ಭಾಷೆ ಒಂದು ಭಾವ ಭಿನ್ನ... ಕಳೆದ ಬಾರಿ ಭಾಷೆಯ ಕಲಿಕೆ ಸಂಗೀತದ ಕಲಿಕೆಯಷ್ಟೇ ಅವಧಾನವನ್ನು ಬೇಡುತ್ತದೆ ಎನ್ನುವ ಪ್ರಸ್ತಾಪವಾಗಿತ್ತಲ್ಲವೇ? ಸಂಗೀತದ ತ್ರಿಸ್ಥಾಯಿಯಲ್ಲಿನ ಸ್ವರಗಳನ್ನು ಬಳಸಿ ಅತ್ಯಂತ ಹೆಚ್ಚು ವೈವಿಧ್ಯಮಯ ವಿನ್ಯಾಸಗಳನ್ನು ರೂಪಿಸಬಲ್ಲ ಸಾಮರ್ಥ್ಯವನ್ನೇ ಸಂಗೀತಗಾರರಲ್ಲಿ ಎಲ್ಲ ರಸಿಕರೂ ನಿರೀಕ್ಷಿಸುವುದು. ಹಾಗೆಯೇ ಭಾಷೆಯೊಂದರ ಸ್ವನವ್ಯವಸ್ಥೆಯ ವ್ಯಾಕರಣಶಾಸ್ತ್ರೋಕ್ತ ಅಭ್ಯಾಸ ಮತ್ತು ಅಭಿವ್ಯಕ್ತಿಗೂ ನಾವು ಸಾಕಷ್ಟು ಪರಿಶ್ರಮ ಪಡಬೇಕಾದೀತು. ನಾವಿಲ್ಲಿ ಗಮನಿಸುತ್ತಿರುವುದು ಮಾಧ್ಯಮಗಳ ಮತ್ತು ಸಂವಹನದ ಬಳಕೆಗೆ ಬೇಕಾದ ಶಿಷ್ಟಾಚಾರಕ್ಕೆ ಒದಗಿಬರುವ ಒಪ್ಪಿತ ಭಾಷೆಯ ಮಾದರಿಯನ್ನು ಮಾತ್ರ. ಭಾಷೆಯೊಂದರ ಪ್ರಾದೇಶಿಕ ಪ್ರಭೇದಗಳು ಈ ಸ್ವೀಕೃತ ಮಾದರಿಯ ಭಾಷೆಯ ಸ್ವರೂಪಕ್ಕಿಂತ ಭಿನ್ನವಾಗಿರುತ್ತವೆ. ಅವುಗಳಲ್ಲಿ ಸ್ವನಗಳ ಅಪಭ್ರಂಶಗಳೂ ಸಾಮಾನ್ಯ. ಇಲ್ಲಿನ ಅಪಭ್ರಂಶಗಳು ಆಯಾ ಪರಿಸರದಲ್ಲಿ ಮಾತ್ರ ಸರಿಹೊಂದುತ್ತವೆ. ಹಲವಾರು ಬಾರಿ ಇವುಗಳೇ ಭಾಷೆಗೆ ಆಯಾ ಪ್ರಾದೇಶಿಕತೆಯ ಸೊಗಡು ನೀಡುತ್ತವೆ. ಆದರೂ, ಇಂತಹ ಅಪಭ್ರಂಶಗಳನ್ನು ವಿಶ್ವಸಾಮಾನ್ಯವಾಗಿ ಗ್ರಹಿಸಲಾಗುವುದಿಲ್ಲ. ಕನ್ನಡ ಭಾಷೆಯ ಸಂದರ್ಭದಲ್ಲಿ ಪ್ರಾದೇಶಿಕ ಭಿನ್ನತೆಗಳು ಹಲವಾರಿವೆ. ಉದಾಹರಣೆಗೆ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಹ್ರಸ್ವ ಸ್ವರವಾದ ’ಅ’ ಕಾರವನ್ನು ಹಲ್ಲು ಕಚ್ಚಿಹಿಡಿದು ಉಚ್ಚರಿಸುತ್ತಾರೆ. ದೀರ್ಘ ಸ್ವರವಾದ ’ಆ’ ಕಾರವನ್ನು ಹಲ್ಲುಗಳನ್ನು ಕಚ್ಚಿಹಿಡಿಯದೆ ಸಾಮಾನ್ಯವಾಗಿ ’ಅ’ ಕಾರದ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುತ್ತಾರೆ. ಆದರೆ ಹಳೇ ಮೈಸೂರು ಮತ್ತು ಕರ್ನಾಟಕದ ದಕ್ಷಿಣ ಪ್ರದೇಶಗಳಲ್ಲಿ ’ಅ’ ಕಾರವನ್ನು ಒಂದು ಮಾತ್ರಾಕಾಲದಲ್ಲೂ ’ಆ’ ಸ್ವರವನ್ನು ಎರಡು ಮಾತ್ರಾಕಾಲದಲ್ಲೂ ಉಚ್ಚರಿಸಲಾಗುತ್ತದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಬಳಸಲಾಗುವ ಕನ್ನಡದಲ್ಲಿ ಇಂತಹ ಹಲವಾರು ವ್ಯತ್ಯಯಗಳು ಸಾಮಾನ್ಯ. ಬಹುಶಃ ಇದೇ ಕಾರಣಕ್ಕಾಗಿಯೇ ಲಿಪಿಯಲ್ಲಿ ’ಗುಬ್ಬಣ್ಣವರ’, ’ಬಡಿಗೇರ’ ಎಂದು ಬರೆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಅದನ್ನು ’ಗುಬ್ಬಣ್ಣವರ್’, ’ಬಡಿಗೇರ್’ ಎಂದೂ ಅದನ್ನೇ ದಕ್ಷಿಣ ಪ್ರದೇಶಗಳಲ್ಲಿ ಅಕಾರಾಂತವಾಗಿ ’ಗುಬ್ಬಣ್ಣವರ’, ’ಬಡಿಗೇರ’ ಎಂದೇ ಉಚ್ಚರಿಸುವ ರೂಢಿಯಿದೆ ಎನಿಸುತ್ತದೆ. ಭಾಷೆಯೊಂದನ್ನು ಮಾತನಾಡುವಾಗ ಅದರ ಎಲ್ಲ ಸ್ವನಸೂಕ್ಷ್ಮಗಳನ್ನೂ ಗ್ರಹಿಸಿ ನಮ್ಮ ಉಚ್ಚಾರಣೆಗಳಲ್ಲಿ ಅದನ್ನು ಪ್ರಯೋಗಿಸಿದಾಗಲಷ್ಟೇ ಆಯಾ ಭಾಷೆಯ ಸೌಂದರ್ಯ ನಿರೂಪಿತವಾಗುವುದು. ಸ್ವನಸೂಕ್ಷ್ಮಗಳನ್ನು ಗ್ರಹಿಸಿದರೂ ನಿರಂತರ ಅಭ್ಯಾಸದಿಂದ ಮಾತ್ರ ಅವುಗಳನ್ನು ಸಿದ್ಧಿಸಿಕೊಳ್ಳುವುದು ಸಾಧ್ಯ. ಇದರಿಂದ ಭಾಷೆಯ ಶಿಷ್ಟರೂಪವನ್ನೂ ಮತ್ತು ಅಪಭ್ರಂಶಗಳನ್ನೂ ಏಕಕಾಲಕ್ಕೆ ಗ್ರಹಿಸಿ ಅಗತ್ಯಕ್ಕೆ ತಕ್ಕಂತೆ ಪ್ರಾದೇಶಿಕ ವೈವಿಧ್ಯತೆಗಳನ್ನೂ ಪ್ರಜ್ಞಾಪೂರ್ವಕವಾಗಿ ಮತ್ತು ಇಚ್ಛೆಗನುಗುಣವಾಗಿ ನಮ್ಮ ಮಾತಿನಲ್ಲಿ ತಂದುಕೊಳ್ಳಬಹುದು. ಹೀಗಾಗಿಯೇ ಭಾಷೆಯೊಂದನ್ನು ಆಡಿಯೇ ಕಲಿಯುವುದು ಸೂಕ್ತ. ಇನ್ನು, ಕನ್ನಡದ ಸ್ವನಗಳ ಉಚ್ಚಾರಣೆಯ ಅಭ್ಯಾಸದ ಕುರಿತು ಗಮನಿಸೋಣ. ಎಳವೆಯಲ್ಲಿ ಒಂದಂಕಿ ಸಂಖ್ಯೆಗಳ ಸಂಕಲನ, ನಂತರ ಎರಡಂಕಿ ಸಂಖ್ಯೆಗಳು, ಮೂರಂಕಿ ಸಂಖ್ಯೆಗಳು ಎಂದು ಒಂದೊಂದಾಗಿ ಹೆಚ್ಚಿಸುತ್ತ ಕಲಿಸಲಾಗುತ್ತದೆ. ಇದೇರೀತಿ ನಮ್ಮ ಧ್ವನ್ಯಂಗಗಳನ್ನೂ ವೈವಿಧ್ಯಮಯ ಸ್ವನವ್ಯವಸ್ಥೆಯನ್ನು ಉಚ್ಚರಿಸಲು ನಿಧಾನವಾಗಿ ಒಗ್ಗಿಸಬೇಕು. ಮಕ್ಕಳಿಗೆ ಹೇಳಿಕೊಡುವ ಸಣ್ಣ ಸಣ್ಣ ಪದ್ಯಗಳು ಈ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಕನ್ನಡದ ಮನೆಗಳಲ್ಲೂ ’ನಮ್ಮ ಮಗು ರೈಮ್ಸ್ ಹೇಳುತ್ತೆ; ಹೇಳು ಪುಟ್ಟಾ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್..’ ಎಂದು ತಂದೆತಾಯಿಗಳು ಬೀಗುವುದು ಇಂದಿಗೆ ಸಾಮಾನ್ಯವಾಗಿದೆ. ಹೀಗಾಗಿಯೇ ಮಕ್ಕಳಿಗೆ ಇಂಗ್ಲಿಷಿನ ಸ್ವನವ್ಯವಸ್ಥೆ ಕನ್ನಡದ ಸ್ವನವ್ಯವಸ್ಥೆಗಿಂತಲೂ ಬೇಗ ಮನಸ್ಸಿಗೆ ಬರುತ್ತಿದೆ. ’ಬಣ್ಣದ ತಗಡಿನ ತುತ್ತೂರಿ’, ’ರೊಟ್ಟಿ ಅಂಗಡಿ ಕಿಟ್ಟಪ್ಪ’ ಮೊದಲಾದ ಸುಲಲಿತವಾದ ಶಿಶುಪ್ರಾಸಗಳ ಪರಿಚಯವೇ ಇಲ್ಲದ ಕನ್ನಡ ಮಕ್ಕಳು ಕನ್ನಡ ಕಲಿಯುವುದಾದರೂ ಹೇಗೆ? ಈಗ್ಗೆ ಸುಮಾರು ಮೂವತ್ತು ನಲವತ್ತು ವರ್ಷಗಳ ಹಿಂದಿನವರೆಗೂ ಬೆಂಗಳೂರಿನಂಥ ನಗರದಲ್ಲೂ ಸಂಜೆಯ ವೇಳೆ ಮನೆಯಲ್ಲಿ ದೇವರ ಮುಂದೆ ದೀಪ ಬೆಳಗಿಸಿ ಸ್ತೋತ್ರಪಾಠಗಳನ್ನು ಅಮ್ಮ, ಅಜ್ಜಿಯರು ಹೇಳಿಕೊಡುತ್ತಿದ್ದುದು ಸಾಮಾನ್ಯ. ಕನ್ನಡಕ್ಕೆ ಪೂರಕವಾದ ಸಂಸ್ಕೃತ ಸ್ತೋತ್ರಗಳು, ತಿಥಿ, ವಾರ, ಮಾಸ, ಋತು, ಸಂವತ್ಸರ, ನಕ್ಷತ್ರಗಳ ಕೋಷ್ಟಕಗಳು. ವಿಷ್ಣುಸಹಸ್ರನಾಮ, ಅಮರಕೋಶ ಜೊತೆಜೊತೆಗೇ ಸರಳವಾದ ಕನ್ನಡ ಕಾವ್ಯ ಭಾಗಗಳನ್ನೂ ಹೇಳಿಕೊಡಲಾಗುತ್ತಿತ್ತು. ಕನ್ನಡ ಭಾಷೆಯ ಉಚ್ಚಾರಣಾ ಸ್ಪಷ್ಟತೆಯನ್ನು ಮನೆಮನೆಗಳಲ್ಲೂ ಹೀಗೆ ಎಳವೆಯಿಂದಲೇ ರೂಪಿಸಲಾಗುತ್ತಿತ್ತು. ಇಂದಿಗೂ ಆಂಧ್ರದಲ್ಲಿ ತೆಲುಗು ಭಾಷಿಕರು ’ಪೆದ್ದ ಬಾಲಶಿಕ್ಷಾ’ ಎನ್ನುವ ಪುಸ್ತಕವನ್ನು ಈ ಉದ್ದೇಶಕ್ಕಾಗಿಯೇ ಬಳಸುತ್ತಾರಂತೆ. ಹಿಂದೆ ನಮ್ಮಲ್ಲೂ ’ಮಗ್ಗಿ ಪುಸ್ತಕ’ ಎನ್ನುವ ಹೆಸರಿನಲ್ಲಿ ಇಂತಹುದೇ ಒಂದು ಲಭ್ಯವಿತ್ತು. ಈಗಿನ ಪರಿಸ್ಥಿತಿ ತಿಳಿದಿಲ್ಲ. ಕನಕದಾಸರ ಹರಿಭಕ್ತಿಸಾರದ ಪದ್ಯಗಳು, ಸೋಮೇಶ್ವರ ಶತಕ, ಸರ್ವಜ್ಞನ ತ್ರಿಪದಿ, ಶಿವಶರಣರ ವಚನ ಸಾಹಿತ್ಯದಿಂದ ಆಯ್ದ ಸೂಕ್ತಿರತ್ನಗಳು, ತಿರುಕನ ಕನಸು, ಗೋವಿನ ಹಾಡು, ಕುಮಾರವ್ಯಾಸ ಭಾರತ, ಗಾದೆಗಳು, ಒಗಟುಗಳು ಮೊದಲಾದವನ್ನು ನಿತ್ಯಪಾಠದಲ್ಲಿ ಹಿಂದೆ ಅಳವಡಿಸಿಕೊಂಡಿದ್ದುದು ಭಾಷಾ ಶುದ್ಧಿಯ ದೃಷ್ಟಿಯಿಂದಲೇ. ಕನ್ನಡ ಉಚ್ಚಾರಣೆಗಳನ್ನು ಕ್ರಮಬದ್ಧವಾಗಿ ಕಲಿಯಬೇಕೆನ್ನುವವರೆಲ್ಲ ಮೊದಲಿಗೆ ಈ ರೀತಿಯ ಸರಳ ಸಾಹಿತ್ಯದ ಓದನ್ನು ರೂಢಿಸಿಕೊಳ್ಳಲೇಬೇಕು. ಧ್ವನಿಯ ಸಂಸ್ಕರಣಕ್ಕೆ ಇಂತಹ ಸರಳ ಪಠ್ಯಭಾಗಗಳನ್ನು ಓದುವ ಅಭ್ಯಾಸ ಬಹಳ ಅನುಕೂಲಕರ. ಆಡುವ ಮಾತಿನಲ್ಲಿ ವಿವಿಧ ಸ್ವನಗಳ ಸಂಕೀರ್ಣ ಸಂಯುಕ್ತ ರೂಪಗಳನ್ನು ಉಚ್ಚರಿಸಲು ನಿರಂತರ ಅಭ್ಯಾಸ ಬೇಕು. ಉಚ್ಚಾರಣೆಯನ್ನು ಬಹಳವಾಗಿ ಪ್ರಭಾವಿಸುವುದು ನಮ್ಮ ಮಾತಿನ ಲಯ. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಸಹಜವಾದ ’ಲಯ’ ಮತ್ತು ’ವೇಗ’ ಇರುತ್ತದೆ. ಇವು ಆಯಾ ಭಾಷೆಯ ಜಾಯಮಾನ. ಕನ್ನಡದಲ್ಲಿನ ಒತ್ತಕ್ಷರಗಳು, ಹ್ರಸ್ವ ದೀರ್ಘಗಳು, ಅಲ್ಪಪ್ರಾಣ, ಮಹಾಪ್ರಾಣಗಳು - ಇವುಗಳ ನಿರ್ದಿಷ್ಟ ಸಂಯೋಜನೆ ಯಿಂದ ಪದಗಳ ಸ್ವರೂಪ ನಿರ್ಧಾರಿತವಾಗುವುದರಿಂದ, ಈ ಸಂಯೋಜನೆಗಳೇ ಮಾತಿನ ವೇಗವನ್ನು ನಿರ್ಧರಿಸುತ್ತವೆ ಮತ್ತು ನಿರ್ದೇಶಿಸುತ್ತವೆ. ಹೀಗಾಗಿಯೇ, ಚಿಕ್ಕವಯಸ್ಸಿನಿಂದಲೇ ಭಾಷೆಯ ಜಾಯಮಾನವಾದ ’ಲಯ’ವನ್ನು ಸಿದ್ಧಿಸಿಕೊಳ್ಳಲು ಶಿಶುಪ್ರಾಸಗಳಿಂದ ಹಿಡಿದು ತಕ್ಕಮಟ್ಟಿಗಿನ ಪ್ರೌಢ ಕಾವ್ಯ ಭಾಗಗಳನ್ನು ಕಂಠಸ್ಥ ಮಾಡಿಕೊಳ್ಳುವುದು ಒಳ್ಳೆಯ ರೂಢಿ. ಇದರಿಂದಾಗಿ ಸರಳ ಛಂದಸ್ಸಿನಿಂದ ಸಂಕೀರ್ಣ ಛಂದೋಬಂಧಗಳವರೆಗಿನ ಲಯ ವೈವಿಧ್ಯದ ಮೇಲೆ ಹಿಡಿತ ಬರುತ್ತದೆ. ಉದಾಹರಣೆಗಾಗಿ ಸಾಕಷ್ಟು ಪ್ರಚಲಿತವಾಗಿರುವ ಶಿವತಾಂಡವ ಸ್ತೋತ್ರದ ಈ ಶ್ಲೋಕಗಳನ್ನು ಗಮನಿಸೋಣ: ಜಟಾಕಟಾಹಸಂಭ್ರಮಭ್ರಮನ್ನಿಲಿಮ್ಪನಿರ್ಝರೀ_ ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ | ಧಗದ್ಧಗದ್ಧಗಜ್ಜಲಲ್ಲಲಾಟಪಟ್ಟಪಾವಕೆ ಕಿಶೋರಚಂದ್ರಶೇಖರೆ ರತಿಃ ಪ್ರತಿಕ್ಷಣಂ ಮಮ || ಕರಾಲಭಾಲಪಟ್ಟಿಕಾಧಗದ್‌ಧಗದ್‌ಧಗಜ್ಜ್ವಲದ್_ ಧನಂಜಯಾಹುತೀಕೃತಪ್ರಚಂಡಪಂಚಸಾಯಕೆ | ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ ಪ್ರಕಲ್ಪನೈಕಶಿಲ್ಪಿನೀ ತ್ರಿಲೊಚನೇ ರತಿರ್ಮಮ || ಈ ಸ್ತೋತ್ರಸಾಹಿತ್ಯವನ್ನು ಮತೀಯ ನೆಲೆಯಲ್ಲಿ ನೋಡದೆ ಸಾಹಿತ್ಯ ಮತ್ತು ಭಾಷೆಯ ಸ್ವನಸೌಂದರ್ಯವನ್ನು ಕವಿ ಹಿಡಿದಿಟ್ಟಿರುವ ರೀತಿಯನ್ನು ಗಮನಿಸಿ ಇದನ್ನು ಓದುವ ಪ್ರಯತ್ನ ಮಾಡಿನೋಡಿ. ಮೊದಲಿಗೆ, ಒದುವುದಕ್ಕೇ ತೊಡಕಾಗುವಂತೆ ತೋರುವ ಇದು ಅದರ ಛಂದೋರೂಪವನ್ನು ಗ್ರಹಿಸಿ ನಿಯತ ಲಯದಲ್ಲಿ ಓದಿದಾಗ ಬಹಳ ಸುಲಭವೆನ್ನಿಸುತ್ತದೆ. ಓದುವ ಲಯವನ್ನು ಸಾಧಿಸಲು ಪ್ರಾಚೀನ ಕವಿಗಳು ಸೂಕ್ತ ಛಂದೋರೂಪಗಳ ಬಳಕೆ ಮಾಡಿದ್ದಾರೆ. ಕೆಳಗೆ ನೀಡಿರುವ ಶ್ಲೋಕದಲ್ಲಿ ದಪ್ಪಕ್ಷರಗಳಲ್ಲಿ ಸೂಚಿತವಾಗಿರುವ ಅಕ್ಷರಗಳ ಮೇಲೆ ಘಾತ (ಒತ್ತು) ಕೊಟ್ಟು ಓದಿ ನೋಡಿದಾಗ ಅದರಲ್ಲಿ ಬಳಸಲಾಗಿರುವ ಛಂದೋಬಂಧದ ವಿನ್ಯಾಸ ಮತ್ತು ಸ್ವನಗಳ ಅನುರಣನ ಓದುವವರಿಗೂ ಮತ್ತು ಕೇಳುವವರಿಗೂ ಏಕಕಾಲಕ್ಕೆ ತಿಳಿಯುತ್ತದೆ. ಜಟಾಕಟಾಹಸಂಭ್ರಮಭ್ರಮನ್ನಿಲಿಮ್ಪನಿರ್ಝರೀ_ ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ | ಧಗದ್ಧಗದ್ಧಗಜ್ಜಲಲ್ಲಲಾಟಪಟ್ಟಪಾವಕೇ ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ || ಉಚ್ಚಾರಣೆಯ ಶುದ್ಧಿಯ ಉದ್ದೇಶದಿಂದ ಇಂತಹ ಸ್ತೋತ್ರ ಸಾಹಿತ್ಯವನ್ನು ಕಂಠಪಾಠ ಮಾಡಿಕೊಳ್ಳುವುದು ಲಾಭಕರ. ಶಿವತಾಂಡವ ಸ್ತೋತ್ರದ ಎಲ್ಲ ಶ್ಲೋಕಗಳನ್ನೂ ಕಂಠಪಾಠ ಮಾಡಲು ಪ್ರಯತ್ನಿಸಿದಾಗ ಅದರಲ್ಲಿನ ಸ್ವನಸಂಕೀರ್ಣತೆಗಳನ್ನು ಉಚ್ಚರಿಸುವಲ್ಲಿ ನಾವೆಲ್ಲಿ ಸೋಲುತ್ತೇವೆ ಎನ್ನುವುದು ನಮ್ಮ ಅರಿವಿಗೇ ಬರುತ್ತದೆ. ಕನ್ನಡ ಸಾಹಿತ್ಯದಲ್ಲೂ ಇಂತಹ ವೈವಿಧ್ಯಮಯ ಸ್ವನಸಂಯೋಜನೆಯ ಅದ್ಭುತ ಮಾದರಿಗಳು ಲಭ್ಯವಿವೆ. ಇಂಗ್ಲಿಷಿನ ’ಟಂಗ್ ಟ್ವಿಸ್ಟರ್’ಗಳಂತೆಯೇ ಇವೂ ನಾಲಗೆಗೆ ಸಾಕಷ್ಟು ಕಸರತ್ತು ನೀಡುತ್ತವೆ. ಕವಿ ರಾಘವಾಂಕನ ಈ ಷಟ್ಪದಿಯನ್ನು ಗಮನಿಸಿ: ಗರಳಗೊರಳವನರಳಸರಳಂಗೆ ಮುನಿವಂತೆ ಯಿರುಳ ತಿರುಳಿನ ಹೊರಳಿಗಾ ತರಣಿ ಕೆರಳ್ವಂತೆ ಸರಳ ತೆರಳಿಕೆಗೆ ಮರಳಿತು ಕರುಳ ಸುರುಳಿಯೊಳು ಹೊರಳುತ್ತ ಬೀಳುತ್ತಲು | ಹುರುಳಳಿದುದುರವೊಡೆದು ಸರಳುರ್ಚೆ ನರಳುತ್ತ ತೊರಳೆಯಡಸಲು ಮೂಗನರಳಿಸೆಚ್ಚಂಬ ಹೊ ತ್ತುರುಳ್ವ ಕಂಬನಿಯಿಂದ ತರಳಚಿತ್ತದ ಹಂದಿ ಮರಳಿ ಕಾನನಕೆಯ್ದಿತು. ಸಾಮಾನ್ಯವಾಗಿ ತೊಂದರೆಕೊಡುವ ’ರ’ ಮತ್ತು ’ಳ’ ಗಳ ಸಂಯೋಜಿತ ಉಚ್ಚಾರಣೆಗಳನ್ನು ಸಿದ್ಧಿಸಿಕೊಳ್ಳಲು ಇಂತಹ ಪದ್ಯಗಳನ್ನು ಕಂಠಪಾಠ ಮಾಡುವುದು ಅನುಕೂಲಕರ. ಕನ್ನಡದಲ್ಲಿ ಇಂತಹ ಹಲವಾರು ಅದ್ಭುತ ಕಾವ್ಯಗಳಿವೆ. ಸ್ವನಶುದ್ಧಿಯನ್ನು ರೂಡಿಸಿಕೊಳ್ಳಲು ಬಯಸುವವರು ಇವುಗಳ ಬಗ್ಗೆ ಗಮನ ಹರಿಸಬೇಕಷ್ಟೇ. ಉಳಿದಂತೆ, ಸಾಮಾನ್ಯ ಸಂದರ್ಭಗಳಲ್ಲಿ ಶುದ್ಧ ಉಚ್ಚಾರಣೆಯ ಸಾಧನೆಗಾಗಿ ಕೆಲವೊಂದು ಸರಳ ಕ್ರಮಗಳನ್ನೂ ಅನುಸರಿಸಿ ಪ್ರಯತ್ನಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.