ಚೆರಿ ಗುಂಡು ಜಾರಿದ್ದೇಕೆ? ಬೇಕಾಗುವ ಸಾಮಗ್ರಿಗಳು: ಒಂದೇ ಅಳತೆಯ ಸ್ಟೀಲ್, ಅಲ್ಯೂಮಿ­ನಿಯಂ ಹಾಗೂ ಪ್ಲಾಸ್ಟಿಕ್ ಚಮಚಗಳು, ಬೀಕರ್, ಬಿಸಿ ನೀರು, ಮೋಂಬತ್ತಿ, 3 ಚಿಕ್ಕ ಚೆರಿ ಗುಂಡುಗಳು. ವಿಧಾನ: ಒಂದೇ ಅಳತೆಯ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಚಮಚಗಳನ್ನು ತೆಗೆದುಕೊಳ್ಳಿ. ಚಿತ್ರದಲ್ಲಿ ತೋರಿಸಿದಂತೆ ಮೂರೂ ಚಮಚಗಳ ಹಿಡಿಕೆಗಳ ತುದಿಯ ಕಡೆಗೆ ಮೇಣವನ್ನು ಉಪಯೋಗಿಸಿ, ಚಿಕ್ಕ ಚೆರಿ ಗುಂಡುಗಳನ್ನು ಅಂಟಿಸಿ. ಚಿತ್ರದಲ್ಲಿ ತೋರಿಸಿದಂತೆ ಮೂರೂ ಚಮಚಗಳನ್ನು ಏಕ ಕಾಲಕ್ಕೆ ಬಿಸಿ ನೀರಿರುವ ಗ್ಲಾಸಿನಲ್ಲಿಡಿ. ಪ್ರಶ್ನೆ: ಚೆರಿ ಗುಂಡುಗಳಿಗೆ ಏನಾಗುತ್ತದೆ? ಯಾಕೆ? ಉತ್ತರ: ಎಲ್ಲ ಲೋಹಗಳು ಒಳ್ಳೆಯ ಉಷ್ಣ ವಾಹಕಗಳು. ಅಲ್ಯೂಮಿನಿಯಂ ಉತ್ತಮ ಉಷ್ಣವಾಹಕ. ಇದರ ಮುಖಾಂತರ ಉಷ್ಣವು ತೀವ್ರ ಗತಿಯಲ್ಲಿ ವಹನವಾಗಿ ಮೋಂಬತ್ತಿಯ ಮೇಣವನ್ನು ಕರಗಿಸುತ್ತದೆ. ಹೀಗಾಗಿ ಇದಕ್ಕೆ ಅಂಟಿಸಿದ ಲೋಹದ ಗುಂಡು ಮೊದಲು ಕೆಳಗೆ ಬೀಳುತ್ತದೆ. ಸ್ಟೀಲ್ ಸಂಯುಕ್ತ ಲೋಹ. ಇಲ್ಲಿ ಉಷ್ಣವು ಸ್ವಲ್ಪ ಸಾವಕಾಶವಾಗಿ ವಹನವಾಗುತ್ತದೆ. ಆದ್ದರಿಂದ ಲೋಹದ ಗುಂಡು ಸ್ವಲ್ಪ ತಡವಾಗಿ ಕಳಚಿ ಬೀಳುತ್ತದೆ. ಪ್ಲಾಸ್ಟಿಕ್ ಉಷ್ಣದ ಅವಾಹಕ/ಮಂದವಾಹಕ. ಇದಕ್ಕೆ ಅಂಟಿಸಿದ ಲೋಹದ ಗುಂಡು ಕಳಚುವುದಿಲ್ಲ. ಆದ್ದರಿಂದ ಪ್ರೆಶರ್ ಕುಕ್ಕರ್‌ಗಳಿಗೆ ಪ್ಲಾಸ್ಟಿಕ್ ಹಿಡಿಕೆಯನ್ನು ಜೋಡಿಸಿರುತ್ತಾರೆ. ಪಾತ್ರೆಗಳಲ್ಲಿಯ ಬಿಸಿ ಪದಾರ್ಥವನ್ನು ಕಲಕಿಸುವಾಗ ಮರದ ಸೌಟುಗಳನ್ನು ಬಳಸುವುದೂ ಉಂಟು. ಯಾಕೆಂದರೆ ಮರವೂ ಕೂಡ ಉಷ್ಣದ ಮಂದವಾಹಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.