ಕಲಾಂ: ಗುರಿಗೊಂದು ಸಲಾಂ ಅಬ್ದುಲ್ ಕಲಾಂ ಅವರ ದೃಷ್ಟಿಯಲ್ಲಿ, ದೇಶದ ಯುವಜನರು ಮತ್ತು ವಿದ್ಯಾರ್ಥಿಗಳ ಕನಸುಗಳು, ಗುರಿಗಳು ಏನಾಗಿರಬೇಕು ಎಂಬುದು ನಿಮಗೆ ಗೊತ್ತೇ? ಡಾ. ಎಪಿಜೆ ಅಬ್ದುಲ್ ಕಲಾಂ... ದೇಶ ಕಂಡ ಖ್ಯಾತ ವಿಜ್ಞಾನಿ, ಭಾರತ ರತ್ನ, ಮಹಾನ್ ಮಾನವತಾವಾದಿ. ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದವರು. ಆದರೆ ಅವರ ಕಾರ್ಯಕ್ಷೇತ್ರ ಕೇವಲ ರಾಷ್ಟ್ರಪತಿ ಭವನಕ್ಕೆ ಸೀಮಿತವಾಗಿರದೆ ದೇಶವ್ಯಾಪಿ ಆವರಿಸಿಕೊಂಡಿತ್ತು. ಅವರಲ್ಲಿ ಭಾರತದ ಬಗ್ಗೆ ಭವ್ಯ ಕನಸಿದೆ, ದಿವ್ಯ ಭಕ್ತಿಯಿದೆ. ನಿರಾಶೆ ಎನ್ನುವುದು ಅವರ ಜಾಯಮಾನದಲ್ಲೇ ಇಲ್ಲ. ಮುಂದೊಂದು ದಿನ ವಿಶ್ವದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರ ಆಗೇ ಆಗುತ್ತದೆ ಎಂಬ ಮಹಾನ್ ಆಶಾವಾದ ಅವರಲ್ಲಿದೆ. ಹೀಗಾಗಿ ಅವರ ಕನಸು ನನಸಾಗಬೇಕಾದರೆ ವಿದ್ಯಾರ್ಥಿಗಳು, ಯುವಜನರು ಜಾಗೃತರಾಗಬೇಕು. ಅವರಲ್ಲಿರುವ ಅಂತಃಶಕ್ತಿ ವೃದ್ಧಿಯಾಗಬೇಕು. ಆಗ ಮಾತ್ರ ಭಾರತ ಸಮೃದ್ಧ- ಶಕ್ತಿಶಾಲಿ ರಾಷ್ಟ್ರವಾಗ ಬಲ್ಲದು. ವಿದ್ಯಾರ್ಥಿಗಳ, ಯುವಕರ, ಕನಸು ಮತ್ತು ಗುರಿಗಳು ಏನಾಗಿರಬೇಕು ಎಂಬುದಕ್ಕೆ ಕಲಾಂ ಹೀಗೆ ಪ್ರತಿಕ್ರಿಯಿಸುತ್ತಾರೆ: ಶಿಕ್ಷಣದ ಗುರಿಯನ್ನು ಶ್ರದ್ಧಾಪೂರ್ವಕವಾಗಿ ಸಾಧಿಸಿ ಹಾಗೂ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಪಡೆಯಲು ಶ್ರಮಿಸಿ. ಉತ್ತಮ ಶಿಕ್ಷಣ ಪಡೆಯುವುದರೊಂದಿಗೆ ಕನಿಷ್ಠ 10 ಮಂದಿಗೆ ಓದಲು ಬರೆಯಲು ಕಲಿಸಿ. ಅವರನ್ನು ಸುಶಿಕ್ಷಿತರನ್ನಾಗಿಸಿ. ಪರಿಸರದಲ್ಲಿ ಕನಿಷ್ಠ ಹತ್ತು ಗಿಡಗಳನ್ನು ನೆಟ್ಟು, ಅವುಗಳನ್ನು ಬೆಳೆಸಲು ಕಾಳಜಿ ವಹಿಸಿ. ಜಲ ಸಂಪತ್ತಿನ ಸಂರಕ್ಷಣೆಗೆ ವಿಶೇಷ ಗಮನ ಹರಿಸಿ. ಸಮಾಜದ ಕನಿಷ್ಠ ಐದು ಮಂದಿಯನ್ನು ದುಶ್ಚಟದಿಂದ ಮುಕ್ತರನ್ನಾಗಿಸಿ. ದೀನ-ದಲಿತರ ದುಃಖ ನಿವಾರಣೆಗಾಗಿ ನಿರಂತರವಾಗಿ ಶ್ರಮಿಸಿ. ಜಾತಿ, ಮತ, ಪಂಥ, ಭಾಷೆಗಳ ಹೆಸರಿನಲ್ಲಿ ಭೇದಭಾವವನ್ನು ಎಂದಿಗೂ ಪುರಸ್ಕರಿಸದೆ ಸಾಮರಸ್ಯದಿಂದ ಬಾಳಿ. ಸ್ವತಃ ಪ್ರಾಮಾಣಿಕರಾಗಿ, ಭ್ರಷ್ಟಾಚಾರ ಮುಕ್ತವಾದ ಸಮಾಜವನ್ನು ರೂಪಿಸಲು ಶ್ರಮಿಸಿ. ಪ್ರಜ್ಞಾವಂತ ನಾಗರಿಕರಾಗಲು ಪ್ರಯತ್ನಿಸಿ ಮತ್ತು ನಿಮ್ಮ ಕುಟುಂಬದವರೆಲ್ಲರನ್ನೂ ಈ ನಿಟ್ಟಿನಲ್ಲಿ ಪ್ರಚೋದಿಸಿ. ಮಾನಸಿಕವಾಗಿ ಹಾಗೂ ಅಂಗವೈಕಲ್ಯದಿಂದ ನೊಂದ ಅಸಹಾಯಕರ ಮಿತ್ರರಾಗಿ. ಅವರು ಸಂತೋಷದಿಂದ ಬಾಳಿ ಬದುಕಲು ನೆರವಾಗಿ. ದೇಶದ ಹಿರಿಮೆ ಗರಿಮೆಗೆ ಸಂಭ್ರಮಿಸುತ್ತಾ, ಅದರ ಅಭಿವೃದ್ಧಿಗಾಗಿ ಸದಾ ನಿಮ್ಮ ಪಾಲಿನ ಅಳಿಲು ಸೇವೆ ಸಲ್ಲಿಸಿ ಹೆಮ್ಮೆ ಪಡಿ. ಒಳ್ಳೆಯ ಕನಸುಗಳನ್ನು ಕಾಣಿ. ಕನಸುಗಳಿಲ್ಲದ ಬದುಕು ಅಪರಾಧಕ್ಕೆ ಸಮಾನ. ಅದಕ್ಕಾಗಿ ಮಹಾನ್ ಕನಸುಗಾರರಾಗಿ, ಗುರಿ ಮುಟ್ಟುವ ಪ್ರಯತ್ನ ಮಾಡಿ. ಇದು ಕಲಾಂ ಸರ್ ಯುವ ಜನತೆಗೆ, ವಿದ್ಯಾರ್ಥಿಗಳಿಗೆ ಹೇಳುವ ಮಾತು. ನಿಜಕ್ಕೂ ಈ ಮಾತುಗಳಲ್ಲಿ ಎಷ್ಟೊಂದು ಘನ ಅರ್ಥ ಅಡಗಿದೆ. ಒಳ್ಳೆಯವರಾಗಲು, ದೇಶ ಸೇವೆ ಮಾಡಲು ಈ ಮೇಲಿನ ಅಂಶಗಳನ್ನು ನಮ್ಮ ಯುವಜನ ಅನುಸರಿಸಿದರೆ ನಿಜಕ್ಕೂ ಭಾರತ ಸಮೃದ್ಧ, ಶಕ್ತಿಶಾಲಿ ರಾಷ್ಟ್ರ ಆಗುವುದರಲ್ಲಿ ಸಂದೇಹವೇ ಇಲ್ಲ. 2020ರ ವೇಳೆಗೆ ಇಡೀ ಜಗತ್ತೇ ಬೆಕ್ಕಸ ಬೆರಗಾಗಿ ಭಾರತದತ್ತ ನೋಡಬೇಕು ಎನ್ನುವುದು ಕಲಾಂ ಅವರ ಕನಸು. ಆದ್ದರಿಂದ ಅವರ ಕನಸುಗಳನ್ನು ನನಸು ಮಾಡಲು ಸ್ವಲ್ಪವಾದರೂ ಪ್ರಯತ್ನಿಸೋಣ. ಹಾಗೆಯೇ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ಈ ವಿಚಾರಗಳನ್ನೊಮ್ಮೆ ಅರ್ಥ ಮಾಡಿಕೊಳ್ಳಲಿ. ಏಕೆಂದರೆ ವ್ಯಕ್ತಿ ಹಿತಕ್ಕಿಂತ ದೇಶದ ಹಿತ ದೊಡ್ಡದು. ಅಲ್ಲವೇ...? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.