ಮೊಬೈಲ್‌ ಫೋನಿನಲ್ಲೇ ಪೂರ್ವ ಸಿದ್ಧತಾ ಪರೀಕ್ಷೆ ! ಇದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಸಮಯ. ವೃತ್ತಿಪರ ಕೋರ್ಸು­ಗಳಿಗೆ ಸೇರುವ ಬಯಕೆ ಹೊಂದಿರುವ ವಿದ್ಯಾರ್ಥಿಗಳು ಸಿಇಟಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದಿಂದಲೇ ರೂಪಿಸ­ಲಾಗಿರುವ ಮೊಬೈಲ್‌ ಅಪ್ಲಿಕೇಷನ್‌ (ಆ್ಯಪ್‌) ಒಂದಿದೆ. ‘ಪ್ರಿಪ್‌ ಮೀಟರ್‌ ಟೆಸ್ಟ್‌’ ( ) ಎಂಬ ಈ ಮೊಬೈಲ್‌ ‘ಆ್ಯಪ್‌’ ಅನ್ನು ಸಿಇಟಿ ಮಾತ್ರ ಅಲ್ಲದೇ ಇತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಬಳಸಬಹುದು. ಬೆಂಗಳೂರು ಮೂಲದ ‘ಐಪೊಮೊ ಕಮ್ಯೂನಿಕೇಷನ್ಸ್’ ಈ ಆ್ಯಪ್‌ನ ರೂವಾರಿ. ಆಂಡ್ರಾಯ್ಡ್‌ ಕಾರ್ಯಾ­ಚರಣೆ ವ್ಯವಸ್ಥೆ ಹೊಂದಿದ ಸ್ವಾರ್ಟ್‌ ಫೋನ್‌ ಮತ್ತು ಜಿಪಿಆರ್‌ಎಸ್‌ ಸಂಪರ್ಕ ಸಾಧ್ಯವಿರುವ ಸಿಂಬಿಯಾನ್‌ ಫೋನ್‌­ಗಳಲ್ಲಿ ಈ ಆ್ಯಪ್‌ ಲಭ್ಯವಿದೆ. (ಸಿಂಬಿಯಾನ್‌ ಫೋನ್‌ಗಳಲ್ಲಿ ಈ ಆ್ಯಪ್‌ ಅನುಸ್ಥಾಪಿಸ­ಬೇಕಾದರೆ ನಿರ್ದಿಷ್ಟ ವೆಬ್‌ ಲಿಂಕ್‌ಗೆ ಭೇಟಿ ನೀಡಿ ಅಪ್ಲಿಕೇಷನ್‌ ಅನ್ನು ಡೌನ್‌ಲೋಡ್‌ ಮಾಡಬೇಕಾಗುತ್ತದೆ). ‘ಇದು ಕೇವಲ ‘ಆ್ಯಪ್‌’ ಅಲ್ಲ. ಅಧ್ಯಯನ­ಕ್ಕೊಂದು ವೇದಿಕೆ ಎಂದು ಹೇಳುತ್ತಾರೆ’ ಐಪೊಮೊ ಕಮ್ಯೂನಿ­ಕೇಷನ್‌ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಹರಿ ಪ್ರಕಾಶ್‌ ಶಾನಭಾಗ್‌. ಸದ್ಯ ರಾಜ್ಯದ ಮತ್ತು ಹೊರ ರಾಜ್ಯಗಳ ಐದು ಸಾವಿರ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಒರೆ ಹಚ್ಚಲು ಮೊಬೈಲ್‌ಗಳಲ್ಲಿ ‘ಪ್ರಿಪ್‌ ಮೀಟರ್‌ ಟೆಸ್ಟ್‌’ ಆ್ಯಪ್ ಬಳಸು­ತ್ತಿದ್ದಾರೆ ಎಂದು ಹೇಳುತ್ತಾರೆ ಅವರು. ಕಾರ್ಯನಿರ್ವಹಣೆ ಹೇಗೆ? ಅಪ್ಲಿಕೇಷನ್‌ನಲ್ಲಿ ಪರೀಕ್ಷಾ ವಿಷಯ­ಗಳಿಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳು ಸಿದ್ಧವಿರುತ್ತವೆ. ಸಿಇಟಿ ಪರೀಕ್ಷೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಗಣಿತ ವಿಜ್ಞಾನ, ರಸಾಯನ ವಿಜ್ಞಾನ, ಭೌತ ವಿಜ್ಞಾನ ಮತ್ತು ಜೀವ ವಿಜ್ಞಾನ­ಗಳೆಂಬ ಪ್ರತ್ಯೇಕ ವಿಷಯಗಳಿರುತ್ತವೆ. ಸಿಇಟಿಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿ­­ಯೊಬ್ಬ ನಿರ್ದಿಷ್ಟ ದಿನದಂದು ಭೌತ­ವಿಜ್ಞಾನನ್ನು ಓದಿದ್ದರೆ, ತನ್ನ ಅಭ್ಯಾಸ ಮುಗಿದ ಬಳಿಕ ಆ ದಿನದ ಕೊನೆಗೆ ತಾನು ಕಲಿತದ್ದನ್ನು ಈ ಆ್ಯಪ್‌ ಮೂಲಕ ಪುನರ್‌ ವಿಮರ್ಶೆ ಮಾಡ­ಬಹುದು. ಆ್ಯಪ್‌ನಲ್ಲಿ ಭೌತ ವಿಜ್ಞಾನ ವಿಷಯ­ವನ್ನು ಆಯ್ಕೆ ಮಾಡಿದ ಕೂಡಲೇ, ಸಿಇಟಿಯ ಪ್ರಶ್ನೆ ಪತ್ರಿಕೆಯ ರೀತಿಯಲ್ಲೇ ಮೊಬೈಲ್‌ ಪರದೆಯಲ್ಲಿ ನಾಲ್ಕು ಉತ್ತರಗಳ ಆಯ್ಕೆ ಇರುವ ಪ್ರಶ್ನೆಗಳು ಮೂಡುತ್ತವೆ. ಉತ್ತರ ಆಯ್ಕೆ ಮಾಡಲು ಶುರು ಮಾಡಿ­ದಂತೆಯೇ ಪರದೆಯ ಮೇಲೆ ಟೈಮರ್‌ ಚಾಲೂ ಆಗುತ್ತದೆ. ಪ್ರಶ್ನೆ­ಗಳಿಗೆಲ್ಲಾ ಉತ್ತರಿಸಿದ ಬಳಿಕ ‘ಸಲ್ಲಿಸು’ () ಎಂಬ ಗುಂಡಿ ಒತ್ತಿದರೆ ಆಯಿತು. ಆ ವಿದ್ಯಾರ್ಥಿ ಬರೆದ ಮೊಬೈಲ್‌ ಪೂರ್ವ ಸಿದ್ಧತಾ ಪರೀಕ್ಷೆಯ ಅಂಕಗಳು (ಋಣಾತ್ಮಕ ಅಂಕಗಳೂ ಸೇರಿ), ಸರಿ–ತಪ್ಪು ಉತ್ತರದ ವಿವರಗಳು ಮೊಬೈಲ್‌ ಪರದೆಯಲ್ಲಿ ಮೂಡುತ್ತವೆ. ಭೌತ ವಿಜ್ಞಾನದಂತೆ ಇತರ ವಿಷಯ­ಗಳಲ್ಲೂ ವಿದ್ಯಾರ್ಥಿಗಳು ಈ ಮೊಬೈಲ್‌ ಪರೀಕ್ಷೆ ಬರೆಯಬಹುದು. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಸಾಧನೆಯನ್ನು ಅಂಕ­ಗಳಲ್ಲಿ ಮಾತ್ರವಲ್ಲ, ಬಣ್ಣಗಳಲ್ಲಿ ಅಳೆ­ಯುವ ವ್ಯವಸ್ಥೆಯೂ ಇದರಲ್ಲಿದೆ. ಪರೀಕ್ಷೆ­ಯಲ್ಲಿ ಲಭ್ಯವಾದ ಅಂಕಗಳ ಆಧಾರದಲ್ಲಿ ಮೊಬೈಲ್‌ ಪರದೆಯಲ್ಲಿ ಬಣ್ಣ ಮೂಡುತ್ತದೆ. ಇಲ್ಲಿ ಕೆಂಪು, ಹಳದಿ, ಹಸಿರು ಬಣ್ಣಗಳಿದ್ದು ಒಂದೊಂದು ಬಣ್ಣಕ್ಕೂ ನಿರ್ದಿಷ್ಟ ಅಂಕಗಳನ್ನು ನಿಗದಿ ಪಡಿಸಲಾಗಿದೆ. ಆರಂಭದಲ್ಲಿ ರೂಪಿಸಲಾದ ಅಪ್ಲಿಕೇಷನ್‌ಗೂ ಈಗಿನ ಆ್ಯಪ್‌ಗೂ ತುಂಬಾ ವ್ಯತ್ಯಾಸವಿದೆ. ವಿದ್ಯಾರ್ಥಿಗಳ ಹಾಗೂ ಪೋಷಕರಿಂದ ಬಂದ ಅಭಿಪ್ರಾಯಗಳ ಆಧಾರದಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ಇದಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ತಜ್ಞರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವಿವರಿಸುತ್ತಾರೆ ಶಾನಭಾಗ್‌. ಆರಂಭದಲ್ಲಿ ಮೂರು ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಉಚಿತವಾಗಿ ಬರೆಯ­ಬಹುದು. ನಾಲ್ಕನೇ ಪರೀಕ್ಷೆ ಬರೆಯ­ಬೇಕಾದರೆ 750 ರೂಪಾಯಿ ಶುಲ್ಕ ತೆರಬೇಕಾಗುತ್ತದೆ. ಆದರೆ, ಈ ಶುಲ್ಕ ನೀಡಬೇಕಾದುದು ಒಂದೇ ಬಾರಿ. ನಂತರ ಎಷ್ಟು ಬಾರಿಯಾದರೂ ಪರೀಕ್ಷೆ ಬರೆಯಬಹುದು ಎಂದು ಶಾನಭಾಗ್‌ ಹೇಳುತ್ತಾರೆ. ರಾಜ್ಯದಲ್ಲಿರುವ ಅತ್ಯುತ್ತಮ ಎಂಜಿನಿ­ಯ­ರಿಂಗ್‌ ಹಾಗೂ ವೈದ್ಯಕೀಯ ಕಾಲೇಜು­ಗಳ ಬಗೆಗಿನ ವಿವರಗಳೂ ಈ ಆ್ಯಪ್‌ನಲ್ಲಿ ಲಭ್ಯ. ಐಪೊಮೊ ಕಮ್ಯೂನಿಕೇಷನ್ಸ್‌ ಕುರಿತು ಮೊಬೈಲ್ ಮೂಲಕ ಶಿಕ್ಷಣ ನೀಡುವ ಸಾಧ್ಯತೆಗಳನ್ನು ಪರಿಚಯಿಸುವ ಉದ್ದೇಶ­ದಿಂದ 2009ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ತಂತ್ರಜ್ಞಾನ ಕಂಪೆನಿ ಐಪೊಮೊ (ಇಂಟರ್‌ಆಕ್ಟಿವ್‌ ಪ್ಲಾಟ್‌­ಫಾರ್ಮ್‌ ಆನ್‌ ಮೊಬೈಲ್‌). ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆ ವಿಪ್ರೊದಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ­­ನಿರ್ವಹಿಸಿದ ಅನುಭವ ಹೊಂದಿರುವ ಚಿತ್ರದುರ್ಗದ ಹರಿ ಪ್ರಕಾಶ್‌ ಶಾನಭಾಗ್‌ ಈ ಸಂಸ್ಥೆಯ ಸೂತ್ರಧಾರ. ಮೊಬೈಲ್‌ ಮಾಧ್ಯಮದ ಮೂಲಕ ಶಿಕ್ಷಣ ನೀಡುವ ಬಗ್ಗೆ ಅಪಾರ ಜ್ಞಾನ ಹೊಂದಿರುವ ಶಾನಭಾಗ್‌ ಅವರ ಐಪೊಮೊ ಕಮ್ಯೂನಿಕೇಷನ್‌, ಈಗಾಗಲೇ ಈ ಕ್ಷೇತ್ರದಲ್ಲಿ ಎರಡು ಪೇಟೆಂಟ್‌ಗಳನ್ನು ಹೊಂದಿದೆ. ಮೊಬೈಲ್ ಹಾಜರಾತಿ ದಾಖಲು, (ಮೊಬೈಲ್‌ ಅಟೆಂಟೆನ್ಸ್‌), ಮೊಬೈಲ್‌ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯ ಪರಿ­ಶೀಲನೆ (ಮೊಬೈಲ್‌ ಅಸೆಸ್‌­ಮೆಂಟ್‌), ಮೊಬೈಲ್‌ನಲ್ಲಿ ಅಭಿಪ್ರಾಯ ಸಂಗ್ರಹ (ಮೊಬೈಲ್‌ ಫೀಡ್‌ಬ್ಯಾಕ್‌) ಮಾಡು­ವಂತಹ ಹಲವು ತಂತ್ರಜ್ಞಾನವನ್ನು ಐಪೊಮೊ ಅಭಿವೃದ್ಧಿ ಪಡಿಸಿದೆ. ಐಪೊಮೊ ಅಭಿವೃದ್ಧಿ ಪಡಿಸಿರುವ ವಿವಿಧ ಆ್ಯಪ್‌ಗಳನ್ನು ರಾಜ್ಯದ 45,000 ಕ್ಕೂ ಅಧಿಕ ವಿದ್ಯಾರ್ಥಿಗಳು ಬಳಸುತ್ತಿ­ದ್ದಾರೆ. ಬೆಂಗಳೂರಿನ ನಾಲ್ಕೈದು ಕಾಲೇಜು­ಗಳು ಕೂಡ ಸಂಸ್ಥೆ ರೂಪಿಸಿದ ವಿವಿಧ ಅಪ್ಲಿಕೇಷನ್‌ಗಳನ್ನು ಪ್ರಯೋಗಿಕ­ವಾಗಿ ಬಳಸುತ್ತಿವೆ. ‘ಮೊಬೈಲ್‌ ಮೂಲಕ ಶಿಕ್ಷಣ ನೀಡುವ ಪರಿಕಲ್ಪನೆ ಜಗತ್ತಿನಲ್ಲೇ ಶೈಶಾವಸ್ಥೆ­ಯ­ಲ್ಲಿದೆ. ದೇಶದಲ್ಲಿ ನಮ್ಮದೇ ಪ್ರಥಮ ಪ್ರಯತ್ನ. ನಮ್ಮ ಸಂಸ್ಥೆಯ ಕಾರ್ಯವ್ಯಾಪ್ತಿ ಸದ್ಯ ರಾಜ್ಯದಲ್ಲಿ ಮಾತ್ರ ಇದ್ದು, ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಿಗೂ ವಿಸ್ತರಿಸುವ ಯೋಜನೆ ಇದೆ’ ಎಂದು ಹೇಳುತ್ತಾರೆ ಶಾನ್‌ಭಾಗ್‌. ಹೆಚ್ಚಿನ ವಿವರಗಳಿಗೆ: . ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.