‘ಫಾರ್ಮ್ ಡಿ’ ಪೀಳಿಗೆ ವಿಶ್ವದ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಆಗಿದೆ, ಆಗುತ್ತಿವೆ. ಮಾನವನ ಆರೋಗ್ಯಕ್ಕಾಗಿ ಹೊಸ ಹೊಸ ಔಷಧಗಳ ಸಂಶೋಧನೆ ಮತ್ತು ತಯಾರಿಕೆಗಳು ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯ ಪಡೆದಿವೆ. ಹೀಗಾಗಿಯೇ ಔಷಧ ತಯಾರಿಕೆ ಮತ್ತು ವಿತರಣೆಯಲ್ಲಿ ಫಾರ್ಮಸಿ ಕಲಿತವರಿಗೆ ಬೇಡಿಕೆ ಇತ್ತು. ಮೊದಲಿಗೆ ಔಷಧ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದವರು ಔಷದ ಅಂಗಡಿಗಳನ್ನು ನಡೆಸಲು ಪರವಾನಗಿ ಹೊಂದುತ್ತಿದ್ದರು. ಮುಂದೆ ಔಷಧ ವಿಜ್ಞಾನದಲ್ಲಿ ಆವಿಷ್ಕಾರ ನಡೆದಂತೆಲ್ಲಾ ಔಷಧ ವಿಜ್ಞಾನದಲ್ಲಿ ಬಿ.ಫಾರ್ಮ್ ಪದವಿ, ಎಂ.ಫಾರ್ಮ್ ಎಂಬ ಸ್ನಾತಕೋತ್ತರ ಪದವಿಗಳನ್ನು ಔಷಧ ವಿಜ್ಞಾನ ಕಾಲೇಜುಗಳು ಪ್ರಾರಂಭಿಸಿದವು. ಆದರೆ, ನಾಗರಿಕತೆ ಬೆಳೆದಂತೆ, ಹೊಸ ಹೊಸ ಔಷಧಗಳ ಸಂಶೋಧನೆ ಮತ್ತು ತಯಾರಿಕೆಗಳಿಂದಾಗಿ ವೈದ್ಯರಿಗೆ ಆರೋಗ್ಯ ಕ್ಷೇತ್ರದಲ್ಲಿ ಔಷಧ ವಿಜ್ಞಾನದಲ್ಲಿ ನುರಿತ ಫಾರ್ಮಸಿಸ್ಟರ ಅವಶ್ಯಕತೆ ಎದ್ದು ಕಾಣುತ್ತಿತ್ತು. ಇತರೆ ದೇಶಗಳಲ್ಲಿ ಇದಕ್ಕಾಗಿಯೇ, ಆರು ವರ್ಷಗಳ ಫಾರ್ಮ್ ಡಿ ಎಂಬ ಸ್ನಾತಕೋತ್ತರ ಪದವೀಧರರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಆರೋಗ್ಯ ಕ್ಷೇತ್ರದಡಿ ಕೆಲಸ ಮಾಡಲು ನಿಯೋಜಿಸಲಾಗುತ್ತಿತ್ತು. ವಿದೇಶಗಳಲ್ಲಿ ಈ ಕೋರ್ಸಿಗಿದ್ದ ಬೇಡಿಕೆಯನ್ನು ಕಂಡು ಭಾರತದಲ್ಲಿಯೂ ಫಾರ್ಮ್ ಡಿ ಎಂಬ ಆರು ವರ್ಷಗಳ ಪದವಿಯನ್ನು ಪ್ರಾರಂಭಿಸಬೇಕೆನ್ನುವುದು ಭಾರತೀಯ ಔಷಧ ವಿಜ್ಞಾನ ಮಂಡಳಿಯ ಅಧ್ಯಕ್ಷರಾಗಿದ್ದ ಡಾ. ಬಿ. ಸುರೇಶ್ ಅವರ ಮಹತ್ವಾಕಾಂಕ್ಷೆಯಾಗಿತ್ತು. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ, ಮತ್ತಿತರ ಸಂಬಂಧಿತ ಸಂಸ್ಥೆಗಳ ಅನುಮೋದನೆಯೊಂದಿಗೆ 2008ರಲ್ಲಿ ಈ ಫಾರ್ಮ-ಡಿ ಎಂಬ ಆರು ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್ ಭಾರತದಲ್ಲಿ ಪ್ರಾರಂಭಿಸಲಾಗಿತ್ತು. ಬಹತೇಕ ಈ ಕೋರ್ಸನ್ನು ದಕ್ಷಿಣ ಭಾರತದ ಬಹುತೇಕ ಫಾರ್ಮಸಿ ಕಾಲೇಜುಗಳು 2008ರಲ್ಲಿ ಪ್ರಾರಂಭಿಸಿದ್ದು, ಪ್ರಸ್ತುತ 2014ಮೇ ಯಲ್ಲಿ ಫಾರ್ಮ್ ಡಿ ಮೊದಲ ತಂಡದ ವಿದ್ಯಾರ್ಥಿಗಳು ತಮ್ಮ ಹೆಸರಿನ ಹಿಂದೆ ಡಾ. ಎಂಬ ಹಣೆಪಟ್ಟಿಯೊಂದಿಗೆ ಹೊರಬರಲಿದ್ದಾರೆ. ಫಾರ್ಮ್ ಡಿ ಯಾಕೆ ಬೇಕು ? ಇದರ ಅನುಕೂಲಗಳೇನು ? ಭಾರತೀಯ ಔಷಧ ವಿಜ್ಞಾನ ಮಂಡಳಿಯು ಪ್ರಸ್ತುತ ದಿನಗಳಲ್ಲಿ ಕ್ಲಿನಿಕಲ್ ಪ್ರಾಕ್ಟೀಸ್ ಎನ್ನುವುದು ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆರೋಗ್ಯ ನಿರ್ವಹಣೆಯ ಗುಣಮಟ್ಟವು ಅತಿ ಅಗತ್ಯವೆನ್ನುವಂತಹ ಅಭಿಪ್ರಾಯವನ್ನು ಹೊಂದಿದೆ. ಹೀಗಾಗಿಯೇ ಫಾರ್ಮ್ ಡಿ ಕಾರ್ಯಕ್ರಮವು ಔಷಧದ ಬಳಕೆಯಲ್ಲಿನ ಅತ್ಯಂತ ಸುರಕ್ಷತಾ ವಿಧಾನ ಮತ್ತು ಇದರಿಂದ ಉತ್ತಮ ಆರೋಗ್ಯ ಭಾಗ್ಯ ಪಡೆಯುವುದರ ಸಂಬಂಧಗಳನ್ನು ಬೆಸೆದಿರುತ್ತವೆ. ಈ ಗುರಿಯನ್ನು ಸಾಧಿಸುವುದಕ್ಕಾಗಿಯೇ ಆರೋಗ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವಂತಹ ಮತ್ತು ಉತ್ತಮ ಹಾಗೂ ಪ್ರಾಮಾಣಿಕ ವೃತ್ತಿ ನಿರತ ಔಷಧ ತಜ್ಞರ ಅವಶ್ಯಕತೆ ಇದ್ದು, ಅವರು ಸಮಸ್ಯೆಗಳನ್ನು ಸೂಕ್ತವಾಗಿ ಯೋಚಿಸಿ, ಯೋಜಿಸಿ, ಸೂಕ್ತ ಔಷಧಗಳ ಉಪಯೋಗದ ಬಗ್ಗೆ ಹೇಳುವವರುಂಟು. ಅಲ್ಲದೆ, ಫಾರ್ಮಾ ಕೋ ಥೆರಪಿಯಲ್ಲಿನ ವಿವಿಧ ಜವಾಬ್ದಾರಿಗಳನ್ನು ಮತ್ತು ಅಲ್ಲಿನ ವಿವಿಧ ಕಾರ್ಯಗಳ ಮೂಲಕ ಅದನ್ನು ವಿನ್ಯಾಸಗೊಳಿಸಿ, ಅನುಷ್ಠಾನಗೊಳಿಸುವಲ್ಲಿ ನೆರವಾಗುವರು. ಇದರಿಂದಾಗಿ ಥೆರಪ್ಟಿಕ್ ಗುರಿಗಳನ್ನು ಗರಿಷ್ಠ ಸುರಕ್ಷೆ ಹಾಗೂ ಆರೋಗ್ಯದ ಪೂರ್ಣಫಲಗಳನ್ನು ಪಡೆಯಬಹುದಾಗಿದೆ. ಹೀಗಾಗಿ, ಆರು ವರ್ಷಗಳ ಫಾರ್ಮ್ ಡಿ ಕಾರ್ಯಕ್ರಮವು, ಔಷಧ ವಿಜ್ಞಾನ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಔಷಧ ವಿಜ್ಞಾನ ವೃತ್ತಿ ಜೀವನದಲ್ಲಿನ ಹಲವಾರು ಸವಾಲುಗಳನ್ನು ಎದುರಿಸಿ ಬಲವರ್ಧಿಸುವಲ್ಲಿ ಸಹಕಾರಿಯಾಗುತ್ತಿದೆ. ವಿಶ್ವದಾದ್ಯಂತ ಬೇರೆ ದೇಶಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಮತ್ತು ಔಷಧ ವಿಜ್ಞಾನದಲ್ಲಿ ತರಬೇತಿ ಹೊಂದುವ ಸಲುವಾಗಿ ವಲಸೆ ಹೋಗುವ ವಿದ್ಯಾರ್ಥಿಗಳಿಗೆ ಔಷಧ ವಿಜ್ಞಾನದಂತಹ ವೃತ್ತಿಯು ಅಂತರ‌ರಾಷ್ಟ್ರೀಯ ಮಟ್ಟದ ದೃಢೀಕರಣ ಹೊಂದುವುದು ಅವರ ಇಂಗಿತವಾಗಿರುತ್ತದೆ. ಹೀಗಾಗಿಯೇ ಈ ರೀತಿಯ ಕಾರ್ಯಕ್ರಮಗಳಿಗೆ ದೃಢೀಕರಣ ಮತ್ತು ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಕಾಲೇಜಸ್ ಆಫ್ ಫಾರ್ಮಸಿಯು (ಐ.ಎ.ಸಿ.ಪಿ) ಇಂಡಿಯನ್ ಕಾಂಗ್ರೆಸ್ ಆಫ್ ಫಾರ್ಮಸಿ ಪ್ರಾಕ್ಟೀಸ್ 2014 ಎಂಬ ಎರಡು ದಿನಗಳ ಸಮಾವೇಶವನ್ನು ಏರ್ಪಡಿಸಿತ್ತು. ಈ ಸಮಾವೇಶದಲ್ಲಿ ಅಮೆರಿಕ, ಇಂಗ್ಲೆಂಡ್, ದುಬೈ, ಆಸ್ಟ್ರೇಲಿಯಾ ಸೇರಿದಂತೆ ಸುಮಾರು 1200 ಕ್ಕೂಮೀರಿದ ಔಷಧ ವಿಜ್ಞಾನ ತಜ್ಞರು ಭಾಗವಹಿಸಿದ್ದುದು ವಿಶೇಷ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.