ಮಣ್ಣು, ಸಸ್ಯ, ವಾತಾವರಣ... ಕೃಷಿ ವಿಷಯದಲ್ಲಿ ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಪೂರ್ಣಗೊಳಿಸಿದ ಭಾರತದ ವಿದ್ಯಾರ್ಥಿಗಳು ಇನ್ನಷ್ಟು ಅಧ್ಯಯನ ನಡೆಸಲು ಈಗ ಇಸ್ರೇಲ್‌ಗೆ ಹೋಗಬಹುದು. ಭಾರತವನ್ನು ಗಮನದಲ್ಲಿ ಇಟ್ಟುಕೊಂಡೇ ಹೊಸ ಕೋರ್ಸ್ ಅನ್ನು ಇಸ್ರೇಲ್ ಸರ್ಕಾರ ರೂಪಿಸಿದೆ. ಇದನ್ನು ನೆಗೆವ್ ಮರುಭೂಮಿಯಲ್ಲಿರುವ ಬೆನ್ ಗುರಿಯನ್ ವಿಶ್ವವಿದ್ಯಾಲಯದ ‘ಬ್ಲೌಸ್ಟೈನ್ ಇನ್‌ಸ್ಟಿಟ್ಯೂಟ್ ಫಾರ್ ಡೆಸರ್ಟ್ ರಿಸರ್ಚ್’ (ಬಿಐಡಿಆರ್) ಅನುಷ್ಠಾನಗೊಳಿಸುತ್ತಿದೆ. ‘ಮಣ್ಣು- ಸಸ್ಯ- ವಾತಾವರಣ’ ಎಂಬ ವಿಷಯದ ಮೇಲೆ ಮೂರು ವಾರಗಳ ಅವಧಿಯ ಅಧ್ಯಯನ ನಡೆಸುವ ಅವಕಾಶವನ್ನು ‘ಬಿಐಡಿಆರ್’ ಕಲ್ಪಿಸಲಿದೆ. ಜವುಗು ನೆಲ, ಕ್ಷಾರಯುಕ್ತ ಮಣ್ಣಿನಲ್ಲಿ ಕೃಷಿ ಕುರಿತ ಸಂಶೋಧನೆಗೆ ‘ಬಿಐಡಿಆರ್’ ಹೆಸರುವಾಸಿಯಾಗಿದೆ. ಕೃಷಿ ವಿಜ್ಞಾನ ಕುರಿತು ಇಲ್ಲಿ ನಡೆಯುವ ಸಂಶೋಧನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದಿವೆ. ನೀರಾವರಿ ಹಾಗೂ ಸಸ್ಯ ಪೋಷಣೆ, ಸುಸ್ಥಿರ ಅಭಿವೃದ್ಧಿಗೆ ಕೃಷಿ ಹಾಗೂ ಜೈವಿಕ ತಂತ್ರಜ್ಞಾನ ಕುರಿತ ಇಲ್ಲಿನ ಸಂಶೋಧನೆಗಳು ಹಲವು ದೇಶಗಳಲ್ಲಿ ಯಶಸ್ವಿ ಕೃಷಿಗೂ ಕಾರಣವಾಗಿವೆ. ಪ್ರಸ್ತುತ ಭಾರತದ ವಿದ್ಯಾರ್ಥಿಗಳಿಗೆಂದೇ ರೂಪಿಸಲಾದ ಮೂರು ವಾರಗಳ ಕೋರ್ಸ್, ಮಳೆಯಾಶ್ರಿತ ಪ್ರದೇಶದಲ್ಲಿ ಮಣ್ಣು- ಸಸ್ಯ ಹಾಗೂ ವಾತಾವರಣದ ನಡುವಿನ ಸಂಬಂಧ ಕುರಿತು ಅಧ್ಯಯನ ನಡೆಸಲು ಅನುವು ಮಾಡಿಕೊಡುತ್ತದೆ. ಒಣಭೂಮಿಯಲ್ಲಿ ನೀರಿನ ಮಿತಬಳಕೆಯೊಂದಿಗೆ ಸಸ್ಯ ಪೋಷಣೆ ಮಡುವ ಕುರಿತು ವಿದ್ಯಾರ್ಥಿಗಳು ಇಲ್ಲಿ ಸಂಶೋಧನೆ ನಡೆಸುತ್ತಾರೆ. ಬರೀ ತರಗತಿಯಲ್ಲಿ ಕುಳಿತು ಕೇಳುವ ಉಪನ್ಯಾಸಕ್ಕಷ್ಟೇ ಇದು ಸೀಮಿತವಲ್ಲ. ಸಂಶೋಧನೆಯಿಂದ ಉಂಟಾದ ಪರಿಣಾಮಗಳನ್ನು ಖುದ್ದಾಗಿ ತೋರಿಸುವ ಅಂಶ ಈ ಕಾರ್ಯಕ್ರಮದಲ್ಲಿ ಪ್ರಮುಖವಾದುದು. ಬೆನ್ ಗುರಿಯನ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಗಳು ಇಸ್ರೇಲಿನುದ್ದಕ್ಕೂ ಹೇಗೆ ಅನುಷ್ಠಾನಗೊಂಡಿವೆ ಎಂಬುದನ್ನು ವಿದ್ಯಾರ್ಥಿಗಳು ನೋಡಬಹುದು. ಉಳಿದಂತೆ ಬೃಹತ್ ಪ್ರಮಾಣದ ಹಸಿರುಮನೆ (ಗ್ರೀನ್‌ಹೌಸ್) ಭೇಟಿ, ಬೇರೆ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ವಿಚಾರಸಂಕಿರಣ, ತಂತ್ರಜ್ಞಾನ ಅಳವಡಿಕೆ ವೀಕ್ಷಣೆಯಂಥ ಕಾರ್ಯಕ್ರಮಗಳಲ್ಲಿ ಕೂಡ ಪಾಲ್ಗೊಳ್ಳಬೇಕಾಗುತ್ತದೆ. ತಮ್ಮ ಅವಧಿಯಲ್ಲಿ ಪ್ರತಿಯೊಬ್ಬ ಸಂಶೋಧನಾರ್ಥಿಯೂ ಒಂದು ವಿಷಯವನ್ನು ಆಯ್ದುಕೊಂಡು ಅಧ್ಯಯನ ನಡೆಸಬೇಕು. ಇದಕ್ಕೆ ತಕ್ಕ ಮಾರ್ಗದರ್ಶನ- ಸಲಹೆಯನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ನೀಡುತ್ತಾರೆ. ‘ಕೃಷಿ ಪ್ರಧಾನ ದೇಶವಾದ ಭಾರತವನ್ನೇ ಗಮನದಲ್ಲಿ ಇಟ್ಟುಕೊಂಡು ನಮ್ಮ ಹಾಗೂ ಭಾರತ ಸರ್ಕಾರದ ಮಧ್ಯೆ ಆದ ಒಪ್ಪಂದದಂತೆ ಈ ಕೋರ್ಸ್ ರೂಪಿಸಲಾಗಿದೆ. ಕಳೆದ ವರ್ಷದಿಂದ ಇದಕ್ಕೆ ಚಾಲನೆ ಸಿಕ್ಕಿದ್ದು, ಅನೇಕ ಪದವೀಧರರು ಇಲ್ಲಿ ಅಧ್ಯಯನ ನಡೆಸಿದ್ದಾರೆ. ೨೦೧೪ರ ಮಾರ್ಚ್ ತಿಂಗಳಿನಲ್ಲಿ ಎರಡನೇ ತಂಡವನ್ನು ಆಯ್ಕೆ ಮಾಡಲಿದ್ದೇವೆ’ ಎಂದು ಬಿಐಡಿಆರ್ ನಿರ್ದೇಶಕ ಪ್ರೊ. ಪೆಡ್ರೊ ಬರ್ಲಿನರ್ ಹೇಳುತ್ತಾರೆ. ಕೃಷಿ ತಂತ್ರಜ್ಞಾನದಲ್ಲಿ ಅಗ್ರಶ್ರೇಣಿಯಲ್ಲಿರುವ ಇಸ್ರೇಲ್‌ನ ಈ ಅವಕಾಶ ಬಳಸಿಕೊಳ್ಳಲು ಆಯ್ಕೆಯಾದ ವಿದ್ಯಾರ್ಥಿಗಳು ಒಂದಷ್ಟು ಖರ್ಚು ಮಡಬೇಕು. ಅದು ಇಸ್ರೇಲ್‌ಗೆ ಹೋಗಿ ಬರುವ ಪ್ರಯಾಣ ವೆಚ್ಚ ಮಾತ್ರ. ಇದನ್ನು ಬಿಟ್ಟರೆ ಅತಿಥಿಗೃಹಗಳಲ್ಲಿ ವಸತಿ, ಊಟ-ಉಪಾಹಾರ, ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಉಚಿತ. ಅಲ್ಲಿನ ಖರ್ಚುಗಳಿಗೆ ಸ್ವಲ್ಪ ಪ್ರಮಾಣದ ಸ್ಟೈಪೆಂಡ್ ಕೂಡ ಕೊಡಲಾಗುತ್ತದೆ. ಅಧ್ಯಯನದ ಅವಧಿಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ಹಾಗೂ ವಿವಿಧ ಸಂಶೋಧನಾ ಕೇಂದ್ರ ಹಾಗೂ ವಿವಿಗಳಿಗೆ ಶೈಕ್ಷಣಿಕ ಪ್ರವಾಸವನ್ನೂ ಆಯೋಜಿಸಲಾಗುತ್ತದೆ. ಸಂಶೋಧನಾರ್ಥಿಗಳಿಗೆ... ಪಿಎಚ್‌ಡಿ ಪೂರ್ಣಗೊಳಿಸಿದ ಬಳಿಕ ಹೆಚ್ಚಿನ ಸಂಶೋಧನೆಗೆ ನೆರವಾಗುವುದು ಇಸ್ರೇಲ್ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಇನ್ನೊಂದು ಯೋಜನೆ. ಎರಡು ವರ್ಷಗಳ ಅವಧಿಯ ಈ ಯೋಜನೆಯಲ್ಲಿ ಪ್ರತಿ ಸಂಶೋಧನಾರ್ಥಿಗೆ ವರ್ಷಕ್ಕೆ ಒಂದು ಲಕ್ಷ ಶೆಕಲ್ (೧೭ ಲಕ್ಷ ರೂಪಾಯಿ) ಧನಸಹಾಯ ನೀಡುವುದು ಇನ್ನೊಂದು ವಿಶೇಷ. ಈ ಮೊತ್ತದಲ್ಲಿ ಶೇ ೭೦ರಷ್ಟನ್ನು ಇಸ್ರೇಲ್ ಸರ್ಕಾರ ಹಾಗೂ ಶೇ ೩೦ರಷ್ಟನ್ನು ವಿಶ್ವವಿದ್ಯಾಲಯ ಭರಿಸುತ್ತವೆ. ಮಣ್ಣಿನ ಸ್ವಭಾವ, ನೀರು, ಉಪ್ಪು ನೀರು ಸಂಸ್ಕರಣೆ, ಪೋಷಕಾಂಶಗಳ ನಿರ್ವಹಣೆ ಸೇರಿದಂತೆ ಮೂವತ್ತಕ್ಕೂ ಹೆಚ್ಚು ವಿಭಾಗಗಳಲ್ಲಿ ಅಧ್ಯಯನ ನಡೆಸಲು ಅವಕಾಶವಿದೆ. ‘ನಮ್ಮ ಪ್ರದೇಶದಲ್ಲಿ ಈ ವರ್ಷ ಸುರಿದ ಮಳೆ ೨೦ ಮಿ.ಮೀ. ಮಾತ್ರ. ಇದನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ? ಆಳದಿಂದ ಕೊಳವೆಬಾವಿ ಮೂಲಕ ಪಡೆಯುವ ನೀರು ರಾಸಾಯನಿಕದಿಂದ ಕೂಡಿರುತ್ತದೆ. ಇದನ್ನು ಸಂಸ್ಕರಿಸಿ ಬಳಸಿಕೊಳ್ಳುವುದು ಹೇಗೆ? ಸಸ್ಯಗಳ ಮೇಲೆ ಈ ನೀರಿನ ಪರಿಣಾಮ, ಅದರ ಬಳಕೆ ಹೇಗೆ? ಸಸ್ಯಕ್ಕೆ ಎಷ್ಟು ನೀರು ಕೊಡಬೇಕು? ಗೊಬ್ಬರನ್ನು ನೀರಿನೊಂದಿಗೆ ಹೇಗೆ, ಎಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಿ ನೀಡಬೇಕು? ಇದರಲ್ಲಿ ಮೀನುಗಾರಿಕೆ ಮಾಡುವ ಬಗೆ ಎಂಬಿತ್ಯಾದಿ ವಿಭಾಗಗಳಲ್ಲಿ ಸಂಶೋಧನಾರ್ಥಿಗಳು ಸಂಶೋಧನೆ ನಡೆಸಬೇಕು. ಭಾರತದಲ್ಲಿ ನೀರನ್ನು ಜಮೀನಿಗೆ ನೇರವಾಗಿ ಹರಿಸಿ ಕೃಷಿ ಮಾಡುತ್ತಾರೆ, ಇದರಲ್ಲಿ ವ್ಯರ್ಥವಾಗುವ ಪ್ರಮಾಣ ಹೆಚ್ಚು. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ತಂತ್ರಜ್ಞಾನವನ್ನು ಬಳಸಿ, ನೀರಿನ ಸದ್ಬಳಕೆ ಮಾಡಿಕೊಳ್ಳಲು ಇಲ್ಲಿನ ಸಂಶೋಧನೆ ನೆರವಾಗಬಹುದು. ಅಲ್ಲಿನ ವಾತಾವರಣ ಹಾಗೂ ಬೆಳೆಗಳಿಗೆ ತಕ್ಕಂತೆ ವ್ಯವಸ್ಥಿತವಾದ ಹನಿ, ತುಂತುರು ನೀರಾವರಿ ಯೋಜನೆಯನ್ನು ರೂಪಿಸಿಕೊಳ್ಳಬಹುದು’ ಎಂದು ಡಾ. ನಫ್ತಾಲಿ ಲಾಜರೋವಿಚ್ ಅಭಿಪ್ರಾಯಪಡುತ್ತಾರೆ. ಈ ವರ್ಷದ ಕೋರ್ಸ್ ಸೇರ್ಪಡೆಗೆ ಅರ್ಜಿ ಸಲ್ಲಿಸಲು ೨೦೧೪ರ ಮರ್ಚ್ ೧ ಕೊನೆಯ ದಿನ. ಮಾಹಿತಿಗೆ: @... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.