ಯಶಸ್ವಿ ಲೇಖಕರಾಗಿ ಕೆಲವು ದಿನಗಳ ಹಿಂದಿನ ಮಾತು. ಗೆಳೆಯನೊಬ್ಬ ನನ್ನನ್ನು ಭೇಟಿಯಾಗಲು ಬಂದಿದ್ದ. ಆತ ತಾನು ಬರೆದ ಲೇಖನವೊಂದನ್ನು ತಂದಿದ್ದ. ಅದು ಎರಡು ಪುಟಗಳ ಒಂದು ಬರಹ. ನಾನು ಅದನ್ನು ಓದಿ, ‘ಇದನ್ನು ಯಾತಕ್ಕಾಗಿ ಬರೆದದ್ದು’ ಎಂದೆ. ‘ವಾಚಕರ ವಾಣಿಯಲ್ಲಿ ಪ್ರಕಟಿಸಲು’ ಎಂದ. ‘ವಾಚಕರ ವಾಣಿಯಂತಹ ಅಂಕಣಗಳಿಗೆ ಪುಟ್ಟ ಲೇಖನಗಳು ಬೇಕು. ಅವುಗಳ ಗಾತ್ರ ಸುಮಾರು 100– 150 ಶಬ್ದಗಳ ಆಸುಪಾಸಿನಲ್ಲಿ ಇರಬೇಕು. ಹೀಗಾಗಿ ಇದು ತೀರಾ ದೊಡ್ಡದಾಯಿತು’ ಎಂದೆ. ‘ಹಾಗಾದರೆ ನೀನೇ ನೋಡಿ ಚಿಕ್ಕದನ್ನಾಗಿ ಮಾಡು, ತಪ್ಪುಗಳಿದ್ದರೆ ತಿದ್ದಿ ನೀನೇ ಪ್ರಕಟಣೆಗೆ ಕಳಿಸಿಕೊಡು’ ಎಂದ. ‘ನಾನು ಕಳಿಸಿದರೆ ಪತ್ರಿಕೆಯವರು ಹಾಕುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ. ಸಾಮಾನ್ಯವಾಗಿ ಬಹಳಷ್ಟು ಹೊಸ ಲೇಖಕರಿಗೆ ಇಂಥ ಆತಂಕಗಳು ಇರುತ್ತವೆ. ತಾವು ಕಳಿಸಿದ್ದೆಲ್ಲ ಪ್ರಕಟವಾಗಬೇಕು ಎಂಬ ಆಸೆ ಇರುತ್ತದೆ. ಪ್ರಕಟವಾಗದಿದ್ದರೆ ನಿರಾಶರಾಗಿ ಅವರು ಬರೆಯುವುದನ್ನೇ ನಿಲ್ಲಿಸಿ ಬಿಡುತ್ತಾರೆ. ನನಗೆ ಬರಹ ಸಾಧ್ಯವಿಲ್ಲ, ನನ್ನ ಲೇಖನವನ್ನು ಸಂಪಾದಕರು ಪ್ರಕಟಿಸುವುದಿಲ್ಲ, ನಾನು ಕಳಿಸಿದ್ದೆಲ್ಲ ಕಸದ ಬುಟ್ಟಿಗೆ ಹೋಗುತ್ತದೆ ಅಂದುಕೊಳ್ಳುತ್ತಾರೆ. ಹೀಗೆ ಭಾವಿಸುವ ಮೂಲಕ ತಮ್ಮಲ್ಲಿರುವ ಒಬ್ಬ ಲೇಖಕನನ್ನು ತಾವೇ ಕೈಯಾರೆ ಕೊಂದು ಬಿಡುತ್ತಾರೆ. ಒಬ್ಬ ಲೇಖಕ ಲೇಖಕನಾಗಿ ಬೆಳೆಯಬೇಕಾದರೆ, ಬೇರೆಯವರು ಬರೆದ ಬಹಳಷ್ಟು ಲೇಖನಗಳನ್ನು ಆಸಕ್ತಿಯಿಂದ ಓದಬೇಕು. ಆದರೆ ಬೇರೆ ಲೇಖಕರನ್ನು ಅನುಕರಿಸಲು ಹೋಗಬಾರದು. ವ್ಯಾಪಕ ಓದಿನ ಮೂಲಕ ತನ್ನದೇ ಆದ ಬರಹದ ಶೈಲಿಯನ್ನು ರೂಢಿಸಿಕೊಳ್ಳಬೇಕು. ಜೊತೆಗೆ ತಾನು ಯಾವ ಪತ್ರಿಕೆಗೆ ಬರೆಯುತ್ತೇನೆ, ಅದು ಪ್ರಕಟವಾಗುವ ಅಂಕಣ ಯಾವುದು, ಪತ್ರಿಕೆ ಹಾಗೂ ಅಂಕಣಗಳ ಧ್ಯೇಯ– ಧೋರಣೆಗಳೇನು ಎಂಬುದನ್ನು ಮೊದಲೇ ತಿಳಿದಿರಬೇಕು. ಆಮೇಲೆ ಅದಕ್ಕೆ ಹೊಂದುವಂತಹ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಬರಹ ಓದುಗರು ಸುಲಭವಾಗಿ ಗ್ರಹಿಸುವಂತೆ ಇರ­ಬೇಕು. ನೀವು ಬರೆಯುವ ಅಂಕಣದ ಓದುಗರು ಯಾರು, ಅವರಿಗೆ ನಿಮ್ಮ ಬರಹ ರುಚಿಸಬಲ್ಲದೇ ಎಂಬುದನ್ನೆಲ್ಲ ಪರಿಗಣಿಸಬೇಕು. ಇಷ್ಟೆಲ್ಲ ಎಚ್ಚರಿಕೆ ವಹಿಸಿ ಬರೆದ ಮೇಲೂ ಲೇಖನ ಅಸ್ವೀಕೃತ ಆಗಬಹುದು. ಆಗ ಬೇಜಾರು ಮಾಡಿಕೊಂಡು ಲೇಖನಿಯನ್ನು ಕೆಳಗೆ ಇಡಬಾರದು, ನಿರಾಶರಾಗಬಾರದು. ಲೇಖನ ಯಾಕೆ ಅಸ್ವೀಕೃತವಾಯಿತು ಎಂಬ ಆತ್ಮಾವಲೋಕನದಲ್ಲಿ ತೊಡಗಬೇಕು. ಪ್ರತಿ ಪತ್ರಿಕೆಗೂ, ಅದರ ಸಂಪಾದಕರಿಗೂ ತಮ್ಮದೇ ಆದ ಕೆಲವು ಕಟ್ಟುಪಾಡುಗಳು, ನಿಯಮಗಳು, ಒತ್ತಡಗಳು ಇರುತ್ತವೆ. ಲೇಖನಗಳನ್ನು ನೋಡಲು, ಆಯ್ಕೆ ಮಾಡಿಕೊಳ್ಳಲು ಸಮಯಾವಕಾಶವೂ ಬೇಕಾಗುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ಪ್ರಕಟವಾಗಲಿ ಎಂಬ ಉದ್ದೇಶದಿಂದ ನಾನು ಒಂದು ಲೇಖನವನ್ನು 2011ರ ಡಿಸೆಂಬರ್‌ ತಿಂಗಳಿನಲ್ಲಿ ಪತ್ರಿಕೆಯೊಂದಕ್ಕೆ ಕಳುಹಿಸಿದ್ದೆ. ಅದು 2013ರ ಜನವರಿಯಲ್ಲಿ ಪ್ರಕಟವಾಯಿತು. ಅದಕ್ಕಾಗಿ ನಾನು ಪೂರ್ತಿ ಎರಡು ವರ್ಷ ಕಾಯಬೇಕಾಯಿತು. ಇದೇ ಮಾರ್ಚ್‌ ತಿಂಗಳಲ್ಲಿ ಕಳುಹಿಸಿದ ಒಂದು ಲೇಖನ ಪ್ರಕಟಣೆಗೆ ಸ್ವೀಕೃತವಾಗಿದೆ ಎಂಬುದನ್ನು ಸಂಪಾದಕರು ಆರು ತಿಂಗಳ ನಂತರ ತಿಳಿಸಿದರು. ಪ್ರಕಟಣೆ ಇನ್ನೂ ಎಷ್ಟು ತಿಂಗಳ ನಂತರವೋ ಎಂದು­ಕೊಂಡಿದ್ದೆ. ಆದರೆ ಅದು 5– -6 ದಿನಗಳಲ್ಲೇ ಪ್ರಕಟವಾಗಿ ಖುಷಿ ಕೊಟ್ಟಿತು. ‘ನಿಮ್ಮ ಲೇಖನವನ್ನು ಪ್ರಕಟಿಸಲಾಗುವುದು’ ಎಂಬ ಸಂದೇಶ ಪಡೆದ ನಂತರವೂ ಅವು ಪ್ರಕಟವಾಗದೆಯೂ ಇರಬ­ಹುದು. ಇಂತಹುದಕ್ಕೆಲ್ಲ ಲೇಖಕರು ಮಾನಸಿಕ­ವಾಗಿ ಸಿದ್ಧರಾಗಿ ಇರಬೇಕಾಗುತ್ತದೆ. ಜೊತೆಗೆ ಬರೆಯುವ-, ಓದುವ ಕಾಯಕದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ಲೇಖನ ಪ್ರಕಟ ಆಗುವುದೊಂದೇ ಅಂತಿಮ ಗುರಿ ಆಗಬಾರದು. ಅದು ಓದುಗನನ್ನೂ ಯಶಸ್ವಿಯಾಗಿ ತಟ್ಟಬೇಕು. ಆತನಲ್ಲಿ ಸಂಚಲನವನ್ನು ಉಂಟು ಮಾಡಬೇಕು. ಲೇಖಕ– ಓದುಗರ ಮಧ್ಯೆ ಒಂದು ಬಗೆಯ ಅವಿನಾಭಾವ ಸಂಬಂಧ ಬೆಳೆಯ­ಬೇಕು. ನಿಮ್ಮ ಲೇಖನಗಳಿಗಾಗಿ ಓದುಗ ಕಾತರಿಸಬೇಕು. ಹೀಗಾದಾ­ಗಲೇ ಅದು ನಿಜವಾದ ಲೇಖಕನ ಯಶಸ್ಸು ಎನಿಸಿಕೊಳ್ಳುತ್ತದೆ. ಲೇಖಕರ ಪ್ರತಿ ಲೇಖನವೂ ತಪ್ಪಿಲ್ಲದಂತೆ ಶುದ್ಧವಾಗಿರಬೇಕು. ಅವರು ಕಳುಹಿಸುವ ಪತ್ರಿಕೆ ಹಾಗೂ ಅಂಕಣಕ್ಕೆ ಅದು ಸೂಕ್ತವಾಗಿರಬೇಕು. ಅತಿ ಚಿಕ್ಕದಾಗಲಿ, ಅತಿ ದೊಡ್ಡದಾಗಲಿ ಆಗಿರಬಾರದು. ಅವಶ್ಯಕ ಮಾಹಿತಿಗಳ ಕೊರತೆ ಇರಬಾರದು. ಹಾಗೆಯೇ ಅನವಶ್ಯಕ ಮಾಹಿತಿಗಳು ಸೇರಿರಲೂ ಬಾರದು. ಲೇಖನಕ್ಕೆ ಪೂರಕವಾದ ಅಂಕಿ-ಅಂಶಗಳು, ಕೋಷ್ಟಕಗಳು, ಚಿತ್ರಗಳು, ನಕ್ಷೆಗಳು ಅದರೊಂದಿಗೆ ಇರುವುದು ಅತ್ಯಂತ ಅವಶ್ಯಕ. ನಿಮ್ಮ ಲೇಖನ ಯಾವ ಕಾರಣಕ್ಕೂ, ಯಾವ ಸಂಪಾದಕರೂ ತಿರಸ್ಕರಿಸಲು ಆಗದು ಎಂಬ ಭಾವನೆ ನಿಮ್ಮಲ್ಲಿ ಮೂಡಬೇಕು. ಅದು ಅಷ್ಟು ಪರಿಪೂರ್ಣ ಆಗಿರಬೇಕು. ಸಂಪಾದಕರ ಮೆಚ್ಚುಗೆ ಪಡೆದ ಲೇಖನ ನಿಶ್ಚಿತವಾಗಿಯೂ ಪ್ರಕಟವಾಗುತ್ತದೆ. ನಿಮ್ಮ ಲೇಖನ ಹಾಗೂ ಸಂಪಾದಕರ ಆಯ್ಕೆ ಸೂಕ್ತವೋ ಅಲ್ಲವೋ ಎಂಬುದನ್ನು ಅಂತಿಮವಾಗಿ ನಿರ್ಣಯಿಸುವವರು ಓದುಗರು ಎಂಬುದು ನಿಮಗೆ ತಿಳಿದಿರಲಿ. ಸಾಮಾನ್ಯವಾಗಿ ಓದುಗರು ಮೆಚ್ಚುವ ಲೇಖನಗಳನ್ನೇ ಸಂಪಾದಕರು ಆಯ್ದುಕೊಳ್ಳುತ್ತಾರೆ. ಇಷ್ಟು ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಬರೆಯಲು ಆರಂಭಿಸಿದರೆ ನೀವು ಒಳ್ಳೆಯ ಲೇಖಕರಾಗಿ ಹೊರಹೊಮ್ಮುವಿರಿ. ಲೇಖನ ಹೀಗಿರಲಿ ನಿಮ್ಮ ಅಕ್ಷರಗಳು ಸುಂದರವಾಗಿರಲಿ. ಸುಲಭವಾಗಿ ಓದುವಂತೆ ಸ್ಪಷ್ಟವಾಗಿರಲಿ. ಬರಹ ಅಷ್ಟು ಸುಂದರವಾಗಿ ಇಲ್ಲ ಎಂದಾದರೆ ಚಿಂತಿಸುವ ಕಾರಣವಿಲ್ಲ. ನಿಮ್ಮ ಬರಹವನ್ನು ಕಂಪ್ಯೂಟರಿನಲ್ಲಿ ಅಳವಡಿಸಿ ಮುದ್ರಿಸಿಕೊಳ್ಳಿ. ಇಲ್ಲವೇ ಅದನ್ನು ಸಿ.ಡಿ. ಮೂಲಕ ಅಥವಾ ಅಂತರ್ಜಾಲದ ಮೂಲಕ ಪತ್ರಿಕೆಗಳಿಗೆ ಕಳುಹಿಸಬಹುದು. ನಿಮಗೆ ಕಂಪ್ಯೂಟರ್ ಜ್ಞಾನ ಇಲ್ಲವೆಂದಾ­ದರೆ, ನಿಮಗೆ ಸೂಕ್ತ ಸೇವೆ ನೀಡಲು ಅನೇಕ ಕಂಪ್ಯೂಟರ್ ಸೇವಾ ಕೆಂದ್ರಗಳಿವೆ. ಅವುಗಳನ್ನು ನೀವು ಬಳಸಿಕೊಳ್ಳಬಹುದು. ವಿಶ್ವಾಸ ಕಳೆದುಕೊಳ್ಳಬೇಡಿ ಒಂದೇ ಲೇಖನವನ್ನು ಅನೇಕ ಪತ್ರಿಕೆಗಳಿಗೆ ಕಳುಹಿಸುವ ತಪ್ಪು ಮಾಡಬೇಡಿ. ಹಾಗೆ ಮಾಡಿದರೆ ನೀವು ಆ ಪತ್ರಿಕೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತೀರಿ. ನಿಶ್ಚಿತ ಪತ್ರಿಕೆಯ ನಿಶ್ಚಿತ ಅಂಕಣಕ್ಕೆಂದೇ ಲೇಖನವನ್ನು ಸಿದ್ಧಪಡಿಸಿ. ಅದಕ್ಕೆ ಹೊಂದುವಂತೆ ಎಲ್ಲ ಪರಿಕರಗಳನ್ನು ಜೋಡಿಸಿಕೊಳ್ಳಿ. ಅಚ್ಚುಕಟ್ಟಾಗಿ ಲೇಖನ ತಯಾರಿಸಿ. ಲೇಖನದ ಜೊತೆಗೆ, ಲೇಖನದ ಬಗ್ಗೆ ಸಂಪಾದಕರಿಗೆ ಅಥವಾ ಆಯಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಸಂಕ್ಷಿಪ್ತ ಪತ್ರ ಬರೆಯಿರಿ. ಅದರಲ್ಲಿ, ಲೇಖನದ ಗಾತ್ರ (ಶಬ್ದ­ಗಳ ಸಂಖ್ಯೆ), ಅದು ಹೊಂದಿರುವ ಮಾಹಿತಿ -ಕೋಷ್ಟಕ, ಚಿತ್ರ­ಗಳ ವಿವರ ಇರಲಿ. ಯಾವಾಗ, ಎಲ್ಲಿ, ಹೇಗೆ ಪ್ರಕಟವಾ­ದರೆ ಸೂಕ್ತ ಎಂಬುದರ ಬಗೆಗೂ ಒಂದು ವಾಕ್ಯ ಇರಲಿ. ಈ ಪತ್ರ ಲೇಖನದ ಪಕ್ಷಿನೋಟವನ್ನು ಪತ್ರಿಕೆಗೆ ನೀಡುವಂತೆ ಇರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.