ಸ್ವನಶುದ್ಧಿಯ ತಪ್ಪು-ಒಪ್ಪು ಕನ್ನಡ ಭಾಷೆಯನ್ನು ಮಾತನಾಡುವಾಗ ಆಗುವ ಸಾಮಾನ್ಯವಾದ ಉಚ್ಚಾರಣಾ ದೋಷಗಳಲ್ಲಿ ಇನ್ನಷ್ಟನ್ನು ಗಮನಿಸುವುದಾದರೆ, ಮಹಾಪ್ರಾಣದ ಹಿಂದಿನ ಅಕ್ಷರವನ್ನು ಮಹಾಪ್ರಾಣವಾಗಿ ಹೇಳುವುದು. ಇದನ್ನು ಸಾಮಾನ್ಯವಾಗಿ ವಿದ್ಯಾರ್ಥಿ ಎನ್ನುವ ಪದದ ಉಚ್ಚಾರಣೆಯಲ್ಲಿ ಗಮನಿಸಬಹುದು. ಇದನ್ನು ‘ವಿಧ್ಯಾರ್ತಿ’ ಎಂದು ಹೇಳುವವರೇ ಹೆಚ್ಚು. ಇದು ಲಿಪಿಯ, ಸ್ವನಶುದ್ಧಿಯ ದೃಷ್ಟಿಯಿಂದ ತಪ್ಪು. ಇನ್ನು ಎಲ್ಲಿಯೂ ಮಹಾಪ್ರಾಣವನ್ನೇ ಹೇಳದೆ ‘ವಿದ್ಯಾರ್ತಿ’ ಎಂದರಂತೂ ಅದು ಅಪಾರ್ಥಕ್ಕೆ ಎಡೆಮಾಡಿದಂತೆ. ‘ವಿದ್ಯಾರ್ಥಿ’ ಎಂದರೆ ವಿದ್ಯೆಯನ್ನು ಬಯಸುವವನು, ‘ವಿದ್ಯಾರ್ತಿ’ ಎಂದರೆ ವಿದ್ಯೆಗೆ ಕಂಟಕನಾದವನು ಎನ್ನುವ ಅರ್ಥಗಳು ಮೂಡುತ್ತವೆ. ಹೀಗೆಯೇ ‘ಪ್ರಣಾತಾರ್ತಿಹರ’ ಎಂದು ಬರೆದು ಹಾಗೆಯೇ ಓದಬೇಕಾದುದನ್ನು ‘ಪ್ರಣತಾರ್ಥಿಹರ’ ಎಂದು ಬರೆದು ಓದುವುದೂ ಅಪಾರ್ಥವೇ. ‘ಬೋಧನೆ’ಯನ್ನು ‘ಭೋದನೆ’ ಎಂದು, ‘ಕರ್ಮ’ ಎನ್ನುವುದನ್ನು ‘ಖರ್ಮ’ ಎಂದು, ‘ಸದ್ಯ’ವನ್ನು ‘ಸಧ್ಯ’ ಎಂದು, ‘ಭಿಕ್ಕು’ ವನ್ನು ‘ಬಿಕ್ಕು’ ಎಂದು ಬರೆಯುವುದು / ಓದುವುದು ತಪ್ಪೇ ಅಲ್ಲವೆ? ಭಕಾರದ ಮಹಾಪ್ರಾಣವನ್ನು ಉಚ್ಚರಿಸಲು ಬಹಳಷ್ಟು ಜನ ಶ್ರಮಪಡುತ್ತಾರೆ. ಅದು ಪದಗಳಲ್ಲಿ ಸಂಯೋಜಿತವಾಗಿ ಬಂದಾಗಲಂತೂ ಅಲ್ಲಿನ ಮಹಾಪ್ರಾಣವನ್ನು ಉಚ್ಚರಿಸಿದ (ಒಂದು ವೇಳೆ ಉಚ್ಚರಿಸಿದ್ದೇ ಆದರೆ) ನಂತರ ಮೂಲಪದ ವಿಕೃತವಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ‘ವಿಭೂತಿ’ - ‘ವಿಬೂತಿ’ಯಾಗುತ್ತದೆ, ‘ಅನುಭವ’ - ‘ಅನುಬವ’ವಾಗುತ್ತದೆ, ‘ಭರಮಣ್ಣ’ - ‘ಬರಮಣ್ಣ’ನಾಗುತ್ತಾನೆ, ‘ಬಂಧನ’ - ‘ಭಂದನ’ವಾಗುತ್ತದೆ, ‘ನಿರ್ಬಂಧ’ - ‘ನಿರ್ಭಂದ’ವಾಗುತ್ತದೆ. ಪ್ರಾದೇಶಿಕ ಆಡುನುಡಿಯಲ್ಲಿ ಈ ಸ್ವನದ ಅಪಭ್ರಂಶಗಳು ಒಂದು ಮಟ್ಟಿಗೆ ಸ್ವೀಕೃತವಾದರೂ ಬರಹದಲ್ಲಿ ಉದ್ದೇಶಿತ ಪದದ ಲಿಪಿ-ಸ್ವನ ಸಾಮಂಜಸ್ಯವಿಲ್ಲದೆ ಹೋಗುವುದು ಭಾಷಾ ಮರ್ಯಾದೆಯ ದೃಷ್ಟಿಯಿಂದ ಸರಿಯಲ್ಲ ಎನ್ನುವುದು ಒಂದು ಅಭಿಪ್ರಾಯ. ಭಕಾರವನ್ನು ಅಭ್ಯಾಸಮಾಡಲು ಈ ಕೆಳಗಿನ ಸಾಲುಗಳನ್ನು ನಿಯತ ಲಯದಲ್ಲಿ ಪುನರಾವರ್ತಿಸುವ ರೂಢಿ ಮಾಡಿಕೊಳ್ಳಿ: 1. ಭಂ ಭಂ ಭಂ ಭಂ ಭೋಲಾಶಂಕರ ಭವಾಬ್ಧಿ ಭಯಹರ ಲಂಬೋದರಪಿತ ಕುಂಭೋದ್ಭವನುತ ಅಂಬೋರುಹನಯನ 2. ಬಾನಿ ಬೋರಿಲಿಸಿದ ಹಾಗೆ ಭೋರಂತ ಬಂಡೆ ಮೇಲೆ ಬೀಳೋ ಭರಚುಕ್ಕಿ ಬುಡಕ್ಕೆ ಬೋಟಲ್ಲಿ ಹೋಗೋಕೆ ಭಯವಾಗತ್ತೆ. 3. ಬನ್ನೇರುಘಟ್ಟದಲ್ಲಿ ಬಿಳಿ ಹುಲಿ ಬಯಲಲ್ಲೆ ಭಯವಿಲ್ದೆ ಬೊಂಬಾಟ್ ಬಫೆ ಮಾಡ್ತಿತ್ತು. 4. ಭಟ್ಟರ ಭಕ್ಕರಿ ಅಂಗಡಿ ಬಿಕರಿಗಿದೆ. ಬೇಕರಿಯವರಿಗೇನಾದ್ರೂ ಬೇಕಾರೀ? 5. ಬೆಳೆಯೋ ರೈತ ಬೇಜಾರುಪಟ್ರೆ ಭೂತಾಯಿ ಭೂತ ಬಿಡಿಸ್ತಾಳೆ. 6. ಬಿಮ್ಮನ್ಸಿ, ಭಾರ ಎತ್ತದೀರ ಇತ್ಲಾಗ್ ಬರಬಾರ್ದಾ? ಭಾರಿ ಭಾರಿ ಎತ್ತು ತಂದೀವ್ನಿ. ಭೋಗೇಂದ್ರಪ್ಪಂಗ್ ಹೇಳಿ ಬೇಗ ಬಂಡಿ ಕಟ್ಸೋಣೇ? ಬಡಾಯಿ ಕೊಚ್ಚೋರ ಬಾಯಿ ಬಂದ್ ಮಾಡೋಕೆ? ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ನೀವು ಅಭ್ಯಾಸ ಮಾಡುವಾಗ ‘ಭ’ಕಾರ ಮತ್ತು ‘ಬ’ಕಾರಗಳು ಆಯಾ ಸ್ಥಾನಗಳಲ್ಲಿ ನಿಯತವಾಗಿಯೇ ಬರುತ್ತಿವೆಯೇ, ಆ ಸ್ಥಳಗಳಲ್ಲಿ ನಿಮ್ಮ ಉಚ್ಚಾರಣೆ ಸರಿಯಿದೆಯೇ ಎನ್ನುವುದನ್ನು ಇನ್ನಾರಾದರೂ ಸರಿಯಗಿ ಕೇಳಿಸಿಕೊಂಡು ನಿಮ್ಮನ್ನು ತಿದ್ದಬೇಕು. ನಿಧಾನ ಲಯದಿಂದ ಪ್ರಾರಂಭಿಸಿ ಹಂತ ಹಂತವಾಗಿ ಲಯವನ್ನು ಹೆಚ್ಚಿಸುತ್ತ ಹೋಗಿ. ಎಲ್ಲಿಯವರೆಗೂ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಉಚ್ಚಾರಣೆ ಸ್ಪಷ್ಟವಾಗಿ ಬರುವುದೋ ಅಲ್ಲಿಯವರೆಗೆ ಲಯವನ್ನು ಹೆಚ್ಚಿಸಿ ಅಭ್ಯಾಸಮಾಡಿ. ‘ರ’ಕಾರವೂ ಪುನರುಕ್ತವಾಗಿ ಬಂದಾಗ ಉಚ್ಚಾರಣೆಗೆ ತೊಡಕುಂಟುಮಾಡುತ್ತದೆ. ಈ ಕೆಳಗಿನದನ್ನು ಅಭ್ಯಸಿಸಬಹುದು: 1. ಕರಿಗಿರಿರಾಯನ ಗಿರಿಯಲ್ಲಿ ಸರೋಜನಯನ ಹರಿ ವಿರಾಜಮಾನನಾಗಿರುವ. 2. ಸರಸರ ಬರೆದರೂ ಸರಿಯಾಗಿ ಬರೆ. ಪರಪರ ಕೆರೆದರೆ ಉಗುರು ಬರೆ. 3. ರಾಯರ ರಾಯಸದವನು ರಹಸ್ಯಗಳನ್ನು ರವಾನಿಸುತ್ತಿದ್ದ. 4. ಊರು ತಿರುಗಿ ತಿರುಗಿ ಬರುವ ಕರಗ ಹಗುರವೇ? 5. ಭರತ ಮಂದಿರ ಧರೆಗೆ ದೊರಕಿತು ಹರನ ಗುಡಿಯದು ಗಿರಿಯೊಳುದಿಸಿತು ವರದ ಶಾರದ ದೇವಿ ಮಂದಿರ ಶೃಂಗಗಿರಿಯಲ್ಲಿ ಧರೆಯ ನಾಲ್ದೆಸೆ ಶಕ್ತಿಪೀಠವು ನರನೆ ಹರನಲಿ ಹರನೆ ನರನಲಿ ತೊರೆದುದೆರಡನು ಮರೆತು ಕರುಮವ ಮುಕುತಿ ಪಥಕಾಗಿ ( ರಚನೆ: ರಾಮ ಸುಬ್ರಾಯ ಶೇಟ್) ಹಲವರಿಗೆ ವಿಸರ್ಗವನ್ನು ಓದುವ ಸಮಸ್ಯೆಯಿರುತ್ತದೆ. ‘ಬಹುಶಃ’ ಎನ್ನುವುದನ್ನು ‘ಬಹುಶ’ ಎಂದು (ಕೆಲವರು ಭವಿಷ್ಯ ಎನ್ನುವುದೂ ಉಂಟು !), ಪ್ರಾಯಶಃ ಎನ್ನುವುದನ್ನು ಪ್ರಾಯಶ ಎಂದೂ ವಿರೂಪ ಮಾಡಿ ಹೇಳುತ್ತಾರೆ. ವಿಸರ್ಗ ಸಾಮಾನ್ಯವಾಗಿ ಸಂಸ್ಕೃತ ಪದಗಳಿಗೆ ಹೊಂದಿಕೊಂಡಂತೆ ಇರುವುದರಿಂದ ಕನ್ನಡದ ನಿತ್ಯದ ಉಚ್ಚಾರಣೆಗೆ ಹೆಚ್ಚಿನ ತೊಂದರೆ ಆಗುವುದಿಲ್ಲ. ಆದರೂ ಒಂದು ವಿಶಿಷ್ಟ ಸ್ವನ ಸಂಜ್ಞೆಯಾಗಿ ವಿಸರ್ಗವನ್ನು ನಿಭಾಯಿಸಲೇಬೇಕು. ‘ಉತ್ಸವ’(ಉತ್‌ಸವ)ವನ್ನು ‘ಉಸ್ತವ’(ಉಸ್‌ತವ) ಎಂದು ಉಚ್ಚರಿಸುವವರು ಹೇರಳವಾಗಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಹಾಸ್ಯವನ್ನು ಬೀದಿ ಬೀದಿಗಳಲ್ಲಿ ಕೇಳಿ ನಲಿಯಬಹುದು. ಇಂಥವರಿಗೆ ಕಾಗುಣಿತದ ಮತ್ತು ಸ್ವನದ ಸಮನ್ವಯ ಹೊಳೆದಿರುವುದಿಲ್ಲ ಎನ್ನಬೇಕಷ್ಟೇ. ಇದು ತಪ್ಪು ರೂಢಿಯ ಕಾರಣದಿಂದಲೂ ಉಂಟಾಗಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಇದನ್ನು ಸರಿಪಡಿಸಿಕೊಳ್ಳಲು ಈ ಕೆಳಗಿನ ಪದಗಳನ್ನು ನಿರಂತರವಾಗಿ ಉಚ್ಚರಿಸಿ ಅಭ್ಯಾಸಮಾಡುವುದು ಸೂಕ್ತ. ಕುಸ್ತಿ, ಕುತ್ಸಿತ, ಮಸ್ತಿ, ಮತ್ಸರ, ಉತ್ಸಾಹ, ಉತ್ಸವ, ತತ್ಸಮ, ತ್ರಸ್ತ, ತೃತ್‌ಸು, ವಿಶ್ವಸ್ಥ, ವಿಸ್ತರ, ವಿತಸ್ತಾ, ಸುಸ್ಥಿರ, ಅಸ್ಥಿ, ಸುಸ್ತಿ, ಪುಸ್ತಕ, ಶಾಸ್ತಿ, ಶ್ರಾವಸ್ತಿ, ಅವಸ್ಥೆ, (ಸೂಕ್ತ ಪದಗಳನ್ನು ಗಮನಿಸಿ ಈ ಪಟ್ಟಿಯನ್ನು ಅಭ್ಯಾಸಿಗಳೇ ಹಿಗ್ಗಿಸಿಕೊಳ್ಳಬಹುದು) ಇನ್ನು ಕೆಲವು ಸಂಕೀರ್ಣ ಗುಣಿತಾಕ್ಷರಗಳನ್ನು ಓದುವುದಕ್ಕೆ ಕಾಗುಣೀತದ ಸಮರ್ಪಕವಾದ ಜ್ಞಾನ ಅವಶ್ಯಕ. ತೊಂದರೆಯೆನಿಸಿದಲ್ಲಿ ಆ ಉಚ್ಚಾರಣೆಗಳನ್ನು ಬಿಡಿಸಿ ಬರೆದುಕೊಂಡು ಓದುವ ಅಭ್ಯಾಸ ಮಾಡಿಕೊಳ್ಳುವುದು ಸುಲಭವಾದೀತು. ಇಂತಹ ಸಂದರ್ಭಗಳಲ್ಲಿ ಲಿಪಿ-ಸ್ವನ ಸಮೀಕರಣ ಅಗತ್ಯ: ಕಾಕುತ್ಸ್ಥವರ್ಮ ಕಾ+ಕುತ್+ಸ್ಥ+ವರ್ಮ ನಿಷ್ಕೃಷ್ಟ ನಿಷ್+ಕೃ+ಷ್ಟ ಬಹಿರ್ನಿಷ್ಕ್ರಮಣ ಬಹಿರ್+ನಿಷ್+ಕ್ರಮಣ ನಿರ್ಮಾತೃ ನಿರ್+ಮಾತೃ ನಿರ್ವ್ಯಾಜ ನಿರ್+ವ್ಯಾಜ ಕರ್ತೃತ್ವ ಕರ್+ತೃ+ತ್ವ ತ್ವಷ್ಟೃ ತ್ವಷ್+ಟೃ ಹಲವರಿಗೆ ಗುಣಿತಾಕ್ಷರದ ಸ್ವನಗಳನ್ನು ಗುರುತಿಸುವಲ್ಲಿ ಸಮಸ್ಯೆಯಿರುವುದರಿಂದ ಅವರು ಉಚ್ಚಾರಣೆಯಲ್ಲಿ ಸೋಲುತ್ತಾರೆ. ವಿಶೇಷವಾಗಿ ’ಗೃಹ’ ಮತ್ತು ’ಗ್ರಹ’. ’ಗೃಹ’ ಎನ್ನುವುದನ್ನು ಮನೆ, ವಾಸಸ್ಥಾನ ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗುತ್ತದೆ. ಇಲ್ಲಿ ’ಋ’ ಕಾರದ ಸ್ವನವನ್ನು (ತುಟಿಯನ್ನು ಮುಂದುಮಾಡದೆ, ರು ಎನ್ನುವ ವ್ಯಂಜನದ ಸ್ವನ ಬಾರದಂತೆ) ಉಚ್ಚರಿಸಬೇಕು. ’ಗ್ರಹ’ (ಆಕಾಶಕಾಯ) ಎನ್ನುವಾಗ ’ರ’ ಕಾರ ನಿಚ್ಚಳವಾಗಿ ಕೇಳಿಬರುತ್ತದೆ. ಆದ್ದರಿಂದಲೇ ’ವ್ರತ’ವನ್ನು ’ವೃತ’ ಎನ್ನುವಂತಿಲ್ಲ. ’ವೃತ್ರ’ನನ್ನು ’ವ್ರತ್ರ’ನೆಂದು ಓದುವಂತಿಲ್ಲ. ನಾವಾಡುವ ನುಡಿಯಲ್ಲಿನ ಸ್ವನ ಸೂಕ್ಷ್ಮಗಳನ್ನು ಈ ರೀತಿ ಅರಿತುಕೊಂಡಾಗ ನಮ್ಮ ಭಾಷೆ ಅದೆಷ್ಟು ಶ್ರೀಮಂತ ಎನ್ನಿಸುವುದಿಲ್ಲವೇ? ಓದುಗರಲ್ಲಿ ಹಲವರು ಶಿಷ್ಟ ಕಾವ್ಯಗಳಿಂದ ಅಭ್ಯಾಸದ ಮಾದರಿಗಳನ್ನು ಕೊಡುತ್ತಿರುವ ಬಗೆಗೆ ಬೇಸರಿಸಬಹುದು. ನಿತ್ಯ ಜೀವನದಲ್ಲಿ ಇವೆಲ್ಲ ಏನು ಉಪಯೋಗಕ್ಕೆ ಬಂದೀತೆಂಬ ಆರೋಪ ಮಾಡಬಹುದು. ಕಾವ್ಯಗಳಲ್ಲಿ ಭಾಷೆ ಛಂದೋಬದ್ಧವಾಗಿ ಬಳಸಲ್ಪಡುವುದರಿಂದ ಆಯಾ ಛಂದಸ್ಸುಗಳು ನಿರ್ದೇಶಿಸುವಂತೆ ಓದಲು ಒಂದು ನಿಯತ ಕ್ರಮ ನಮಗೆ ಒದಗುತ್ತದೆ. ಲಯ ಸಿದ್ಧಿಯಾಗುತ್ತದೆ. ಸಾಂಪ್ರದಾಯಿಕ ರಗಳೆ, ಷಟ್ಪದಿಗಳು ಈ ಉದ್ದೇಶಕ್ಕೆ ಸುಲಭವಾಗಿ ಒದಗಿಬರುತ್ತವೆ. ಪ್ರಾಚೀನ ಕನ್ನಡ ಕಾವ್ಯಗಳನ್ನು ಓದುವ ಮನಸ್ಸಿಲ್ಲದಿದ್ದವರಿಗೆ, ಅತ್ಯಂತ ಹಾಸ್ಯಭರಿತವಾದ ನವೀನ ಕಾವ್ಯವೊಂದನ್ನು ಹಿರಿಯ ಸಾಹಿತಿ ಡಾ.ಜಿ.ಪಿ.ರಾಜರತ್ನಂ ರಚಿಸಿ ಉಪಕರಿಸಿದ್ದಾರೆ. ಅವರ ‘ಹಾರ್ಮೊನಿಯಂ ಹರಣವು’ ಎನ್ನುವ ಕಾವ್ಯದಲ್ಲಿ ಇಂಗ್ಲಿಷ್-ಕನ್ನಡ ಪದಗಳನ್ನು ಬೆರೆಸಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ. ಆಸಕ್ತರು ಇದನ್ನು ಬಳಸಿಕೊಳ್ಳಬಹುದು. ತ್ರಿಮೂರ್ತಿಗಳನ್ನು ಸ್ತುತಿಸುವ ಪದ್ಯ ಹೀಗಿದೆ: ಓ ಟ್ರಿನಿಟಿ ಹರಿಯಜಹರರ್ಕಳೆ ಓ ಟ್ರಿನಿಟಿ ಹರಿ ಹರರಜರ್ಕಳೆ ಓ ಟ್ರಿನಿಟಿ ಹರ ಹರಿಯಜರ್ಕಳೆ ಅಜನೆ ಹರಿಹರರೆ | ಓ ಟ್ರಿನಿಟಿ ಅಜ ಹರ ಹರಿಗಳೇ ಓ ಟ್ರಿನಿಟಿ ಹರ ಅಜ ಹರಿಗಳೇ ಪೇಟ್ರನುಗಳೈ ನೀವು ನಮ್ಮಯ ಪುರುಷ ಸರಸತಿಗೆ || ಇದಕ್ಕಿಂತಲೂ ಗಣಪತಿಯ ಕುರಿತಾದ ಪ್ರಾರ್ಥನೆ ನಗೆ ಚಿಮ್ಮಿಸುತ್ತದೆ: ಕಂಟಕಕೆ ಕಡು ಡೈನಮೈಟ್ ಟೀ ಯೆಂಟಿ ರೋಗೆಲಿಫೆಂಟು ಹೆಡ್ಡಿನ ವೊಂಟಿ ಟಸ್ಕಿನ ಪಾಟ್ಬೆಲೀಡ್ ರ‍್ಯಾಟ್ ರೈಡರೋ ಬೆನಕ | ಕಂಟ್ರಿ ಕರ್ನಾಟಕದ ಕಲ್ಚ ರ್ಜಂಟ್ರಿಯೆದುರಿನಲಿಡುವ ನನ್ನೀ ಎಂಟ್ರಿಯಂ ಸ್ಮೂತಾಗಿ ನಡೆಸಲು ಹೆಲ್ಪಸಿಸ್ಟಯ್ಯ || ಇದು ರಾಜರತ್ನಂ ಅವರ ಕಾವ್ಯದ ಒಂದು ‘ಸ್ಯಾಂಪಲ್’ ಮಾತ್ರ. ನಗುನಗುತ್ತಲೇ ಕನ್ನಡವನ್ನು ಲಯಬದ್ಧವಾಗಿ ಓದಲು ಪ್ರೇರೇಪಿಸುವ ಈ ಕಾವ್ಯವನ್ನು ಒಮ್ಮೆಯಾದರೂ ಪೂರ್ತಿಯಾಗಿ ಓದಿ ನೋಡಿ. ಇಂಗ್ಲಿಷಿನಂಥ ಭಾಷೆಯ ಸ್ವನಗಳನ್ನೂ ಕನ್ನಡ ಹೇಗೆ ಜೀರ್ಣಿಸಿಕೊಂಡು ತನ್ನದನ್ನಾಗಿಸಿಕೊಂಡುಬಿಟ್ಟಿದೆ ಎನ್ನುವುದು ತಿಳಿಯುತ್ತದೆ. (ಮುಂದಿನವಾರ: ಸ್ವನ ಸಮನ್ವಯ) ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕಕ್ಕೆ: (9986000369) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.