ಧ್ವನ್ಯಂಗಕ್ಕೂ ವ್ಯಾಯಾಮ ವೃತ್ತಿಪರವಾಗಿ ಧ್ವನಿಯನ್ನು ಬಳಸುವವರು ಮಾಡಬಹುದಾದ ‘ವಾರ್ಮ್ ಅಪ್’ ಪೂರ್ವಾಭ್ಯಾಸದ ಕುರಿತು ಗಮನಿಸುತ್ತಿದ್ದೇವೆ. ಮಾತಿನಲ್ಲಿ ಸ್ಪಷ್ಟತೆಯಿರಬೇಕಾದರೆ ನಮ್ಮ ದವಡೆಗಳ ಚಲನೆ ಬಹಳ ಮುಖ್ಯ. ಮೇಲ್ದವಡೆಗಳು ಚಲಿಸುವುದಿಲ್ಲ. ಕೆಳದವಡೆಗಳು ಮಾತ್ರ ಚಲಿಸುವುದರಿಂದ, ನಮ್ಮ ಬಾಯಿ ತೆರೆಯುವ ಪ್ರಮಾಣ, ಇದರ ಮೇಲೆ ಅವಲಂಬಿತವಾಗಿದೆ. ವಿಶೇಷವಾಗಿ ‘ಅ’ ಮತ್ತು ‘ಆ’ ಕಾರಗಳು ಸ್ಪಷ್ಟವಾಗಬೇಕಾದರೆ ದವಡೆಯ ಚಲನೆ ಅತ್ಯಂತ ಮಹತ್ವದ್ದು. ದವಡೆಯ ಚಲನೆ ಅದಕ್ಕೆ ಸಂಬಂಧಿಸಿದ ಸ್ನಾಯುಗಳ ಕಾರಣ ಉಂಟಾಗುವುದರಿಂದ ಅವುಗಳ ‘ವಾರ್ಮ್ ಅಪ್’ ಮಾಡಿಕೊಳ್ಳುವುದು ಸೂಕ್ತ. ಇದಕ್ಕಾಗಿ, ಭುಜಗಳನ್ನು ಇಳಿಬಿಟ್ಟು ವಿಶ್ರಾಂತ ಸ್ಥಿತಿಯಲ್ಲಿ ಶ್ವಾಸಕೋಶಗಳು ಹಿಗ್ಗಲು ಸಾಕಷ್ಟು ಅವಕಾಶವಿರುವಂಥ ನಿಲುವಿಗೆ ಬನ್ನಿ. ನಂತರ, ನಿಮ್ಮ ಎರಡೂ ಹಸ್ತಗಳನ್ನು ಕೆನ್ನೆಗಳ ಮೇಲಿಟ್ಟು ದವಡೆ ಮತ್ತು ಕೆನ್ನೆಗಳ ಭಾಗವನ್ನು ವೃತ್ತಾಕಾರವಾಗಿ ಮರ್ದನ (ಮಸಾಜ್) ಮಾಡುತ್ತ ಬನ್ನಿ. ಹೀಗೆ ಮಾಡುತ್ತ ಮಾಡುತ್ತ ಕೆಳದವಡೆಯನ್ನು ಕೆಳಗೂ ಮೇಲಕ್ಕೂ ಚಲಿಸಿ. ಆಮೇಲೆ, ತುಟಿಗಳನ್ನು ಲಘುವಾಗಿ ತಾಗಿಸಿ ‘ಮಮಮಮಮ’ ಮತ್ತು ‘ವವವವವ’ ಎಂಬ ಶಬ್ದ ಸಹಿತವಾಗಿ ಅಭ್ಯಾಸ ಮಾಡಿ. ಹೀಗೆ ಮಾಡುವಾಗ ಕೆಳದವಡೆಯ ಚಲನೆಯನ್ನು, ಹಂತಹಂತವಾಗಿ ಆ ಭಾಗದಲ್ಲಿ ಒತ್ತಡ ಕಡಿಮೆಯಾಗುತ್ತಿರುವುದನ್ನು ಗಮನಿಸಿ. ಇನ್ನೊಂದು ಅಭ್ಯಾಸವೆಂದರೆ, ಕಂಠದಿಂದ ನಾವು ಉತ್ಪತ್ತಿ ಮಾಡುವ ಸದ್ದಿನ ಶ್ರುತಿಯ ಮೇಲೆ ನಿಯಂತ್ರಣ ಕಂಡುಕೊಳ್ಳಬೇಕಾದದ್ದು. ಆ, ಈ, ಊ ಮತ್ತು ಓ ಕಾರಗಳನ್ನು ಬಳಸಿ ಅತಿ ತಗ್ಗು ಶ್ರುತಿಯಿಂದ ಸಾಧ್ಯವಿರುವಷ್ಟು ಹೆಚ್ಚಿನ ಶ್ರುತಿಯವರೆವಿಗೂ (ಸೈರನ್‌ನಂತೆ) ಧ್ವನಿಯನ್ನು ಹೊರಡಿಸಿ. ನಂತರ ಆ ಹೆಚ್ಚಿನ ಶ್ರುತಿಯಿಂದ ಅತಿ ತಗ್ಗು ಶ್ರುತಿಯವರೆಗೂ ಧ್ವನಿಯನ್ನು ಮರಳಿಸಿ. ಮಾತಿನಲ್ಲಿನ ‘ಕಾಕು’ವಿಗೆ ಶಬ್ದದಲ್ಲಿನ ಈ ಶ್ರುತಿಯ ವ್ಯತ್ಯಾಸ ಅತಿ ಅಗತ್ಯವಾದ ಸಂಗತಿ. ಹೀಗಾಗಿ, ಈ ಅಭ್ಯಾಸದಿಂದ ಮಾತು ಕೇಳುವವರಿಗೆ ಏಕತಾನವೆನ್ನಿಸ ಬಹುದಾದ ಸಮಸ್ಯೆ ನಿವಾರಣೆಯಾಗುವುದು ಸಾಧ್ಯ. ಈ ಕ್ರಮದಲ್ಲಿ ನಮ್ಮ ಧ್ವನಿ ಎರಡು ಸಪ್ತಕಗಳ ವ್ಯಾಪ್ತಿಯಲ್ಲಿ ಏರಿ ಇಳಿಯುವಂತಹ ಅಭ್ಯಾಸ ನಮಗೆ ಒದಗಿಬರುತ್ತದೆ. ಮುಂದಿನ ಅಭ್ಯಾಸ, ಅತಿ ಕಡಿಮೆ ಪ್ರಯತ್ನವನ್ನು ಬಳಸಿ ಸದ್ದು ಹೊರಡಿಸುವುದು. ಇದಕ್ಕಾಗಿ ನಿಮ್ಮ ದವಡೆಯನ್ನು ಒತ್ತಡರಹಿತ ಸ್ಥಿತಿಯಲ್ಲಿರಿಸಿಕೊಳ್ಳಿ. ಕೇವಲ ನಿಮ್ಮ ಮುಖ ಮತ್ತು ಗಂಟಲುಗಳನ್ನು ಮಾತ್ರ ಉಪಯೋಗಿಸಿ ಸದ್ದು ಮಾಡಬೇಕೆನ್ನುವುದು ಇಲ್ಲಿ ಮುಖ್ಯ. ಅತಿ ಮೆಲ್ಲಗೆ ಆಹಾ! ಹಬ್ಬ, ಹಬ್ಬ ಎಂದು ಉಚ್ಚರಿಸುತ್ತ ನಿಮ್ಮ ಹಸ್ತದ ಹಿಂಭಾಗವನ್ನು ನಿಮ್ಮ ಬಾಯಿಂದ ಕೆಲವು ಇಂಚುಗಳ ದೂರದಲ್ಲಿ ಹಿಡಿದು ಬಾಯಿಂದ ಬರುವ ಶಬ್ದದೊಂದಿಗಿನ ಗಾಳಿಯ ಪ್ರಮಾಣವನ್ನು ಗಮನಿಸಿ. ಇದು ಅತಿ ಕಡಿಮೆ ಪ್ರಮಾಣದಲ್ಲಿರಬೇಕು. ಆದರೆ ಮಹಾಪ್ರಾಣದ ಉಚ್ಚಾರಣೆ ಸ್ಪಷ್ಟವಾಗುವಂತಿರಬೇಕು. ಒತ್ತಡ ಹಾಕಿ ಉಸಿರನ್ನು ಹೊರತಳ್ಳುವ ಪ್ರಯತ್ನ ಮಾಡಬೇಡಿ. ಬೇರೆ ಬೇರೆ ಶ್ರುತಿಗಳಲ್ಲಿ ಇದನ್ನು ಅಭ್ಯಾಸ ಮಾಡಿ. ಒಂದೇ ಉಸಿರಿನಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಅವಧಿಗೆ ಮಾತನಾಡುವುದರಿಂದ ಉಸಿರಿನ ಬಳಕೆಯ ಮೇಲೆ ನಿಯಂತ್ರಣ ಸಾಧಿಸಬಹುದು ಎನ್ನುವುದು ಒಂದು ಅಭಿಪ್ರಾಯವಾದರೂ, ಹೀಗೆ ಮಾಡುವಾಗ ನಮ್ಮ ಹೊಟ್ಟೆಯ, ಎದೆಯ ಮತ್ತು ಗಂಟಲಿನ ಸುತ್ತಲ ಸ್ನಾಯುಗಳನ್ನು ಬಿಗಿಹಿಡಿದು ಅತಿ ಕಡಿಮೆ ಉಸಿರನ್ನು ಹೊರಹಾಕುತ್ತ ಅಭ್ಯಾಸಮಾಡುವುದರಿಂದ ಅನುಕೂಲಕ್ಕಿಂತಲೂ ಹಾನಿಯೇ ಹೆಚ್ಚಾಗುತ್ತದೆ. ಹೀಗೆ ಮಾತನಾಡುವುದನ್ನು ರೂಢಿಸಿಕೊಂಡುಬಿಟ್ಟರೆ, ಬಹಳ ಬೇಗ ದಣಿವಾಗುವುದು, ಮಾತಿನ ಉದ್ದಕ್ಕೂ ಒತ್ತಡದಿಂದಲೇ ಮಾತನಾಡುವುದು, ಧ್ವನಿಯ ಗುಣ ಹಾಳಾಗುವುದು ಮೊದಲಾದ ತೊಂದರೆಗಳೇ ಉಂಟಾಗುತ್ತವೆ. ಶಬ್ದ ಹೊರಡಲು ಗಾಳಿಯ ಅಗತ್ಯವಿರುವುದರಿಂದ ಮಾತಿನ ಜೊತೆಗೇ ನಾವು ನಮ್ಮ ಹೊಟ್ಟೆಯೊಳಗೆ ಸೆಳೆದುಕೊಂಡ ಉಸಿರನ್ನು ಹೊರಹಾಕಬೇಕು. ಇದಕ್ಕಾಗಿ ಹೆಚ್ಚಿನ ಶ್ರಮವಾಗದಂತೆ, ನಮ್ಮ ಉಸಿರಾಟ ಮತ್ತು ಶಬ್ದೋತ್ಪತ್ತಿಯ ಸಂಯೋಜಿತ ವಿಧಾನವನ್ನು ಅನುಸರಿಸಬೇಕು. ಇದಕ್ಕೆ ಅನುಕೂಲವಾಗುವಂಥ ಲಯಬದ್ಧವಾದ ಸಾಹಿತ್ಯವನ್ನು ಬಳಸಿಕೊಳ್ಳಬೇಕು. ‘ದಂಡಕ’ವೆನ್ನುವ ರಚನಾ ಪ್ರಕಾರ ಇದಕ್ಕೆ ಅತ್ಯುತ್ತಮ. ಸಂಸ್ಕೃತದಲ್ಲಿ ‘ಗದ್ಯ’ವೆನ್ನುವ ರಚನೆಗಳು ವಿಶಿಷ್ಟವಾಗಿವೆ. ಇವುಗಳಲ್ಲಿ ಅನುಪ್ರಾಸಗಳು, ವೈವಿಧ್ಯಮಯ ಅಂತರ್ಲಯಗಳು, ಯಮಕಗಳು ಎಲ್ಲವೂ ಅತ್ಯಂತ ಸೌಂದರ್ಯಪೂರ್ಣವಾಗಿ ಸಂಯೋಜಿತವಾಗಿರುವುದರಿಂದ ಇವು ಉಚ್ಚಾರಣೆಗೆ ಸವಾಲು ಹಾಕುವಂತಹ ಅತ್ಯುತ್ತಮ ಅಭ್ಯಾಸದ ಮಾದರಿಗಳು. ಉದಾಹರಣೆಗೆ ಶ್ರೀರಾಮನ ವರ್ಣನೆಯ ‘ರಘುವೀರ ಗದ್ಯ’ದ ಈ ಒಂದು ಸಾಲನ್ನು ಗಮನಿಸಿ: ಜಡಕಿರಣಶಕಲಧರ-ಜಟಿಲ-ನಟಪತಿ-ಮುಕುಟತಟ-ನಟನಪಟು- ವಿಬುಧಸರಿದತಿಬಹುಲ-ಮಧುಗಲನ-ಲಲಿತಪದನಲಿನರಜ-ಉಪಮೃದಿತ-ನಿಜವೃಜಿನ-ಜಹದುಪಲತನು-ರುಚಿರಪರಮಮುನಿವರಯುವತಿನುತ ಹಾಗೆಯೇ ಮತ್ತೊಂದು ಸಾಲು: ಅಭಿಗತ-ಶತಮಖ-ಹುತವಹ-ಪಿತೃಪತಿ-ನಿರೃತಿ-ವರುಣ-ಪವನ-ಧನದ-ಗಿರಿಶಪ್ರಮುಖ-ಸುರಪತಿನುತಿಮುದಿತ, ಅಮಿತಮತಿ-ವಿಧಿವಿದಿತ-ಕಥಿತನಿಜ- ವಿಭವಜಲಧಿ-ಪೃಷತಲವ-ವಿಗತಭಯ-ವಿಬುಧ-ವಿಬೋಧಿತ-ವೀರಶಯನ-ಶಾಯಿತ-ವಾನರಪೃತನೌಘ, ಸ್ವಸಮಯ-ವಿಘಟಿತ-ಸುಘಟಿತ-ಸಹೃದಯ-ಸಹಧರ್ಮಚಾರಿಣೀಕ, ವಿಭೀಷಣವಶಂವದೀಕೃತ-ಲಂಕೈಶ್ವರ್ಯ ಇಂತಹ ಸಾಲುಗಳನ್ನು, ಲಯಬದ್ಧವಾಗಿ ಧಾರಾಕಾರವಾಗಿ ಹೇಳಲಿಕ್ಕೆ ನಿರಂತರ ಅಭ್ಯಾಸ ಮತ್ತು ಏಕಾಗ್ರತೆಯಿಂದ ಮಾತ್ರ ಸಾಧ್ಯ. ಇದಕ್ಕೆ ಪೂರಕವಾಗಿ ಕ್ರಮಬದ್ಧವಾದ ಉಸಿರಾಟ ಮತ್ತು ಧ್ವನ್ಯಂಗಗಳ ಪೂರ್ವತಯಾರಿಯಿರಬೇಕಾದದ್ದು ಅತ್ಯಗತ್ಯ. ಹಾಗೆಯೇ ಶ್ರೀನಿವಾಸ ಗದ್ಯ, ರಘುವೀರ ಗದ್ಯ, ಶ್ರೀರಂಗ ಗದ್ಯ, ವಿವಿಧ ದಂಡಕಗಳು ಮೊದಲಾದವುಗಳ ಧ್ವನಿಮುದ್ರಣ ಅಂತರ್ಜಾಲದಲ್ಲಿ ಲಭ್ಯವಿವೆ. ಇದಲ್ಲದೆ, ಸಂಸ್ಕೃತ ಬಾರದವರು ಕನ್ನಡದಲ್ಲಿರುವ ರಗಳೆ, ಷಟ್ಪದಿ, ದಂಡಕ ಮೊದಲಾದವನ್ನು ಸಶಬ್ದವಾಗಿ ಓದುವ ಪ್ರಯತ್ನ ಮಾಡಿದಲ್ಲಿ ಸರಿಯಾದ ಉಚ್ಚಾರಣೆಗೆ ಯಾವ ಮಟ್ಟದ ಏಕಾಗ್ರತೆ ಬೇಕು ಎನ್ನುವುದು ಮನದಟ್ಟಾಗುತ್ತದೆ. ಇತ್ತೀಚೆಗೆ ಸಾಂಪ್ರದಾಯಿಕ ಕಾವ್ಯಪ್ರಕಾರಗಳನ್ನು ಗಮನಿಸುವ, ಅಭ್ಯಾಸ ಮಾಡುವ ವ್ಯವಧಾನವೇ ಇಲ್ಲವಾಗಿರುವುದರ ಪ್ರಭಾವದಿಂದ ನಮ್ಮ ಉಚ್ಚಾರಣೆಗಳು ಶಿಥಿಲವಾಗಿರುವುದು ಆಗ ನಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಉಚ್ಚಾರಣೆಗಳನ್ನು ಸ್ಪಷ್ಟಗೊಳಿಸಿಕೊಂಡ ನಂತರದ ಹಂತದಲ್ಲಿ ನಾವು ಗಮನಿಸಬೇಕಾದದ್ದು ನಮ್ಮ ಮಾತಿಗೆ ಅರ್ಥ-ಭಾವ ಸ್ಪಷ್ಟತೆಯನ್ನು ಸೂಚಿಸುವ ಧ್ವನಿಯ ಏರಿಳಿತ. ಸಂಗೀತದಲ್ಲಿ ನಿರ್ದಿಷ್ಟವಾದ ಏಳು ಸ್ವರಸ್ಥಾನಗಳನ್ನು ಬಳಸುತ್ತಾರಾದರೂ, ಆಡುಮಾತಿನಲ್ಲಿ ಅನಿರ್ದಿಷ್ಟವಾದ ಮೂರು ಸ್ವರ ಸ್ಥಾನಗಳನ್ನು ಬಳಸಲಾಗುತ್ತದೆ. ಇದನ್ನು ‘ಉದಾತ್ತ’, ‘ಅನುದಾತ್ತ’ ಮತ್ತು ‘ಸ್ವರಿತ’ ಎಂದು ಗುರುತಿಸುತ್ತಾರೆ. ಉದಾತ್ತವೆಂದರೆ ಶ್ರುತಿಯ ಏರಿಕೆ, ಅನುದಾತ್ತವೆಂದರೆ ಇಳಿಕೆ, ಸ್ವರಿತವೆಂದರೆ ಏರು-ಇಳಿಕೆಗಳಿಲ್ಲದ ಸಮಸ್ಥಿತಿ. ನಮ್ಮ ಸಹಜ ಮಾತಿನಲ್ಲಿ ಅಪ್ರಯತ್ನವಾಗಿಯೇ ಈ ಮೂರೂ ವ್ಯಕ್ತವಾಗುತ್ತಲೇ ಇರುತ್ತವೆ. ಈ ಏರು ಇಳಿಕೆಗಳಿಲ್ಲದೆ ನಮ್ಮ ಮಾತು ಭಾವಪೂರ್ಣವಾಗುವುದೇ ಇಲ್ಲ. ಮಾತಿಗೆ ಜೀವ ಬರಬೇಕೆಂದರೆ ಈ ಏರಿಳಿತಗಳಿರಲೇ ಬೇಕು. ಇದರಿಂದಾಗಿಯೇ ಕೇಳುಗರು ನಮ್ಮ ಮಾತುಗಳಿಗೆ ಸ್ಪಂದಿಸುವಂತಾಗುವುದು. ಉದಾಹರಣೆಗೆ, ‘ಯಾಕೋ?’ ಎಂದು ಯಾರನ್ನಾದರೂ ಪ್ರಶ್ನಿಸುವಾಗ ‘ಕೋ’ ಎನ್ನುವ ಉಚ್ಚಾರ ‘ಯಾ’ ಎನ್ನುವುದಕ್ಕಿಂತ ಮೇಲಿನ ಸ್ವರದಲ್ಲಿದ್ದರೆ ಪ್ರಶ್ನಸೂಚಕವಾದ ಈ ಪದದಲ್ಲಿ ಆಗ್ರಹವೂ ಸೇರಿಕೊಳ್ಳುತ್ತದೆ. ಪ್ರಶ್ನಿತ ವ್ಯಕ್ತಿ ಉತ್ತರಿಸುವ ನಿರ್ಬಂಧಕ್ಕೆ ಸಿಲುಕುತ್ತಾನೆ. ಪ್ರಶ್ನೆಮಾಡಿದ ವ್ಯಕ್ತಿ ಉತ್ತರ ಪಡೆಯುವ ಮಾನಸಿಕತೆಯನ್ನು ತೋರಿಸಿದ್ದಾನೆ ಎನ್ನಬಹುದು. ಇದೇ ಪದದಲ್ಲಿ ‘ಯಾ’ ದ ಉಚ್ಚಾರ ಮೇಲಿನ ಸ್ವರದಲ್ಲಿದ್ದು (ಉದಾತ್ತ) ‘ಕೋ’ ಎನ್ನುವುದು ಕೆಳಗಿನ ಸ್ವರ (ಅನುದಾತ್ತ)ದಲ್ಲಿದ್ದರೆ ’ಯಾಕೋ’ ಎನ್ನುವುದು ಪ್ರಶ್ನೆಯೇ ಆದರೂ, ಪ್ರಶ್ನೆ ಮಾಡುತ್ತಿರುವವನು ‘ಹೀಗೆ ಮಾಡಬಾರದಿತ್ತು, ಏಕೆ ಹೀಗೆ ಮಾಡಿದೆ?’ ಎನ್ನುವ ಅಭಿಪ್ರಾಯವನ್ನು ಕೇವಲ ಸ್ವರದ ಬದಲಾವಣೆಯಿಂದಲೇ ಸೂಚಿಸುತ್ತಿದ್ದಾನೆ. ಉತ್ತರಿಸುವವನಿಂದ ಉತ್ತರ ಬರಲೇಬೇಕೆಂಬ ನಿರೀಕ್ಷೆಯೇನೂ ಇಲ್ಲಿಲ್ಲ ಎನ್ನಬಹುದು. ಏಕೆಂದರೆ, ಪ್ರಶ್ನೆಗೆ ಕಾರಣವಾದ ಪ್ರಶ್ನಿತನ ‘ಕ್ರಿಯೆ’ ಸಂದರ್ಭೋಚಿತವಾಗಿಲ್ಲ ಅಥವಾ ಸಮಂಜಸವಾಗಿಲ್ಲ ಎನ್ನುವುದನ್ನು ಪೃಚ್ಛಕನೇ ತನ್ನ ಧ್ವ್ವನಿಯಲ್ಲಿ ಸೂಚಿಸಿಬಿಡುತ್ತಿದ್ದಾನೆ. ‘ಯಾ’ ಎನ್ನುವುದು ಸ್ವರಿತ(ಸಮಸ್ಥಿತಿ)ದಿಂದ ಉದಾತ್ತಕ್ಕೆ ಏರಿ ‘ಕೋ’ಎನ್ನುವುದು ಉದಾತ್ತದಿಂದ ಅನುದಾತ್ತಕ್ಕೆ ಇಳಿದಾಗ, ‘ಯಾಕೋ’ ಎನ್ನುವ ಪದ ಕೊಂಕಿನ ಉತ್ಪ್ರೇಕ್ಷಿತ ಆಕ್ಷೇಪಣೆಯಂತೆ ಕೇಳಿಬರುತ್ತದೆ. ಆದಕಾರಣ ಇಲ್ಲಿ ಮಾತು ನಾಟಕೀಯವಾಗುವುದೂ ಉಂಟು. ಈ ರೀತಿ ನಮ್ಮ ಮಾತಿನಲ್ಲಿನ ಸ್ವರವಿನ್ಯಾಸಕ್ಕೂ ಉದ್ದೇಶಿತ ಅರ್ಥಕ್ಕೂ ನೇರ ಸಂಬಂಧವಿರುವುದರಿಂದ, ಮಾತನಾಡುವಾಗ ಎಚ್ಚರದಿಂದಿರಬೇಕು. ಇದೇ ಹಿನ್ನೆಲೆಯಲ್ಲಿಯೇ’ ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಎನ್ನುವುದು. –ಡಾ.ಎನ್.ರಘು 99860 01369 (ಮುಂದಿನ ವಾರ: ಮಾತಿನ ಇನ್ನಷ್ಟು ಸ್ವರವಿನ್ಯಾಸ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.