ಕೆಲಸಕ್ಕಿದೆ ನೂರು ದಾರಿ ಯಾವುದೋ ಕಾರಣಕ್ಕೆ ಓದು ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಅಥವಾ ಓದಲು ಆಸಕ್ತಿಯೂ ಇಲ್ಲ ಎಂದಿಟ್ಟುಕೊಳ್ಳಿ. ಅದಕ್ಕೆಂದು ಕೈ ಕಟ್ಟಿ ಕೂರಬೇಕಿಲ್ಲ. ಜೀವನೋಪಾಯಕ್ಕೆ ಅಗತ್ಯವಾದ ಉದ್ಯೋಗ ಪಡೆಯಲು ನೂರಾರು ಅವಕಾಶವಿದೆ. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಮುಗಿಸಿದ ನಂತರ ಮುಂದೆ ಓದಲು ಸಾಧ್ಯವಾಗದಿದ್ದವರಿಗೆಂದೇ ಹುಟ್ಟಿಕೊಂಡ ವೃತ್ತಿಪರ ಕೋರ್ಸ್‌ಗಳಿಗೇನೂ ಕಡಿಮೆಯಿಲ್ಲ. ಆದರೆ ಹಣದ ಕೊರತೆಯಿಂದ ವೃತ್ತಿಪರ ಕೋರ್ಸ್‌ಗಳತ್ತ ಮುಖ ಮಾಡಿದವರಿಗೆ ಶುಲ್ಕ ದುಬಾರಿ ಎನಿಸಬಹುದು. ಅದಕ್ಕೆಂದೇ ಬಡ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಜನಾಂಗ, ಗ್ರಾಮಾಂತರ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಡಿಮೆ ಶುಲ್ಕದಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಿದೆ ಬೆಂಗಳೂರಿನ ಸೆಂಟ್ ಜೋಸೆಫ್ ಕಮ್ಯುನಿಟಿ ಕಾಲೇಜು. ಇದುವರೆಗೂ ಮ್ಯಾನೇಜ್ಮೆಂಟ್ ಕೋರ್ಸ್‌ಗಳಲ್ಲಿ ಮಾತ್ರ ಅವಕಾಶಗಳಿದ್ದ ಇಲ್ಲಿ ಈ ಬಾರಿ ಯುಜಿಸಿ (ವಿಶ್ವವಿದ್ಯಾಲಯ ಅನುದಾನಿತ ಆಯೋಗ) ಅಡಿಯಲ್ಲಿ ಹಲವು ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ವಿವಿಧ ಕೋರ್ಸುಗಳು ಡಿಪ್ಲೊಮಾ ಕೋರ್ಸುಗಳು ಹತ್ತು ತಿಂಗಳ ಅವಧಿಯದ್ದಾಗಿದ್ದು, ಮಾಹಿತಿ ತಂತ್ರಜ್ಞಾನ ಪೂರಿತ ಸೇವೆಯ ಡಿಪ್ಲೊಮಾದಲ್ಲಿ ಕಚೇರಿ ನಿರ್ವಹಣೆ, ಅಡ್ವಾನ್ಸ್‌ ಕಂಪ್ಯೂಟರ್ ಅಪ್ಲಿಕೇಶನ್, ಹಣಕಾಸಿನ ಲೆಕ್ಕಾಚಾರ, ಮಾನವ ಸಂಪನ್ಮೂಲ ನಿರ್ವಹಣೆ ವಿಷಯಗಳನ್ನು ಒಳಗೊಂಡಿರುತ್ತದೆ. ರಿಟೇಲ್ ಮ್ಯಾನೇಜ್ಮೆಂಟ್‌ ಡಿಪ್ಲೊಮಾದಲ್ಲಿ ರಿಟೇಲ್ ವ್ಯವಹಾರ, ರಿಟೇಲ್ ಮರ್ಚಂಡೈಸಿಂಗ್, ಮಾರ್ಕೆಟಿಂಗ್, ಮ್ಯಾನೇಜ್ಮೆಂಟ್ ವಿಷಯಗಳನ್ನು ಬೋಧಿಸಲಾಗುತ್ತದೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಡಿಪ್ಲೊಮಾದಲ್ಲಿ ಬೇಸಿಕ್ ಎಲೆಕ್ಟ್ರಾನಿಕ್ಸ್‌್ ಇಂಡಸ್ಟ್ರಿಯಲ್ ಪವರ್ ಅಪ್ಲಿಕೇಶನ್, ಮೊಬೈಲ್ ಸರ್ವಿಸ್ ವಿಷಯಗಳನ್ನು ಒಳಗೊಂಡಿರುತ್ತದೆ. ಡಿಪ್ಲೊಮಾ ಇನ್ ಬ್ಯೂಟಿ ಕಲ್ಚರ್‌ನಲ್ಲಿ ಹೇರ್ ಡ್ರೆಸಿಂಗ್, ಮಸಾಜ್, ಫೇಶಿಯಲ್, ಬ್ಯೂಟಿ ಥೆರಪಿಸ್ಟ್‌ಗಳನ್ನು ಹೇರ್ ಕಲರಿಸ್ಟ್‌, ಮೇಕಪ್ ಆರ್ಟಿಸ್ಟ್‌ ಹೀಗೆ ಹಲವು ವಿಷಯಗಳು ಇರುತ್ತವೆ. ಹೋಟೆಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾದಲ್ಲಿ ಆಹಾರ ಉತ್ಪಾದನೆ, ಬೇಕರಿ ಉತ್ಪಾದನೆ, ಮನೆ ನಿರ್ವಹಣೆ ಮತ್ತು ಅತಿಥಿ ಸತ್ಕಾರ, ಕಚೇರಿ ನಿರ್ವಹಣೆ ಹಾಗೂ ಹಣಕಾಸಿನ ನಿರ್ವಹಣೆಯ ಹಲವು ತಂತ್ರಗಳನ್ನು ಹೇಳಿಕೊಡಲಾಗುತ್ತದೆ. ಎಂಟನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ಮುಗಿಸಿದವರು ಈ ಡಿಪ್ಲೊಮಾ ತರಗತಿಗಳಿಗೆ ಅರ್ಹರು. ನೇರವಾಗಿ ಹತ್ತನೇ ಹಾಗೂ ಪಿಯುಸಿ ಪರೀಕ್ಷೆಯನ್ನು ಬರೆಯುವವರಿಗೆ ಪ್ರತಿದಿನ 1-2 ಗಂಟೆ ಪಾಠ ನಡೆಯುತ್ತವೆ. ಪಿಯುಸಿ ಮುಗಿದಿರುವ ವಿದ್ಯಾರ್ಥಿಗಳಿಗೆಂದೇ ‘ಡಿಪ್ಲೊಮಾ ಇನ್ ಇನ್‌ಫರ್ಮೇಶನ್ ಟೆಕ್ನಾಲಜಿ ಎನೆಬಲ್ಡ್‌ ಸರ್ವೀಸ್‌’ನಲ್ಲಿ ಎರಡು ಸೆಮಿಸ್ಟರ್‌ಗಳಲ್ಲಿ ಪಠ್ಯವಿರುತ್ತದೆ. ಉತ್ತಮ ಉದ್ಯೋಗಕ್ಕೆ ಅವಶ್ಯಕವಾಗಿರುವ ಸಂವಹನ ಭಾಷೆ ಇಂಗ್ಲಿಷ್, ಮಾನವ ಸಂಪನ್ಮೂಲ ವಿಭಾಗದ ಪರಿಚಯ, ಬ್ಯಾಂಕಿಂಗ್, ಹಣಕಾಸು ನಿರ್ವಹಣೆ, ಕಂಪ್ಯೂಟರ್ ಅಪ್ಲಿಕೇಶನ್ಸ್‌, ಮೈಕ್ರೋ ಎಕನಾಮಿಕ್ಸ್‌, ಟ್ಯಾಲಿ, ಬಿಸಿನೆಸ್ ಆರ್ಗನೈಸೇಷನ್ ಅಂಡ್ ಮ್ಯಾನೇಜ್ಮೆಂಟ್ ಹೀಗೆ ಹಲವು ವಿಷಯಗಳನ್ನು ಒಳಗೊಂಡಿರುತ್ತವೆ. ಇದೇ ರೀತಿ, ಡಿಪ್ಲೊಮಾ ಇನ್ ರೀಟೇಲ್ ಮ್ಯಾನೇಜ್ಮೆಂಟ್‌ ಕೂಡ ಕೆಲಸಕ್ಕೆ ಅರ್ಹವಾದ ಮೂಲ ತಿಳಿವಳಿಕೆಯನ್ನು ಒದಗಿಸಿಕೊಡುತ್ತದೆ. ಸರ್ಟಿಫಿಕೇಟ್ ಕೋರ್ಸ್‌ಗಳು ಕೇವಲ 40 ದಿನಗಳ ಕೋರ್ಸ್‌ಗಳನ್ನೂ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇಂದಿನ ಮೂಲ ಔದ್ಯೋಗಿಕ ಅವಶ್ಯಕತೆಯಾದ ಬಿಸಿನೆಸ್ ಪ್ರಾಸೆಸ್ ಔಟ್‌ ಸೋರ್ಸಿಂಗ್‌ ಹಾಗೂ ರೀಟೀಲ್ ಸರ್ವೀಸ್‌ ವಿಷಯಗಳಲ್ಲಿ ಈ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಇವಕ್ಕೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ‘2005ರಿಂದಲೇ ಈ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಲಾಗಿತ್ತು. ಈ ಬಾರಿ ಯುಜಿಸಿ ಅಡಿಯಲ್ಲಿ ಹಲವು ಅವಕಾಶಗಳನ್ನು ಬಡ ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಯುವಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪರಿಚಯಿಸಲಾಗಿದೆ. ವರ್ಷಕ್ಕೆ 150 ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಯುಜಿಸಿ ಕೋರ್ಸುಗಳ ತರಗತಿಗಳು ಇದೇ ಜೂನ್ 21 ರಿಂದ ಹಾಗೂ ಡಿಪ್ಲೊಮಾ ತರಗತಿಗಳು ಜುಲೈನಲ್ಲಿ ಆರಂಭಗೊಳ್ಳಲಿವೆ. ಕ್ಯಾಂಪಸ್ ಆಯ್ಕೆಯ ಅವಕಾಶವಿರುವುದು ಎಷ್ಟೋ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ’ ಎನ್ನುತ್ತಾರೆ ಸೆಂಟ್ ಜೋಸೆಫ್ ಕಮ್ಯುನಿಟಿ ಕಾಲೇಜಿನ ನಿರ್ದೇಶಕ ಮೆಲ್ವಿನ್ ಎ.ಲೋಬೊ ಎಸ್‌.ಜೆ. (ಮಾಹಿತಿಗೆ: 080-42110279) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.