ಅನಿಮೇಷನ್‌ ಅವಕಾಶಗಳ ಆಗರ 2012ರಲ್ಲಿ ಬಿಡುಗಡೆಗೊಂಡು ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ, ನಾಲ್ಕು ವಿಭಾಗಗಳಲ್ಲಿ ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ “ಲೈಫ್ ಆಫ್‌ ಪೈ” ಸಿನಿಮಾವನ್ನು ನೀವು ನೋಡಿರಬಹುದು. ಆ ಚಿತ್ರಕ್ಕೂ ನಮ್ಮ ಹುಬ್ಬಳ್ಳಿಗೂ ಇರುವ ನಂಟನ್ನೂ ಓದಿರುತ್ತೀರಿ. ಅತ್ಯಾಧುನಿಕ 3ಡಿ ಅನಿಮೇಷನ್‌ ತಂತ್ರಜ್ಞಾನದಲ್ಲಿ ತಯಾರಿಸಿದ್ದ “ಪೈ” ಚಿತ್ರಕ್ಕೆ ತಾಂತ್ರಿಕ ನೆರವು ನೀಡಿದ್ದ ತಂಡದಲ್ಲಿ ಹುಬ್ಬಳ್ಳಿಯ ತನ್ಸೀರ್‌ ಅಹಮದ್‌ ಬಂಗ್ಲೆವಾಲೆ ಕೂಡ ಇದ್ದರು. ಜಾಗತಿಕ ಅನಿಮೇಷನ್‌ ಕ್ಷೇತ್ರದಲ್ಲಿ ಪ್ರಮುಖ ಅನಿಮೇಟರ್‌ (ಚಲನ ವ್ಯಂಗ್ಯ ಚಿತ್ರಕಾರ) ಆಗಿ ಗುರುತಿಸಿಕೊಂಡಿರುವ ತನ್ಸೀರ್‌ ಅದಕ್ಕೂ ಮುನ್ನ ಹಲವು ಹಾಲಿವುಡ್‌ ಚಿತ್ರಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಅನಿಮೇಷನ್‌! ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆಯೂ ಕೇಳಿಬರುತ್ತಿರುವ ಚಿರಪರಿಚಿತ ಶಬ್ದ. ಮನರಂಜನೆ (ಸಿನಿಮಾ), ಜಾಹೀರಾತು, ವಿಡಿಯೊ ಗೇಮಿಂಗ್‌ ಕ್ಷೇತ್ರಗಳನ್ನಂತು ಅನಿಮೇಷನ್‌ ಹೊರತಾಗಿ ಊಹಿಸಿಕೊಳ್ಳುವುದು ಕಷ್ಟ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ಅಷ್ಟರ ಮಟ್ಟಿಗೆ ಅನಿಮೇಷನ್‌ ಅವುಗಳ ಭಾಗವಾಗಿದೆ. ತನ್ಸೀರ್‌ ಕರಗತ ಮಾಡಿಕೊಂಡ ಅನಿಮೇಷನ್‌ ತಂತ್ರಜ್ಞಾನ ಅವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಅವರು ಒಬ್ಬರೇ ಅಲ್ಲ, ನಮ್ಮ ನಡುವೆ ಅಂತವರು ಹಲವು ಅನಿಮೇಟರ್‌ಗಳಿದ್ದಾರೆ. ಅದನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು, ಖ್ಯಾತಿ ಜೊತೆಗೆ ಕೈ ತುಂಬಾ ಸಂಬಳ ಗಳಿಸುತ್ತಿದ್ದಾರೆ. ಉದ್ಯಮವಾಗಿ ಅನಿಮೇಷನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಿಮೇಷನ್‌ ಬಹುಕೋಟಿ ಉದ್ಯಮವಾಗಿ ಗುರುತಿಸಿಕೊಂಡು ವರ್ಷಗಳೇ ಆಗಿವೆ. ಈಗ ಭಾರತದಲ್ಲಿ ಕೂಡ ಇದು ಉದ್ಯಮವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಎರಡು ವರ್ಷಗಳ ಹಿಂದೆ ದೇಶದ ಹೆಚ್ಚಿನ ಉದ್ಯಮಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ಅನಿಮೇಷನ್‌ ಉದ್ಯಮಯ ಅಭಿವೃದ್ಧಿ ಪಥ ಮಾತ್ರ ಏರುಗತಿಯಲ್ಲಿ ಸಾಗಿತ್ತು! ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್‌ಐಸಿಸಿಐ) ನೀಡಿರುವ ವರದಿಯ ಪ್ರಕಾರ, ದೇಶದ ಅನಿಮೇಷನ್‌ ಉದ್ದಿಮೆಯ ಗಾತ್ರ ಅಂದಾಜು 1,100 ಕೋಟಿ ರೂಪಾಯಿ. ಈ ಕ್ಷೇತ್ರದ ಅಭಿವೃದ್ಧಿಯ ದರವೂ ಗಮನ ಸೆಳೆಯುವಂತಿದೆ. ಸರಾಸರಿ ಶೇ 30ರಷ್ಟು ಪ್ರಮಾಣದಲ್ಲಿ ಪ್ರಗತಿ ಹೊಂದುತ್ತಿರುವ ಈ ಉದ್ಯಮದ ಗಾತ್ರ 2014ರ ಅಂತ್ಯದ ವೇಳೆಗೆ ಶತಕೋಟಿ ಡಾಲರ್‌ (ಅಂದಾಜು 6200 ಕೋಟಿ ರೂಪಾಯಿ) ಮೀರುವ ನಿರೀಕ್ಷೆ ಇದೆ. ವಿಪುಲ ಉದ್ಯೋಗಾವಕಾಶ ಉದ್ಯಮ ಎಂದ ಮೇಲೆ ಅಲ್ಲಿ ಉದ್ಯೋಗದ ಅವಕಾಶಗಳು ಇರಲೇ ಬೇಕು. ಭಾರತದಲ್ಲಿ ಬಹುಕೋಟಿ ಉದ್ಯಮಯಾಗುವತ್ತ ದಾಪುಗಾಲು ಹಾಕಿರುವ ಅನಿಮೇಷನ್‌ ಕ್ಷೇತ್ರ, ಪ್ರತಿಭಾವಂತರಿಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ. ಚಲನಚಿತ್ರ ನಿರ್ಮಾಣ ಸಂಸ್ಥೆಗಳು, ವಿಡಿಯೊ ಸಂಕಲನ ಕೇಂದ್ರಗಳು, ಜಾಹೀರಾತು ಏಜೆನ್ಸಿಗಳು, ಸಾಫ್ಟ್‌ವೇರ್‌ ಕಂಪೆನಿಗಳು, ಕಂಪ್ಯೂಟರ್‌ ವ್ಯವಸ್ಥೆ ರೂಪಿಸುವ ಸಂಸ್ಥೆಗಳು, ವೆಬ್‌ಸೈಟ್‌ ವಿನ್ಯಾಸಗಾರರು, ವಿಡಿಯೊ ಗೇಮ್‌ ತಯಾರಿಕರು... ಇವರಿಗೆಲ್ಲಾ ಅನಿಮೇಷನ್‌ ತಜ್ಞರ ಅವಶ್ಯಕತೆ ಇದೆ. ಇವುಗಳಲ್ಲದೇ ವೈದ್ಯಕೀಯ, ರಕ್ಷಣೆ, ವಾಸ್ತುಶಿಲ್ಪ, ಗೃಹಾಲಂಕಾರ ಕ್ಷೇತ್ರಗಳಲ್ಲೂ ಈಗ ಅನಿಮೇಷನ್‌ ಜನಪ್ರಿಯ ಆಗುತ್ತಿದೆ. ಈ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ದೇಶೀಯ ಸಂಸ್ಥೆಗಳಲ್ಲದೆ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ವಾರ್ನರ್‌ ಬ್ರದರ್ಸ್‌, ಫನ್‌ ಬ್ಯಾಗ್‌ ಅನಿಮೇಷನ್‌, ಐಎಲ್‌ಎಂ ಮತ್ತು ಡಿಸ್ನಿಯಂತಹ ಕಂಪೆನಿಗಳು ಭಾರತದಲ್ಲಿ ಪ್ರತಿಭಾವಂತ ಅನಿಮೇಟರ್‌ಗಳಿಗೆ ಹುಡುಕಾಟ ನಡೆಸುತ್ತಿವೆ. ಉತ್ತಮ ವೇತನ ನೀಡುವ ಭರವಸೆಯೊಂದಿಗೆ ನೌಕರಿಯನ್ನೂ ನೀಡುತ್ತಿವೆ. “ಡಿಜಿಟಲ್‌ ತಂತ್ರಜ್ಞಾನದಲ್ಲಿ ಕಲೆಯನ್ನು ಪುನರ್‌ ಸೃಷ್ಟಿಸಲು ಇಷ್ಟಪಡುವವರಿಗೆ ಅನಿಮೇಷನ್‌ ಉದ್ದಿಮೆಯಲ್ಲಿ ಅಪರಿಮಿತ ಅವಕಾಶಗಳಿವೆ” ಎಂದು ಹೇಳುತ್ತಾರೆ ಮುಂಬೈ ಮೂಲದ “ಮಿಸ್ಟ್” (ಮಾಯಾ ಇನ್-ಸ್ಟುಡಿಯೊ ಟ್ರೈನಿಂಗ್‌) ಸಂಸ್ಥೆಯ ಮುಖ್ಯಸ್ಥೆ ಅರುಣಾ ಕುಮಾರ್‌. ಸೃಜನಾತ್ಮಕ ಯೋಚನಾ ಕ್ರಮ, ಚಿತ್ರಕಲೆಯ ಮೇಲೆ ಆಸಕ್ತಿ, ವ್ಯಂಗ್ಯಚಿತ್ರಗಳ ಮೂಲಕ ಪಾತ್ರ ಸೃಷ್ಟಿಸುವ ಸಾಮರ್ಥ್ಯ, 2ಡಿ, 3ಡಿ ಅನಿಮೇಷನ್‌ಗಳಾಗಿ ಕಂಪ್ಯೂಟರ್‌ನಲ್ಲಿ ಚಿತ್ರಗಳನ್ನು ಸೃಷ್ಟಿಸುವ (ಸಿಜಿಐ) ಜ್ಞಾನ... ಇಷ್ಟು ಕೌಶಲಗಳಿದ್ದರೆ ಈ ಕ್ಷೇತ್ರದಲ್ಲಿ ಸುಲಭವಾಗಿ ಉದ್ಯೋಗ ಪಡೆಯಬಹುದು ಎನ್ನುತ್ತಾರೆ ಅವರು. ಜನಪ್ರಿಯವಾಗುತ್ತಿರುವ ಅನಿಮೇಷನ್‌ ಶಿಕ್ಷಣ ಈ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ತಿಳಿದುಕೊಂಡಿರುವ ಯುವ ಜನತೆ ಅನಿಮೇಷನ್‌ ತಂತ್ರಜ್ಞಾನದತ್ತ ಆಕರ್ಷಿತರಾಗುತ್ತಿದ್ದಾರೆ. ಆನಿಮೇಷನ್‌ ಅನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ, ಅನಿಮೇಷನ್‌ ಶಿಕ್ಷಣ ದೇಶದೆಲ್ಲೆಡೆ ಜನಪ್ರಿಯವಾಗುತ್ತಿದೆ. ಕೇವಲ ಮೆಟ್ರೋ ನಗರಗಳಿಗೆ ಮಾತ್ರ ಮೀಸಲಾಗಿದ್ದ ಈ ಶಿಕ್ಷಣ ಕೇಂದ್ರಗಳು ಈಗ ಇತರ ನಗರ, ಪಟ್ಟಣಗಳಲ್ಲೂ ಆರಂಭವಾಗಿರುವುದು ಈ ಶಿಕ್ಷಣದ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿ. ದೇಶದಲ್ಲಿ ಅನಿಮೇಷನ್‌ ಜನಪ್ರಿಯತೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚಿರುವುದನ್ನು ಒಪ್ಪಿಕೊಳ್ಳುವ ಅರುಣಾ ಕುಮಾರ್‌ ಅದು ಎದುರಿಸುತ್ತಿರುವ ಸವಾಲಿನ ಬಗ್ಗೆಯೂ ಪ್ರಸ್ತಾಪಿಸುತ್ತಾರೆ. “ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರತಿಭಾವಂತರ ಸೃಷ್ಟಿಸುವ ಅನಿಮೇಷನ್‌ ಶಿಕ್ಷಣ ಸಂಸ್ಥೆಗಳೂ ಹೆಚ್ಚುತ್ತಿವೆ. ಆದರೆ, ಈ ಸಂಸ್ಥೆಗಳು ಹೊಂದಿರುವ ಸೌಲಭ್ಯಗಳು ಕೌಶಲಯುಕ್ತ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ಸಂಸ್ಥೆಗಳಲ್ಲಿ ಸೌಲಭ್ಯಗಳ ಕೊರತೆ ಇದೆ. ಶಿಕ್ಷಣ ಪೂರೈಸಿ ಹೊರಬರುವ ವಿದ್ಯಾರ್ಥಿಗಳು ಒಂದು ಸಂಸ್ಥೆಯಲ್ಲಿ ಕೆಲಸ ಮಾಡಲು ಅಗತ್ಯವಿರುವ ತಿಳಿವಳಿಕೆಯನ್ನು ಹೊಂದಿಲ್ಲ ಎಂದಾದರೆ, ಅವರು ಪಡೆದ ಶಿಕ್ಷಣ ಅಥವಾ ಮಾಡಿರುವ ಕೋರ್ಸ್‌ಗೆ ಅರ್ಥವೇ ಇರುವುದಿಲ್ಲ. ಹಾಗಾಗಿ ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅನಿಮೇಷನ್‌ ಕಲೆಯ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ಸಿಗಬೇಕು. ಈ ಸಮಯದಲ್ಲೇ ಅವರಿಗೆ ವೃತ್ತಿಯ ಪ್ರತ್ಯಕ್ಷ ಅನುಭವ ಆಗುವಂತಾಗಬೇಕು. ಅರ್ಹ ತಜ್ಞರ ಅಡಿಯಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಬೇಕು. ಇಂತಹ ಸೌಲಭ್ಯಗಳನ್ನು ಹೊಂದಿರುವ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕು” ಎಂದು ಅರುಣಾ ಕುಮಾರ್‌ ಅಭಿಪ್ರಾಯಪಡುತ್ತಾರೆ. ದೇಶದಲ್ಲಿ ಅನಿಮೇಷನ್‌ ಕ್ರಾಂತಿ! ಭಾರತದಲ್ಲಿ ಅನಿಮೇಷನ್‌ ಕ್ರಾಂತಿ ನಡೆಯುತ್ತಿದೆ ಎಂಬುದು ಅರುಣಾ ಅವರ ಪ್ರತಿಪಾದನೆ. ಐದು ವರ್ಷಗಳಲ್ಲಿ 75ಕ್ಕೂ ಹೆಚ್ಚು ಸ್ಟುಡಿಯೊಗಳು ಆರಂಭಗೊಂಡಿವೆ. ಸಿನಿಮಾ, ಟಿವಿ ಕ್ಷೇತ್ರದಲ್ಲಿ ಅನಿಮೇಷನ್‌ ಪಾತ್ರಗಳ ಬಳಕೆ ಹೆಚ್ಚಾಗುತ್ತಿದೆ ಎಂದು ಹೇಳುವ ಅರುಣಾ ಕುಮಾರ್‌, ಇತ್ತೀಚೆಗೆ ಬಿಡುಗಡೆಗೊಂಡ ಹಲವು ಬಾಲಿವುಡ್‌, ಪ್ರಾದೇಶಿಕ ಚಿತ್ರಗಳು, ಕಾರ್ಟೂನ್‌ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಆನಿಮೇಷನ್‌ ತಂತ್ರಜ್ಞಾನ ಬಳಸಿಕೊಂಡಿರುವ ಧಾರಾವಾಹಿಗಳನ್ನು ಉದಾಹರಿಸುತ್ತಾರೆ. ಇದುವರೆಗೆ ಭಾರತೀಯ ಸ್ಟುಡಿಯೊಗಳು ಚಿತ್ರದ ಸಂಕಲನಕ್ಕೆ ಹಾಲಿವುಡ್‌ ಸ್ಟುಡಿಯೊಗಳನ್ನು ಅವಲಂಬಿಸುತ್ತಿದ್ದವು. ಆದರೆ ಈಗ ಆ ಕೆಲಸವನ್ನು ಇಲ್ಲೇ ಮಾಡಲು ಸ್ಟುಡಿಯೊಗಳು ಯೋಚಿಸುತ್ತಿವೆ. ಭಾರತೀಯ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಚೋಟಾ ಭೀಮ್‌, ಮೋಟು ಪಟ್ಲು, ಸುಪ್ಪಂಡಿ, “ಈಗ” ಚಿತ್ರದ ನೊಣದಂತಹ ಆನಿಮೇಷನ್‌ ಪಾತ್ರಗಳನ್ನು ರೂಪಿಸುವಲ್ಲಿ ಇವುಗಳು ನಿರತವಾಗಿವೆ ಎಂದು ಹೇಳುವ ಅರುಣಾ, ಈ ಪಾತ್ರಗಳನ್ನು ಸೃಷ್ಟಿಸುವ, ಅವುಗಳಿಗೆ ಜೀವ ತುಂಬುಕ ಸೃಜನಶೀಲ ತಜ್ಞರ ಅವಶ್ಯಕತೆ ಹಾಗೂ ಅವರು ಪಡೆಯಬೇಕಾದ ಮೌಲ್ಯಯುತ ಅನಿಮೇಷನ್‌ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳುತ್ತಾ ದೇಶದ ಅನಿಮೇಷನ್‌ ಉದ್ಯಮದ ಭವಿಷ್ಯದ ಉಜ್ವಲತೆ ಬಗ್ಗೆ ಭರವಸೆ ವ್ಯಕ್ತಪಡಿಸುತ್ತಾರೆ. “ಮಿಸ್ಟ್‌” ಬಗ್ಗೆ ಯುವ ಆನಿಮೇಷನ್‌ ವೃತ್ತಿಪರರನ್ನು ರೂಪಿಸುವ ಉದ್ದೇಶದಿಂದ ಆರಂಭಗೊಂಡಿರುವ ಸಂಸ್ಥೆಯೇ “ಮಿಸ್ಟ್” (ಮಾಯಾ ಇನ್‌ ಟ್ರೈನಿಂಗ್‌ ಸ್ಟುಡಿಯೊ). ಕಲಿಕೆಯ ಅವಧಿಯಲ್ಲೇ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ವೃತ್ತಿಯ ಪ್ರತ್ಯಕ್ಷ ಅನುಭವ ಪಡೆದುಕೊಳ್ಳುವ ಅವಕಾಶವನ್ನು ನೀಡುವುದು ಈ ಸಂಸ್ಥೆಯ ವಿಶೇಷತೆ. ತನ್ನ ಸ್ಟುಡಿಯೊದಲ್ಲಿ ತಜ್ಞರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಮಾತ್ರವಲ್ಲದೇ, ಆನಿಮೇಷನ್‌ ಉದ್ಯಮದ ಖ್ಯಾತನಾಮರನ್ನು ಕರೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸುತ್ತದೆ. ಮುಂಬೈ ಮೂಲದ “ಮಿಸ್ಟ್” , ಬೆಂಗಳೂರು ಮತ್ತು ಗೋವಾಗಳಲ್ಲಿ ಶಾಖೆಗಳನ್ನು ಹೊಂದಿದೆ. ಅರುಣಾ ಕುಮಾರ್‌ ಮಿಸ್ಟ್ ಮುಖ್ಯಸ್ಥೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.