ಲಿಂಗ ಸಮಾನತೆ ಬಾಲ್ಯದ ಕಲಿಕೆಯಾಗಲಿ ಮಂಗಳೂರಿನಲ್ಲಿ ಹೋಮ್‌ಸ್ಟೇ ಹಲ್ಲೆ ಆದಾಗ ಮಾಧ್ಯಮಗಳು ಸಮಾಜದಲ್ಲಿ ಗುರುತಿಸಿಕೊಂಡ ಹಲವರ ಬಳಿ ಅಭಿಪ್ರಾಯ ಸಂಗ್ರಹಿಸಿದವು. ಆ ಸಂದರ್ಭದಲ್ಲಿ ಸಾಹಿತಿ ವೈದೇಹಿ ಒಂದು ಕಿವಿ ಮಾತು ಹೇಳಿದರು, ‘ದೌರ್ಜನ್ಯಕ್ಕೆ ಒಳಗಾದವಳು ಮಹಿಳೆಯಾಗಿರುವಾಗ ಕೇವಲ ಮಹಿಳೆಯರನ್ನೇ ಹುಡುಕಿ ಅಭಿಪ್ರಾಯ ಕೇಳುವುದರಲ್ಲಿ ಅರ್ಥವೇನಿದೆ. ಸಮಾಜದಲ್ಲಿ ಪುರುಷರು ನಿರ್ಣಾಯಕ ಜಾಗದಲ್ಲಿರುವಾಗ ಇಂತಹ ದೌರ್ಜನ್ಯ ನಿಯಂತ್ರಣದ ಬಗ್ಗೆ ಅವರೊಡನೆ ಸಂವಾದಿಸುವುದೂ ಮುಖ್ಯವಲ್ಲವೇ...’ ಈ ಮಾತು ಮಹಿಳಾ ದೌರ್ಜನ್ಯದ ಪ್ರಕರಣಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಮಹಿಳಾ ಕಾರ್ಯಕ್ರಮಗಳು, ಮಹಿಳಾ ಅಧ್ಯಯನಗಳು, ಹೋರಾಟಗಳಿಗೂ ಅನ್ವಯಿಸುತ್ತದೆ. ಮಹಿಳಾ ಹೋರಾಟ, ಕಾರ್ಯಕ್ರಮ ಎಂದಾಕ್ಷಣ ಅದರ ನಿರ್ವಹಣೆಯನ್ನು ಮಹಿಳೆಯರೇ ಮಾಡಬೇಕು ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಬಹುಕಾಲದಿಂದಲೂ ಇದೆ. ಮಹಿಳೆಯರ ಸ್ಥಿತಿಗತಿ ಸುಧಾರಣೆಯಲ್ಲಿ ಈ ತಪ್ಪುಕಲ್ಪನೆ ಬಹಳ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಮಹಿಳೆಯರ ಏಳಿಗೆ, ಮಹಿಳೆಗೆ ಭದ್ರತಾ ಭಾವ ಒದಗಿಸುವ ಜವಾಬ್ದಾರಿ ನಿರ್ವಹಿಸುವುದು ಅಥವಾ ಮಹಿಳಾ ಸುಧಾರಣೆ – ಇವೆಲ್ಲ ತನ್ನ ಸ್ಥಾನಕ್ಕೆ ಆಪತ್ತು ಎಂದು ಪುರುಷ ಸಮಾಜ ಭಾವಿಸುವುದಿದೆ. ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರ ಪ್ರಾತಿನಿಧ್ಯದಿಂದ ಹಿಡಿದು ಮೀಸಲಾತಿ ಮಸೂದೆ ಮಂಡನೆ, ಸಂಸ್ಥೆಗಳಲ್ಲಿ ಮಹಿಳೆಗೆ ನಿರ್ಣಾಯಕ ಸ್ಥಾನಗಳನ್ನು ನೀಡುವುದು, ಮಹಿಳಾ ಅಧ್ಯಯನ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿಯೂ ಇಂತಹುದೊಂದು ಹಿಂಜರಿಕೆ ಗೋಚರಿಸುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ ವಿಭಾಗಗಳು ಉತ್ಸಾಹದಿಂದಲೇ ಆರಂಭವಾದವು. ಮಂಗಳೂರು ವಿವಿ ಬಗ್ಗೆ ಹೇಳುವುದಾದರೆ 9 ವರ್ಷಗಳ ಹಿಂದೆ ಮಹಿಳಾ ಅಧ್ಯಯನ ಕೇಂದ್ರ ಆರಂಭವಾಯಿತು. ಯುಜಿಸಿ ₨ 50 ಲಕ್ಷ ಅನುದಾನ ನೀಡಿ ಪ್ರೋತ್ಸಾಹಿಸಿತು. ಆದರೆ ಕಳೆದ 9 ವರ್ಷಗಳಿಂದ ಡಿಪ್ಲೊಮಾ ಕೋರ್ಸು ಆರಂಭಿಸುವುದು ಸಾಧ್ಯವಾಗಿಲ್ಲ. ಡಿಪ್ಲೊಮಾ ಆರಂಭಿಸುವ ನಿಟ್ಟಿನಲ್ಲಿ ಹಲವು ಬಾರಿ ಅರ್ಜಿಗಳನ್ನು ಆಹ್ವಾನಿಸಿದರೂ ಅಧ್ಯಯನಕ್ಕೆ ಯಾವುದೇ ವಿದ್ಯಾರ್ಥಿ ಅರ್ಜಿ ಹಾಕಲಿಲ್ಲ ಎನ್ನುತ್ತಾರೆ ಕುಲಪತಿ ಪ್ರೊ. ಟಿ. ಸಿ. ಶಿವಶಂಕರ ಮೂರ್ತಿ. ವಿದ್ಯಾರ್ಥಿಗಳೇ ಇಲ್ಲದ ಮೇಲೆ ಇನ್ನು ಅಧ್ಯಯನ ವಿಭಾಗವನ್ನು ಸಬಲೀಕರಣಗೊಳಿಸುವ ಮಾತೆಲ್ಲಿಂದ ಬಂತು ? ಹಾಗಂತ ವಿವಿಯ ಮಹಿಳಾ ಅಧ್ಯಯನ ಕೇಂದ್ರ ನಿರಾಶೆಯಿಂದ ಕೈ ಕಟ್ಟಿ ಕುಳಿತಿಲ್ಲ. ವಿವಿ ಮಹಿಳಾ ಅಧ್ಯಯನ ಕೇಂದ್ರ ಲಿಂಗ ಸಮಾನತೆಯ ಪಠ್ಯ ತಯಾರಿಸಿ, ಅವುಗಳ ಅಧ್ಯಯನವನ್ನು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ತರಗತಿಗಳಿಗೆ ಕಡ್ಡಾಯಗೊಳಿಸಿದೆ. ಇಂಗ್ಲಿಷ್‌ ವಿಭಾಗದ ಮುಖ್ಯಸ್ಥೆ ಡಾ. ಕಿಶೋರಿ ನಾಯಕ್‌ ಈ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜದ ವಿವಿಧ ಕ್ಷೇತ್ರದಲ್ಲಿ ಮಹಿಳೆಯ ಪಾತ್ರ, ದೌರ್ಜನ್ಯಕ್ಕೊಳಗಾದಾಗ ಆಪ್ತ ಸಲಹೆಗೆ ಮಾರ್ಗದರ್ಶನ, ತರಬೇತುದಾರರಿಗೆ ತರಬೇತಿ, ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಲಿಂಗ ಸಮಾನತೆ ಕುರಿತ ಮಾರ್ಗದರ್ಶನ ಮುಂತಾದ ಕಾರ್ಯಕ್ರಮಗಳನ್ನು ಕೇಂದ್ರ ನಡೆಸುತ್ತಿದೆ. ಆದರೆ ಮಹಿಳಾ ಅಧ್ಯಯನ ವಿಚಾರದಲ್ಲಿ ಗಂಭೀರವಾದ ಮುನ್ನಡೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರವಾಗಿ ಎರಡು ಅಂಶಗಳು ಗಮನಕ್ಕೆ ಬರುತ್ತವೆ. ಮೊದಲನೆಯದಾಗಿ ಮಹಿಳಾ ಅಧ್ಯಯನ ವಿಷಯದಲ್ಲಿ ಡಿಪ್ಲೊಮಾ ಅಥವಾ ಸ್ನಾತಕೋತ್ತರ ಅಧ್ಯಯನ ಮಾಡಿದಲ್ಲಿ ಅವರಿಗೆ ಸರ್ಕಾರಿ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳು ಇರುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳು ಉದ್ಯೋಗವಕಾಶವಿಲ್ಲದ, ಇಂಥ ವಿಮರ್ಶಾತ್ಮಕ ಅಧ್ಯಯನದತ್ತ ಒಲವು ತೋರಿಸುವುದೂ ಕಡಿಮೆ. ಈ ನಿಟ್ಟಿನಲ್ಲಿ ಯೋಚಿಸಿದರೂ ಲಿಂಗ ಸಮಾನತೆಯ ಶಿಕ್ಷಣ ಹುಡುಗ ಮತ್ತು ಹುಡುಗಿ ಇಬ್ಬರಿಗೂ ಪ್ರಾಥಮಿಕ ಹಂತದಲ್ಲಿಯೇ ಅಗತ್ಯ ಎನ್ನುವುದು ಗಮನಾರ್ಹ. ಆದರೆ ಎರಡನೆಯದ್ದು ಗಾಬರಿ ಹುಟ್ಟಿಸುವಂಥ ವಿಷಯವೇ ಆಗಿದೆ. ಮಹಿಳಾ ಅಧ್ಯಯನ ಮಾಡಿದ ಯುವತಿಗೆ ಮದುವೆಯ ಮಾರುಕಟ್ಟೆಯಲ್ಲಿ ಋಣಾತ್ಮಕ ಅಂಕಗಳು ಸಿಗುತ್ತವೆ. ‘ಓ ಹುಡುಗಿ ಓದಿದ್ದು ಮಹಿಳಾ ಅಧ್ಯಯನವಾ... ಹಾಗಾದರೆ ಸುಮ್ಮನೆ ಮಾತು ಮಾತಿಗೆ ಕಾನೂನು ಕಟ್ಲೆ ಅಂತ ಜಗಳ ಯಾಕೆ...’ ಅಂತ ಹುಡುಗಿ ನೋಡುವ ಶಾಸ್ತ್ರದಲ್ಲಿಯೇ ಹಿನ್ನಡೆಯಾಗಿಬಿಡುತ್ತದೆ. ಈ ಅಂಶವನ್ನು ಡಾ. ಕಿಶೋರಿ ನಾಯಕ್‌ ಕೂಡ ಗಮನಿಸುತ್ತಾರೆ. ಮಹಿಳಾ ಅಧ್ಯಯನ ಎನ್ನುವುದು ‘ಪುರುಷ ವಿರೋಧಿ’ ಎನ್ನುವ ತಪ್ಪು ಕಲ್ಪನೆಯೇ ಇದಕ್ಕೆಲ್ಲ ಕಾರಣ. ಮಹಿಳಾ ಪರ ಚಿಂತನೆ ಮತ್ತು ಅಧ್ಯಯನ ಏನಿದ್ದರೂ ಅದು ಆಕೆಯ ಸ್ವಯಂ ರಕ್ಷಣೆ ಮತ್ತು ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಾಗಿರುತ್ತದೆಯೇ ಹೊರತು ಪುರುಷರನ್ನು ವಿರೋಧಿಸುವುದಲ್ಲ. ನಮ್ಮ ಮನೆ ಮಗಳು ತನ್ನನ್ನು ತಾನು ಸಮರ್ಥವಾಗಿ ನಿಭಾಯಿಸಿಕೊಂಡು ಯಶಸ್ವಿಯಾಗಿ ಜೀವನ ಮಾಡುವುದರಿಂದ ಯಾರಿಗೆ ತಾನೇ ತೊಂದರೆ ಆದೀತು... ಆದರೆ ಸಮಾಜದಲ್ಲಿ ಇಂತಹ ಧೋರಣೆ ಕಾಣಿಸುವುದಿಲ್ಲ. ಇದೊಂದು ತಗಾದೆ ತೆಗೆಯುವ ವಿಷಯ ಎಂಬ ತಾತ್ಸಾರ ಇದೆ. ಈ ಅಂಶವನ್ನು ಸರಿಪಡಿಸಬೇಕಾದರೆ ಮಹಿಳಾ ಅಧ್ಯಯನ ಅಥವಾ ಲಿಂಗ ಸಮಾನತೆಯ ಶಿಕ್ಷಣವನ್ನು ಪ್ರಾಥಮಿಕ ತರಗತಿಗಳಿಂದಲೇ ಕಡ್ಡಾಯ ವಿಷಯವನ್ನಾಗಿ ಮಾಡಬೇಕು ಎನ್ನುತ್ತಾರೆ ಡಾ. ಕಿಶೋರಿ ನಾಯಕ್‌. ಲಿಂಗ ಸಮಾನತೆಯ ಶಿಕ್ಷಣವನ್ನು ಗಂಡು ಮಕ್ಕಳೂ ಕಲಿತರೆ ಮದುವೆ ಸಂದರ್ಭದಲ್ಲಿ ಈ ಅಧ್ಯಯನವನ್ನು ತಪ್ಪಾಗಿ ಪರಿಗಣಿಸುವ ಪ್ರಮೇಯವೇ ಬರುವುದಿಲ್ಲ. ಯಾಕೆಂದರೆ ಅಂತಹ ಅಧ್ಯಯನದ ಮೂಲ ವಿಚಾರಗಳನ್ನು ಪುರುಷರು ತಮ್ಮ ಪ್ರಾಥಮಿಕ ತರಗತಿಗಳಲ್ಲಿಯೇ ತಿಳಿದುಕೊಂಡಿರುತ್ತಾರಲ್ಲ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.