ಸಿಸಿಇ ಆದರ್ಶ ಮತ್ತು ವಾಸ್ತವ ವಿಧ್ಯಾರ್ಥಿ ಕಲಿತದ್ದನ್ನು ದೃಢಪಡಿಸಿಕೊಳ್ಳಲು ಮೌಲ್ಯಮಾಪನ ಅಗತ್ಯ. ಕಲಿಸುವವರಿಗೆ ಕಲಿಕಾರ್ಥಿಯ ಕಲಿಕೆಯ ಮಟ್ಟವನ್ನು ತಿಳಿದುಕೊಳ್ಳುವುದು ಅನಿವಾರ್ಯ. ಇದರಿಂದ ಕಲಿಸುವ ಕ್ರಿಯೆಯನ್ನು ಮತ್ತಷ್ಟು ಉತ್ತಮಪಡಿಸುವ ಅವಕಾಶ ಇರುತ್ತದೆ. ಆದರೆ ನಮ್ಮಲ್ಲಿ ಮೌಲ್ಯಮಾಪನವೆಂದರೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಒಂದೂವರೆ ಅಥವಾ ಮೂರು ಗಂಟೆಗಳ ಕಾಲ ನಡೆಯುವ ಪರೀಕ್ಷೆ ಮಾತ್ರ ಎಂದುಕೊಂಡಿರುವುದು ದುರಂತ..! ’ಪ್ರತಿ ಮಗುವಿನ ವೈಯುಕ್ತಿಕ ಭಿನ್ನತೆಗಳನ್ನು, ಮನೋಭಾವಗಳನ್ನು, ಆಸಕ್ತಿಗಳನ್ನು ಅಲಕ್ಷಿಸುವ ಬಾಹ್ಯ ಪರೀಕ್ಷೆಗಳಿಗಿಂತ, ಮಗುವಿನ ವ್ಯಕ್ತಿತ್ವದ ಎಲ್ಲ ಆಯಾಮಗಳನ್ನು ನಿರಂತರವಾಗಿ ಗಮನಿಸಬೇಕು. ಇದಕ್ಕಾಗಿ ವಿದ್ಯಾರ್ಥಿಯ ಆಂತರಿಕ ಮೌಲ್ಯಮಾಪನ ಅತಿ ಮುಖ್ಯ’ ಎಂದು ಕೊಥಾರಿ ಆಯೋಗ ತನ್ನ ೧೯೬೬ರ ವರದಿಯಲ್ಲೇ ಹೇಳಿತ್ತು. ೧೯೮೬ರ ಹೊಸ ಶಿಕ್ಷಣ ನೀತಿಯೂ, ಮಗುವಿನ ವಿದ್ಯಾರ್ಥಿ ದೆಸೆಯುದ್ದಕ್ಕೂ ಇಂತಹ ಮೌಲ್ಯಮಾಪನ ನಡೆಯುವ ಅಗತ್ಯವನ್ನು ಪ್ರತಿಪಾದಿಸಿದೆ. ಅಂದರೆ ಇವೆರಡೂ ವರದಿಗಳು ವಿಧ್ಯಾರ್ಥಿಯ ನಿರಂತರ ಮತ್ತು ವಿಸ್ತೃತ ಮೌಲ್ಯಮಾಪನದ ಅಗತ್ಯವನ್ನು ಒತ್ತಿ ಹೇಳಿವೆ. ವೈಯುಕ್ತಿಕತೆಗಿಂತ ಸಾಮಾಜಿಕತೆಗೆ ಪ್ರಾಧಾನ್ಯ ನೀಡುವಂತೆ ಶಿಕ್ಷಿತ ವ್ಯಕ್ತಿಯ ಮನೋಭಾವ ರೂಪು ಗೊಂಡಿರಬೇಕೆಂದು ಪ್ಲೇಟೋ ತನ್ನ ’ರಿಪಬ್ಲಿಕ್’ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಬಹುಪಾಲು ಪ್ರಪಂಚದ ಎಲ್ಲ ದೇಶಗಳಲ್ಲಿನ ಶಿಕ್ಷಣದ ಮೂಲ ಉದ್ದೇಶಗಳಲ್ಲಿ ಸಮಾಜದ ಶ್ರೇಯಸ್ಸೇ ಅಂತಿಮ ಗುರಿಯಾಗಿದೆ. ಶಿಕ್ಷಣ ನೀಡುವ ಹಂತದಲ್ಲಿ ಎಲ್ಲ ವಿಷಯಗಳನ್ನು, ಕೌಶಲಗಳನ್ನು ಕಲಿಸುವುದರ ಜೊತೆಗೆ ಮನೋಭಾವ ರೂಪಿಸುವುದೂ ಮುಖ್ಯ. ಈ ಹಿನ್ನೆಲೆಯಲ್ಲಿ ಮೌಲ್ಯಮಾಪನದ ಸ್ವರೂಪವನ್ನು ನಿರ್ಧರಿಸಬೇಕಾಗುತ್ತದೆ. ಸತತ ಹಾಗೂ ವ್ಯಾಪಕ ಮೌಲ್ಯಮಾಪನ ಅಗತ್ಯ. ಕಲಿಸುವ ಉದ್ದೇಶ ಈಡೇರಿದೆಯೇ ಇಲ್ಲವೆ ಎನ್ನುವುದನ್ನು ನಿಕಷಕ್ಕೊಡ್ಡುವುದು ಮೌಲ್ಯಮಾಪನ. ಯಾವೊಂದು ಕೌಶಲವೂ ಒಂದು ದಿನದಲ್ಲಿ ಅಥವಾ ಒಂದು ಅವಧಿಯಲ್ಲ ಮಗುವಿನೊಳಗೆ ಅಂತರ್ಗತವಾಗುವುದಿಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಕಲಿಸುತ್ತಿರುವ ಹಲವಾರು ಕೌಶಲಗಳು (ಪಠ್ಯ-ಪಠ್ಯೇತರ) ಮಗುವಿನಲ್ಲಿ ರೂಪುಗೊಳ್ಳುತ್ತಿದೆಯೇ ಇಲ್ಲವೇ ಎಂಬುದನ್ನು ಸದಾ ಗಮನಿಸಿಕೊಳ್ಳುತ್ತ ಇರಬೇಕಾಗುತ್ತದೆ. ಶಾಶ್ವತವಾಗಿ ಉಳಿಯುವುದು ಮಾತ್ರ ಕಲಿಕೆ ಎನ್ನಿಸಿಕೊಳ್ಳುತ್ತದೆ. ಪರೀಕ್ಷೆಯಲ್ಲಿ ಆ ಸಮಯಕ್ಕೆ ನೆನಪಿನಲ್ಲಿ ಉಳಿದಿರುವುದನ್ನು ಮಾತ್ರ ಪರಿಗಣಿಸಲಾಗುತ್ತದೆ. ಇಲ್ಲಿ ಮಗುವಿನ ಕಲಿಕೆಯ ಆಳವನ್ನು ಅರಿಯುವ ಸೂಕ್ತ ಮಾನದಂಡಗಳು ಇಲ್ಲವೇ ಇಲ್ಲ. ಪಠ್ಯಪುಸ್ತಕವೊಂದರಲ್ಲಿ ’ಜೆಸ್ಸಿ ಓವೆನ್ಸ್ ವಿಶ್ವದ ಅತ್ಯಂತ ವೇಗದ ಓಟಗಾರನಾಗಿದ್ದ’ ಎಂದಿದೆ. ಇಂದು ಪರೀಕ್ಷೆಯಲ್ಲಿ ವಿಶ್ವದ ಅತ್ಯಂತ ವೇಗದ ಓಟಗಾರನಾರು ಎಂಬ ಪ್ರಶ್ನೆಗೆ ಮಗು ಬರೆಯುವ ಉತ್ತರ ‘ಹುಸೇನ್ ಬೋಲ್ಟ್’ ಎಂದಿದ್ದರೆ ಮಗು ಸ್ವತಃ ಕಲಿಯುವ ಕೌಶಲ ರೂಢಿಸಿಕೊಂಡಿದೆ ಎಂದು ಅರ್ಥೈಸಿಕೊಳ್ಳಬಹುದು. ಪುಸ್ತಕದಲ್ಲಿರುವುದನ್ನೇ ಬರೆದರೆ..? ಆದ್ದರಿಂದಲೇ ಪುಸ್ತಕಗಳನ್ನಾಧರಿಸಿದ ಪ್ರಶ್ನೆಗಳು ಮಾತ್ರ ಇರುವ ಪರೀಕ್ಷೆ ಎಂಬ ಪ್ರಹಸನಗಳನ್ನು ನಾವಿಂದು ಬದಲಾಯಿಸಲೇಬೇಕಿದೆ. ಪರೀಕ್ಷೆಗಳಲ್ಲಿ ಅಭ್ಯಾಸ ಮಾಡಿದ ಉತ್ತರಗಳನ್ನೇ ಬರೆದರೆ ಅದು ಪ್ರಹಸನವಲ್ಲದೆ ಮತ್ತೇನು..? ಇಲ್ಲಿ ಎರಡು ಅಪಾಯಗಳಿವೆ. ವಿಷಯದಲ್ಲಿನ ಕಲಿಕಾಂಶದ ಪರಿಕಲ್ಪನೆ ಮಗುವಿನಲ್ಲಿ ಮೂಡದೇ ಹೋಗುವುದು ಮತ್ತು ಅಭಿವ್ಯಕ್ತಿ ಕೌಶಲ ಬೆಳೆಸಿಕೊಳ್ಳುವ ಅವಕಾಶ ಶಾಶ್ವತವಾಗಿ ತಪ್ಪಿ ಹೋಗುವುದು. ೧೯೬೬ರ ಕೊಥಾರಿ ಆಯೋಗ ನೀಡಿದ್ದ ವರದಿಯಲ್ಲಿದ್ದ ಮತ್ತು ೮೬ರ ಹೊಸ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿದ ಅಂಶಗಳನ್ನೇ ಈಗ ಹೆಚ್ಚು ಸ್ಪಷ್ಟವಾಗಿ ಜಾರಿಗೆ ತರಲು ಹೊರಟಿರುವುದು ಸ್ವಾಗತಾರ್ಹ. (..) ಎಂದು ಕರೆಯಲಾಗುತ್ತಿರುವ ಇದರ ಮುಖ್ಯ ಲಕ್ಷಣಗಳನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ’ಮೌಲ್ಯಮಾಪನ’ ಎಂದರೇನೆಂದು ಗ್ರಹಿಸಬೇಕಿದೆ. ಈ ಮೊದಲೇ ತಿಳಿಸಿದಂತೆ ವಿದ್ಯಾರ್ಥಿಯ ಕಲಿಕೆ, ಜ್ಞಾನ, ವರ್ತನೆ, ಕೌಶಲ, ರೂಢಿಸಿಕೊಂಡ ಮನೋಭಾವ ಮತ್ತು ಒಂದು ನಿರ್ಧಿಷ್ಟ ಅಂಶದ ಬಗ್ಗೆ ಆ ಮಗುವಿನ ಧೋರಣೆ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ತಿಳಿದುಕೊಳ್ಳುವುದೇ ಮೌಲ್ಯಮಾಪನ. ಇದುವರೆಗಿನ ಪರೀಕ್ಷಾ ಕ್ರಮದಲ್ಲಿ ಈ ರೀತಿಯ ಅಧ್ಯಯನಕ್ಕೆ ಅವಕಾಶವೇ ಇರಲಿಲ್ಲ. ಆದ್ದರಿಂದಲೇ ಸಿಸಿಇ, ಮೌಲ್ಯಮಾಪನದಲ್ಲಿ ‘ರೂಪಣಾತ್ಮಕ’ ಮತ್ತು ‘ಸಂಕಲನಾತ್ಮಕ’ ಎಂಬ ಎರಡು ಹೊಸ ಕಲ್ಪನೆಗಳನ್ನು ಪರಿಚಯಿಸುತ್ತಿದೆ. ಸ್ವತಃ ಉತ್ತರಗಳನ್ನು ಹುಡುಕಿ ಬರೆಯುವುದು, ಶಿಕ್ಷಕರ ವಿವರಣೆಯನ್ನು ಕೇಳಿದ ನಂತರ ಆ ವಿಷಯವನ್ನು ತನ್ನದೇ ಮಾತಿನಲ್ಲಿ ವಿವರಿಸುವಂತಾಗುವುದು ಮಾತ್ರವಲ್ಲದೆ ಬರೆಯಲೂ ಸಮರ್ಥವಾಗಿರಬೇಕು. ವಿಜ್ಞಾನ, ಸಮಾಜ ವಿಜ್ಞಾನದ ಪರಿಕಲ್ಪನೆಗಳು, ಗಣಿತದ ಸಮಸ್ಯೆಗಳ ಸಾರಾಂಶವನ್ನು ಗ್ರಹಿಸಿ ತರ್ಕಬದ್ಧವಾಗಿ ವಿಶ್ಲೇಷಿಸುವಂತಾಗಬೇಕು. ಇಲ್ಲೆಲ್ಲೂ ಉರುಹೊಡೆಯುವುದಕ್ಕೆ ಅವಕಾಶವೇ ಇಲ್ಲ. ಆ ವಿಧಾನವನ್ನೇ ವರ್ಜಿಸಿ ವಿದ್ಯಾರ್ಥಿಯಲ್ಲಿ ತನ್ನದೇ ಆದ ಆಲೋಚನಾ ಕ್ರಮವನ್ನು ರೂಢಿಸಬೇಕು. ಮಗುವಿನ ಮನಸ್ಸನ್ನು ಸಮಗ್ರವಾಗಿ ಅರಳಿಸುವುದೇ ಕಲಿಸುವುದರ ಮೂಲ ಉದ್ದೇಶವಾಗಬೇಕು ಎನ್ನುತ್ತದೆ ಎನ್.ಸಿ.ಎಫ್.೨೦೦೫. ಇಲ್ಲಿ ಮುಖ್ಯವಾಗಿ ಸಂಜ್ಞಾತ್ಮಕ, ಮನೋಚಾಲನ ಮತ್ತು ಭಾವನಾತ್ಮಕ ಕೌಶಲಗಳ ಪರಿಣಾಮಕಾರಿ ವೃದ್ಧಿಗೆ ಆದ್ಯತೆ ಸಿಗುತ್ತದೆ. ಮೌಲ್ಯಮಾಪನವೆನ್ನುವುದು ಕಲಿಸುವ ಕ್ರಿಯೆಯಲ್ಲಿಯೇ ಅಂತರ್ಗತವಾಗಿರುವುದರಿಂದ ವಿದ್ಯಾರ್ಥಿಯ ಸಾಧನೆಗಳನ್ನು ಉತಮಗೊಳಿಸಲು ಸಹಾಯವಾಗುತ್ತದೆ. ಕಲಿಸುವ ಕ್ರಿಯೆ ಸತತ ವಿಶ್ಲೇಷಣೆ, ಪರಿಹಾರದೊಂದಿಗೆ ಸಾಗುವುದರಿಂದ ಕಲಿಯುವವನ ಆಸಕ್ತಿ ಮತ್ತು ಕಲಿಯುವ ವೇಗಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ಹೀಗೆ ಹಲವಾರು ಸಾಮರ್ಥ್ಯಗಳು ಮಗುವಿನಲ್ಲಿ ರೂಪುಗೊಳ್ಳುತ್ತಿರುವುದನ್ನು ನಿರಂತರವಾಗಿ ಗಮನಿಸುತ್ತಾ ಹೋಗುವುದೇ ರೂಪಣಾತ್ಮಕ ಮೌಲ್ಯಮಾಪನ ಎನಿಸಿಕೊಳ್ಳುತ್ತದೆ. ಕಲಿಸುವ ವಿವಿಧ ಹಂತಗಳಲ್ಲ್ಲಿ ರೂಪುಗೊಂಡ ವ್ಯಕ್ತಿತ್ವದ ಒಟ್ಟು ಸಾರಾಂಶವನ್ನು ತಿಳಿದುಕೊಳ್ಳಲು, ಮತ್ತು ರೂಪಣಾತ್ಮಕ ಮೌಲ್ಯಮಾಪನದಲ್ಲಿ ಗಳಿಸಿಕೊಂಡಿದ್ದಾನೆ/ಳೆ ಎನ್ನಲಾದ ಕೌಶಲಗಳೆಲ್ಲವೂ ಆ ವಿದ್ಯಾರ್ಥಿಯಲ್ಲಿ ಶಾಶ್ವತವಾಗಿ ಉಳಿದಿದೆಯೆ ಇಲ್ಲವೆ ಎಂಬುದನ್ನು ತಿಳಿಸುವುದೇ ಸಂಕಲನಾತ್ಮಕ ಮೌಲ್ಯಮಾಪನ. ಕಲಿಸುವವರಿಗೆ ತಮ್ಮ ವಿಧಾನದಲ್ಲಿನ ನ್ಯೂನತೆ ತಿಳಿದು ಪರಿಹರಿಸಿಕೊಳ್ಳಲೂ ಇದು ಸಹಕಾರಿ. ಒಂದು ಹಂತ ಅಥವಾ ಘಟಕದ ಕೊನೆಯಲ್ಲಿ ವಿದ್ಯಾರ್ಥಿ ತಾನು ಕಲಿತದ್ದನ್ನು ಅಥವಾ ಕಲಿಯದ್ದನ್ನು ತೋರಿಸಲು ಇಲ್ಲಿ ಅವಕಾಶವಿರುತ್ತದೆ. ಇಲ್ಲಿ ಕಲಿತದ್ದಕ್ಕೆ ಅಂಕ ಅಥವಾ ಶ್ರೇಣಿ ನೀಡಲಾಗುತ್ತದೆ. ಇವೆಲ್ಲವೂ ಸಿ.ಸಿ.ಇಯ ಮುಖ್ಯ ಪರಿಕಲ್ಪನೆ. ಆದರೆ ವ್ಯವಸ್ಥೆಯಲ್ಲಿನ ವಾಸ್ತವ ಭಿನ್ನವಾಗಿದೆ. ತರಗತಿಯಲ್ಲಿನ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಷ್ಟೂ ಮಕ್ಕಳನ್ನು ಹೇಗೆ ವಿವರವಾಗಿ ರೂಪಣಾತ್ಮಕ ಮೌಲ್ಯಮಾಪನಕ್ಕೆ ಒಳಪಡಿಸುವುದು..? ಪಠ್ಯಕ್ರಮ ಮುಗಿಸಲು, ಗುಣಮಟ್ಟ ದಾಖಲಿಸಲು ಸಮಯದ ಅಭಾವ. ಪರೀಕ್ಷೆಗಳೇ ಇಲ್ಲವಾದರೆ ಪಾಸು-ಫೇಲು ನಿರ್ಧರಿಸುವುದು ಹೇಗೆ..? ಅಂಕಗಳನ್ನು ನೀಡದೇ ಪ್ರಗತಿಯನ್ನು ಅಳೆಯುವುದಾದರೂ ಹೇಗೆ..? ದಾಖಲೆಗಳ ವಿಷಯಕ್ಕೆ ಬಂದಾಗ, ಅದು ಬೇಕಿರುವುದು ನನಗಾಗಿ, ನನ್ನ ವಿದ್ಯಾರ್ಥಿಗಳನ್ನು ಅರಿತುಕೊಳ್ಳಲಿಕ್ಕಾಗಿ ಎಂದುಕೊಂಡರೆ ಸಮಯ ತಾನಾಗೇ ಸಿಗುತ್ತದೆ. ಪಠ್ಯಕ್ರಮ ಮುಗಿಸುವ ಧಾವಂತದಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳ ಗ್ರಹಿಕೆಗೆ ದೊರೆಯದೇ ಇರುವುದಕ್ಕಿಂತ, ಕಲಿಸಿರುವ ಅರ್ಧವಾದರೂ ಪರಿಪೂರ್ಣವಾಗಿ, ಪರಿಣಾಮಕಾರಿಯಾಗಿ ಮನದಟ್ಟಾಗಲಿ ಎಂಬಂತೆ ಇರಬೇಕು. ಮೌಲ್ಯಮಾಪನ ವ್ಯಾಪಕವಾದಾಗ ಪಾಸು-ಫೇಲಿನ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಕಲಿಕೆಯ ಮಟ್ಟದ ಆಧಾರದಲ್ಲಿ ವಿದ್ಯಾರ್ಥಿ ಮುಂದುವರೆಯಲು ಅವಕಾಶವಿರುತ್ತದೆ. ಪ್ರಗತಿಯನ್ನು ಅಂಕಗಳ ಆಧಾರದಲ್ಲಿ ಅಳೆಯುವುದು ಸಾಧ್ಯವೇ ಇಲ್ಲ. ಸಮೂಹವೊಂದು ‘ರೂಪಣಾತ್ಮಕ’ ಮತ್ತು ‘ಸಂಕಲನಾತ್ಮಕ’ ಮೌಲ್ಯಮಾಪನದ ದಾಖಲೆಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ದಾಖಲಿಸುವ ಪುಸ್ತಕದಲ್ಲಿ ಇರಬೇಕಾದ ಅಡ್ಡಡ್ಡ ಕಾಲಮ್ಮುಗಳು ಎಷ್ಟು, ಉದ್ದುದ್ದ ಕಾಲಮ್ಮುಗಳು ಎಷ್ಟು ಎನ್ನುವುದರ ಬಗ್ಗೆ ಮಾತ್ರ ಗಂಭೀರವಾಗಿ ಚಿಂತಿಸುತ್ತಿದೆ. ಅಲ್ಲಿಗೆ ಕಲಿಸುವ ಕ್ರಮಗಳಲ್ಲಿ ಬರಬೇಕಾದ ಅಮೂಲಾಗ್ರ ಬದಲಾವಣೆಯನ್ನು ಚಿಂತಿಸದೆ ಗಾಳಿಗೆ ತೂರಿದಂತಾಯಿತು. ಶಾಲೆಗೆ ಭೇಟಿ ನೀಡುವ ಎಲ್ಲ ಹಂತದ ಸಂಪನ್ಮೂಲ ವ್ಯಕ್ತಿಗಳೂ ಕೇವಲ ದಾಖಲೆಗಳನ್ನಷ್ಟೇ ನೋಡಲು ಬಯಸುತ್ತಾರೆ. ಅವರೊಮ್ಮೆ ಅದನ್ನು ನೋಡಿ ಹೋದರೆ ಅದರಲ್ಲಿರುವುದೆಲ್ಲಾ ಒಪ್ಪಿತ ಸತ್ಯವಾಗಿಬಿಡುತ್ತವೆ. ಮೊದಲು ಮಾಡುತ್ತಿದ್ದಂತೆಯೇ ಪರೀಕ್ಷೆ ಎನ್ನುವ ನಾಟಕಗಳನ್ನು ನಡೆಸಿ ಅದನ್ನೇ ಸಿ.ಸಿ.ಇಯಂತೆ ರೂಪಾಂತರಿಸಿ ದಾಖಲೆ ಮಾಡಿಟ್ಟರೆ ಸಾಕು ಎನ್ನುವ ಶಿಕ್ಷಕರ ಮನೋಭಾವ ಎನ್.ಸಿ.ಎಫ್.೨೦೦೫ರ ಮೂಲ ಉದ್ದೇಶಕ್ಕೇ ಕೊಡಲಿ ಪೆಟ್ಟುಕೊಡುತ್ತಿದೆ. ಎನ್.ಸಿ.ಎಫ್.೨೦೦೫ ಮತ್ತು ಸಿ.ಸಿ.ಇ. ಪರಿಣಾಮಕಾರಿಯಾಗಲು ಶೈಕ್ಷಣಿಕ ವ್ಯವಸ್ಥೆಯಲ್ಲಿ ಇನ್ನೂ ಕೆಲವು ಅಮೂಲಾಗ್ರ ಬದಲಾವಣೆಗಳು ಆಗಬೇಕಿದೆ ಎನ್ನುವುದು ಮಾತ್ರ ನಿಜ. ಎಂ.ಜೆ.ರಾಜೀವಗೌಡ ಮೇಲೂರು (ಮಾಹಿತಿಗೆ: ೯೯೪೫೪೦೮೩೫೯) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.