ಜ್ಞಾನ ಅಂಕವೇ ಮಾನದಂಡ! ಈಚೆಗೆ ನಾನೊಂದು ಪ್ರಸಿದ್ಧ ಪ್ರೌಢಶಾಲೆಗೆ ಹೋಗಿದ್ದೆ. ಅಲ್ಲಿನ ಪ್ರಾಂಶುಪಾಲರು ನನ್ನ ಪರಿಚಿತರು. ಗೌರವಾದರಗಳಿಂದ ಬರಮಾಡಿಕೊಂಡರು. ‘ಶಾಲೆ ನೋಡ್ತೀರಾ ಸರ್?’ ಎಂದು ಕೇಳಿದರು. ನಾನು ‘ಮಕ್ಕಳನ್ನು ಮಾತಾಡಿಸ್ತೇನೆ’ ಎಂದೆ. ‘ಓ.ಕೆ. ಸರ್, ಕ್ಲಾಸ್‌ಗಳಿಗೇ ಹೋಗೋಣ’ ಎಂದರು. ಒಂದು ತರಗತಿಗೆ ನುಗ್ಗಿದೆವು. ಮಕ್ಕಳೆಲ್ಲ ಖುಷಿಯಾಗಿದ್ದರು. ಕಣ್ಣಿಗೆ ರಾಚುವ ಬಣ್ಣದ ಸಮವಸ್ತ್ರದಲ್ಲಿ ಕಂಗೊಳಿಸುತ್ತಿದ್ದರು. ‘ಈ ಶಾಲೆಗೆ ಬರುವುದೆಂದರೆ ಇಷ್ಟವಾ?’ ಎಂದೆ. ‘ಎಸ್’ ಎಂದರು. ‘ಚೆನ್ನಾಗಿ ಕಲಿಯುತ್ತಿದ್ದೀರಾ?’ ಎಂದು ಕೇಳಿದೆ. ಮತ್ತೆ ‘ಎಸ್’ ಎಂದರು. ‘ಯಾರೆಲ್ಲಾ ಫಸ್ಟ್ ಕ್ಲಾಸ್ ಅಂಕಗಳನ್ನು ಗಳಿಸಿದ್ದೀರಾ?’ ಎಂದಾಗ ಇಡೀ ತರಗತಿಯೇ ಎದ್ದು ನಿಂತಿತು. ನನಗೆ ಬಹಳ ಖುಷಿಯಾಯಿತು. ಕೇಳುತ್ತಾ ಹೋದಂತೆ ಶೇ 30ಕ್ಕಿಂತ ಹೆಚ್ಚು ಮಕ್ಕಳಿಗೆ ಶೇ 90ಕ್ಕಿಂತ ಹೆಚ್ಚು ಅಂಕಗಳು ಬಂದಿದ್ದವು. ‘ಅರೆ! ಇಷ್ಟೊಂದು ಜಾಣ ಮಕ್ಕಳನ್ನು ಹೊಂದಿದ ನೀವು ಭಾಗ್ಯಶಾಲಿಗಳು’ ಎಂದು ಪ್ರಾಂಶುಪಾಲರಲ್ಲಿ ಹೇಳಿದೆ. ಅವರಿಗೆ ಹೆಮ್ಮೆ ಎನಿಸಿತು. ಮತ್ತೆ ಮಕ್ಕಳಲ್ಲಿ ಕೇಳಿದೆ, ‘ನಿಮ್ಮನ್ನು ಭೇಟಿಯಾಗಿ ನನಗೆ ಬಹಳ ಖುಷಿಯಾಗಿದೆ. ನಾನು ಕೆಲವು ಜನರಲ್ ನಾಲೆಜ್ ಪ್ರಶ್ನೆಗಳನ್ನು ಕೇಳಲೇ?’ ‘ಓ.ಕೆ. ಸರ್’ ಎಂದವರು ಇಬ್ಬರು ಮಾತ್ರ. ಉಳಿದವರೆಲ್ಲ ‘ನೋ ನೋ’ ಎಂದರು. ‘ಯಾಕೆ ನೋ ಎನ್ನುತ್ತೀರಿ? ನೀವೆಲ್ಲ ಫಸ್ಟ್ ಕ್ಲಾಸ್ ಬಂದಿರುವ ಮಕ್ಕಳಲ್ವಾ?’ ಎಂದೆ. ‘ಎಸ್... ಬಟ್ ನೋ ಜನರಲ್ ನಾಲೆಜ್ ಕ್ವೆಶ್ಚನ್ಸ್’ ಎಂದುಬಿಟ್ಟರು. ಪ್ರಾಂಶುಪಾಲರಿಗೂ ಪೇಚಿಗಿಟ್ಟುಕೊಂಡಿತು. ಅದು ಅವರ ಮುಖದಲ್ಲೇ ವ್ಯಕ್ತವಾಗಿತ್ತು. ‘ಬಿಡಿ, ನಾನು ಸುಲಭದ ಪ್ರಶ್ನೆ ಕೇಳುತ್ತೇನೆ. ಉತ್ತರಾಂಚಲದಲ್ಲಿ ನಡೆದ ಪ್ರಕೃತಿ ವಿಕೋಪದ ಬಗ್ಗೆ ಗೊತ್ತೇ?’ ಎಂದು ಕೇಳಿದೆ. ‘ಹಾಂ... ಹಾಂ.. ಅದನ್ನು ಟಿ.ವಿ.ಯಲ್ಲಿ ನೋಡಿದ್ದೇವೆ’ ಎಂದರು. ‘ಪೇಪರಿನಲ್ಲಿ ಓದಿದ್ದೀರಾ?’ ಎಂದೆ. ‘ಇಲ್ಲ’ ಎಂದವರೇ ಹೆಚ್ಚು. ‘ಉತ್ತರಾಂಚಲ ಎಲ್ಲಿದೆ?’ ಎಂದು ಕೇಳಿದೆ. ‘ಇಂಡಿಯಾ’ ಎಂದು ಒಬ್ಬ ಗಟ್ಟಿಯಾಗಿ ಹೇಳಿದಾಗ ಉಳಿದವರು ದನಿಗೂಡಿಸಿದರು. ಕೆಲವರು ಹೌದೆಂದು ತಲೆಯಾಡಿಸಿದರು. ‘ಅದು ಹೌದು, ಆದರೆ ಇಂಡಿಯಾದಲ್ಲಿ ಎಲ್ಲಿದೆ?’ ನನ್ನ ಈ ಪ್ರಶ್ನೆಗೆ ಎಲ್ಲರೂ ಮೌನವಾದರು. ಆರಂಭದಲ್ಲಿ ‘ಓ.ಕೆ. ಸರ್’ ಎಂದವರು ‘ನಾರ್ಥ್‌ ಇಂಡಿಯಾ’ ಎಂದರು. ‘ಕರೆಕ್ಟ್, ಆದರೆ ನಾರ್ಥ್‌ ಇಂಡಿಯಾ ಎಂದರೆ ತುಂಬಾ ವಿಸ್ತಾರವಾಗಿದೆಯಲ್ಲಾ? ಅದರ ಪಶ್ಚಿಮವೋ, ಮಧ್ಯವೋ ಅಥವಾ ಪೂರ್ವ ಭಾಗದಲ್ಲೋ?’ ಈಗ ಎಲ್ಲರಿಗೂ ಯೋಚನೆಗಿಟ್ಟುಕೊಂಡಿತು. ‘ನಿಮ್ಮಲ್ಲಿ ಅಟ್ಲಾಸ್ ಇದೆಯಾ?’ ಎಂದು ಕೇಳಿದೆ. ‘ಎಸ್ ಸರ್, ಮನೆಯಲ್ಲಿದೆ’ ಎಂದರು. ‘ಟಿ.ವಿ.ಯಲ್ಲಿ ಪ್ರಕೃತಿ ವಿಕೋಪದ ಚಿತ್ರಣವನ್ನು ನೋಡುತ್ತಿದ್ದಂತೆ ಈ ಉತ್ತರಾಂಚಲ ಎಲ್ಲಿದೆ ಎಂದು ಅಟ್ಲಾಸ್‌ನಲ್ಲಿ ನೋಡೋಣ ಎಂದು ನಿಮಗೆ ಅನಿಸಲಿಲ್ಲವೇ?’ ಎಲ್ಲರೂ ಮೌನವಾಗಿದ್ದರು. ‘ಯಾಕೆ ತೆರೆದು ನೋಡಲಿಲ್ಲ?’ ಈಗಲೂ ಮೌನ. ‘ನೋಡಿದ್ದರೆ ನಿಮ್ಮ ಜನರಲ್ ನಾಲೆಜ್ ಹೆಚ್ಚುತ್ತಿತ್ತು. ಒಂದು ಮಾಹಿತಿ ಸಿಕ್ಕಿದಾಗ ಅದರ ಬಗ್ಗೆ ಪ್ರಶ್ನೆ ಕೇಳಿಕೊಂಡು ಉತ್ತರ ಕಂಡುಕೊಳ್ಳುವುದೇ ಕಲಿಕೆ. ಒಂದು ಕಷ್ಟದ ಶಬ್ದ ಎದುರಾದಾಗ ಡಿಕ್ಷ್‌ನರಿ ನೋಡಿ ಅರ್ಥ ಹುಡುಕಿ ತಿಳಿದುಕೊಳ್ಳಬೇಕು. ಒಂದು ಘಟನೆ ಬಗ್ಗೆ ಓದಿದರೆ ಅದು ನಡೆದ ಕಾಲ, ಕಾರಣಗಳನ್ನು ಬರೆದುಕೊಳ್ಳಬೇಕು. ಅದನ್ನು ಮನನ ಮಾಡಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದರ ಬಗ್ಗೆ ಧ್ಯಾನಿಸಬೇಕು. ಮನಸ್ಸಿನಲ್ಲಿ ಅದರ ಚಿತ್ರಣ ಮೂಡಿಸಿಕೊಳ್ಳಬೇಕು. ಇದಕ್ಕೇನೂ ಒದ್ದಾಟ ಬೇಡ. ಒಮ್ಮೆ ಆರಂಭಿಸಿದರೆ ಮತ್ತೆ ಸಹಜವಾಗಿ ಬಿಡುತ್ತದೆ. ಹೀಗೆ ಮಾಡುವವರಿಗೆ ಜನರಲ್ ನಾಲೆಜ್ ಪ್ರಶ್ನೆಗಳು ಎದುರಾದಾಗ ಹೆದರಿಕೆಯೇ ಆಗದು. ಪಾಠದ ಒಳಗಿರುವ ಮಾಹಿತಿಯನ್ನು ಕೂಡ ನೀವು ಜನರಲ್ ನಾಲೆಜ್ ಆಗಿ ಸಂಗ್ರಹಿಸಿಕೊಳ್ಳಬಹುದು’ ಎಂದು ಹೇಳಿದಾಗ ಮಕ್ಕಳು ಆಸಕ್ತಿಯಿಂದ ಕಿವಿಗೊಟ್ಟರು. ‘ಈಗ ನಿಮ್ಮ ಶಾಲೆಯ ಬಗ್ಗೆ ನೀವೆಷ್ಟು ತಿಳಿದಿದ್ದೀರಿ ನೋಡೋಣ’ ಎಂದೆ. ‘ಎಸ್ ಸರ್’ ಮಕ್ಕಳು ಒಂದಿಷ್ಟು ಆತ್ಮವಿಶ್ವಾಸದಿಂದ ಸಿದ್ಧರಾದಂತೆ ತೋರಿತು. ‘ಹಾಗಿದ್ದರೆ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದರೆ ಬರೆಯಿರಿ. ಯಾವುದೇ ಉತ್ತರ ಅಪೂರ್ಣ ಆಗಿರಬಾರದು, ಸ್ಪೆಲ್ಲಿಂಗ್ ತಪ್ಪಿರಬಾರದು. ಗೊತ್ತಿಲ್ಲವಾದರೆ ಪ್ರಶ್ನೆ ಸಂಖ್ಯೆಯ ಮುಂದೆ ಪ್ರಶ್ನಾರ್ಥಕ ಚಿಹ್ನೆ ಹಾಕಿ’ ಎಂದೆ. ಮಕ್ಕಳು ಸಿದ್ಧರಾದರು. ನಾನು ಪ್ರಶ್ನೆ ಕೇಳತೊಡಗಿದೆ. ‘ನಿಮ್ಮ ಶಾಲೆಯ ಪೂರ್ಣ ಹೆಸರೇನು?’ ‘ನಿಮ್ಮ ಶಾಲೆ ಯಾವ ವರ್ಷ ಸ್ಥಾಪನೆಯಾಯಿತು?’ ‘ನಿಮ್ಮ ಶಾಲೆಯ ಸ್ಥಾಪಕರು ಯಾರು?’ ‘ಶಾಲಾ ಆಡಳಿತ ಮಂಡಳಿಯ ಈಗಿನ ಅಧ್ಯಕ್ಷರು ಯಾರು? ಅವರ ಪೂರ್ತಿ ಹೆಸರೇನು?’ ‘ನಿಮ್ಮ ಪ್ರಾಂಶುಪಾಲರ ಪೂರ್ತಿ ಹೆಸರೇನು?’ ‘ಅವರ ವಿದ್ಯಾರ್ಹತೆ ಏನು?’ ‘ನಿಮ್ಮ ಶಾಲೆಯಲ್ಲಿ ಇರುವ ಒಟ್ಟು ಶಿಕ್ಷಕರು ಎಷ್ಟು?’ ‘ಆ ಎಲ್ಲ ಶಿಕ್ಷಕರ ಪರಿಚಯ ಇದೆಯಾ?’ ‘ನಿಮ್ಮ ಶಾಲೆಯಲ್ಲಿ ಇರುವ ಒಟ್ಟು ಮಕ್ಕಳ ಸಂಖ್ಯೆ ಎಷ್ಟು?’ ‘ನಿಮ್ಮ ಊರಿನಲ್ಲಿ ಎಷ್ಟು ಪ್ರೌಢಶಾಲೆಗಳಿವೆ?’ ‘ನಿಮ್ಮ ಗ್ರಾಮ ಅಥವಾ ನಗರದ ಪಂಚಾಯತ್ ಕಚೇರಿ ಎಲ್ಲಿದೆ ಎಂದು ಗೊತ್ತಿದೆಯಾ?’ ‘ಹತ್ತಿರದ ಅಂಚೆ ಕಚೇರಿ ಎಲ್ಲಿದೆ ಎಂದು ಗೊತ್ತಿದೆಯಾ?’ ‘ನಿಮ್ಮ ಊರಿನಲ್ಲಿ ಯಾವೆಲ್ಲ ಬ್ಯಾಂಕ್‌ಗಳಿವೆ?’ ಕೊನೆಯಲ್ಲಿ ನೋಡಿದಾಗ ಅನೇಕ ವಿದ್ಯಾರ್ಥಿಗಳ ಉತ್ತರಗಳಲ್ಲಿ ಪ್ರಶ್ನಾರ್ಥಕ ಚಿಹ್ನೆಗಳೇ ರಾರಾಜಿಸುತ್ತಿದ್ದವು. ‘ಏನು ಕಾರಣ?’ ಎಂದು ಕೇಳಿದೆ. ಹೆಚ್ಚಿನ ಮಕ್ಕಳು ಸುಮ್ಮನಿದ್ದರೂ ಕೆಲವರು ಕೇಳಿದರು, ‘ಇದೆಲ್ಲಾ ನಮಗ್ಯಾಕೆ?’ ‘ಸರಿ. ಅದೇ ಕಾರಣ. ಇದೆಲ್ಲ ನಮಗ್ಯಾಕೆ ಎಂಬುದೇ ಕಾರಣ. ಇಂತಹ ಪ್ರಶ್ನೋತ್ತರಕ್ಕೂ ಪರೀಕ್ಷೆಯಲ್ಲಿ ಅಂಕಗಳಿದ್ದರೆ ನೀವೆಲ್ಲರೂ ಓದುತ್ತಿದ್ದಿರಿ ಅಲ್ಲವೇ?’ ಎಂದೆ. ಮಕ್ಕಳು ಹೌದೆಂದು ತಲೆಯಾಡಿಸಿದರು. ಅಂಕಗಳ ಲಾಭವನ್ನು ಒದಗಿಸದ ಸಾಮಾನ್ಯ ಜ್ಞಾನದ ಬಗ್ಗೆ ಮಕ್ಕಳು ಸಹಜವಾಗಿ ಅಸಡ್ಡೆ ತಾಳಿರುತ್ತಾರೆ. ಏಕೆಂದರೆ ಮಕ್ಕಳು ಭೇಟಿಯಾದಾಗ ಹಿರಿಯರೆಲ್ಲರೂ ಕೇಳುವುದು ಅಂಕಗಳನ್ನೇ. ಫಸ್ಟ್ ಕ್ಲಾಸ್, ಡಿಸ್ಟಿಂಕ್ಷನ್ ಎಂದು ಹೇಳಿದಷ್ಟೂ ಪ್ರಶಂಸೆ ಹೆಚ್ಚು. ಅಂಕಗಳು ಸಿಕ್ಕುವುದು ಪಠ್ಯದಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಿದರೆ ಮಾತ್ರ ತಾನೆ? ಹಾಗಾಗಿ ಮಕ್ಕಳ ಗಮನ ಪಠ್ಯಕ್ಕೆ ಸೀಮಿತವಾಗಿರುತ್ತದೆ. ಆ ಗಮನವೂ ಪರೀಕ್ಷಾ ಕಾಲದ ತಾತ್ಕಾಲಿಕ ಗಮನವಾಗಿರುತ್ತದೆ. ಅಂದರೆ ಬಾಯಿ ಪಾಠಕ್ಕೆ ಸೀಮಿತ ಆಗಿರುತ್ತದೆ. ಬಳಿಕ ಅದನ್ನು ಮರೆತು ಬಿಡುತ್ತಾರೆ. ಏನು ಮಾಡಬಹುದು? ಒಂದನೇ ತರಗತಿಯಿಂದಲೇ ಮಕ್ಕಳ ಮನಸ್ಸನ್ನು ಪಾಠದ ಆವರಣದಿಂದ ಹೊರಗೆ ಸುತ್ತಾಡಿಸಬೇಕು. ಉದಾಹರಣೆಗೆ ಸಾಕುಪ್ರಾಣಿಗಳು ಎಂಬ ವಿಷಯ ಬಂದಾಗ ಕೇವಲ ಅವುಗಳನ್ನು ಪಟ್ಟಿ ಮಾಡುವುದಲ್ಲ. ತರಗತಿಯ ಹೊರಗೆ ಕರೆದೊಯ್ದು ಒಂದೊಂದು ಪ್ರಾಣಿಯನ್ನೂ ಕಾಣಿಸಬೇಕು. ದನ, ಎಮ್ಮೆ, ಆಡು, ಕುರಿ, ಮೇಕೆ, ಕೋಳಿ, ಬೆಕ್ಕು, ನಾಯಿ, ಕುದುರೆ ಇವೆಲ್ಲವುಗಳ ಆಕಾರ, ಆಹಾರ, ನಡಿಗೆ, ಓಟ, ಸಾಕಣೆಯ ಜಾಗ, ಉಪಯೋಗ ಇತ್ಯಾದಿಗಳ ಬಗ್ಗೆ ಮಕ್ಕಳೊಡನೆ ಮತ್ತೆ ಮತ್ತೆ ಮಾತನಾಡಬೇಕು. ಈ ಪ್ರಾಣಿಗಳ ಪಟ್ಟಿಯನ್ನು ಹತ್ತಿಪ್ಪತ್ತು ಸಲ ಬರೆದು ತೋರಿಸುವ ಒತ್ತಡ ಹಾಕದೆ, ಮಾತು ಮತ್ತು ಮನನದ ಮೂಲಕ ಜ್ಞಾನವನ್ನು ಗಟ್ಟಿಗೊಳಿಸಬೇಕು. ಆಗ ಮಕ್ಕಳು ಮೇಲಿನ ತರಗತಿಗೆ ಬಂದಾಗ ಬರವಣಿಗೆಯ ತಂತ್ರವನ್ನು ಸುಲಭದಲ್ಲಿ ಕಲಿತು ಬಿಡುತ್ತಾರೆ. ಹೀಗೆ ಅರಿವಿನ ಪರಿಧಿಯ ವಿಸ್ತಾರವನ್ನು ಒಂದನೇ ತರಗತಿಯಿಂದಲೇ ಮಾಡಬೇಕು. ಇದು ಮಗುವಿನ ಸ್ವಯಂ ಕಲಿಕೆಗೆ ಪ್ರೇರಣೆ ನೀಡುತ್ತದೆ. ಅದಕ್ಕೆ ಜ್ಞಾನದ ರುಚಿ ಸಿಗುತ್ತದೆ. ಒಮ್ಮೆ ರುಚಿ ಸಿಕ್ಕಿದರೆ ಜ್ಞಾನದ ಹಸಿವೂ ಹೆಚ್ಚಾಗುತ್ತದೆ. ಮಕ್ಕಳನ್ನು ಈ ಸೃಜನಶೀಲತೆಯ ದಾರಿಯಲ್ಲಿ ಹಾಕದೆ ಹೋಂವರ್ಕ್‌ನ ಭಾರವನ್ನು ಹೊರಿಸಿ, ಕಲಿಕೆಯನ್ನು ತಾತ್ಕಾಲಿಕ ಗೊಳಿಸಿದರೆ ಶಿಕ್ಷಣಕ್ಕೆ ಏನು ಅರ್ಥ ಬಂದೀತು? ಹೀಗೊಂದು ಘಟನೆ ಮೂರನೇ ತರಗತಿಯ ಪರಿಸರ ಅಧ್ಯಯನದಲ್ಲಿ ಸಜೀವಿಗಳು ಮತ್ತು ನಿರ್ಜೀವಿಗಳ ನಡುವಿನ ಭೇದದ ಬಗ್ಗೆ ಪಾಠ ಇದೆ. ಇದರ ಪ್ರಾಯೋಗಿಕ ಶಿಕ್ಷಣ ಆಗದ ವಿದ್ಯಾರ್ಥಿಗೆ ಪಠ್ಯದ ಕಲಿಕೆ ಮಾತ್ರ ಆಗಿರುತ್ತದೆ. ನಾನು ಹೋಗಿದ್ದ ಮನೆಯೊಂದರ ಮಗು ಮೂರನೇ ತರಗತಿಯಲ್ಲಿ ಕ್ಲಾಸಿಗೇ ಫಸ್ಟ್ ಎಂದು ಹೆತ್ತವರು ಹೆಮ್ಮೆಯಿಂದ ಹೇಳಿಕೊಂಡರು. ನಾನು ಸುಮ್ಮನೆ ಮಾತನಾಡಿಸುವ ಸಲುವಾಗಿ ಸಜೀವಿಗಳು ಮತ್ತು ನಿರ್ಜೀವಿಗಳ ನಡುವಿನ ಭೇದ ಏನು ಎಂದು ಆ ಮಗುವನ್ನು ಕೇಳಿದೆ. ‘ಪರೀಕ್ಷೆ ಕಳೆದು ಹದಿನೈದು ದಿನ ಆಯ್ತು. ಈಗ ನಾನು ಹೇಗೆ ಹೇಳುವುದು’ ಎಂದು ಮಗು ಸಿಟ್ಟು ಮಾಡಿಕೊಂಡಿತು. ಪರೀಕ್ಷಾ ಅಂಕಗಳು ಮಗುವಿಗೆ ನೂರಕ್ಕೆ ನೂರು ಬಂದಿತ್ತು. ಆದರೆ ಅದಕ್ಕಾಗಿ ಕಲಿತಿದ್ದ ಜ್ಞಾನ ಮನಸ್ಸಿನಲ್ಲಿ ಕುಳಿತಿರಲಿಲ್ಲ. ‘ಅರೆ! ಇಷ್ಟು ಬೇಗ ಮರೆತುಬಿಟ್ಟೆಯಾ ಪುಟ್ಟಾ?’ ಎಂಬ ಉದ್ಗಾರ ಅಮ್ಮನಿಂದ ಹೊರಟಿತು. ಆದರೇನು ಮಾಡುವುದು? ಕಲಿಕೆ ಎಂಬುದು ಅಂಕಗಳಿಗೂ ರ್್ಯಾಂಕ್‌ಗಳಿಗೂ ಸೀಮಿತ ಆಗಿದೆಯಲ್ಲ! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.