ಆಕಾರಗಳ ಸುತ್ತ... ದೇಹದಾರ್ಢ್ಯ ಗಳಿಸಬೇಕಾದರೆ ವ್ಯಾಯಾಮ ಮಾಡಲೇಬೇಕು. ಅದರಲ್ಲೂ ನಿಶ್ಚಿತವಾದ ವ್ಯಾಯಾಮಗಳನ್ನೇ ಮಾಡಬೇಕು ಎನ್ನುವುದು ನಿಯಮ. ನಮ್ಮ ದೇಹದಲ್ಲಿನ ಸ್ನಾಯುಗಳನ್ನು ನಮ್ಮ ಇಚ್ಛೆಗೆ ತಕ್ಕಂತೆ, ನಾವು ಇಚ್ಛಿಸುವ ಸಮಯದಲ್ಲಿ, ನಮ್ಮ ಅಗತ್ಯಗಳಿಗೆ ಅನುಗುಣವಾಗಿಯೇ ಬಳಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯಲಿಕ್ಕೆ ನಿಯಮಿತವಾದ ವ್ಯಾಯಾಮ ಅಗತ್ಯ. ಇದೇ ತತ್ವವನ್ನು ಮನುಷ್ಯನ ಕಂಠಸ್ವರಕ್ಕೂ ಅನ್ವಯಿಸಬೇಕು. ಸಂಗೀತದ ಕಲಿಕೆಯಲ್ಲಿ ಸ್ವರಸಾಧನೆಗಾಗಿ, ಬಾಲಪಾಠಗಳಿಂದ ಹಿಡಿದು ಮಧ್ಯಂತರ ಹಂತದ ಪಾಠಕ್ರಮದವರೆಗೆ ಸ್ವರೋಚ್ಚಾರಣೆಯ, ಉಸಿರಾಟದ ಕ್ರಮ ಮತ್ತು ಸ್ವರದ ಸ್ಥಾನಶುದ್ಧಿಯನ್ನು ಸಾಧಿಸುವ ಬಗೆಗೆ ಹಲವಾರು ನಿಯಮಿತ ಅಭ್ಯಾಸಗಳಿವೆ. ಇದು ಅನಿವಾರ್ಯ, ಇದು ಪಾಠಕ್ರಮ. ಆಡುಮಾತಿನಲ್ಲಿ ನಾವು ಕಂಠಧ್ವನಿಯನ್ನೇ ಬಳಸಿಕೊಳ್ಳುತ್ತೇವಾದರೂ, ಅದನ್ನೇ ಹಾಡುಗಾರಿಕೆಗೆ ಬಳಸುವಾಗ ಅದರ ವ್ಯಾಪ್ತಿಯನ್ನು (ರೇಂಜ್) ಸಮರ್ಪಕವಾಗಿ ಉಪಯೋಗಿಸಲು ಮಂದ್ರ, ಮಧ್ಯ ಮತ್ತು ತಾರಸ್ಥಾಯಿಗಳಲ್ಲಿ ಸಾಧನೆ ಮಾಡಲೇಬೇಕು. ಸಂಗೀತದಲ್ಲಿ ನಾವು ಕಂಠಸ್ವರವನ್ನು ಬಳಸುವ ರೀತಿಗೂ ಆಡುಮಾತಿನಲ್ಲಿ ಬಳಸುವ ರೀತಿಗೂ ಸ್ವಲ್ಪ ವ್ಯತ್ಯಾಸಗಳಿವೆ. ಸಂಗೀತದಲ್ಲಿ ಹನ್ನೆರಡು ಸ್ವರಗಳ ಸ್ಥಾನವನ್ನು ಒಂದು ಸಪ್ತಕದಲ್ಲಿ ನಿಶ್ಚಿತ ಅನುಪಾತದಲ್ಲಿ ವಿಭಾಗಿಸಲಾಗಿರುವುದರಿಂದ ಆಯಾ ನಿರ್ದಿಷ್ಟ ಸ್ಥಾನಗಳನ್ನು ಕಂಠಸ್ವರ ತಲುಪಿದಾಗಲಷ್ಟೇ ಸುಸ್ವರ ಸಾಧಿತವಾಯಿತು ಎಂದು ಗುರುತಿಸಲಾಗುತ್ತದೆ. ಎಲ್ಲರೂ ಮಾತನಾಡುವಾಗ ಸಂಗೀತದಲ್ಲಿ ಹೇಳಲಾಗಿರುವ ಸ್ವರಗಳನ್ನೇ ಬಳಸುತ್ತೇವೆ ಆದರೆ ಆಯಾ ಪೂರ್ವನಿಶ್ಚಿತ ಸ್ವರಸ್ಥಾನಗಳನ್ನಲ್ಲ. ಜೊತೆಗೆ ಸಂಗೀತದಲ್ಲಿರುವಂತೆ ಒಂದು ನಿಖರವಾದ ಆಧಾರ ಶ್ರುತಿ (ತಂಬೂರಿಯ ಸಹಾಯದಿಂದ ದೊರೆಯುವಂತೆ) ಕೇವಲ ಮಾತನಾಡುವಾಗ ಇರುವುದಿಲ್ಲ. ಹೀಗಾಗಿ ನಾವಾಡುವ ಮಾತಿನಲ್ಲಿ ಎಲ್ಲ ಸ್ವರಗಳೂ ಒಂದು ಆಧಾರ ಶ್ರುತಿಗೆ ಹೊಂದಿಕೊಂಡು ಇರುವಂತೆ ಭಾಸವಾಗುವುದಿಲ್ಲ. ಆದ್ದರಿಂದಲೇ ಆಡುಮಾತಿನಲ್ಲಿ ಹಾಡೊಂದರಲ್ಲಿ ಶಾಸ್ತ್ರೀಯವಾಗಿ ಗ್ರಹಿಸಬಲ್ಲ ’ರಾಗ’ವನ್ನು ಗುರುತಿಸಲಾಗುವುದಿಲ್ಲ. ಆದರೆ, ಆಡುಮಾತಿನಲ್ಲಿಯೂ ವಿವಿಧ ಸ್ವರಗಳ (ಅನಿರ್ದಿಷ್ಟ ಸ್ಥಾನಗಳಲ್ಲಿಯಾದರೂ) ಬಳಸುವಿಕೆಯಿಂದ ಏರಿಳಿತಗಳು ಭಾಸವಾಗುತ್ತವೆ. ಇವುಗಳೇ ಮಾತಿಗೆ ಬಣ್ಣವನ್ನೂ ತಂದುಕೊಡುತ್ತವೆ. ಮಾತಿನಲ್ಲಿನ ಏರಿಳಿತಗಳ ಪ್ರಾಮುಖ್ಯತೆಯನ್ನು ತಿಳಿಯುವದಕ್ಕಿಂತಲೂ ಮೊದಲಿಗೆ ಸ್ಪಷ್ಟ ಉಚ್ಚಾರಣೆಗಾಗಿ ಒದಗುವಂಥ ಕೆಲವು ಸರಳ ವ್ಯಾಯಾಮಗಳನ್ನು ಗಮನಿಸಬಹುದು. ಇಂಗ್ಲಿಷ್ ಭಾಷೆಗೆ ಸಿದ್ಧಪಡಿಸಿಕೊಟ್ಟಂತೆ ಕನ್ನಡ ಭಾಷೆಗೆ ಉಚ್ಚಾರಣಾ ಶುದ್ಧಿಯ ಸರಳ ವ್ಯಾಯಾಮಗಳನ್ನು ಯಾರೂ ಸಿದ್ಧಪಡಿದಂತೆ ಕಂಡುಬಂದಿಲ್ಲ. ಪ್ರಸಾರ ಮಾಧ್ಯಮಗಳ ಅಗತ್ಯಗಳ ಹಿನ್ನೆಲೆಯಲ್ಲಿ ಈ ಕುರಿತ ಒಂದು ನಮ್ರ (ಬಹುಶಃ ಪ್ರಥಮ) ಪ್ರಯತ್ನ ಹೀಗಿದೆ; . ಅ - ಹ ಗಳ ಪಲ್ಲಟಿಸುವಿಕೆಯ ಸಮಸ್ಯೆ: ಇದು ಅತ್ಯಂತ ಹೇರಳವಾಗಿ ಕಂಡುಬರುವ ಉಚ್ಚಾರಣೆಯ ಸಮಸ್ಯೆ. ಬರಹದಲ್ಲಿ ಅಕಾರವನ್ನು ನೋಡಿಯೂ ಹಕಾರವನ್ನು ಉಚ್ಚರಿಸುವುದು, ಹಕಾರವನ್ನು ಗಮನಿಸಿಯೂ ಅಕಾರವನ್ನು ಉಚ್ಚರಿಸುವುದು ಬಹಳ ಮಂದಿಗೆ ರೂಢಿಯಾಗಿಬಿಟ್ಟಿದೆ. ’ಹಾಸನ’ವನ್ನು ’ಆಸನ’ ಎಂತಲೂ ಅರಸಿಕೆರೆಯನ್ನು ’ಹರಸಿಕೆರೆ’ ಎಂತಲೂ ಸ್ವರ-ವ್ಯಂಜನಗಳನ್ನು ಪಲ್ಲಟಿಸಿ ಉಚ್ಚರಿಸುವುದರ ಕುರಿತು ಹಾಸ್ಯಚಟಾಕಿಗಳು ಪ್ರಚಲಿತವಾಗಿವೆ. ಮುಖ್ಯವಾಗಿ ಈ ಸಮಸ್ಯೆಯ ನಿವಾರಣೆಗೆ ಆಯಾ ವರ್ಣಗಳ ಲಿಪಿಗೂ ಮತ್ತು ಉಚ್ಚಾರಣೆಗೂ ಸಮನ್ವಯವನ್ನು ಸಾಧಿಸಿಕೊಳ್ಳಬೇಕು. ಚಿಕ್ಕವಯಸ್ಸಿನಲ್ಲಿ ಇದು ಸಾಧ್ಯವಾಗದಿದ್ದವರು ಪ್ರೌಢರಾದಾಗಲಾದರೂ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸಬೇಕು. ಸರಳವಾಗಿ ಈ ಕೆಳಗಿನಂತೆ ಉಚ್ಚಾರಣೆಯ ಅಭ್ಯಾಸವನ್ನು ಪ್ರಾರಂಭಿಸಬಹುದು: 1) ಅ-ಹ ಅ-ಹ ಅ-ಹ ಅ-ಹ (೧೫ ಬಾರಿ ನಿರಂತರವಾಗಿ) - ಅಕಾರ ಮತ್ತು ಹಕಾರಗಳ ವ್ಯತ್ಯಾಸವನ್ನು ಮನಸ್ಸಿಗೆ ತಂದುಕೊಂಡು ಪ್ರಜ್ಞಾಪೂರ್ವಕವಾಗಿ ಮಾತನಾಡುವ ಸಹಜ ವೇಗದಲ್ಲಿಯೇ ಉಚ್ಚರಿಸಿ. ನಂತರ ಇದನ್ನೇ ಈಗ ಕ್ರಮಪಲ್ಲಟಿಸಿ: 2) ಹ-ಅ ಹ-ಅ ಹ-ಅ ಹ-ಅ ಎಂದು ಉಚ್ಚರಿಸಿ. ಸಾಮಾನ್ಯ ಮಾತನಾಡುವ ವೇಗದಲ್ಲಿಯೇ ಇದರ ಅಭ್ಯಾಸವನ್ನು ಪ್ರಯತ್ನಿಸಿ. ಈ ಬಾರಿ ನಿಮಗೆ ಮೊದಲು ಹೇಳಿದ ಕ್ರಮದಲ್ಲಿ ಹೇಳಿದಷ್ಟು ಸುಲಭವಾಗಿ ಹೇಳಲಾಗುವುದಿಲ್ಲ. ಗಮನವಿಟ್ಟು ಹೇಳಬೇಕಾದ ಅಗತ್ಯ ನಿಮ್ಮ ಅನುಭವಕ್ಕೆ ಬರುತ್ತದೆ. ಈ ಉಚ್ಚಾರಣೆ ಹಿಡೀತಕ್ಕೆ ಬರುವವರೆಗೂ ಅಭ್ಯಾಸ ಮುಂದುವರೆಸಿ. ನಂತರ (15 ಬಾರಿ ನಿರಂತರವಾಗಿ) ಈ ಕೆಳಗಿನವುಗಳನ್ನು ಲಯಬದ್ಧವಾಗಿ, ನೀವು ಮಾತನಾಡುವ ಸಹಜ ವೇಗದಲ್ಲಿಯೇ ಉಚ್ಚರಿಸಿ. 3) ಅಹಹ ಅಹಹ ಅಹಹ ಅಹಹ 4) ಅಹಹಹ ಅಹಹಹ ಅಹಹಹ ಅಹಹಹ 5)ಅರ ಹರ ಅರ ಹರ ಅರ ಹರ ಅರ ಹರ 6) ಹಳದಿ ಹಸಿರು ಹೂವಿನ ಹಾರ ಅರಸಿ ಅರಸಿ ಅಲೆದೆ. 7) ಹಾಲಸಮುದ್ರದ ಆಳದಲಿತ್ತು ಹಾಲಾಹಲ ಹರಿವು 8) ಹರಿದಿದೆ ಅರಿವೆ; ಅರಳಿದೆ ಅರಳು; ಹೊಳೆಯುತ್ತಿದೆ ಹರಳು 9) ಅನ್ನವಿಟ್ಟವರ ಹಂಗಿರಲಿ ಹಸಿವು ಹಿಂಗಿದ ಮೇಲೆ. 10) ಆಕಳು ಹಾಕಿದೆ ಹೆಣ್ಣುಗರು. ಇನ್ನೀಗ ಹೊಟ್ಟೆ ಹಗುರು. 11) ಅರಳು ಎಂದರೆ ಹರಳಲ್ಲ; ಹರಳು ಎಂದರೆ ಅರಳಲ್ಲ 12) ಆಲೂರಿನಲ್ಲಿ ಹಾಲು ಅತಿ ಅಗ್ಗವಂತೆ. ಹಾಲಾಳದಲ್ಲಿ ಆಲೂಗಡ್ಡೆ ಹಾಳಾಯಿತಂತೆ. 13) ಹಾಕಿದ ಅಕ್ಕಿಯ ತಿನ್ನುವ ಹಕ್ಕಿಯು ಹಿಕ್ಕೆಯ ಹಾಕುವುದು. 14) ಅಗ್ಗವಾಗಿಹ ಹಗ್ಗ ಹಿಡಿದು ಹಿಗ್ಗಲಿ ಬೇಡ ಹರಡಿರುವ ಹೆಜ್ಜೇನ ಗೂಡ ನೋಡು 15) ಅರಿಯೆ ಹರಿ; ಹರಿಯೆ ಅರಿ; ಹರಿಯ ಅರಿ; ಅರಿಯ ಹರಿ ) ಪಲ್ಲಟ: ಅ-ಹ ಗಳು ಪಲ್ಲಟವಾಗುವಂತೆಯೇ ಇ-ಹಿ, ಉ-ಹು ಮತ್ತು ಎ-ಹೆ ಗಳು ಪರಸ್ಪರ ಪಲ್ಲಟವಾಗುವುದನ್ನು ನಾವು ಕಾಣುತ್ತೇವೆ. ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲೂ ಮೇಲಿನಂತೆಯೇ ಅಭ್ಯಾಸದ ಮಾದರಿಗಳನ್ನು ರೂಪಿಸಿಕೊಳ್ಳಿ: 1) ಇ-ಹಿ ಇ-ಹಿ ಇ-ಹಿ ಉ-ಹು ಉ-ಹು ಉ-ಹು 2) ಹಿ-ಇ ಹಿ-ಇ ಹಿ-ಇ ಹು-ಉ ಹು-ಉ ಹು-ಉ 3) ಇಹಿಹಿ ಇಹಿಹಿ ಇಹಿಹಿ ಉಹುಹು ಉಹುಹು ಉಹುಹು 4) ಹುಡುಗಿ ಹಿಟ್ಟಿಗೆ ಎಸರಿಟ್ಟಳು. ಹೇರಳವಾಗಿದೆ ಉಪ್ಪಿಟ್ಟು.; ಹೊತ್ತಾಗಿದೆ ಹಾಲು ಹೆಪ್ಪಿಟ್ಟು 5) ಉಳ್ಳಾಲದ ಹುಲ್ಲಿನ ಬಣವೆ ಹಸುಗಳ ಹಲ್ಲಿಗೆ ಸಾಲದು 6) ಉತ್ತರಿಸಿದ ಧ್ವನಿ ಹುತ್ತದೊಳಗಿದ್ದ ಉತ್ತಮನದ್ದು 7) ಉರುಳುತ್ತಿದೆ ಆ ಹುರುಳಿಯ ಮೂಟೆ ಹೊಸ್ತಿಲಿರುವ ಕಡೆಗೆ. 8) ಅಯ್ಯಯ್ಯೋ ಹೈಹಯರಾಯ ಬೈಯ್ತಾನೆ; ಎದುರಿಗೆ ಬಂದು ಹೆದರಿಸ್ತಾನೆ; ಎದುರು ಬಿದ್ರೆ ಹೆದರ್ತಾನೆ. 9) ಅಂಕಾಳಮ್ಮಂಗ್ ಹಂಕಾರಾಂದ್ರೆ ಹೂಂಕಾರ ಹಾಕೋದಾ? 10) ಹಂಪನಕಟ್ಟೆ ಅಂಬಾಬಾಯಿಗೆ ಹಿಗ್ಗೋ ಹಿಗ್ಗು. ಅಂದ್ಕೊಂಡ್ ಕೆಲ್ಸ ಆದ್ಮೇಲೆ ಹನುಮಂತನಿಗೆ ಹಿಪ್ಪೇತುಪ್ಪದ ದೀಪ ಹಚ್ತೀನಿ ಅಂತ ಹರಕೆ ಹೊತ್ಕೊಂಡಿದ್ಲಂತೇ? ಹೀ ಅಂತ ಹಲ್ಬಿಟ್ಕೊಂಡೇ ಹಚ್ಬೇಕೇ ಹಣತೇನ? 11) ಹೋಗ್ಲಿ ಬಾರೋ ಓಬಳಪ್ಪ. ಹೋತ ಹೊಳೇ ಕಡೆಗೆ ಓಡಿಹೋಗಿದೆ. ಹಾಗೂ ಹೀಗೂ ಮಾಡಿ ಹಿಡ್ಕೊಂಡ್ ಬರ್ತೀಯಾ ? ಹತ್ರೂಪಾಯಿ ಕೊಡ್ತೀನಿ. ) ಉಚ್ಚಾರಣೆ ತೊಡಕು ನಿವಾರಣೆ: ಲಕಾರ ಮತ್ತು ರಕಾರಗಳು ಪುನರಾವರ್ತಿತ ಆದಾಗ ಉಚ್ಚಾರಣೆ ತೊಡಕಾಗುತ್ತದೆ. ಆದನ್ನು ನಿವಾರಿಸಲು ಸ್ವಲ್ಪ ಹೆಚ್ಚಿನ ಪ್ರಯತ್ನವೇ ಬೇಕು. ಈ ಕೆಳಗಿನಂತೆ ಪ್ರಯತ್ನಿಸಬಹುದು. 1) ಅರೆ ಅರೆರೆ ಅರೆರೆರೆ ಅರೆರೆರೆರೆ 2) ಅಲೆ ಅಲೆಲೆ ಅಲೆಲೆಲೆ ಅಲೆಲೆಲೆಲೆ 3) ಕರಕರಕರಕರ, ಕರಖರಕರಖರ, ಕರಖರಖರಕರ, ಖರಕರಕರಕರ, ಖರಕರಕರಖರ 4) ನಳಹಲಮಳೆಛಲ, ಬಳೆತಲೆಖಳಬಲಿ, ಅಳಿಬಲತಳಿಕುಲು, ಬೆಳೆಸೆಲೆಕುಳುಜಲ (ಈ ರೀತಿಯ ವಿಭಿನ್ನಾಕ್ಷರಗಳನ್ನು ಸಂಯೋಜಿತವಾಗಿ ಉಚ್ಚರಿಸುವಾಗ, ನಾಲಿಗೆಯು ವೇಗವಾಗಿ ಮತ್ತು ಸರಾಗವಾಗಿ ಚಲಿಸಬೆಕಾಗುತ್ತದೆ. ನಾಲಿಗೆಯು ಸ್ಥಾನವನ್ನು ಬದಲಾಯಿಸಿಕೊಂಡು ಅಕ್ಷರ ಉಚ್ಚರಿಸಬೇಕಾದರೆ ನಿರಂತರವಾದ ಅಭ್ಯಾಸದ ಅವಶ್ಯಕತೆ ಇರುತ್ತದೆ. ನಾವು ಮಾನಸಿಕವಾಗಿ ಅದಕ್ಕೆ ಸಿದ್ಧರಾಗಿಲ್ಲದಿರುವುದು. ಭಾಷೆಯ ಉಚ್ಚಾರಣೆಯಲ್ಲಿ ತೊಂದರೆಯಾಗಲು ಮುಖ್ಯ ಕಾರಣವಾಗಿರುತ್ತದೆ. ನಿರಂತರವಾದ ಅಭ್ಯಾಸ ಈ ಅಗತ್ಯ ಮಾನಸಿಕ ಸಿದ್ಧತೆಯನ್ನು ನಮಗೆ ದೊರಕಿಸಿಕೊಡುತ್ತದೆ.) ವರ್ಣಗಳ ವಿಭಿನ್ನ ಸಂಯೋಜನೆಗಳನ್ನು ತಡವರಿಸದೆ ಹೇಳುವಲ್ಲಿ ಮನಸ್ಸಿನದ್ದು ಮುಖ್ಯ ಪಾತ್ರ. ಲಿಪಿ ಮತ್ತು ಸ್ವನಗಳ ಸಂಬಂಧವನ್ನು ಕಣ್ಣೋಟ ಗ್ರಹಿಸಿದರೂ ಧ್ವನ್ಯಂಗಗಳು ಸಮರ್ಥವಾಗಿ ತಯಾರಾಗಿರದಿದ್ದರೆ ಉಚ್ಚಾರಣೆಗೆ ತೊಡಕಾಗುವುದು ಸಹಜವೇ. ನೋಟ, ಗ್ರಹಿಕೆ, ಉಚ್ಚಾರಣೆ, ಧ್ವನ್ಯಂಗಗಳ ಚಲನೆ - ಈ ಎಲ್ಲವೂ ಸಂಯೋಜಿತವಾಗಿ ಆಗಬೇಕಾದ್ದರಿಂದ ಓದಬೇಕಾಗಿರುವ ಭಾಷೆಯ ಸಮರ್ಪಕ ಜ್ಞಾನ, ಅದರ ಸ್ವನಗಳ ಉಚ್ಚಾರಣೆಯ ಸೂಕ್ಷ್ಮಗಳು, ಓದುತ್ತಿರುವ ವಾಕ್ಯದ ಅರ್ಥ ಮತ್ತು ಸಂದರ್ಭಗಳ ಸ್ಪಷ್ಟ ಜ್ಞಾನ ಓದುವವನಿಗೆ ಇದ್ದಾಗಲಷ್ಟೇ ಉಚ್ಚಾರಣೆ ಸಹಜವಾಗಿರುತ್ತದೆ ಮತ್ತು ಇತರರೂ ಸವಿಯುವಂತಿರುತ್ತದೆ. –ಮಾಹಿತಿಗೆ: 9986001369 (ಮುಂದಿನವಾರ: ಇನ್ನಷ್ಟು ಅಭ್ಯಾಸದ ಮಾದರಿಗಳು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.