ಆಗಸಕ್ಕೆ ಏಣಿ ಎಂಟಿಎಎಂ ಆಗಸದಲ್ಲಿ ಹಕ್ಕಿಯಂತೆ ಹಾರಬೇಕು ಎಂಬ ಮಾನವನ ಆಸೆಯ ಪ್ರತೀಕವಾಗಿ ಹುಟ್ಟಿದ್ದು ವಿಮಾನ. ಮೋಡಗಳ ಮರೆಯಲ್ಲಿ ತೇಲುವ ರೋಮಾಂಚನ, ಸಮಯದ ಉಳಿತಾಯವೂ ವಿಮಾನಯಾನದ ಜನಪ್ರಿಯತೆಗೆ ಕಾರಣವಾಗಿವೆ. ಇದರಿಂದಾಗಿ ಸಂಪರ್ಕ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು ವೇಗದ ಸಾಧನವಾಗಿ ವಿಮಾನಯಾನ ಉದ್ಯಮ ವಲಯ ಬಹುವಿಸ್ತಾರವಾಗಿ ಬೆಳೆಯುತ್ತಿದೆ. ತನ್ನೊಡಲಲ್ಲಿ ಹಲವಾರು ಉದ್ಯೋಗಾವಕಾಶಗಳನ್ನೂ ತುಂಬಿಕೊಂಡಿದೆ. ಅಂತರರಾಷ್ಟ್ರೀಯ ಮತ್ತು ದೇಶದೊಳಗಿನ ವಿಮಾನಯಾನ ಹೆಚ್ಚಿದಂತೆ ಈ ಅವಕಾಶಗಳೂ ದ್ವಿಗುಣಗೊಳ್ಳುತ್ತಿವೆ. ಯುವಕ–ಯುವತಿಯರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ಬೇಡಿಕೆಗೆ ತಕ್ಕಷ್ಟು ಅರ್ಹ ಅಭ್ಯರ್ಥಿಗಳೂ ಸಿಗುತ್ತಿಲ್ಲ ಎಂಬ ಕೊರಗು ಉದ್ಯಮದಲ್ಲಿದೆ. ಆದರೆ ಭಾರತದಲ್ಲಿ ವಿಮಾನಯಾನ ಆಡಳಿತಕ್ಕೆ ಸಂಬಂಧಿಸಿದಂತೆ ಶಿಕ್ಷಣ ನೀಡುವ ಪದವಿ, ಸ್ನಾತಕೋತ್ತರ ಪದವಿ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಖಾಸಗಿ ಸಂಸ್ಥೆಗಳು ಸರ್ಟಿಫಿಕೇಟ್, ಡಿಪ್ಲೋಮಾ ಅಥವಾ ಅರೆಕಾಲಿಕ ಕೋರ್ಸ್‌ಗಳನ್ನು ನಡೆಸುತ್ತಿವೆ. ಆದರೆ ಸಮಗ್ರವಾಗಿ ವಿಮಾನಯಾನ ಆಡಳಿತವನ್ನು ಶಿಸ್ತುಬದ್ಧವಾಗಿ ಕಲಿಸುವ ಕೋರ್ಸ್‌ಗಳ ಕೊರತೆ ಇದೆ. ಇದೇ ಕಾರಣಕ್ಕೆ ಮೈಸೂರಿನ ಮಹಾಜನ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯು (ಎಂಟಿಡಿಐ) ಪ್ರಸಕ್ತ ವರ್ಷದಿಂದ ಪ್ರವಾಸೋದ್ಯಮ ಮತ್ತು ವಿಮಾನಯಾನ ನಿರ್ವಹಣೆ (ಮಾಸ್ಟರ್ ಆಫ್ ಟೂರಿಸಂ & ಏವಿಯೇಷನ್ ಮ್ಯಾನೇಜ್‌ಮೆಂಟ್–ಎಂಟಿಎಎಮ್) ವಿಷಯದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಕೋರ್ಸ್ ಆರಂಭಿಸುತ್ತಿದೆ. ಮೈಸೂರು ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ವಿಮಾನಯಾನ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಮಾನ್ಯತೆ ನೀಡಿದೆ. ಯಾವುದೆ ವಿಷಯದಲ್ಲಿ ಪದವಿ ಪಡೆದವರೂ ಈ ಸ್ನಾತಕೋತ್ತರ ಪದವಿಗೆ ಸೇರಲು ಅವಕಾಶ ಇದೆ. ಏನಿದು ಎಂಟಿಎಎಮ್? ವಿಮಾನಯಾನ ಉದ್ಯಮದಲ್ಲಿರುವ ಉದ್ಯೋಗಾವಕಾಶಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ತಾಂತ್ರಿಕ ವಿಭಾಗ ಹಾಗೂ ಆಡಳಿತ ಮತ್ತು ನಿರ್ವಹಣೆ ವಿಭಾಗ. ಮೊದಲನೇಯದ್ದರಲ್ಲಿ ಪೈಲೆಟ್‌ಗಳು, ನಿಸ್ತಂತು ತಂತ್ರಜ್ಞರು ಸೇರಿದಂತೆ ತಂತ್ರಜ್ಞಾನ ಪದವಿ ಮತ್ತು ಕೌಶಲ್ಯ ಇರುವವರಿಗೆ ಅವಕಾಶಗಳು ಸಾಕಷ್ಟಿವೆ. ಆದರೆ ತಂತ್ರಜ್ಞಾನ ಹೊರತುಪಡಿಸಿ ಉಳಿದೆಲ್ಲ ಕೆಲಸಗಳಿಗೆ ಆಡಳಿತ, ಲೆಕ್ಕಪತ್ರ, ಮಾನವ ಸಂಪನ್ಮೂಲ ನಿರ್ವಹಣೆ, ಅತಿಥಿ ಸತ್ಕಾರ ಮತ್ತಿತರ ವಿಷಯಗಳ ನಿರ್ವಹಣೆಗಳು ಆಡಳಿತ ಮತ್ತು ನಿರ್ವಹಣೆಯ ವಿಭಾಗದಲ್ಲಿ ಬರುತ್ತವೆ. ಟಿಕೆಟ್ ದರ ನಿಗದಿ, ಟಿಕೆಟ್‌ ಬುಕ್ಕಿಂಗ್, ವಿಮಾನ ನಿಲ್ದಾಣದೊಳಗೆ ಲಗೇಜ್ ನಿರ್ವಹಣೆ, ಟಿಕೆಟ್ ತಪಾಸಣೆ, ಬೋರ್ಡಿಂಗ್ ಪಾಸ್ ವಿತರಣೆ, ಲಗೇಜ್ ಮತ್ತು ಪ್ರಯಾಣಿಕರ ಸುರಕ್ಷೆ, ಪ್ರವಾಸಿ ತಾಣಗಳ ಮಾಹಿತಿ, ಸ್ಥಳೀಯ ಸಾರಿಗೆ ವ್ಯವಸ್ಥೆಯ ನೆರವು, ಗ್ರಾಹಕರ ತುರ್ತು ಸೇವೆ, ವಿಮಾನಲ್ಲಿ ಆಹಾರ, ಪಾನೀಯ ವ್ಯವಸ್ಥೆ, ಗಮ್ಯ ತಲುಪಿದ ಪ್ರಯಾಣಿಕರಿಗೆ ಲಗೇಜ್‌ ಮಾಹಿತಿ, ಮುಂದಿನ ಪ್ರಯಾಣದ ಕುರಿತು ಮಾಹಿತಿ ನೆರವು, ಹೋಟೆಲ್, ಸಾರಿಗೆ ಬಗ್ಗೆ ತಿಳಿವಳಿಕೆ ಸೇರಿದಂತೆ ಹಲವು ಮಹತ್ವದ ಕೆಲಸಗಳು ಎರಡನೇ ವಿಭಾಗದವರ ಜವಾಬ್ದಾರಿ. ವಿಮಾನ ಓಡಿಸಲು ಪೈಲೆಟ್‌ಗೆ ಇರುವಷ್ಟೇ ಜವಾಬ್ದಾರಿ ಆಡಳಿತ ವಿಭಾಗದ ಉದ್ಯೋಗಿಗಳಿಗೂ ಇರುತ್ತದೆ. ಒಂಚೂರು ವ್ಯತ್ಯಾಸವಾದರೂ ವಿಮಾನಯಾನ ಸಂಸ್ಥೆಗೆ ಕೆಟ್ಟ ಹೆಸರು ಖಚಿತ. ಪೈಪೋಟಿ ಯುಗದಲ್ಲಿ ಆ ವಿಮಾನಯಾನ ಸಂಸ್ಥೆಯ ಉಳಿವು, ಬೆಳವಣಿಗೆ ಮತ್ತು ಲಾಭ ಹೆಚ್ಚಳಕ್ಕೆ ಆಡಳಿತ ವಿಭಾಗದ ಶಿಸ್ತಿನ ಕಾರ್ಯವೈಖರಿ ಅತ್ಯಂತ ಮಹತ್ವದ್ದು. ‘ಏರ್‌ ಇಂಡಿಯಾ ಸೇರಿದಂತೆ ಕೆಲವು ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಅವರೆಲ್ಲರ ಅಭಿಪ್ರಾಯಗಳನ್ನು ಪಡೆದು ಈ ಸ್ನಾತಕೋತ್ತರ ಪದವಿಯನ್ನು ವಿನ್ಯಾಸಗೊಳಿಸಿದ್ದೇವೆ. ನಮ್ಮಲ್ಲಿ ಈಗಾಗಲೇ ಪ್ರವಾಸೋದ್ಯಮ ಸ್ನಾತಕ ಕೋರ್ಸ್ ಇದೆ. ಅದರೊಂದಿಗೆ ಈ ಕೋರ್ಸ್ ಆರಂಭಿಸಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ. ಇವತ್ತು ದೇಶಿ ಮತ್ತು ಅಂತರದೇಶಿ ವಿಮಾನಯಾನ ಉದ್ಯಮ ಬೆಳೆಯುತ್ತಿದೆ. ನಮ್ಮ ಕೋರ್ಸ್‌ಗೆ ಮೈಸೂರು ವಿಶ್ವವಿದ್ಯಾಲಯವು ಮಾನ್ಯತೆ ನೀಡಿದೆ. ಆರಂಭಿಕ ಹಂತದಲ್ಲಿ 40 ಸೀಟುಗಳೊಂದಿಗೆ ಆರಂಭಿಸುವ ಯೋಜನೆ ಇದೆ’ ಎಂದು ಎಂಟಿಡಿಐ ನಿರ್ದೇಶಕ ಪ್ರೊ.ಕೆ.ಎಂ. ನಾಗಪತಿ ಹೇಳುತ್ತಾರೆ. ನಾಲ್ಕು ಸೆಮಿಸ್ಟರ್‌ಗಳ ಈ ಕೋರ್ಸ್‌ನಲ್ಲಿ ವಿಮಾನಯಾನ ಆಡಳಿತ ಮತ್ತು ನಿರ್ವಹಣೆಯ ಪ್ರಮುಖ ಹಂತಗಳ ವಿಷಯಗಳನ್ನು ಪಠ್ಯವನ್ನಾಗಿ ಅಳವಡಿಸಲಾಗಿದೆ. ನಾಲ್ಕನೇ ಸೆಮಿಸ್ಟರ್‌ನ ಮೊದಲ ಮೂರು ತಿಂಗಳಲ್ಲಿ ವಿಮಾನಯಾನ ಸಂಸ್ಥೆಯಲ್ಲಿ ಶೈಕ್ಷಣಿಕ ತರಬೇತಿಗೆ ಕಳಿಸಲಾಗುತ್ತದೆ. ‘ಉದ್ಯೋಗಾವಕಾಶ ಒದಗಿಸಲು ಈಗಾಗಲೇ ನಾವು ಕೆಲವು ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಪ್ರತಿಕ್ರಿಯೆಯೂ ಆಶಾದಾಯಕವಾಗಿದೆ. ಟೂರಿಸಂ ವಿಷಯಗಳ ಬೋಧನೆಯೂ ನಡೆಯಲಿದೆ. ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತ ಅಧಿಕಾರಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ತರಗತಿ ಪ್ರಮಾಣದಲ್ಲಿಯೇ, ಹೊರಾಂಗಣ ಮತ್ತು ಪ್ರಾಯೋಗಿಕ ಪಾಠಗಳಿಗೆ ಒತ್ತು ನೀಡಲಾಗಿದೆ’ ಎಂದು ನಾಗಪತಿ ಹೇಳುತ್ತಾರೆ. (ವಿವರಗಳಿಗೆ: 0821–2582073, 2581013. ವೆಬ್‌ಸೈಟ್: ., .@.) ಮೊದಲ ಸೆಮಿಸ್ಟರ್ ವಿಷಯ 1. ಏವಿಯೇಷನ್ ಇಂಡಸ್ಟ್ರಿ & ಏರ್ ಟ್ರಾವಲ್‌ ಪರಿಚಯ 2. ಏರ್‌ಪೋರ್ಟ್ ಫೆಸಿಲಿಟೀಸ್ & ಮ್ಯಾನೇಜ್‌ಮೆಂಟ್ 3. ಸಿವಿಲ್ ಏವಿಯಷನ್ ಲಾ & ಮ್ಯಾನೇಜ್‌ಮೆಂಟ್ 4. ಟೂರಿಸಂ & ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಪರಿಚಯ 5. ಟ್ರಾವಲ್ ಏಜೆನ್ಸಿ ಮ್ಯಾನೇಜ್‌ಮೆಂಟ್ 6. ಫಂಡಮೆಂಟಲ್ಸ್‌ ಆಫ್ ಅಕೌಂಟಿಂಗ್ ಫಾರ್ ಟೂರಿಸಂ ಇಂಡಸ್ಟ್ರಿ 7. ಮ್ಯಾನೇಜ್‌ಮೆಂಟ್ ಕಾನ್ಸೆಪ್ಟ್ಸ್‌ & ಥಿಯರೀಸ್ ಎರಡನೇ ಸೆಮಿಸ್ಟರ್ 1. ಏವಿಯೇಷನ್ ಮಾರ್ಕೆಟಿಂಗ್ 2. ಏರ್‌ಲೈನ್ ಕಸ್ಟಮರ್ ಸರ್ವಿಸ್ 3. ಫೇರ್ ಕನಸ್ಟ್ರಕ್ಷನ್ & ಟಿಕೆಟಿಂಗ್‌ 4. ಟೈಪ್ಸ್ ಆಫ್ ಟೂರಿಸಂ 5. ಟೂರಿಸಂ ಡೆವಲಪ್‌ಮೆಂಟ್ 6. ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್. 7. ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್ ಮೂರನೇ ಸೆಮಿಸ್ಟರ್ 1. ಏರ್‌ಪೋರ್ಟ್ ಸೇಫ್ಟಿ & ಸೆಕ್ಯುರಿಟಿ ಮ್ಯಾನೇಜ್‌ಮೆಂಟ್ 2. ಕ್ಯಾಬಿನ್ ಕ್ರೂ, ಇನ್‌ ಫ್ಲೈಟ್ ಸರ್ವಿಸ್ & ಫೆಸಿಲಿಟಿಸ್ 3. ಏರ್ ಕಾರ್ಗೋ ಮ್ಯಾನೇಜ್‌ಮೆಂಟ್ 4. ಏರ್‌ಲೈನ್ ರೆವಿನ್ಯೂ ಮ್ಯಾನೇಜ್‌ಮೆಂಟ್ 5. ಗ್ಲೋಬಲ್ ಟೂರಿಸಂ 6. ಇಕೋ ಟೂರಿಸಂ & ಸಸ್ಟೇನೇಬಲ್ ಡೆವಲಪಮೆಂಟ್ 7. ಆರ್ಗನೈಜೇಷನಲ್ ಬಿಹೇವಿಯರ್ ನಾಲ್ಕನೇ ಸೆಮಿಸ್ಟರ್ 1. ಮೊದಲ ಮೂರು ತಿಂಗಳು ಏವಿಯಷನ್‌ ಉದ್ಯಮ ಅಥವಾ ಟೂರಿಸಂ ಸಂಸ್ಥೆಯಲ್ಲಿ ತರಬೇತಿ (ಇಂಟರ್ನ್‌ ಷಿಪ್) 2. ಪ್ರೋಜೆಕ್ಟ್ ರಿಪೋರ್ಟ್ & ಪ್ರೆಸೆಂಟೇಷನ್ 3. ಟ್ರೇನಿಂಗ್ ರಿಪೋರ್ಟ್ & ಪ್ರೆಸೆಂಟೇಷನ್ 4. ರಿಸರ್ಚ್ ಮೆಥೆಡಾಲಜಿ 5. ಇ–ಕಾಮರ್ಸ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.