮಿಸಿರುವುದಂತೂ ಹೌದು. ಸ್ಪರ್ಧಾ­ತ್ಮಕ ಯುಗ ಎಂದು ಹೇಳುತ್ತಲೇ ಹೀಗೆ ಮಕ್ಕಳ ಹೆಗಲಿಗೆ ಮಣಭಾರ ಹೊರಿಸುವುದರಿಂದ ಯಾವ ಬಗೆಯ ಶೈಕ್ಷಣಿಕ ಸಾಧನೆ ಸಾಧ್ಯವಾಗುತ್ತದೆ ಎನ್ನುವ ಬಗ್ಗೆ ಅನೇಕ ಸಂಶೋಧನೆ­ಗಳು ನಡೆದಿವೆ. ದಿನವಿಡೀ ಶಾಲೆಯಲ್ಲೂ ಓದು ಬರಹ, ಮತ್ತೆ ಮನೆ ತಲುಪುವುದೇ ತಡ ಅಲ್ಲೂ ಅದೇ ಕೆಲಸ. ಶಾಲೆಯಲ್ಲಿ ಶಿಕ್ಷಕರ ಎದುರಲ್ಲಿ ಬಗೆಹರಿಯಬೇಕಾದ ಸಮಸ್ಯೆಗಳನ್ನು ಮಕ್ಕಳು ಮನೆಗೆ ತಂದು ಪಾಲಕರ ಎದುರಿನಲ್ಲಿ ಇಟ್ಟು ರಚ್ಚೆ ಹಿಡಿಯುವ ಕ್ರಮ ಪಾಲಕರಿಗೂ ಒಂದು ಬಗೆಯ ರೇಜಿಗೆ ಹುಟ್ಟಲು ಕಾರಣವಾಗುತ್ತದೆ. ಹೋಮ್ ವರ್ಕ್ ಎನ್ನುವುದು ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಅತ್ಯಂತ ಗಣನೀಯ ಪ್ರಮಾಣದಲ್ಲಂತೂ ಹೆಚ್ಚು ಮಾಡುವುದಿಲ್ಲ. ಅತಿಯಾದ ಹೋಮ್ ವರ್ಕ್ ಮಾಡುವ ಮಕ್ಕಳು ಶೈಕ್ಷಣಿಕವಾಗಿ ಜಾದೂ ಮಾಡಿದ ಉದಾಹರಣೆಗಳಿಲ್ಲ. ಅಮೆರಿಕದ ಶಿಕ್ಷಣ ತಜ್ಞ ತಿಮೋಥಿ ಕೀಥ್, ಈ ಪರಿಯಲ್ಲಿ ಹೋಮ್ ವರ್ಕ್ ಮಾಡಿಸುವುದನ್ನೇ ಆಧಾರವಾಗಿ ಇಟ್ಟುಕೊಂಡು ಅಧ್ಯಯನ ಮತ್ತು ಸಂಶೋಧನೆ ಮಾಡಿದ್ದಾರೆ. ಈ ಮೂಲಕ, ಹೆಚ್ಚು ಹೋಮ್ ವರ್ಕ್ ಕೊಡುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟವೇನೂ ಹೆಚ್ಚಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೋಮ್ ವರ್ಕ್ ಮಾಡುವುದನ್ನು ವಿದ್ಯಾರ್ಥಿಗಳು ಅಂಕ ಗಳಿಸುವ ಕ್ರಮದಲ್ಲಿ ಸೇರ್ಪಡೆ ಮಾಡಿ, ಶಿಕ್ಷಕರು ಹೀಗೆ ತಾವು ಕೊಡುವ ಹೋಮ್ ವರ್ಕ್‌ನ್ನು ಅಚ್ಚುಕಟ್ಟಾಗಿ ಮುಗಿಸುವವರಿಗೆ ನಿಯಮಿತವಾಗಿ ಅಂಕಗಳನ್ನು ನೀಡುತ್ತಾ ಹೋಗಿ, ಕೊನೆಯಲ್ಲಿ ಫಲಿತಾಂಶಕ್ಕೆ ಆ ಅಂಕಗಳನ್ನೂ ಪರಿಗಣಿಸುವಂತಾದರೆ ಆಗ ಆ ಹೋಮ್ ವರ್ಕ್ ತಕ್ಕ ಮಟ್ಟಿಗೆ ಪರಿಣಾಮಕಾರಿ ಆಗಬಹುದು. ಅದನ್ನು ಹೊರತುಪಡಿಸಿ ವಿದ್ಯಾರ್ಥಿಗಳ ವಯೋಮಿತಿಯನ್ನೂ ಲೆಕ್ಕಿಸದೆ ಗುತ್ತಿಗೆ ರೂಪದಲ್ಲಿ, ಭಯಂಕರ ಎನಿಸುವ ಹಾಗೆ ಹೋಮ್ ವರ್ಕ್ ನೀಡುವುದು ಕೇವಲ ಆ ಮಕ್ಕಳಿಗೆ ಮಾತ್ರವಲ್ಲ, ಅವರ ಪಾಲಕರಿಗೂ ತಲೆನೋವನ್ನು ತರಿಸುತ್ತದೆ. ಅಮೆರಿಕದ ಎಂ.ಆಡಂ ಎನ್ನುವವರು ಸಾವಿರಾರು ವಿದ್ಯಾರ್ಥಿಗಳ ಹೋಮ್ ವರ್ಕ್‌ನ ಪ್ರಮಾಣ ಮತ್ತು ಅವರು ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಗ್ರೇಡ್‌ಗಳನ್ನು ಆಧರಿಸಿ ನಡೆಸಿದ ಅಧ್ಯಯನದಂತೆ, ಹೋಮ್ ವರ್ಕ್‌ಗೂ ಗ್ರೇಡ್‌ಗೂ ಯಾವುದೇ ಸಂಬಂಧವಿಲ್ಲ; ಅನೇಕ ವಿದ್ಯಾರ್ಥಿಗಳು ಸಾಕಷ್ಟು ಹೋಮ್ ವರ್ಕ್ ಮಾಡಿದಾಗಲೂ ಹೆಚ್ಚಿನ ಗ್ರೇಡ್ ಪಡೆಯದಿರುವುದು ಕಂಡುಬಂದಿದೆ. ಹೀಗೆ ಯದ್ವಾತದ್ವಾ ಮಕ್ಕಳಿಗೆ ಹೋಮ್ ವರ್ಕ್ ನೀಡುವುದರ ಹಿಂದೆ ಯಾವುದೇ ಬಗೆಯ ತಾರ್ಕಿಕತೆ ಇಲ್ಲದಿರುವ ಬಗ್ಗೆ ಅವರು ತಕರಾರು ಎತ್ತಿದ್ದಾರೆ. ಜೊತೆಗೆ ಅಧಿಕ ಪ್ರಮಾಣದ ಹೋಮ್ ವರ್ಕ್ ಮಕ್ಕಳಲ್ಲಿನ ಚೈತನ್ಯವನ್ನೇ ಕಸಿಯಲು ಕಾರಣವಾಗುತ್ತದೆ. ಬರೀ ಸ್ಪರ್ಧಾತ್ಮಕ ಜಗತ್ತನ್ನು ಅವರಿಗೆ ತೋರಿಸಿ ಕೇವಲ ಅಕಾಡೆಮಿಕ್ ಆಗಿ ಅವರನ್ನು ರೂಪಿಸಹೊರಟರೆ ಅವರಲ್ಲಿನ ಇತರ ಕೌಶಲಗಳು ಕಮರಿಹೋಗುತ್ತವೆ. ಶಾಲೆಯಿಂದ ಮನೆಗೆ ಬರುವಾಗ ವಾಹನದಿಂದ ಕೆಳಗಿಳಿದ ಮಗು `ಪಪ್ಪಾ, ಮಮ್ಮಿ ಇವತ್ತು ಕಡಿಮೆ ಹೋಮ್ ವರ್ಕ್ ಕೊಟ್ಟಿದ್ದಾರೆ' ಎಂದು ಖುಷಿಯಿಂದ ಹೇಳಿದ ದಿನ ಆ ಕುಟುಂಬ ನೆಮ್ಮದಿಯ ನಿಟ್ಟಿಸಿರು ಬಿಡುತ್ತದೆ ಎಂಬುದಂತೂ ನಿಜ. ಒಂದೆಡೆ ವಿದ್ಯಾರ್ಥಿಯ ಫಲಿತಾಂಶದ ಮೇಲೂ ಹೇಳಿಕೊಳ್ಳುವಂತಹ ಪರಿಣಾಮವನ್ನೇನೂ ಬೀರದ, ಇನ್ನೊಂದೆಡೆ ಮಕ್ಕಳಲ್ಲಿನ ಲವಲವಿಕೆಯನ್ನೇ ಕಸಿಯುವ, ಮತ್ತೊಂದೆಡೆ ಕುಟುಂಬದ ಮಾನಸಿಕ ನೆಮ್ಮದಿಯನ್ನು ಹಾಳುಗೆಡಹುವ ವಿಪರೀತ ಹೋಮ್ ವರ್ಕ್‌ಗೆ ಪರ್ಯಾಯ ಇಲ್ಲವೇ? ಹೋಮ್ ವರ್ಕ್ ನೀಡುವುದು ತಪ್ಪಲ್ಲ. ಆದರೆ ಮಕ್ಕಳ ವಯೋಮಾನ, ತರಗತಿಗಳನ್ನು ಗಮನಿಸಿ ನೀಡಬೇಕು. ಮೂರನೇ ತರಗತಿಯ ಮಕ್ಕಳಿಗೂ ಹತ್ತನೇ ತರಗತಿಯ ಮಕ್ಕಳಿಗೂ ಒಂದೇ ಪ್ರಮಾಣದ ಹೋಮ್ ವರ್ಕ್ ನೀಡಿದರೆ ಅದೊಂದು ಕಾಟಾಚಾರದ ಕ್ರಿಯೆಯಾಗುತ್ತದೆ ಹೊರತು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನೆರವಾಗದು. ಹೋಮ್ ವರ್ಕ್ ನೀಡುವ ವಿಧಾನದಲ್ಲಿ ರಾಷ್ಟ್ರವ್ಯಾಪಿಯಾಗಿ ಒಂದು ಸಾರ್ವತ್ರಿಕ ಕಟ್ಟಳೆ ಬರಬೇಕು. ಹಮಾಲಿ ಮಾಡುವವರು ಹೊರುವಂತೆ ತಿಣುಕುತ್ತಾ ಹೋಮ್ ವರ್ಕ್ ಪುಸ್ತಕಗಳನ್ನು ಒಳಗೊಂಡ ಬ್ಯಾಗುಗಳನ್ನು ಹೊರಲಾರದೆ ಹೊತ್ತುಕೊಂಡು ಶಾಲೆಗೆ ಓಡುವ ಮಕ್ಕಳನ್ನು ನೋಡಿದರೆ, ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆಯೇ ವಿಷಾದ ಭಾವನೆ ಮೂಡುತ್ತದೆ. ಈ ದಿಸೆಯಲ್ಲಿ ಅತ್ಯಂತ ತಾರ್ಕಿಕವಾದ ಆಲೋಚನೆಗಳು, ಕ್ರಮಗಳು ಹಾಗೂ ತೀರ್ಮಾನಗಳು ಒಡಮೂಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.