ಮಹಿಳಾ ಅಧ್ಯಯನದಲ್ಲಿ ಆಶಾಕಿರಣ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರಿ. ಇಲ್ಲಾಂದ್ರೆ ಇನ್ನಾವುದಾದರೂ ಕೋರ್ಸ್ ಮಾಡಿಕೋ. ಅದೇನು ಮಹಿಳಾ ಅಧ್ಯಯನ ಮಾಡ್ತೀಯಾ? ಯಾರು ನೌಕರಿ ಕೊಡ್ತಾರೆ? ಎಂದು ಎಲ್ಲರೂ ಹೇಳುತ್ತಿದ್ದರು. ಆದರೂ ಛಲ ಬಿಡದೇ ಸ್ನಾತಕೋತ್ತರ ಪದವಿ ಮುಗಿಸಿದೆ. 2013ರ ಜನವರಿಯಲ್ಲಿ ನೌಕರಿ ಸಿಗುವವರೆಗೂ ಜನರ ಮಾತುಗಳು ನಿಜವೆನಿಸುತ್ತಿತ್ತು. ಆದರೆ ಅದೊಂದು ದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ಜಾಹೀರಾತು ಹೊಸ ಭರವಸೆ ಆಯಿತು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಮಹಿಳಾ ಅಧ್ಯಯನ ಸ್ನಾತಕೋತ್ತರ ಪದವಿಧರರಿಗೂ ನೌಕರಿ ಅವಕಾಶ ನೀಡಲಾಗಿತ್ತು. ಇದೀಗ ನಾನು ಚಾಮರಾಜನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ನಿರೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ– ಮೈಸೂರು ವಿಶ್ವವಿದ್ಯಾಲಯದಲ್ಲಿ 2006ರಲ್ಲಿ ಆರಂಭವಾದ ಮಹಿಳಾ ಅಧ್ಯಯನ ಸ್ನಾತಕೋತ್ತರ ಪದವಿಯ ಮೊದಲ ಬ್ಯಾಚ್ ವಿದ್ಯಾರ್ಥಿನಿ ಎಚ್.ವಿ. ಜಗದಂಬಾ ಅವರ ಮಾತುಗಳಿವು. ಮಹಿಳಾ ಅಧ್ಯಯನ ಶಿಕ್ಷಣದಲ್ಲಿ ಜಗದಂಬಾ ಅಪರೂಪದ ಉದಾಹರಣೆ ಆಗಿ ಗಮನ ಸೆಳೆಯುತ್ತಾರೆ. ಲಿಂಗಸಮಾನತೆ, ಮಹಿಳಾ ಸಬಲೀಕರಣದ ಮೂಲ ಉದ್ದೇಶಗಳೊಂದಿಗೆ ಆರಂಭವಾದ ಮಹಿಳಾ ಅಧ್ಯಯನ ಕ್ಷೇತ್ರ ಇನ್ನೂ ನಿರೀಕ್ಷಿತ ವೇಗ ಪಡೆದಿಲ್ಲ. ಉದ್ಯೋಗಾವಕಾಶ ಮತ್ತು ಅಧ್ಯಯನದಲ್ಲಿ ಆಸಕ್ತಿ ಹೆಚ್ಚಿಸುವಲ್ಲಿ ಸಫಲವಾಗಿಲ್ಲ ಎಂಬ ಮಾತುಗಳೂ ಇವೆ. ಆದರೆ ಮೈಸೂರು ವಿವಿಯಲ್ಲಿ ಒಂದಷ್ಟು ಆಶಾದಾಯಕ ಬೆಳವಣಿಗೆಗಳಿವೆ. ಮಹಿಳಾ ಅಧ್ಯಯನ ಪದವಿಧರರ ಸಂಘಟನೆಯ ಕಾರ್ಯದರ್ಶಿ ಯರಿಸ್ವಾಮಿ ಅವರು ಹೇಳುವ ಪ್ರಕಾರ, ಮೈಸೂರು ವಿವಿಯಲ್ಲಿ ಪ್ರತಿವರ್ಷ ಎಂ.ಎ. ಮತ್ತು ಪಿಜಿ. ಡಿಪ್ಲೋಮಾ ಕೋರ್ಸ್‌ಗಳಿಗೆ 15ರಿಂದ 20 ವಿದಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಪ್ರಸ್ತುತ ಒಂಬತ್ತು ಮಂದಿ ಪಿಎಚ್‌.ಡಿ ಮಾಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಂ.ಫಿಲ್ ಕೂಡ ಆರಂಭವಾಗಲಿದೆ. ಇಲ್ಲಿಯ ಮಹಾರಾಣಿ ಕಾಲೇಜು, ತೆರೇಸಿಯನ್ ಕಾಲೇಜುಗಳಲ್ಲಿ ಐಚ್ಛಿಕ ವಿಷಯವಾಗಿ ಮಹಿಳಾ ಅಧ್ಯಯನವನ್ನು ಬೋಧಿಸಲಾಗುತ್ತಿದೆ. ‘ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ್ದ ನಾನು ಟೆರೇಷಿಯನ್‌ ಕಾಲೇಜಿನಲ್ಲಿ ಉಪನ್ಯಾಸಕಿ ಹುದ್ದೆಗೆ ಪ್ರಯತ್ನಿಸಿದ್ದೆ. ಅಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಮಹಿಳಾ ಅಧ್ಯಯನ ಕಲಿಸಬೇಕಿತ್ತು. ನಾವು ಗ್ರಾಮೀಣ ಪ್ರದೇಶದಿಂದ ಬಂದ ಕಾರಣ ಇಂಗ್ಲಿಷ್‌ ಭಾಷೆಯ ಮೇಲೆ ಹೆಚ್ಚು ಹಿಡಿತವಿರಲಿಲ್ಲ. ಮಹಾರಾಣಿ ಕಾಲೇಜಿನಲ್ಲಿದ್ದ ಮಹಿಳಾ ವಿಭಾಗದಲ್ಲಿ ಪ್ರಯತ್ನಿಸಿದಾಗ ಅಲ್ಲಿ ಅದಾಗಲೇ ಸಮಾಜಶಾಸ್ತ್ರದ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದರು. ಇದರಿಂದ ಮೊದಲು ನಮ್ಮನ್ನು ಅಣಕಿಸಿದ್ದ ಮಂದಿಯ ಮಾತು ನಿಜವೆನಿಸತೊಡಗಿತ್ತು. ಬಿ.ಇಡಿ ಮುಗಿಸಿದ್ದ ನಾನು ಮೈಸೂರಿನ ಶಾಲೆಯಲ್ಲಿ ತಾತ್ಕಾಲಿಕ ನೌಕರಿ ಸೇರಿದ್ದೆ. ಆದರೆ ಮೈಸೂರು ವಿವಿ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಮಂಗಳಾ ಅವರು ಸತತವಾಗಿ ನಮಗೆ ಧೈರ್ಯ ತುಂಬುತ್ತಲೇ ಇದ್ದರು. ಎದೆಗುಂದಬೇಡಿ, ಆದಷ್ಟು ಶೀಘ್ರದಲ್ಲಿ ಈ ಕೋರ್ಸ್‌ಗೆ ಬೆಲೆ ಬರುತ್ತದೆ. ಅದರಿಂದ ನಿಮಗೆ ಒಳ್ಳೆಯ ಭವಿಷ್ಯವಿದೆ ಎನ್ನುತ್ತಿದ್ದರು. ಅದರಂತೆ ಇವತ್ತು ನನಗೆ ಒಳ್ಳೆಯ ನೌಕರಿ ಸಿಕ್ಕಿದೆ’ ಎಂದು ಜಗದಂಬಾ ಹೇಳುತ್ತಾರೆ. ಆದರೆ ಇನ್ನೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಲು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಅವಕಾಶ ಇದೆ. ಸಾಮಾಜಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳಲ್ಲಿ ಆದ್ಯತೆ ಹೆಚ್ಚಬೇಕು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ, ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಮಹಿಳಾ ಅಧ್ಯಯನ ಪದವೀಧರರಿಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸುತ್ತಾರೆ. ಪುರುಷರ ಆಸಕ್ತಿ 2006ರಲ್ಲಿ ಸ್ನಾತಕೋತ್ತರ ಪದವಿಯ ಮೊದಲ ಬ್ಯಾಚಿನಲ್ಲಿ ಇದ್ದದ್ದು 16 ವಿದ್ಯಾರ್ಥಿನಿಯರು. ಆದರೆ ನಂತರದ ವರ್ಷದಲ್ಲಿ ಪುರುಷರು ಇತ್ತ ಬರತೊಡಗಿದರು. ಸದ್ಯ ಅಸ್ತಿತ್ವದಲ್ಲಿರುವ ಮಹಿಳಾ ಅಧ್ಯಯನ ಪದವಿಧರರ ಸಂಘದ 190 ಅಜೀವ ಸದಸ್ಯರಲ್ಲಿ 110 ಮಹಿಳೆಯರು ಮತ್ತು 80 ಪುರುಷರು ಇದ್ದಾರೆ. ‘ಮಹಿಳಾ ಸಬಲೀಕರಣದಲ್ಲಿ ಪುರುಷ ಸಹಭಾಗಿತ್ವದ ವಿಷಯವು ಈ ಕೋರ್ಸ್‌ನಲ್ಲಿರುವುದರಿಂದ ವಿದ್ಯಾರ್ಥಿಗಳು ಇತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ವಿಜ್ಞಾನ, ಸಮಾಜವಿಜ್ಞಾನ, ವಾಣಿಜ್ಯ, ತಂತ್ರಜ್ಞಾನ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವವರೂ ಮಹಿಳಾ ಅಧ್ಯಯನವನ್ನು ಐಚ್ಛಿಕವಾಗಿ ಓದುವುದರಿಂದ ಹೆಚ್ಚು ಅವಕಾಸ ಸಿಗುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಸಾಮಖ್ಯ ಕರ್ನಾಟಕ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ರಾಜ್ಯದಲ್ಲಿರು ವ ಸುಮಾರು 19 ಪ್ರಮುಖ ಇಲಾಖೆಗಳ ಹಲವು ಹುದ್ದೆಗಳಲ್ಲಿ ಮಹಿಳಾ ಅಧ್ಯಯನದ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಅರ್ಹತೆಯಾಗಿ ಸೇರಿಸಬೇಕು. ಆದರೂ ಕೆಎಎಸ್, ಐಎಎಸ್, ಉಪನ್ಯಾಸಕರ ಆಯ್ಕೆಗೆ ನಡೆಸಲಾಗುವ ರಾಜ್ಯ ಅರ್ಹತಾ ಪರೀಕ್ಷೆ (ಸೆಟ್)ಯಲ್ಲಿ ಮಹಿಳಾ ಅಧ್ಯಯನವನ್ನು ಸೇರ್ಪಡೆ ಮಾಡಬೇಕು’ ಎಂದು ಯರಿಸ್ವಾಮಿ ಆಗ್ರಹಿಸುತ್ತಾರೆ. ‘ಮಹಿಳೆಯರ ಸಮಸ್ಯೆಯು ಪುರುಷರಿಗೂ ಸಂಬಂಧಪಟ್ಟದ್ದಾಗಿದೆ. ಏಕೆಂದರೆ ಮಗಳನ್ನು ಮದುವೆ ಮಾಡಲು ವರದಕ್ಷಿಣೆ ಕೊಡುವ ಕಷ್ಟವನ್ನು ಅಪ್ಪ ಅಥವಾ ಅಣ್ಣ ಹೊರಬೇಕು. ಮನೆಯಲ್ಲಿ ಯಾವುದೇ ಹೆಣ್ಣುಮಗಳಿಗೆ ತೊಂದರೆಯಾದಾಗಲೂ ಅದರ ಪರಿಹಾರಕ್ಕೆ ಕುಟುಂಬದಲ್ಲಿರುವ ಪುರುಷರೂ ಪ್ರಯತ್ನಿಸುತ್ತಾರಲ್ಲವೇ. ಆದ್ದರಿಂದ ಮಹಿಳೆಯ ಸಮಸ್ಯೆಗಳನ್ನು ಪ್ರತ್ಯೇಕಿಸುವುದು ಯಾಕೆ. ಅದೊಂದು ಸಾಮಾಜಿಕ ವಿಷಯವಾಗಬೇಕು. ಆದ್ದರಿಂದ ಪುರುಷ ಮತ್ತು ಮಹಿಳೆಯರಿಬ್ಬರೂ ಸರಿಸಮನಾಗಿ ಮಹಿಳಾ ಸಬಲೀಕರಣದಲ್ಲಿ ಹೆಜ್ಜೆ ಹಾಕಬೇಕು’ ಎಂದು ಲೇಖಕಿ ಆರ್ಯಾಂಬ ಪಟ್ಟಾಭಿಯವರು ಹೇಳುವ ಮಾತು ಇಲ್ಲಿ ಪ್ರಸ್ತುತವೆನಿಸುತ್ತದೆ. ಇವತ್ತು ಅಡುಗೆಮನೆಯಿಂದ ಅಂಗಾರಕ ಗ್ರಹದ ಅಂಗಳದವರೆಗೂ ಸಾಧನೆ ಮಾಡುತ್ತಿರುವ ಮಹಿಳೆಯರ ಬಗ್ಗೆ ಅಧ್ಯಯನ ಎಲ್ಲ ರಂಗಗಳಲ್ಲಿರುವ ಎಲ್ಲರಿಗೂ ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.