ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿ ದೈಹಿಕ ಶಿಕ್ಷಣ ಕಾಲೇಜು ಬಹುತೇಕ ಯುವಜನರು ದೈಹಿಕ ಶಿಕ್ಷಣ ಕೋರ್ಸ್‌ ಕಲಿಯಲು ಖಾಸಗಿ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸುತ್ತಾರೆ ಇಲ್ಲವೇ ಹೊರರಾಜ್ಯದ ದೈಹಿಕ ಶಿಕ್ಷಣ ಸಂಸ್ಥೆಗೆ ಸೇರಲು ಸಿದ್ಧತೆ ಮಾಡತೊಡಗುತ್ತಾರೆ. ಆಸಕ್ತಿಕರ ಸಂಗತಿಯೆಂದರೆ, ದೈಹಿಕ ಶಿಕ್ಷಣ ಕೋರ್ಸ್‌ ದಾಖಲಾತಿಗೆಂದೇ ಹೆಚ್ಚು ಪ್ರಯಾಸಪಡಬೇಕಿಲ್ಲ. ಬೇರೆ ಬೇರೆ ಕಾಲೇಜಿಗೆಂದು ಅಲೆದಾಡಬೇಕಿಲ್ಲ. ಆಸಕ್ತರಿಗೆಂದೇ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿಯಲ್ಲಿ ರಾಜ್ಯ ಸರ್ಕಾರವು ಏಕೈಕ ದೈಹಿಕ ಶಿಕ್ಷಣ ಕಾಲೇಜು (ಡಿಪಿ.ಇಡಿ) ಆರಂಭಿಸಿದೆ. ರಾಜ್ಯದ ಬೇರೆಲ್ಲೂ ಇರದ ಈ ಕಾಲೇಜು 30 ವರ್ಷಗಳ ಹಿಂದೆಯೇ ಸ್ಥಾಪನೆಗೊಂಡರೂ ಬೆಳಕಿಗೆ ಬರಲು ಅವಕಾಶ ಸಿಕ್ಕಿದ್ದು ತುಂಬಾನೇ ಕಡಿಮೆ. ಬೇರೆ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡಬಲ್ಲ ಈ ಕಾಲೇಜಿನ ಅತ್ಯುತ್ತಮ ಮಾದರಿಯ ಕ್ರೀಡಾ ಸಾಮಗ್ರಿ ಮತ್ತು ಜಿಮ್ನಾಸ್ಟಿಕ್‌ ಉಪಕರಣಗಳಿವೆ. ಕಾಲೇಜು ವಾತಾವರಣದಲ್ಲೇ ಉಳಿದುಕೊಂಡು ಕಲಿಯುವ ಆಸಕ್ತ ವಿದ್ಯಾರ್ಥಿಗಳಿಗೆ ಇಲ್ಲಿ ವಸತಿ ನಿಲಯದ ಸೌಲಭ್ಯವಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಲ್ಲ ತಜ್ಞ ಕ್ರೀಡಾಪಟುಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಕೊರತೆಯೇ ಇಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕ್ರೀಡಾಕೂಟಗಳಲ್ಲಿ ಅದಮ್ಯ ಸಾಧನೆ ತೋರಿದವರೇ ಇಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಸುಮಾರು 5.8 ಎಕರೆಯಷ್ಟು ವಿಶಾಲವಾದ ಆವರಣ ಹೊಂದಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಖಾಸಗಿ ಸಂಸ್ಥೆಯ ದೈಹಿಕ ಶಿಕ್ಷಣ ಕಾಲೇಜುಗಳಿವೆ. ಆದರೆ ಇಡೀ ರಾಜ್ಯದಲ್ಲಿ ಬೇರೆ ಯಾವುದೇ ಜಿಲ್ಲೆಯನ್ನು ಆಯ್ಕೆ ಮಾಡದೇ 1983ರಲ್ಲಿ ನೂತನ ದೈಹಿಕ ಶಿಕ್ಷಣ ಕಾಲೇಜನ್ನು ಸರ್ಕಾರವು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಳಾಂತರಗೊಂಡು 2003ರಿಂದ ವಿಶಾಲವಾದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ನೀಡುವುದು ಮುಂದುವರೆಸಿತು ಎಂದು ಕಾಲೇಜು ಪ್ರಾಂಶುಪಾಲ ಡಿ.ಅರುಣ್‌ಕುಮಾರ್‌ ಹೇಳುತ್ತಾರೆ. ಬಾಲಕರು ಮತ್ತು ಬಾಲಕಿಯರು ಸೇರಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಇಲ್ಲಿ ಅವಕಾಶವಿದ್ದು, ಆನ್‌ಲೈನ್‌ ರೂಪದಲ್ಲಿ ಮತ್ತು ಅರ್ಜಿ ನಮೂನೆಯಲ್ಲಿ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ನೆಟ್‌ಬಲ್, ಫುಟ್‌ಬಾಲ್‌, ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್‌, ಖೋ–ಖೋ, ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಉತ್ತಮ ಕ್ರೀಡಾಸಾಮಗ್ರಿಗಳು ಮತ್ತು ವಿಶಾಲ ಆವರಣ ಇರುವುದೇ ಈ ಕಾಲೇಜಿನ ಹೆಗ್ಗುರುತು. ದಾಖಲಾತಿ ವೇಳೆ ಸರ್ಕಾರ ನಿಗದಿಪಡಿಸಿದ ಶುಲ್ಕ 2,965 ರೂಪಾಯಿ ಪಡೆಯಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉಚಿತ ಶಿಕ್ಷಣವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲೇ ಈ ಕಾಲೇಜಿನಲ್ಲೂ ಕ್ಯಾಂಪಸ್‌ ಸಂದರ್ಶನ ನಡೆಯುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಯವರು ಈ ಕಾಲೇಜಿನ ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಕರನ್ನಾಗಿ ನೇಮಿಸಿಕೊಳ್ಳುತ್ತಾರೆ. ಪಿಯುಸಿ ಆಧರಿಸಿ ಡಿಪಿ.ಇಡಿ (ದೈಹಿಕ ಶಿಕ್ಷಣ ಡಿಪ್ಲೊಮಾ) ಪರೀಕ್ಷೆ ಉತ್ತೀರ್ಣರಾದರೆ, ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಬಹುದು. ಪದವಿ ಜೊತೆಗೆ ಡಿ.ಇಡಿ ಪರೀಕ್ಷೆ ಉತ್ತೀರ್ಣರಾದರೆ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ನೇಮಕಗೊಳ್ಳಬಹುದು. ಪುಸ್ತಕ ಕಲಿಕೆಗೆ ನೀಡಿದಷ್ಟೇ ಮಹತ್ವವನ್ನು ದೈಹಿಕ ಪರಿಶ್ರಮ ಮತ್ತು ಕ್ರೀಡಾ ಪರಿಣತಿಗೂ ನೀಡಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಕಡ್ಡಾಯವಾಗಿ ದೇಹವನ್ನು ದಂಡಿಸುತ್ತ ಒಂದಿಲ್ಲೊಂದು ಕ್ರೀಡೆ ಬಗ್ಗೆ ಮಾಹಿತಿ, ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುತ್ತದೆ. ಯೋಗ, ವ್ಯಾಯಾಮ ಮತ್ತು ಇತರ ವಿಷಯಗಳ ಬಗ್ಗೆಯೂ ಪರಿಪಕ್ವತೆ ಗಳಿಸಬಹುದು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 91411 17977. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.