ಮಕ್ಕಳಿಗೆ ಬೇಕು ಲೈಂಗಿಕ ಶಿಕ್ಷಣ ಪ್ರೌಢಶಾಲಾ ಹಂತದಲ್ಲಿ ಲೈಂಗಿಕ ಜ್ಞಾನವನ್ನು ಆಧರಿಸಿ ಶಿಕ್ಷಣ ನೀಡುವ ಪಠ್ಯಕ್ರಮ ರೂಪುಗೊಳ್ಳುತ್ತಿದೆ ಎನ್ನುವ ಮಾತು ಇತ್ತೀಚೆಗೆ ಕೇಳಿ ಬರುತ್ತಿದೆ. ಬರ್ಟಂಡ್ ರಸಲ್ ಅವರಂಥ ಚಿಂತಕರು, ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಸರಿಯಾದ ಮಾಹಿತಿ ದೊರೆಯದಿದ್ದರೆ ಅಸಂಬದ್ಧವಾದ ಮಾಹಿತಿಯನ್ನೇ ಸರಿಯಾದುದು ಎಂದು ಅವರು ತಿಳಿಯುತ್ತಾರೆ ಎಂದಿದ್ದಾರೆ. ಇದನ್ನು ನೋಡಿದರೆ, ಲೈಂಗಿಕ ಶಿಕ್ಷಣದ ಮಹತ್ವ ಅರಿವಾಗುತ್ತದೆ. ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್, ಲೈಂಗಿಕತೆ ಸಣ್ಣ ಮಗುವಿನಲ್ಲೂ ಸ್ವಾಭಾವಿಕವಾಗಿ ಅಂತರ್ಜನ್ಯ­ವಾಗಿ ಇರುತ್ತದೆ ಎಂದು ಹೇಳುವ ಮೂಲಕ, ಅದನ್ನು ಒಂದು ಸಹಜ ಪ್ರವೃತ್ತಿಯ ನೆಲೆಯಲ್ಲಿ ಗುರುತಿಸಿರುವುದು ಕಂಡು ಬರುತ್ತದೆ. ಇಂಥ ಸಹಜ ಪ್ರವೃತ್ತಿಯ ಈಡೇರಿಕೆ ಪ್ರತಿ ಸಮಾಜದಲ್ಲಿನ ಕಟ್ಟಳೆಗಳನ್ನು ಅವಲಂಬಿಸಿರುತ್ತದೆ. ಆ ದಿಸೆಯಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಲೈಂಗಿಕತೆಯ ಬಗ್ಗೆ ಮಕ್ಕಳು ಮನೆಯಲ್ಲಿ ಏನಾದರೂ ಪ್ರಶ್ನೆಗಳನ್ನು ಎತ್ತಿದರೆ ಪಾಲಕರು ಅಂತಹ ಪ್ರಶ್ನೆಗಳನ್ನು ಮರೆಮಾಚಲು ಯತ್ನಿಸುವುದೇ ಹೆಚ್ಚು. ಅದಕ್ಕೆ ಉತ್ತರಿಸುವ ಬದಲಾಗಿ ‘ಅದೆಲ್ಲಾ ಈಗೇಕೆ?’ ಎನ್ನುವ ಮರುಪ್ರಶ್ನೆಯನ್ನು ಮಕ್ಕಳೆದುರು ಇಡುವ ಮೂಲಕ, ಆ ವಿಷಯದಲ್ಲಿ ತಮಗೂ ವೈಜ್ಞಾನಿಕವಾಗಿ ಏನೂ ತಿಳಿದಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ. ಶಾಲೆಯಲ್ಲಿ ಶಿಕ್ಷಕರಿಂದಲೂ ಮಕ್ಕಳ ಅಂತಹ ಕುತೂಹಲದ ಪ್ರಶ್ನೆಗಳಿಗೆ ಉತ್ತರಗಳು ಸಿಗುವುದಿಲ್ಲ. ನಂತರ ಆ ಮಗು ಸಹಪಾಠಿಗಳಿಂದ ತನ್ನ ಕೌತುಕಕ್ಕೆ ಉತ್ತರವನ್ನು ಕಂಡುಕೊಳ್ಳುತ್ತದೆ. ಆದರೆ ಆ ಉತ್ತರ ಅತ್ಯಂತ ಅವೈಜ್ಞಾನಿಕ ಆಗಿರುತ್ತದೆ. ಅಂತಹ ಅಸಂಬದ್ಧ ತಿಳಿವಳಿಕೆ ಅದರ ಬದುಕಿನುದ್ದಕ್ಕೂ ಹಾಗೇ ಉಳಿದುಬಿಡುವ ಸಾಧ್ಯತೆಯೂ ಇರುತ್ತದೆ. ಯಾವ ಹಂತದಲ್ಲಿ ಶಿಕ್ಷಣ? ಕೆಲ ರಾಷ್ಟ್ರಗಳಲ್ಲಿ ಪ್ರಾಥಮಿಕ ಹಂತದಲ್ಲೇ ಲೈಂಗಿಕ ಶಿಕ್ಷಣವನ್ನು ನೀಡಲಾಗುತ್ತದೆ. ಅದು ತುಸು ಬೇಗ ಎನಿಸುತ್ತದೆ. ಹಾಗೆಯೇ ಕಾಲೇಜು ಹಂತದಲ್ಲಿ ಇಂತಹ ಪಠ್ಯಕ್ರಮವನ್ನು ಅಳವಡಿಸುವುದು ಸ್ವಲ್ಪ ತಡ ಆದಂತೆ ಆಗಬಹುದು. ಇವೆರಡರ ಮಧ್ಯೆ ಇರುವ ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಇದನ್ನು ಪರಿಚಯಿಸಬೇಕು. ಏಕೆಂದರೆ, ಸಾಮಾನ್ಯವಾಗಿ ಇಲ್ಲೇ ಮಕ್ಕಳ ಶಾರೀರಿಕ ರಚನೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳ ತೊಡಗುವುದು. ತನ್ನದೇ ಶರೀರದಲ್ಲಿ ಉಂಟಾಗುವ ಬದಲಾವಣೆಗೆ ಕಾರಣಗಳು, ಹಿನ್ನೆಲೆಗಳು ಆ ಮಗುವಿಗೆ ತಿಳಿದಿರುವುದಿಲ್ಲ. ತಿಳಿದುಕೊಳ್ಳುವ ಯತ್ನದಲ್ಲಿ ತಪ್ಪು ಮಾಹಿತಿಗಳೇ ಹೇರಳವಾಗಿ ದಕ್ಕಿರುತ್ತವೆ. ಆ ಕಾರಣದಿಂದ ಲೈಂಗಿಕ ವಿಷಯಗಳ ಬಗೆಗಿನ ಅಜ್ಞಾನದ ಒಂದು ಭಾಗ ಆ ಮಗುವಿನ ಮೆದುಳಿನಲ್ಲಿ ಹಾಗೇ ಉಳಿದು ಬಿಡುತ್ತದೆ. ಲೈಂಗಿಕ ಶಿಕ್ಷಣ ಎಂದರೇನು? ಶರೀರ ರಚನೆ, ಸಂಭೋಗ ಕ್ರಿಯೆ, ಗರ್ಭಧಾರಣೆ, ಸುರಕ್ಷಿತ ಲೈಂಗಿಕ ಕ್ರಿಯೆ, ಜನನ ನಿಯಂತ್ರಣ ವಿಧಾನಗಳು, ಸಾಂಕ್ರಾಮಿಕ ಲೈಂಗಿಕ ರೋಗಗಳು ಮುಂತಾದವುಗಳ ಬಗ್ಗೆ ಅವಶ್ಯವಿರುವ ಕ್ರಮದಲ್ಲಿ ಶಿಕ್ಷಣ ನೀಡುವುದನ್ನು ಲೈಂಗಿಕ ಶಿಕ್ಷಣ ಎಂದು ಕರೆಯಲಾಗುತ್ತದೆ. ಇಂದು ಇಡೀ ವಿಶ್ವದಲ್ಲಿ ಲೈಂಗಿಕ ಶಿಕ್ಷಣ ಬೇಕೋ ಬೇಡವೋ ಎನ್ನುವ ವಾಗ್ವಾದಗಳ ಮಧ್ಯೆಯೇ ಅದರ ಕೊರತೆ ಎಂಥ ಅನಾಹುತಗಳನ್ನು ಸೃಷ್ಟಿಸಬಲ್ಲದು ಎನ್ನುವುದು ಸಹ ಮನವರಿಕೆಯಾಗುತ್ತಿದೆ. ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾಧ್ಯಮಿಕ ಶಾಲಾ ಹಂತದಲ್ಲೇ ಹುಡುಗಿಯರು ಗರ್ಭಿಣಿಯರಾಗುತ್ತಿರುವ ವರದಿಗಳು ಬರುತ್ತಿವೆ. ಭಾರತದಂತಹ ಸಾಂಪ್ರದಾಯಿಕ ಹಿನ್ನೆಲೆ ಇರುವ ರಾಷ್ಟಗಳಲ್ಲಿ ಇಂತಹ ವಿಷಯವನ್ನಾಧರಿಸಿ ಚರ್ಚೆಗಳು, ವಿಚಾರ ಸಂಕಿರಣಗಳು ನಡೆಯುವುದು ತೀರಾ ಕಡಿಮೆ. ಇನ್ನು ಅಳವಡಿಕೆಯ ಮಾತಂತೂ ದೂರವೇ ಉಳಿಯಿತು. ಯಾಕೆ ಹಿಂದೇಟು? ಎಲ್ಲ ರಾಷ್ಟ್ರಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಒಂದೇ ತೆರನಾಗಿಲ್ಲ. ಭಾರತದಂತಹ ರಾಷ್ಟ್ರಗಳು ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣದ ಅಳವಡಿಕೆಯ ವಿಷಯವಾಗಿ ಇನ್ನೂ ಹಿಂದೇಟು ಹಾಕುತ್ತಿವೆ. ಅದಕ್ಕೆ ಈ ಕೆಳಗಿನ ಕೆಲವು ಪ್ರಮುಖ ಕಾರಣಗಳನ್ನು ನಾವು ಗುರುತಿಸಬಹುದು. ಈ ಬಗೆಯ ಶಿಕ್ಷಣದಿಂದ ತಮ್ಮ ಮಕ್ಕಳು ಇನ್ನಷ್ಟು ಹೆಚ್ಚೆಚ್ಚು ಲೈಂಗಿಕ ವಿಷಯಗಳಲ್ಲಿ ಆಸಕ್ತರಾಗುವ ಅಪಾಯ ಇದೆ ಎನ್ನುವುದು ಪಾಲಕರ ಹೆದರಿಕೆ. ಇದರಿಂದ ಕೆಲವು ರಾಜಕೀಯ ಅಡ್ಡ ಪರಿಣಾಮಗಳು, ಕಿರಿಕಿರಿಗಳು ಉಂಟಾಗಬಹುದು ಎನ್ನುವ ಆತಂಕ ಶಾಲಾ ಆಡಳಿತ ಮಂಡಳಿಗಳದು. ಶಾಲಾ ಕ್ಯಾಂಪಸ್‌ಗಳಲ್ಲಿ ಅಶ್ಲೀಲ ಎನ್ನಬಹುದಾದ ಸಂಗತಿಗಳು ಘಟಿಸುವ ಅಪಾಯವನ್ನು ನೆನೆದು, ಅದರ ಅಳವಡಿಕೆಗೆ ಶಾಲಾ ಸಮಿತಿಗಳು ಹಿಂದೇಟು ಹಾಕುತ್ತವೆ. ಇಂತಹ ಶಿಕ್ಷಣವನ್ನು ಯಾರು ನೀಡಬೇಕು? ಅವರು ಮುಕ್ತವಾಗಿ ಅದನ್ನು ಕಲಿಸಬಲ್ಲರೇ ಎನ್ನುವುದೂ ಒಂದು ತೊಡಕು. ಪರಿಣಾಮಕಾರಿ ಆಗಬಲ್ಲದೇ? ಲೈಂಗಿಕತೆಯ ವಿಷಯವಾಗಿ ಹದಿಹರೆಯದ ಹುಡುಗ- ಹುಡುಗಿಯರಲ್ಲಿ ಅನೇಕ ಬಗೆಯ ಮನೋತುಮುಲಗಳು ಇರುತ್ತವೆ. ಒಬ್ಬರನ್ನು ಒಬ್ಬರು ಕೆಕ್ಕರಿಸಿ ತಿನ್ನುವಂತೆ ನೋಡುವ ನೋಟ, ಅಧ್ಯಯನದಲ್ಲಿ ಏಕಾಗ್ರತೆ ಹಾಳಾಗುವುದು, ಹಿಂದಿಂದೆ ಅಲೆಯುವುದು, ಅವೈಜ್ಞಾನಿಕವಾಗಿ ಬರೆದ ಅಶ್ಲೀಲ ಸಾಹಿತ್ಯ ಓದಿ ಹಾಳಾಗುವುದು... ಇಂಥ ಇನ್ನೂ ಅನೇಕ ಸಂಗತಿಗಳಿಗೆ ಸೂಕ್ತ ತಿಳಿವಳಿಕೆಯಿಂದ ಕಡಿವಾಣ ಬೀಳುತ್ತದೆ. ಅಮೆರಿಕದಂಥ ರಾಷ್ಟ್ರಗಳಲ್ಲಿ ಆಗಾಗ್ಗೆ ಲೈಂಗಿಕ ತಿಳಿವಳಿಕಾ ಶಿಬಿರಗಳನ್ನು ಸಂಘಟಿಸಿ, ಅದರಿಂದ ಉಂಟಾದ ಪ್ರಯೋಜನಗಳನ್ನು ಅಧ್ಯಯನ ಮಾಡಲಾಗಿದೆ. ಇದರಿಂದ ಲೈಂಗಿಕ ಸಂಯಮ, ಜನನ ನಿಯಂತ್ರಣ ವಿಧಾನಗಳ ಬಳಕೆ, ಏಡ್ಸ್ ರೋಗದಂತಹ ವಿಷಯಗಳ ಬಗ್ಗೆ ಶಿಬಿರಗಳಲ್ಲಿ ಪಾಲ್ಗೊಂಡ ಯುವಜನರಿಗೆ ಮನದಟ್ಟಾಗಿತ್ತು. ಶಿಕ್ಷಕರು ಹಾಗೂ ಲೈಂಗಿಕ ಶಿಕ್ಷಣ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ತಿಳಿವಳಿಕೆ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದುದು. ಲೈಂಗಿಕ ವಿಷಯವಾಗಿ ಪಾಲಕರಿಂದ ಸಿಕ್ಕ ಮೇಲುಮೇಲಿನ ವಿವರಣೆಗಳಿಂದ ಸಮಾಧಾನವಾಗದ ಮಕ್ಕಳು ಶಿಕ್ಷಕರನ್ನು ಆ ವಿಷಯವಾಗಿ ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ಆಗ ಶಿಕ್ಷಕರು ಪ್ರಾಂಜಲವಾಗಿ, ಸಮರ್ಪಕವಾಗಿ ಉತ್ತರಿಸಬೇಕಾಗುತ್ತದೆ. ವೀರ್ಯ ಸ್ಖಲನ, ಮುಷ್ಟಿ ಮೈಥುನದಂತಹ ಅನೇಕ ವಿಷಯಗಳ ಬಗೆಗೆ ಸಾಮಾನ್ಯವಾಗಿ ಮಕ್ಕಳಲ್ಲಿ ತಪ್ಪು ಗ್ರಹಿಕೆಗಳು ಇರುತ್ತವೆ. ಅವುಗಳನ್ನು ಸೂಕ್ಷ್ಮವಾಗಿ ತಿಳಿಸಿಕೊಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಇಂತಹ ವಿಷಯಗಳನ್ನು ಮಕ್ಕಳೊಂದಿಗೆ ಚರ್ಚಿಸಲು ಹದಿಹರೆಯ ಅತ್ಯಂತ ಸೂಕ್ತ ಕಾಲ. ಸಾಧ್ಯವಾದರೆ ಆರಂಭಿಕ ಹಂತದಲ್ಲಿ ಹುಡುಗರಿಗೆ ಪುರುಷ ಶಿಕ್ಷಕರು, ಹುಡುಗಿಯರಿಗೆ ಶಿಕ್ಷಕಿಯರಿಂದ ಈ ವಿಷಯವಾಗಿ ತಿಳಿವಳಿಕೆ ನೀಡಬೇಕು. ಲೈಂಗಿಕತೆಯ ಬಗೆಗಿನ ವಸ್ತುನಿಷ್ಠ ದೃಷ್ಟಿಕೋನವನ್ನು ಅವರಲ್ಲಿ ಬೆಳೆಸಲು ನೆರವಾಗಬೇಕು. ಲೈಂಗಿಕತೆ ಮತ್ತು ಮಾದಕ ದ್ರವ್ಯಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡಲು ಹಿಂಜರಿಯ ಬಾರದು. ಇಂತಹ ವಿಷಯಗಳ ಬಗ್ಗೆ ಮಾತನಾಡುವಾಗ ಬೋಧಿಸುವವರು ಸಾಕಷ್ಟು ಮನೋನಿಗ್ರಹವನ್ನು ಹೊಂದಿರಬೇಕು. ತಪ್ಪಿಯೂ ಅಸಂಬದ್ಧವಾಗಿ, ವಿಚಲಿತರಾಗಿ ಬೋಧಿಸಕೂಡದು. ಮಕ್ಕಳು ತಮ್ಮ ಪಾಲಕರಿಗಿಂತಲೂ ಶಿಕ್ಷಕರನ್ನು ಅತಿಯಾಗಿ ನಂಬುತ್ತಾರೆ. ಹಾಗಾಗಿ ಅವರು ನೀಡುವ ಮಾಹಿತಿ ವಸ್ತುನಿಷ್ಠ ಆಗಿರಬೇಕು. ಲೈಂಗಿಕ ಶಿಕ್ಷಣವನ್ನು ಮಾಧ್ಯಮಿಕ ಶಾಲಾ ಹಂತದಲ್ಲಿ ಅಳವಡಿಸಬೇಕಾದ ಅಗತ್ಯ ಹಿಂದೆಂದಿ­ಗಿಂ­ತಲೂ ಈಗ ಹೆಚ್ಚಾಗಿದೆ. ಆದರೆ ಅಮೆರಿಕದಂತಹ ರಾಷ್ಟ್ರ­­ಗಳು ಹಾಗೂ ಭಾರತದ ಸಾಮಾಜಿಕ ಪರಿಸರದ ಮಧ್ಯೆ ಅನೇಕ ವ್ಯತ್ಯಾಸಗಳಿವೆ. ಹೀಗಾಗಿ ಯಾವುದೋ ರಾಷ್ಟ್ರದ ಪಠ್ಯಕ್ರಮ ಆಧರಿಸಿ ನಮ್ಮ ಪಠ್ಯ­ಕ್ರಮ ನಿರ್ಧಾರ ಆಗಬಾರದು. ನಮ್ಮ ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಗೆ ತಕ್ಕುದಾದ ರೀತಿಯಲ್ಲೇ ಇಲ್ಲಿನ ಪಠ್ಯಕ್ರಮ ರೂಪುಗೊಳ್ಳಬೇಕು. ರಾಜ್ಯ, ರಾಷ್ಟ್ರ ಮತ್ತು ಸಮಾಜಕ್ಕೆ ಹಿತಕರ ಎನ್ನುವಷ್ಟನ್ನು ಮಾತ್ರ ಅಳವಡಿಸಬೇಕು. ಮಕ್ಕಳಿಗೆ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣ ಬೇಡವೇ ಬೇಡ ಎನ್ನುವ ವಿತಂಡವಾದಕ್ಕಿಂತಲೂ ಇದು ಒಳ್ಳೆಯದು. ಬೇಡ ತಪ್ಪು ಗ್ರಹಿಕೆ ಕೆಲ ಕರ್ಮಠರು ಲೈಂಗಿಕ ಶಿಕ್ಷಣ ಎನ್ನುವ ಪದ ಕಿವಿಗೆ ಬೀಳುವುದೇ ತಡ ಅದರ ಪೂರ್ವಾಪರಗಳ ಪರಿವೆಯೇ ಇಲ್ಲದೆ ‘ಅದು ಬೇಡವೇ ಬೇಡ’ ಎಂದು ಹಟ ಹಿಡಿಯುತ್ತಾರೆ. ಇಂದಿಗೂ ನಮ್ಮಲ್ಲಿ ಲೈಂಗಿಕ ಶಿಕ್ಷಣ ಅಳವಡಿಕೆ ಆಗದಿರಲು ಈ ಬಗೆಯ ಪೂರ್ವಗ್ರಹ ಪೀಡಿತ ಮನೋಭಾವವೇ ಕಾರಣ. ಇವರು ಲೈಂಗಿಕ ಶಿಕ್ಷಣವನ್ನು ವಿರೋಧಿಸುವುದರ ಹಿಂದಿನ ಕೆಲ ಕಾರಣಗಳನ್ನು ಹೀಗೆ ನೀಡುತ್ತಾರೆ: ಮತ್ತಷ್ಟು ಲೈಂಗಿಕ ಅವಘಡಗಳು ಹೆಚ್ಚಾಗುತ್ತವೆ. ಎಲ್ಲ ಬಗೆಯ ತಿಳಿವಳಿಕೆಯನ್ನೂ ನೀಡಿದರೆ ಮಕ್ಕಳು ಆ ವಿಷಯದಲ್ಲಿ ಇನ್ನಷ್ಟು ಸ್ವೇಚ್ಛೆಯಿಂದ ವರ್ತಿಸುತ್ತಾರೆ. ಇಂತಹ ಶಿಕ್ಷಣ ಪರಿಣಾಮಕಾರಿ ಆಗಲಾರದು. ಹದಿಹರೆಯದವರಲ್ಲಿ ಹೆರಿಗೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಮೌಲ್ಯಗಳು ಕುಸಿಯುತ್ತವೆ. ಮುಕ್ತ ಲೈಂಗಿಕ ವಾತಾವರಣ ಆರಂಭವಾಗಿ, ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಹಿಂಜರಿಯುವ ಶಾಲೆಗಳು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ 12– -19 ವರ್ಷ ವಯೋಮಾನದ ಸುಮಾರು ಶೇ 34ರಷ್ಟು ಮಕ್ಕಳು ಎಚ್ಐವಿ ಸೋಂಕು ಪೀಡಿತರು. ಇದಕ್ಕೆ ಕಾರಣ ಲೈಂಗಿಕ ಶಿಕ್ಷಣದ ಕೊರತೆ ಎಂಬುದನ್ನು ವರದಿ ಎತ್ತಿ ಹಿಡಿದಿದೆ. 2003ರಲ್ಲಿ ದೆಹಲಿಯ ವಿದ್ಯಾಸಾಗರ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ, ಅನೇಕ ಶಾಲೆಗಳು ಈ ವಿಷಯವನ್ನು ಬಾಗಿಲು ತೆರೆದು ಸ್ವಾಗತ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂಬುದು ಬೆಳಕಿಗೆ ಬಂದಿತ್ತು. ನಂತರದ ವರ್ಷಗಳಲ್ಲೂ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎಂದೇನೂ ಹೇಳಲಾಗದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.