ಹೊಸತನಕ್ಕೆ ಮುಕ್ತ ದಕ್ಷಿಣ ಕನ್ನಡ ಪಶ್ಚಿಮ ಘಟ್ಟದ ಕಗ್ಗಾಡು ಆವರಿಸಿಕೊಂಡಿರುವ ಸಂಪಾಜೆಯ ಪೆರಾಜೆ ಎಂಬಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2010ರಲ್ಲಿ ಸುದ್ದಿ ಮಾಡಿತು. ಅಲ್ಲಿನ ಮೋಹನ್ ಕುಮಾರ್ ಎಂಬ ಮೇಷ್ಟರಿಗೆ ಮಕ್ಕಳಿಗೆ ಕಾಗುಣಿತ ಕಲಿಸುವುದು ಅಥವಾ ಉಕ್ತಲೇಖನ ಕೊಡುವುದರಲ್ಲಷ್ಟೇ ತೃಪ್ತಿ ಸಿಗಲಿಲ್ಲ. ಅವರು ಮಕ್ಕಳಿಗೆ ಹೊಸ ರೀತಿಯ ತರಗತಿ ಶುರು ಮಾಡಿದರು. ಊರಿನಲ್ಲಿ ಪೈರು ತುಂಬಿದ ಹೊಲವೊಂದಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ, ಅಲ್ಲಿ ಭತ್ತದ ಕೊಯ್ಲು ಹೇಳಿಕೊಟ್ಟರು. ಭತ್ತದ ಕೃಷಿ ಎಷ್ಟು ಕಷ್ಟವಿದೆ, ಅನ್ನದ ಅಗುಳೊಂದು ತಟ್ಟೆಗೆ ಬಂದು ಬೀಳಬೇಕಿದ್ದರೆ ಎಷ್ಟು ಶ್ರಮದ ಅಗತ್ಯವಿದೆ ಎನ್ನುವುದನ್ನು ಗದ್ದೆಯ ಬದುವಿನಲ್ಲೇ ನಿಂತು ಮಕ್ಕಳಿಗೆ ತಿಳಿಸಿಕೊಟ್ಟರು. ಮಕ್ಕಳು ಮೈ ಕೈ ತುರಿಸುತ್ತಾ ಪ್ರಾಯೋಗಿಕವಾಗಿಯೇ ಪಾಠವನ್ನು ಅರಗಿಸಿಕೊಂಡರು. ಮೋಹನ ಮೇಷ್ಟರ ಕೃಷಿ ಪಾಠ ಅಲ್ಲಿಗೇ ನಿಲ್ಲಲಿಲ್ಲ. ಮರುವರ್ಷ ಭತ್ತ ತರಹೇಳಿ ಮಕ್ಕಳಿಂದಲೇ ಬಿತ್ತನೆ ಮಾಡಿಸಿ, ಕೊಯ್ಲಿನವರೆಗಿನ ಹಂತಗಳನ್ನು ಹೇಳಿಕೊಟ್ಟರು. ಇದು ನಿರಂತರ ಮುಂದುವರಿಯುತ್ತಿದೆ. ಮಾರನೆಯ ವರ್ಷ ಅಂದರೆ 2011ರಲ್ಲಿ ರಾಜ್ಯ ಸರ್ಕಾರವೇ ಚಿಣ್ಣರ ಜಿಲ್ಲಾ ಕೃಷಿ ದರ್ಶನ ಎಂಬ ಹೊಸ ಯೋಜನೆ ರೂಪಿಸಿತು. ಶಾಲೆಗಳಲ್ಲಿ ಆರಂಭವಾಗುವ ಹೊಸತನಗಳು ಯಶಸ್ವಿಯಾದಾಗ ಅದು ರಾಜ್ಯಕ್ಕೇ ಮಾದರಿಯಾ­ಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೆ. ಇತ್ತೀಚೆಗೆ ಸರ್ಕಾರಿ ಶಾಲೆಗಳ ರಾಜ್ಯ ಮಟ್ಟದ ಮೌಲ್ಯಮಾಪನ ನಡೆದಿದ್ದು, ದಕ್ಷಿಣ ಕನ್ನಡಕ್ಕೆ ‘ಎ’ ಗ್ರೇಡ್‌ ದೊರೆತಿದೆ. ರಾಜ್ಯದಲ್ಲೇ ಅತ್ಯಂತ ಹೆಚ್ಚು, ಅಂದರೆ 80.36 ಅಂಕಗಳು ದೊರೆತಿವೆ. ಶೇ 75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಜಿಲ್ಲೆಗಳಿಗೆ ‘ಎ’ ಗ್ರೇಡ್‌ ನೀಡಲಾಗಿದ್ದು, ಒಟ್ಟು ಎಂಟು ಜಿಲ್ಲೆಗಳಿಗೆ ‘ಎ’ ಗ್ರೇಡ್‌ ದೊರೆತಿದೆ. ಗದಗ, ಧಾರವಾಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕೊಡಗು ಮತ್ತು ಶಿರಸಿ ಜಿಲ್ಲೆಗಳು ಈ ಸಾಲಿನಲ್ಲಿವೆ. ಹತ್ತಾರು ಹೊಸತನ ವಿದ್ಯಾರ್ಥಿನಿಯರು ಪ್ರೌಢಶಾಲೆ ಪ್ರವೇಶಿಸುತ್ತಲೇ ದೈಹಿಕ ಮತ್ತು ಮಾನಸಿಕವಾಗಿ ಗೊಂದಲದಲ್ಲಿ ಮುಳುಗಿರುತ್ತಾರೆ. ಹಳ್ಳಿಗಳಲ್ಲಾದರೆ ಶಿಕ್ಷಕರು ಪಾಠ ಪ್ರವಚನಕ್ಕೇ ಸೀಮಿತವಾಗದೆ ಪಾಲಕರಂತೆಯೇ ಕಕ್ಕುಲಾತಿಯಿಂದ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾರೆ. ಹೆಣ್ಣು ಮಕ್ಕಳು ಶಾಲೆಯಲ್ಲಿ ‘ದೊಡ್ಡವರಾಗಿ’ಬಿಟ್ಟರೆ ಆತಂಕದಿಂದ ಅವರನ್ನು ಮನೆಗೆ ಕಳುಹಿಸುವುದು ಎಲ್ಲ ಪ್ರೌಢಶಾಲೆಯಲ್ಲೂ ಸಹಜ. ಆ ವೇಳೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಪಾಠದ ಅಗತ್ಯ ಇರುತ್ತದೆ. ದಕ್ಷಿಣ ಕನ್ನಡದ ಶಾಲೆಗಳಲ್ಲಿ 7 ಮತ್ತು 8ನೇ ತರಗತಿಯ 18,311 ಹೆಣ್ಣು ಮಕ್ಕಳಿಗೆ ಇಂತಹ ಮಾಹಿತಿ ನೀಡುವ ‘ಅರಿವು’ ಕಾರ್ಯಕ್ರಮ ನಡೆಯುತ್ತಿದೆ. ಸ್ಥಳೀಯವಾಗಿ ನ್ಯಾಪ್‌ಕಿನ್ ತಯಾರಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಅದನ್ನು ವಿತರಿಸಲಾಗುತ್ತಿದೆ. ಅಷ್ಟೇ ಅಲ್ಲ, ಬಳಸಿದ ನ್ಯಾಪ್‌ಕಿನ್‌ನ ವಿಲೇವಾರಿ ಬಗ್ಗೆ ತಿಳಿ ಹೇಳಿ ಅದಕ್ಕಾಗಿ ಪ್ರತ್ಯೇಕ ಘಟಕಗಳನ್ನೂ ಆರಂಭಿಸಲಾಗಿದೆ. ಆಧುನಿಕ ಕಚೇರಿಗಳಲ್ಲಿ, ಕಾಲೇಜುಗಳಲ್ಲಿಯೇ ನ್ಯಾಪ್‌ಕಿನ್ ವಿಲೇವಾರಿಗೆ ಅವಕಾಶಗಳು ಇರುವುದು ಕಡಿಮೆ. ಆದರೆ ದಕ್ಷಿಣ ಕನ್ನಡ ಇದಕ್ಕೆ ಹೊರತು. ಅದರಲ್ಲೂ ನ್ಯಾಪ್‌ಕಿನ್‌ ವಿಲೇವಾರಿ ಘಟಕ ಸರ್ಕಾರದ ನೆರವಿಲ್ಲದೆ, ಸ್ಥಳೀಯರ ಸಹಭಾಗಿತ್ವದಲ್ಲಿ ರೂಪುಗೊಂಡಿದೆ ಎನ್ನುವುದು ಗಮನಾರ್ಹ. ಜಿಲ್ಲೆಯ ಬೆಳ್ತಂಗಡಿಯ ಲಾಯಿಲ ಗ್ರಾಮದಲ್ಲಿ ನ್ಯಾಪ್‌ಕಿನ್ ತಯಾರಿಕಾ ಘಟಕ 1.23 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯ 6 ಹಿರಿಯ ಪ್ರಾಥಮಿಕ ಮತ್ತು 57 ಪ್ರೌಢಶಾಲೆಗಳಲ್ಲಿ ವಿಶೇಷ ಶೌಚಾಲಯ ನಿರ್ಮಿಸಿ, ಹೆಣ್ಣು ಮಕ್ಕಳ ಶೌಚಾಲಯದಲ್ಲಿ ಕಡಿಮೆ ವೆಚ್ಚದ ನ್ಯಾಪ್‌ಕಿನ್ ನಿರ್ವಹಣಾ ಘಟಕ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಕೋಟಿಯಲ್ಲಿ ಸರ್ಕಾರೇತರ ದೇಣಿಗೆ! ಶಾಲೆಯೆಂದರೆ ಸರ್ಕಾರವೇ ಎಲ್ಲದಕ್ಕೂ ಹಣ ಕೊಡಬೇಕು ಎನ್ನುವ ಧೋರಣೆ ದಕ್ಷಿಣ ಕನ್ನಡದಲ್ಲಿ ಇಲ್ಲ. ರೋಟರಿ, ಲಯನ್ಸ್, ಸ್ಥಳೀಯ ಸಂಘಟನೆಗಳು, ಕಾರ್ಪೊರೇಟ್ ಕಂಪೆನಿ, ಇತರ ಇಲಾಖೆಯಿಂದ ಒಟ್ಟು 5.24 ಕೋಟಿ ರೂಪಾಯಿ ನೆರವು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹರಿದು ಬಂದಿದೆ. ಅದೆಲ್ಲದರ ಸಮಗ್ರ ಮಾಹಿತಿ ಕೋಶವನ್ನು ಒಳಗೊಂಡ ಸಾಪ್ಟವೇರ್ ತಯಾರಿಸಲಾಗಿದೆ. ಕಳೆದ ವರ್ಷ ಜಿಲ್ಲಾ ಪಂಚಾಯಿತಿ ಸಿ.ಇ.ಒ. ಡಾ. ಕೆ.ಎನ್‌.ವಿಜಯ ಪ್ರಕಾಶ್‌ ಹೊಸ ಯೋಜನೆ ಜಾರಿಗೆ ಕಾಳಜಿ ವಹಿಸಿದ್ದರು. ಈ ವರ್ಷವೂ ಜಿಲ್ಲೆಯ ಶಾಲೆಗಳು ಹಿಂದೆ ಬೀಳದಂತೆ ಗಮನ ವಹಿಸಲಾಗುವುದು. ಸಿ.ಇ.ಒ. ತುಳಸಿ ಮದ್ದಿನೇನಿ ಸರ್ವ ಶಿಕ್ಷಣ ಅಭಿಯಾನದ ಪ್ರಯತ್ನಗಳನ್ನೆಲ್ಲ ಪ್ರೋತ್ಸಾಹಿಸುತ್ತಿದ್ದಾರೆ. –ಶಿವಪ್ರಕಾಶ್ , ಸರ್ವ ಶಿಕ್ಷಣ ಅಭಿಯಾನದ ಯೋಜನಾ ಸಮನ್ವಯಾಧಿಕಾರಿ. ರಾಜ್ಯದಲ್ಲೇ ಪ್ರಥಮಗಳ ಹೆಗ್ಗಳಿಕೆ * ವಿಶೇಷ ಅಗತ್ಯದ 7,941 ಮಕ್ಕಳಿಗೆ ಡೇಟಾಬೇಸ್ ನಿರ್ಮಾಣ * 14 ವರ್ಷದೊಳಗಿನ 5,186 ವಿಶೇಷ ಮಕ್ಕಳನ್ನು ಜಿಲ್ಲೆಯ ವಿವಿಧ ಸಹಕಾರಿ ಸಂಘಗಳಿಂದ ದತ್ತು ಸ್ವೀಕಾರ * ಎಲ್ಲ 932 ಪ್ರಾಥಮಿಕ ಶಾಲೆಯಲ್ಲಿ ಇಳಿಜಾರು ರರ್‍ಯಾಂಪ್ಸ್ * ನಕ್ಸಲ್ ಪ್ಯಾಕೇಜ್‌ನ 25 ಲಕ್ಷ ರೂಪಾಯಿ ಅನುದಾನದಲ್ಲಿ ನಕ್ಸಲ್‌ಬಾಧಿತ ಪ್ರದೇಶದ ವಿದ್ಯಾರ್ಥಿಗಳಿಗೆ ಅಗತ್ಯ ಸಲಕರಣೆ ವಿತರಣೆ. * ‘ಸರ್ವ ಶಿಕ್ಷಣ ಅಭಿಯಾನ, ಉಜ್ವಲ ಭವಿಷ್ಯಕ್ಕೆ ವರದಾನ’ ಥೀಮ್‌ಸಾಂಗ್ ರಚನೆ. ಶಾಲೆಗಳಲ್ಲಿ ರೀಡಿಂಗ್ ಕಾರ್ನರ್ * ಅಪೌಷ್ಟಿಕತೆ ಇರುವ 842 ಮಕ್ಕಳಿಗೆ ‘ಆಹಾರ ಸನ್ನದು’ ಎಂಬ ವಿಶೇಷ ಕಾರ್ಯಕ್ರಮ * ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಲ್ಲಿ ಕುಡಿಯುವ ನೀರು, ಬಾಲಕರ ಮತ್ತು ಬಾಲಕಿಯರ ಶೌಚಾಲಯ ನಿರ್ಮಾಣದಲ್ಲಿ ಶೇ 100 ಸಾಧನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.