ಪರಿಣಾಮಕಾರಿ ಭಾಷಾ ಕಲಿಕೆ ಶಿ ಕ್ಷಣದ ಬಗ್ಗೆ ಆಂಗ್ಲರಲ್ಲಿ ಒಂದು ರೂಢಿ ಮಾತಿದೆ. ‘ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಓದುವುದನ್ನು ಕಲಿಸಿದರೆ ಪ್ರೌಢಹಂತದಲ್ಲಿ ಅವರೇ ಸ್ವತಃ ಕಲಿಯುವುದಕ್ಕಾಗಿ ಓದುತ್ತಾರೆ’. ಇದು ಎಲ್ಲ ಕಾಲದ ಎಲ್ಲ ಭಾಷೆಗಳ ಮಕ್ಕಳ ಶಿಕ್ಷಣಕ್ಕೂ ಅನ್ವಯಿಸುತ್ತದೆ. ಕಲಿಕೆಯಲ್ಲಿ ನಾಲ್ಕು ಪ್ರಕ್ರಿಯೆಗಳು ನಿರ್ದಿಷ್ಟವಾಗಿ ನಡೆಯಬೇಕು. ಹೇಳುವುದು ಮತ್ತು ಕೇಳುವುದು. ಓದುವುದು ಮತ್ತು ಬರೆಯುವುದು. ಇಂದು ನಾವು ಶಾಲಾ ವಿದ್ಯಾರ್ಥಿಗಳನ್ನು ಮಾತನಾಡಿಸಿದರೆ ಅವರು ಹೇಳುವುದು ನಮಗೆ ಪೂರ್ಣವಾಗಿ ಕೇಳಿಸುವುದೂ ಇಲ್ಲ. ಅರ್ಥವಾಗುವುದೂ ಇಲ್ಲ. ಹೇಳಬೇಕೆಂದಿರುವುದನ್ನು ಸ್ಪಷ್ಟವಾಗಿ ಹೇಳುವ ರೂಢಿ ಹೆಚ್ಚಿನ ವಿದ್ಯಾರ್ಥಿಗಳಲ್ಲಿಂದು ಕಂಡುಬರುವುದಿಲ್ಲ. ಇನ್ನು ಬೇರೆಯವರು ಹೇಳುವುದನ್ನು ಕೇಳುವ ಮನಃಸ್ಥಿತಿ ಅಥವಾ ಸಹನೆ ಇರುವುದೇ ಇಲ್ಲ, ಬಾಯ್ದೆರೆ ಓದು ಮತ್ತು ಸ್ಪಷ್ಟ ಬರವಣಿಗೆ ಇಂದಿನ ಮಕ್ಕಳಲ್ಲಿ ಬಹುತೇಕ ಕಡಿಮೆ. ಈ ನ್ಯೂನತೆಗಳನ್ನು ಸರಿಪಡಿಸಬೇಕಾದರೆ ಮೇಲಿನ ನಾಲ್ಕು ಪ್ರಕ್ರಿಯೆಗಳಿಗೆ ಪ್ರಾಥಮಿಕ ಹಂತದಲ್ಲಿ ಪೂರ್ಣಗಮನ ಹರಿಸಿದಾಗ ಅದು ಸಾಧ್ಯವಾಗುತ್ತದೆ. ಈ ನಾಲ್ಕು ಪ್ರಕ್ರಿಯೆಗಳು ಶಿಕ್ಷಣಕ್ಕೆ ನಾಲ್ಕು ಅಡಿಗಲ್ಲುಗಳಿದ್ದಂತೆ. ಈ ಶಕ್ತಿಗಳನ್ನು ಮಕ್ಕಳಲ್ಲಿ ಬೆಳೆಸಿದಾಗ ಅವರಿಗೆ ಸಹಜವಾಗಿ ಹೇಳಿದ್ದನ್ನು ಅರ್ಥಪೂರ್ಣವಾಗಿ ಕೇಳುವುದು, ಕೇಳಿದ ಪ್ರಶ್ನೆಗಳಿಗೆ ತಮಗೆ ತಿಳಿದಷ್ಟನ್ನು ನೇರವಾಗಿ, ಸ್ಪಷ್ಟವಾಗಿ ಹೇಳುವುದು, ತಪ್ಪಿಲ್ಲದೇ ಶುದ್ಧ ಉಚ್ಛಾರಣೆಯೊಂದಿಗೆ ಓದುವುದು, ಹೇಳಿದ್ದನ್ನು ಅಥವಾ ಬರೆಯುವಂತೆ ಹೇಳಿದ್ದನ್ನು ತಪ್ಪಿಲ್ಲದೇ ಬರೆಯುವುದು ಇವು ಸಾಧ್ಯವಾಗುತ್ತವೆ. ಕೊನೆಯ ಎರಡು ಅಂಶಗಳು ಕನ್ನಡದಂಥ ಧ್ವನಿಕ ಭಾಷೆಯ ವಿಷಯದಲ್ಲಿ ಯಶಸ್ವಿಯಾಗಿ ಕಲಿಯುವುದು ಮತ್ತು ಕಲಿಸುವುದು ಎರಡೂ ಸಾಧ್ಯ. ಕನ್ನಡ ಭಾಷೆ ಒಂದು ಧ್ವನಿಕ ಭಾಷೆ. ಇಲ್ಲಿ ನಾವು ಹೇಳಿದಂತೆ ಅಥವಾ ಉಚ್ಚರಿಸಿದಂತೆ ಬರೆಯುತ್ತೇವೆ. ಬರೆದಂತೆ ಓದುತ್ತೇವೆ. ಈ ಸೌಲಭ್ಯ ಆಂಗ್ಲಭಾಷೆಯಲ್ಲಾಗಲೀ ತಮಿಳು ಭಾಷೆಯಲ್ಲಾಗಲೀ ಇಲ್ಲ. ವರ್ಗೀಯ ವ್ಯಂಜನದ ಅಲ್ಪಪ್ರಾಣ ಮಹಾಪ್ರಾಣಗಳಿಗೆ ನಾಲ್ಕು ಅಕ್ಷರದಿಂದ ಒಂದೇ ಅಕ್ಷರವನ್ನು ಬರೆದಾಗ ಪದದ ಸಾಂದರ್ಭಿಕ ರೂಪದ ಮೇಲೆ ಉಚ್ಚಾರಣೆಯನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಅದೇ ರೀತಿ ಇಂಗ್ಲಿಷ್‌ ಭಾಷೆಯು ಯು ಎಂಬ ಗುಣಿತ ಒಂದು ಅಕ್ಷರದ ಜೊತೆ ಸೇರಿದಾಗ ‘ಉ’ ಎಂಬ ಸ್ವರವನ್ನು ಕೊಟ್ಟರೆ ಮತ್ತೊಂದು ಅಕ್ಷರದ ಜೊತೆ ಸೇರಿದಾಗ ‘ಅ’ ಎಂಬ ಸ್ವರವನ್ನು ಕೊಡುತ್ತದೆ. ಇಂತಹ ಸಂದಿಗ್ಧಗಳು ಕನ್ನಡದಲ್ಲಿಲ್ಲ. ಆದ್ದರಿಂದ ಕನ್ನಡ ಭಾಷೆಯನ್ನು ತಪ್ಪಿಲ್ಲದಂತೆ ಓದುವುದು, ಬರೆಯುವುದು ಕಷ್ಟವೂ ಅಲ್ಲ. ಅಸಾಧ್ಯವೂ ಅಲ್ಲ, ಸಮಾಜದಲ್ಲಿ ಗ್ರಾಮ್ಯ ಬಳಕೆ ಎಲ್ಲ ಭಾಷೆಗಳಲ್ಲಿಯೂ ಇದೆ. ಮಕ್ಕಳಿಗೆ ಕಲಿಯುವುದಕ್ಕಾಗಿಯೇ ಎಂದು ಬಂದ ಪ್ರಾರಂಭದಲ್ಲಿ ಪರಿಣಾಮಕಾರಿಯಾಗಿ ಕಲಿಸಿದಾಗ ಅವರಲ್ಲಿ ಆಡು ಮಾತಿಗೂ, ಲಿಖಿತ ಭಾಷೆಗೂ ಇರುವ ವ್ಯತ್ಯಾಸದ ಅರಿವು ಬೆಳೆಯುತ್ತಾ ಹೋಗಿ ಭಾಷೆಯನ್ನು ಸಮರ್ಥವಾಗಿ ಬಳಸುವುದನ್ನು ಕಲಿಯುತ್ತಾರೆ. ಇದಕ್ಕೆ ಮೊದಲು ಮಾಡಬೇಕಾದ ಕೆಲಸವೆಂದರೆ ಮಕ್ಕಳನ್ನು ಧೈರ್ಯವಾಗಿ ಮಾತನಾಡಲು ಪ್ರೇರೇಪಿಸಬೇಕು. ಮಾತಿನ ಮೂಲಕವೇ ಉಚ್ಚಾರಣೆಗಳನ್ನು ತಿದ್ದುತ್ತಾ ವಿಷಯಗಳ ಜ್ಞಾನವನ್ನು ಪರಿಚಯಿಸಬೇಕು. ಇದರ ಜೊತೆಜೊತೆಗೆ ಅಕ್ಷರಗಳನ್ನು ಗುರುತಿಸುವ, ಓದುವ, ಬರೆಯುವ ಕ್ರಿಯೆಗಳು ಸಮಾನಾಂತರವಾಗಿ ನಡೆಯಬೇಕು. ಪ್ರಾಥಮಿಕ ಹಂತದಲ್ಲಿ ಈ ಭಾಷೆಯ ಕಲಿಕೆಗೆ ಹೆಚ್ಚಿನ ಒತ್ತು ಕೊಟ್ಟು ಅದರ ಮೂಲಕವೇ ವಿಷಯಗಳನ್ನು ತಿಳಿಸುವ ಪ್ರಯತ್ನ ನಡೆಯಬೇಕು. ಮಕ್ಕಳಲ್ಲಿ ಶಾಲೆಯೆಂದರೆ ಒಂದು ನಿರ್ಬಂಧಿತ ವಾತಾವರಣದ ಕೇಂದ್ರ ಎಂಬ ಭಾವನೆ ಇದೆ. ಶಿಕ್ಷಕರ ಬಗ್ಗೆ ಸಾಮಾನ್ಯವಾಗಿ ಭಯಮಿಶ್ರಿತ ಗೌರವ ಕಂಡುಬರುತ್ತದೆ. ಇಂತಹ ಮನೋಭಾವ ಇರುವ ಮಕ್ಕಳು ಯಾರಾದರೂ ಮಾತನಾಡಿಸಿದಾಗ ಮುಕ್ತವಾಗಿ ಪ್ರತಿಕ್ರಿಯೆ ತೋರಲು ಹಿಂಜರಿಯುತ್ತಾರೆ. ಶಾಲೆಗಳಲ್ಲಿಯೂ ಮಕ್ಕಳಿಗೆ ಮೊದಲಿನಿಂದಲೂ ಬಾಯ್ಮುಚ್ಚಿ ಕೂರು, ಹೇಳಿದ್ದನ್ನು ಕೇಳು, ಪಾಠದ ಬಗ್ಗೆ ಗಮನವಿಡು ಎಂಬ ಮಾತುಗಳನ್ನೇ ಹೇಳುತ್ತಾ ಬೋಧಿಸುವ ಪರಿಪಾಠವಿದೆ. ಶಿಕ್ಷಕರು ಕೇಳುವ ಪ್ರಶ್ನೆಗಳಿಗೆ ಮಾತ್ರ ವಿದ್ಯಾರ್ಥಿ ಉತ್ತರ ಕೊಡಬೇಕೇ ಹೊರತು ಒಂದು ವೇಳೆ ಆಸಕ್ತಿಯಿಂದಲೋ ಕುತೂಹಲದಿಂದಲೋ ವಿದ್ಯಾರ್ಥಿಯು ಮಧ್ಯೆ ಏನಾದರೂ ಪ್ರಶ್ನಿಸಿದರೆ ಅವನಿಗೆ ಸಮಂಜಸವಾದ ಸಮಾಧಾನ ಸಿಗುವ ಬದಲು ‘ತಲೆಹರಟೆ’ ಎಂಬ ಬಿರುದು ಸಿಗುತ್ತದೆ. ಜೊತೆಗೆ ‘ಹೇಳಿದಷ್ಟನ್ನು ಸರಿಯಾಗಿ ಕೇಳಿಸಿಕೋ ಸಾಕು’ ಎಂಬ ಅಪ್ಪಣೆ ಬರುತ್ತದೆ. ಈ ವಾತಾವರಣದ ಬದಲು ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪ್ರೀತಿ ವಿಶ್ವಾಸಗಳಿಂದ ಮಾತನಾಡಿಸುವ, ಮಾತನಾಡುವ ವಾತಾವರಣದ ಬದಲು ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪ್ರೀತಿ ವಿಶ್ವಾಸಗಳಿಂದ ಮಾತನಾಡಿಸುವ, ಮಾತನಾಡುವ ವಾತಾವರಣ ದೊರೆತರೆ ಆಗ ನಿರ್ಭಯವಾಗಿ ಶಿಕ್ಷಣದ ಕೇಳುವ ಮತ್ತು ಹೇಳುವ ಮೊದಲೆರಡು ಪ್ರಕ್ರಿಯೆಗಳು ಸಲೀಸಾಗಿ, ಯಶಸ್ವಿಯಾಗಿ ನಡೆಯಲು ಸಾಧ್ಯ. ಆದ್ದರಿಂದ ಮಕ್ಕಳಿಗೆ ಮಾತಿನಲ್ಲಿ ಸರಳತೆ, ಪ್ರೀತಿ, ಕಲಿಕೆಯಲ್ಲಿ ವಿಶ್ವಾಸ, ತಪ್ಪಿದಲ್ಲಿ ಶಿಕ್ಷೆ ಈ ಮೂರೂ ಇದ್ದರೆ ಆಗ ಮಕ್ಕಳ ಸ್ವಭಾವ ಸಹಜವಾಗಿ ಪರಿಣಾಮವಾಗಿ ರೂಪುಗೊಳ್ಳಲು ಸಾಧ್ಯ. ಇನ್ನು ಓದುವ ಮತ್ತು ಬರೆಯುವ ಪ್ರಕ್ರಿಯೆಗಳು ಯಶಸ್ವಿಯಾಗಬೇಕಾದರೆ ಮಕ್ಕಳಿಗೆ ಮೊದಲು ಅಕ್ಷರಗಳನ್ನು ಗುರುತಿಸಿ ಹೇಳುವುದನ್ನು ಕಲಿಸಬೇಕು. ಅಲ್ಲಿ ಹಂತ ಹಂತವಾಗಿ ಉಚ್ಚಾರಣೆ ತಿದ್ದಬೇಕು. ಅಕ್ಷರಗಳನ್ನು ಗುರುತಿಸಿ ಹೇಳುವುದು ಬಂದ ಮೇಲೆ ಬರೆಯುವ ಪ್ರಕ್ರಿಯೆ ಪ್ರಾರಂಭವಾಗಬೇಕು. ಅಕ್ಷರಗಳನ್ನು ಮೊದಲು ಸಾಧ್ಯವಿದ್ದಷ್ಟೂ ದಪ್ಪ ಸಾಧನಗಳಿಂದ ದೊಡ್ಡ ಆಕಾರದಲ್ಲಿ ಬರೆಯುವುದನ್ನು ರೂಢಿ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಸ್ಲೇಟಿನ ಬಳಕೆ ಶಾಲೆಗಳಲ್ಲಿ ಇಲ್ಲವೆಂದೇ ಹೇಳಬಹುದು. ಇದರ ಬಳಕೆಯ ಹಿಂದೆ ಇರುವ ಮನೋವೈಜ್ಞಾನಿಕ ಅಂಶವನ್ನು ಗಮನಿಸಿದರೆ ಆಗ ಇದರ ಅಗತ್ಯ ಮನವರಿಕೆಯಾಗುತ್ತದೆ. ಹಿಂದೆ ಸ್ಲೇಟಿನಲ್ಲಿ ಬರೆಯುವಾಗ ಬರವಣಿಗೆಯಲ್ಲಿ ತಪ್ಪಾದರೆ ಅಳಿಸಿ ಮತ್ತೆ ಬರೆಯಲು ಹೇಳುತ್ತಿದ್ದರು. ಹೀಗಾಗಿ ತಪ್ಪುಗಳು ಅಳಿಸಿ ಹೋಗಬೇಕೇ ಹೊರತು ಪಕ್ಕದಲ್ಲಿ ಸಾಕ್ಷಿಗಳಾಗಿ ನಿಲ್ಲಬಾರದು. ಹಾಗೆ ನಿಂತರೆ ಒಂದಲ್ಲ ಒಂದು ಸಮಯದಲ್ಲಿ ಹಾಗೆ ಮಾಡಿದರೇನು ಎಂಬ ಯೋಚನೆ ಮನಸ್ಸಿಗೆ ಬರುತ್ತದೆ. ಕೀಳರಿಮೆಗೂ ಅವಕಾಶವಾಗಬಹುದು. ಆ ತಪ್ಪು ದೃಷ್ಟಿಯಿಂದ ದೂರವಾದಾಗ ಅದು ಮತ್ತೆ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ಇದಕ್ಕಾಗಿಯೇ ನಮ್ಮ ರೂಢಿಯಲ್ಲಿ ದೊಡ್ಡವರು ‘ಮಾಡಿದ ತಪ್ಪನ್ನೇ ಎತ್ತಿ ಆಡಬೇಡಿ. ಮರೆತು ತಿದ್ದಿಕೊಳ್ಳಲು ಅವಕಾಶ ಕೊಡಿ’ ಎಂಬ ಮಾತನ್ನು ಜೀವನಕ್ಕೆ ಸಂಬಂಧಿಸಿದಂತೆ ಹೇಳುತ್ತಾರೆ. ಆದರೆ ಇದು ಪ್ರಾರಂಭಿಕ ಹಂತದಲ್ಲೇ ಪೆನ್ನು ಹಾಳೆಗಳಲ್ಲಿ ಬರೆಯುವುದರಿಂದ ಸಾಧ್ಯವಾಗುವುದಿಲ್ಲ. ಕಲಿಯುವಾಗ ಪ್ರಾರಂಭದಲ್ಲಿ ದಪ್ಪ ಅಕ್ಷರಗಳನ್ನು ಬರೆಯುವುದರಿಂದ ಅಕ್ಷರಗಳ ಆಕಾರ, ಬಳುಕುಗಳು ಸ್ಫುಟವಾಗಿ ರೂಪಗೊಳ್ಳುತ್ತವೆ. ಸ್ವಲ್ಪ ಸ್ವಲ್ಪ ವ್ಯತ್ಯಾಸದಲ್ಲಿ ಒಂದೇ ರೀತಿ ಕಾಣುವ ಅಕ್ಷರಗಳ ವ್ಯತ್ಯಾಸವನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಉದಾಹರಣೆಗೆ– ದ ಥ ಧ ಡ ಢ ರ ಠ ಕ ತ ಪ ಫ ವ ಮ ಯ ಇತ್ಯಾದಿ. ಒಮ್ಮೆ ಅಕ್ಷರಗಳ ಸರಿಯಾದ ರೂಪ ಬರೆಯುವುದು ಮಕ್ಕಳಿಗೆ ರೂಢಿಯಾದರೆ ನಂತರದಲ್ಲಿ ಅಕ್ಷರದ ಆಕಾರ ಎಷ್ಟೇ ಚಿಕ್ಕದಾದರೂ ಅದರ ಆಕೃತಿ ಮತ್ತು ಬಳುಕುಗಳಲ್ಲಿ ಸ್ಫುಟವಿರುತ್ತದೆ. ಬರೆದಂತೆ ಓದುವುದು, ಓದಿದಂತೆ ಬರೆಯುವುದು ಸಾಧ್ಯವಿರುವ ಕನ್ನಡ ಭಾಷೆಯನ್ನು ತಪ್ಪಿಲ್ಲದೆ ಸ್ಪಷ್ಟವಾಗಿ ಓದಿ ಸ್ಫುಟವಾಗಿ ಬರೆಯುವುದನ್ನು ಕಲಿಸಲು ಸಾಧ್ಯವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.