ಪರಿಸರ ವಿಜ್ಞಾನ ಅವಕಾಶ ಹೇರಳ ‘ಪರಿಸರ ಸಂರಕ್ಷಣೆ; ಎಲ್ಲರ ಹೊಣೆ’ ಎಂಬ ಮಾತು 20ನೇ ಶತಮಾನದ ಕೊನೆಯ ಭಾಗದಿಂದ ಇಲ್ಲಿಯವರೆಗೆ ‘ಗಾದೆ’ ಮಾತಿನಂತೆಯೇ ಪ್ರಚಲಿತದಲ್ಲಿದೆ. ಹೆಚ್ಚುತ್ತಿರುವ ವಾಹನಗಳು, ಕಾರ್ಖಾನೆಗಳು, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ, ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ ಹಾಗೂ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಭೂಮಿ ತಾಯಿಯ ಒಡಲು ಇಂದು ಅಕ್ಷರಶಃ ವಿಷದ ಗೂಡಾಗಿ ಪರಿಣಮಿಸಿದೆ. ಇದರಿಂದಾಗಿ ಪ್ರತಿಯೊಬ್ಬರು ಒಂದಿಲ್ಲೊಂದು ಕಾಯಿಲೆಯಿಂದ ಬಳಲುವಂತಾಗಿದೆ. ಶುದ್ಧ ಕುಡಿಯುವ ನೀರು, ಗಾಳಿ, ಆಹಾರ ಸಿಗುವುದೇ ಕಷ್ಟ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಮಹಾನಗರಗಳಲ್ಲಂತೂ ಪರಸ್ಥಿತಿ ಕೈಮೀರಿ ಹೋಗಿದೆ ಎಂದೇ ಹೇಳಬಹುದು. ಇದರಿಂದಾಗಿ ಪರಿಸರ ಉಳಿಸಿಕೊಳ್ಳಬೇಕು, ವಾತಾವರಣ ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಅನುಗುಣವಾಗಿ ವಿಶ್ವವಿದ್ಯಾನಿಲಯಗಳೂ ಸನ್ನದ್ಧವಾಗಿದ್ದು, ಪರಿಸರದ ಒಂದು ಭಾಗವೇ ಆಗಿರುವ ಪರಿಸರ ವಿಜ್ಞಾನ ( ) ವಿಷಯದಲ್ಲಿ ಸ್ನಾತಕೋತ್ತರ ಪದವಿ ನೀಡುತ್ತಿವೆ. ಆ ಮೂಲಕ ಪರಿಸರ ತಜ್ಞರನ್ನು ತಯಾರು ಮಾಡುವಲ್ಲಿ ನಿರತವಾಗಿವೆ. ಹಾಗೆ ನೋಡಿದರೆ ರಾಷ್ಟ್ರ ರಾಜಧಾನಿ ನವದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ 1974 ರಿಂದಲೇ ‘ಪರಿಸರ ವಿಜ್ಞಾನ’ ವಿಷಯದಲ್ಲಿ ಪದವಿ ನೀಡುತ್ತಿದೆ. ಹಲವು ಕಾರಣಗಳಿಂದ ಕೋರ್ಸ್‌ ಅನ್ನು ಸ್ಥಗಿತಗೊಳಿಸಿದ್ದ ವಿ.ವಿ 1987 ರಿಂದ ಮತ್ತೆ ನಿರಂತರವಾಗಿ ಪದವಿ ನೀಡುತ್ತ ಬಂದಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ 1990ರಲ್ಲಿ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಪರಿಸರ ವಿಜ್ಞಾನ’ದಲ್ಲಿ ಸ್ನಾತಕೋತ್ತರ ಕೋರ್ಸ್‌ ಪ್ರಾರಂಭಗೊಂಡಿದ್ದು, ಆ ಬಳಿಕ ಬೇರೆ ಬೇರೆ ವಿ.ವಿಗಳಲ್ಲೂ ಕೋರ್ಸ್‌ ಆರಂಭಿಸಲಾಗಿದೆ. ಪರಿಸರ ವಿಜ್ಞಾನ ವಿಷಯದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ ಅವರು ‘ಪರಿಸರ ವಿಜ್ಞಾನ’ ಕೋರ್ಸ್‌ನ ಅವಶ್ಯಕತೆ, ಉದ್ಯೋಗಾವಕಾಶಗಳ ಕುರಿತು ತಮ್ಮ ಅನಿಸಿಕೆಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.. ‘ಪರಿಸರ ವಿಜ್ಞಾನ’ ವಿಷಯದಲ್ಲಿ ಕೋರ್ಸ್ ಆರಂಭವಾದದ್ದು ಹೇಗೆ? ಪರಿಸರ ವಿಜ್ಞಾನ ಎಂಬುದು ಹೊಸ ಪರಿಕಲ್ಪನೆ. ನಮ್ಮ ಸುತ್ತಲಿನ ಪರಿಸರ, ನಾವು ವಾಸಿಸುತ್ತಿರುವ ವಾತಾವರಣ ಸ್ವಚ್ಛವಾಗಿರಬೇಕು. ಅಂದಾಗ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪರಿಸರ ಮೊದಲಿನ ಹಾಗೆ ಉಳಿದಿಲ್ಲ. ಗಾಳಿ, ನೀರು, ಭೂಮಿ (ಮಣ್ಣು) ಕಲುಷಿತಗೊಂಡಿವೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆ ಹೆಚ್ಚಾಗಿದೆ. ಶುದ್ಧ ಗಾಳಿ ಸಿಗುತ್ತಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಉತ್ಪಾದಿಸಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಪರಿಸರ ಸಾಕಷ್ಟು ಮಲಿನವಾಗುತ್ತಿದೆ. ಹೀಗಾಗಿ, ಸಮಸ್ಯೆ ಬಗೆಹರಿಸಲು ಹಾಗೂ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಪರಿಸರ ವಿಜ್ಞಾನ’ ಕೋರ್ಸ್ ಆರಂಭಿಸಲಾಗಿದೆ. ಮೊದಲ ಬಾರಿಗೆ ಕೋರ್ಸ್ ಆರಂಭವಾದದ್ದು ಯಾವ ವಿ.ವಿಯಲ್ಲಿ? ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1990ರಲ್ಲಿ ಸ್ನಾತಕೋತ್ತರ ಪರಿಸರ ವಿಜ್ಞಾನ ಕೋರ್ಸ್ ಆರಂಭವಾಯಿತು. 1995ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, 2010ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಯಿತು. ಮಂಗಳೂರು ವಿ.ವಿಯಲ್ಲೂ ಈ ಹಿಂದೆ ಕೋರ್ಸ್ ಆರಂಭಿಸಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ನಿಂತು ಹೋಗಿದೆ. ಕೋರ್ಸ್‌ ಅಧ್ಯಯನದ ಅವಶ್ಯಕತೆ ಏನು? ಪರಿಸರ ನಾಶದಿಂದ ಸಾಕಷ್ಟು ಹಾನಿಯಾಗುತ್ತಿದೆ. ಮನುಕುಲದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅತಿಯಾದ ರಾಸಾಯನಿಕಗಳ ಬಳಕೆಯಿಂದ ವಾತಾವರಣ ಕಲುಷಿತಗೊಂಡಿದೆ. ಕೈಗಾರಿಕೆಗಳ ತ್ಯಾಜ್ಯ ನದಿಯ ಒಡಲು ಸೇರುತ್ತಿದೆ. ಇದರಿಂದಾಗಿ ಅಲ್ಲಿನ ಜಲಚರಗಳು ನಾಶವಾಗುತ್ತಿವೆ. ಕುಡಿಯುವ ನೀರು, ಸೇವಿಸುವ ಗಾಳಿ ಅಶುದ್ಧವಾಗಿವೆ. ಒಂದು ಲೀಟರ್ ನೀರಿಗೆ ರೂ 20 ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಶುದ್ಧ ಗಾಳಿಗೂ ದುಡ್ಡು ಕೊಡಬೇಕಾಗುತ್ತದೆ! ವಾಹನಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆ. ಇನ್ನೊಂದೆಡೆ ಆಮ್ಲಮಳೆಯ ಭಯ ಕಾಡುತ್ತಿದ್ದು, ಓಝೋನ್ ಪದರ ನಾಶವಾಗುತ್ತಿದೆ. ಈ ಎಲ್ಲ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಕೋರ್ಸ್‌ ಅನ್ನು ಅಧ್ಯಯನ ಮಾಡಬೇಕಾಗಿದೆ. ಉದ್ಯೋಗಾವಕಾಶಗಳ ಲಭ್ಯತೆ ಹೇಗೆ? ಪುಟ್ಟಯ್ಯ: ಕೃಷಿ ಇಲಾಖೆ, ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಎಲ್ಲ ಕೈಗಾರಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ (‘ಪರಿಸರ ಎಂಜಿನಿಯರುಗಳು’ ಎಂದು ನೇಮಕ ಮಾಡಿಕೊಳ್ಳಲಾಗುತ್ತದೆ) ಸಾಕಷ್ಟು ಉದ್ಯೋಗಾವಕಾಶ ಲಭ್ಯ ಇವೆ. ಸರ್ಕಾರದ ಅನೇಕ ಇಲಾಖೆಗಳಲ್ಲಿ ಸೇವೆ ಸಲ್ಲಿಸಬಹುದು. ಅಲ್ಲದೇ, ಪರಿಸರ ವಿಜ್ಞಾನಿ, ಪ್ರಾಧ್ಯಾಪಕ, ಸಂಶೋಧಕರಾಗಿಯೂ ಸೇವೆ ಸಲ್ಲಿಸಲು ಅವಕಾಶವಿದೆ. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿ ಈ ಕೋರ್ಸ್‌ನಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಭಾರೀ ಬೇಡಿಕೆ ಇದೆ. ಪರಿಸರ ವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಪಡೆದವರಿಗೆ ಉದ್ಯೋಗ ಖಚಿತ. ಪ್ರತಿ ತಿಂಗಳು ರೂ 30 ರಿಂದ 50 ಸಾವಿರ ಸಂಬಳ ಪಡೆಯಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.