ಫಲಿತಾಂಶ ಬಂತು ಮುಂದೇನು? ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಗಳ ಫಲಿತಾಂಶ ಬಂದಾಯ್ತು. ಮುಂದೇನು? ಪ್ರತಿವರ್ಷ ಲಕ್ಷಾಂತರ ಪಾಲಕರು ಈ ಪ್ರಶ್ನೆಗೆ ಮುಖಾಮುಖಿಯಾಗುತ್ತಾರೆ! ಸದ್ಯ, ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸಂತಸದಿಂದ ಬೀಗುತ್ತಿದ್ದರೆ, ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆಯಾದವರು ಮುಂದೇನು ಎಂಬ ಪ್ರಶ್ನೆಯೊಂದಿಗೆ ಗೊಂದಲದಲ್ಲಿದ್ದಾರೆ. ಅಂಕಗಳೇ ಮುಂದಿನ ಶಿಕ್ಷಣಕ್ಕೆ ಮಾನದಂಡವೆಂದು ಭಾವಿಸಿದಂತಿರುವ ಇಂದಿನ ಬಹುತೇಕ ಪಾಲಕರು ಮಕ್ಕಳ ಭವಿಷ್ಯದ ಶಿಕ್ಷಣಕ್ಕಾಗಿ ಹತ್ತಾರು ಜನರ ಸಲಹೆ ಪಡೆಯುತ್ತಾರೆ. ಕೊನೆಗೆ ಅಂತಿಮ ನಿರ್ಧಾರಕ್ಕೆ ಬರಲಾಗದೆ ಗೊಂದಲಕ್ಕೆ ಸಿಲುಕಿ ತಮ್ಮ ಮಕ್ಕಳಿಗೆ ಸೂಕ್ತವಾದ ಕೋರ್ಸ್ ನಿರ್ಧರಿಸುವಲ್ಲಿ ವಿಫಲರಾಗುತ್ತಾರೆ. ಪರಿಣಾಮ ಮಾತ್ರ ಭವಿಷ್ಯದಲ್ಲಿ ಪರಿತಪಿಸುವಂತಾಗುತ್ತದೆ ಎನ್ನುತ್ತಾರೆ ಶಿಕ್ಷಣ ತಜ್ಞರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯು ನಂತರ ಮುಂದಿನ ಶಿಕ್ಷಣ ಆಯ್ಕೆ ಮಾಡಿಕೊಳ್ಳುವಾಗ ಪಾಲಕರು ತುಂಬಾ ಜಾಗರೂಕತೆ ವಹಿಸಬೇಕು ಎನ್ನುತ್ತಾರೆ ಬೆಂಗಳೂರಿನ ಉದ್ಯೋಗ ಮಾರ್ಗದರ್ಶನ ಮತ್ತು ಸಲಹಾ ಸಂಸ್ಥೆ ಸಿಗ್ಮಾ ಇಂಡಿಯಾದ ಕಾರ್ಯನಿರ್ವಹಣಾಧಿಕಾರಿ ಅಮೀನ್ ಇ ಮುದಸ್ಸರ್. ನನ್ನ ಬುದ್ಧಿಮಟ್ಟಕ್ಕೆ ತಕ್ಕುದಾದ ಕೋರ್ಸ್ ಯಾವುದು? ಈ ಕೋರ್ಸ್ ಆಯ್ಕೆ ಯಾಕೆ? ಭವಿಷ್ಯದ ಸವಾಲುಗಳೇನು? ಅವಕಾಶಗಳೇನು? ಎಂಬ ಬಗ್ಗೆ ಪರಸ್ಪರ ಚರ್ಚಿಸಿ ನಿರ್ಧಾರಕ್ಕೆ ಬರುವುದು ಉತ್ತಮ ಎನ್ನುತ್ತಾರೆ ಅಮೀನ್. ಇಂದು ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಎಸ್‌ಎಸ್‌ಎಲ್‌ಸಿ ನಂತರ ತಾಂತ್ರಿಕ ಕೋರ್ಸ್ ಗಳನ್ನು ಓದಲು ಬಯಸುತ್ತಿರುವುದು ಇದೇ ಕಾರಣಕ್ಕೆ. ತಾಂತ್ರಿಕ ಕೋರ್ಸ್‌ಗಳಿಗೆ ಅಪಾರ ಅವಕಾಶಗಳಿವೆಯಾದರೂ ಅವುಗಳಲ್ಲಿ ಯಾವುದು ತನಗೆ ಸೂಕ್ತ ಕೋರ್ಸ್ ಎಂದು ಗುರುತಿಸುವುದೇ ವಿದ್ಯಾರ್ಥಿಗಳ ಮುಂದಿನ ದೊಡ್ಡ ಸವಾಲು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಸಂಸ್ಥೆಗಳು, ಪಾಲಿಟೆಕ್ನಿಕ್‌ಗಳು ಸೇರಿದಂತೆ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ಅನೇಕ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುತ್ತಿವೆ. ಮೂರು ವರ್ಷಗಳಲ್ಲಿ ಉದ್ಯೋಗಕ್ಕೆ ಅಣಿಗೊಳಿಸುವ ಡಿಪ್ಲೊಮಾ ಕೋರ್ಸ್‌ಗಳು ಇಂತಿವೆ: ಪಾಲಿಟೆಕ್ನಿಕ್ ಕಾಲೇಜುಗಳು ನೀಡುವ ತಾಂತ್ರಿಕ ಡಿಪ್ಲೊಮಾ ಕೋರ್ಸ್ ಗಳು - 3 ವರ್ಷ ಅವಧಿ * ಈ ಕೋರ್ಸ್‌ಗಳು ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸಿದ್ಧಗೊಳಿಸುವ ಜತೆಗೆ ಅವರನ್ನು ಉದ್ಯೋಗಕ್ಕೆ ಸಿದ್ಧಗೊಳಿಸಲು ಒತ್ತು ನೀಡುತ್ತವೆ. * ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆಗಳಿರುತ್ತವೆ. * ಈ ಕೋರ್ಸ್‌ಗಳು ಬಿಇ ಮತ್ತು ಬಿ.ಟೆಕ್‌ನಂತಹ ಉನ್ನತ ತಾಂತ್ರಿಕ ಶಿಕ್ಷಣಕ್ಕೆ ಅಡಿಗಲ್ಲು ಎಂತಲೇ ಹೇಳಬಹುದು. ಸಾಮಾನ್ಯ ಡಿಪ್ಲೊಮಾ ಕೋರ್ಸ್‌ಗಳು... 1. ಅಗ್ರಿಕಲ್ಚರ್, 2. ಏರೋನಾಟಿಕಲ್, 3. ಆರ್ಕಿಟೆಕ್ಚರ್, 4. ಆಟೊಮೋಬೈಲ್, 5. ಬಯೋ ಟೆಕ್ನಾಲಜಿ, 6. ಸಿವಿಲ್ 7. ಕೆಮಿಕಲ್, 8. ಕಂಪ್ಯೂಟರ್ ಸೈನ್ಸ್, 9. ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್, 10. ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ 11. ಹೀಟ್ ಪಾವರ್ ಟೆಕ್ನಾಲಜಿ, 12. ಎಲೆಕ್ಟ್ರಾನಿಕ್ಸ್ ಇನ್‌ಸ್ಟ್ರುಮೆಂಟೇಷನ್, 13. ಇನ್‌ಫರ್ಮೆಷನ್ ಸೈನ್ಸ್ ಆಂಡ್ ಟೆಕ್ನಾಲಜಿ, 14. ಮೆಕ್ಯಾನಿಕಲ್, 15. ಮಷಿನ್ ಟೂಲ್ ಟೆಕ್ನಾಲಜಿ, 16. ಮೈನಿಂಗ್, 17. ಫಾಲಿಮರ್ ಟೆಕ್ನಾಲಜಿ 18. ವಾಟರ್ ಟೆಕ್ ಆಂಡ್ ಹೆಲ್ತ್ ಸೈನ್ಸ್, 19. ವೆಲ್ಡಿಂಗ್ ಆಂಡ್ ಶೀಟ್ ಮೆಟಲ್ ಟೆಕ್ನಾಲಜಿ, 20. ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಹುಡುಗಿಯರಿಗಾಗಿ ತಾಂತ್ರಿಕವಲ್ಲದ ಡಿಪ್ಲೊಮಾ ಕೋರ್ಸ್‌ಗಳು: ಮಹಿಳೆಯರು ನಿರ್ವಹಿಸಬಹುದಾದಂತಹ ವೃತ್ತಿಗಳಾದ ಸೆಕ್ರೆಟರಿ, ಅಡ್ಮಿನಿಸ್ಟ್ರೇಟರ್, ಕೋಆರ್ಡಿನೇಟರ್, ಲೈಬ್ರರಿಯನ್, ಪರ್ಸನಲ್ ಅಸಿಸ್ಟಂಟ್ ಕೋರ್ಸ್ ಇತ್ಯಾದಿ... 1ರಿಂದ 3 ವರ್ಷಗಳ ಅವಧಿ ಹೊಂದಿರುವ ಈ ಕೋರ್ಸ್‌ಗಳಲ್ಲಿ ಹುಡುಗಿಯರಿಗೆ ಔದ್ಯೋಗಿಕ ಕೌಶಲ, ಸಂವಹನ ಕೌಶಲ, ಮಾಹಿತಿ ತಂತ್ರಜ್ಞಾನದ ಕೌಶಲ ಮತ್ತು ಉದ್ಯೋಗವೊಂದಕ್ಕೆ ಪ್ರಾಥಮಿಕವಾಗಿ ಅಗತ್ಯವಿರುವ ಕೌಶಲಗಳ ಕುರಿತಾಗಿ ತರಬೇತಿ ನೀಡಲಾಗುತ್ತದೆ. ಮಹಿಳಾ ಪಾಲಿಟೆಕ್ನಿಕ್‌ಗಳ್ಲಲಿ ಲಭ್ಯವಿರುವ ತಾಂತ್ರಿಕವಲ್ಲದ ಡಿಪ್ಲೊಮಾ ಕೋರ್ಸ್‌ಗಳು: 1. ಆರ್ಕಿಟೆಕ್ಚರ್ ಅಸಿಸ್ಟೆಂಟ್ ಶಿಪ್ 2. ಕಮರ್ಷಿಯಲ್ ಪ್ರ್ಯಾಕ್ಟಿಸ್ - ಇಂಗ್ಲಿಷ್/ಕನ್ನಡ 3. ಸೆಕ್ರೆಟರಿಯಲ್ ಪ್ರ್ಯಾಕ್ಟಿಸ್ 4. ಮಾಡರ್ನ್ ಆಫಿಸ್ ಪ್ರ್ಯಾಕ್ಟಿಸ್ 5. ಬಿಸಿನೆಸ್ ಅಡ್ಮಿನಿಸ್ಟ್ರೇಷನ್ 6. ಲೈಬ್ರರಿ ಸೈನ್ಸ್ ಆಂಡ್ ಇನ್‌ಫರ್ಮೆಷನ್ ಮ್ಯಾನೇಜ್‌ಮೆಂಟ್ 7. ಕಾಸ್ಟೂಮ್ ಡಿಸೈನ್ ಡ್ರೆಸ್ ಮೇಕಿಂಗ್ 8. ಇಂಟಿರಿಯರ್ ಡೆಕೊರೇಷನ್ ಪಾಲಿಟೆಕ್ನಿಕ್ ಆಯ್ಕೆಗೆ ಮುನ್ನ... 1. ಸರ್ಕಾರಿ ಪಾಲಿಟೆಕ್ನಿಕ್‌ಗಳು ಕೋರ್ಸ್‌ಗಳಿಗೆ ಅಗತ್ಯ ಮೂಲ ಸೌಕರ್ಯಗಳಿಂದ ಸುಸಜ್ಜಿತವಾಗಿರುತ್ತವೆ. ಆದ್ದರಿಂದ ನಿಮ್ಮ ಮೊದಲ ಆಯ್ಕೆ ಅವೇ ಆಗಿರಲಿ. 2. ಖಾಸಗಿ ಪಾಲಿಟೆಕ್ನಿಕ್‌ಗಳನ್ನು ಆಯ್ದುಕೊಳ್ಳುವಾಗ ಅದರ ಈ ವರೆಗಿನ ಫಲಿತಾಂಶ ಮತ್ತು ಹಳೆಯ ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯುವುದು ಒಳಿತು. 3. ಹುಡುಗಿಯರಿಗೆ ಸಾಮಾನ್ಯ ಪಾಲಿಟೆಕ್ನಿಕ್‌ಗಳ ಜತೆಗೆ ಮಹಿಳಾ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಪಡೆಯುವ ಅವಕಾಶ ಇದೆ. 4. ಇಂದು ಹಲವಾರು ಪಾಲಿಟೆಕ್ನಿಕ್‌ಗಳು ಉತ್ತಮ ಬೋಧಕ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ. ಹೀಗಾಗಿ, ಪ್ರವೇಶಕ್ಕೂ ಮುನ್ನ ಈ ಕುರಿತು ವಿಚಾರಿಸುವುದು ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಅವಶ್ಯಕ ಡಿಪ್ಲೊಮಾ ಕೋರ್ಸ್‌ ಲಾಭಗಳು: * ಇವು ತಾಂತ್ರಿಕ ಕೋರ್ಸ್‌ಗಳಾಗಿರುವುದರಿಂದ ಸಾಮಾನ್ಯ ಕೋರ್ಸ್‌ಗಳಿಗಿಂತ ಹೆಚ್ಚು ಸವಾಲಿನಿಂದ ಕೂಡಿರುತ್ತವೆ. * ಇಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ, ಕೌಶಲಗಳನ್ನು ಅರಿಯುವ ಜತೆಗೆ ಪ್ರಾಯೋಗಿಕ ಜ್ಞಾನವನ್ನೂ ಪಡೆಯುತ್ತಾರೆ. * ಇವು ಎಂಜಿನಿಯರಿಂಗ್‌ನಂತಹ ಉನ್ನತ ಶಿಕ್ಷಣಕ್ಕೆ ತಳಹದಿಯಾಗುತ್ತವೆ. * ಡಿಪ್ಲೊಮಾ ಓದಿದವರು ಉದ್ಯೋಗಾವಕಾಶಗಳು ಅಪಾರ. * ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಸರ್ಕಾರಿ ಸಂಸ್ಥೆಗಳು ಪಾಲಿಟೆಕ್ನಿಕ್‌ಗಳಿಗೆ ಭೇಟಿ ನೀಡಿ ಕ್ಯಾಂಪಸ್ ಸಂದರ್ಶನ ನಡೆಸಿ ಉತ್ತಮ ವಿದ್ಯಾರ್ಥಿಗಳಿಗೆ ಕೈತುಂಬ ಸಂಬಳದ ಕೆಲಸ ನೀಡುತ್ತವೆ. * ಡಿಪ್ಲೊಮಾ ಓದಿದವರಿಗೆ ಸ್ವಂತ ಉದ್ಯಮ ಸ್ಥಾಪಿಸುವ ಅವಕಾಶಗಳು ಹೇರಳವಾಗಿವೆ. ಡಿಪ್ಲೊಮಾ ಕೋರ್ಸ್‌ನ ಪ್ರಯೋಜನಗಳು: * ಪಿಯು ಶಿಕ್ಷಣದಲ್ಲಿ ಪಠ್ಯಕ್ರಮವನ್ನು ನೆನಪಿನಲ್ಲಿಟ್ಟುಕೊಂಡು ಪರೀಕ್ಷೆ ಬರೆಯುವುದರತ್ತ ಮಾತ್ರ ಗಮನ. ಆದರೆ, ಡಿಪ್ಲೊಮಾ ಕೋರ್ಸ್‌ನ ಮೂರು ವರ್ಷದ ಅವಧಿಯಲ್ಲಿ ವಿದ್ಯಾರ್ಥಿಯು ಪಠ್ಯಕ್ರಮ ಜೊತೆಗೆ ಪ್ರಾಯೋಗಿಕ ತರಬೇತಿ ಕೂಡ ಪಡೆಯುತ್ತಾನೆ. ಇದು ಜ್ಞಾನ ಮತ್ತು ಕೌಶಲಗಳ ಸಂಗಮ ಎನ್ನಬಹುದು. * ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಪಿಯುಗಿಂತ ಡಿಪ್ಲೊಮಾ ಶಿಕ್ಷಣ ಉತ್ತಮ. * ಡಿಪ್ಲೊಮಾ ಓದಿದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪ್ರವೇಶಕ್ಕೂ ಮುನ್ನ ಪ್ರಾಯೋಗಿಕ ತರಬೇತಿಯೊಂದಿಗೆ ತಾಂತ್ರಿಕ ಕೌಶಲಗಳನ್ನು ತಿಳಿದುಕೊಂಡಿರುವುದರಿಂದ ಅವರಿಗೆ ಎಂಜಿನಿಯರಿಂಗ್ ಶಿಕ್ಷಣ ಸುಲಭ. ಡಿಪ್ಲೊಮಾ ಕೋರ್ಸ್‌ ಯಾವವು? * 2ರಿಂದ 3 ವರ್ಷ ಅವಧಿಯ ಈ ಕೋರ್ಸ್‌ಗಳು ನಿರ್ದಿಷ್ಟ ಉದ್ಯೋಗಕ್ಕೆ ಅಗತ್ಯವಾದ ತರಬೇತುಗೊಂಡ ಮಾನವ ಸಂಪನ್ಮೂಲ ಸೃಷ್ಟಿಸುವ ಕಾರ್ಯ ಮಾಡುತ್ತವೆ. ನಿರ್ದಿಷ್ಟ ತಂತ್ರಜ್ಞಾನ / ಕೈಗಾರಿಕೆಯಲ್ಲಿ ಟೆಕ್ನಿಷಿಯನ್/ಎಂಜಿನಿಯರ್ ಆಗಿ ಸೇರಿಕೊಳ್ಳಲು ಬಯಸುವವರಿಗೆ ಅಗತ್ಯವಾಗಿರುವ ಈ ಕೋರ್ಸ್‌ಗಳಲ್ಲಿ ಪ್ರಾಯೋಗಿಕ ತರಬೇತಿಗೆ ಆದ್ಯತೆ. 1. ಡಿಪ್ಲೊಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್; ಡಿಪ್ಲೊಮಾ ಇನ್ ಮೆಕಟ್ರಾನಿಕ್ಸ್ ಕೋರ್ಸ್: ಈ ಕೋರ್ಸ್‌ಗಳು ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಗುಲ್ಬರ್ಗಾ, ಬೆಳಗಾವಿ, ದಾಂಡೆಲಿ, ಹುಬ್ಬಳ್ಳಿ, ಹೊಸಪೇಟೆ, ಮದ್ದೂರು, ಕೆಜಿಎಫ್, ಕನಕಪುರದಲ್ಲಿರುವ ಸರ್ಕಾರಿ ‘ಟೂಲ್ ರೂಮ್ ಆಂಡ್ ಟ್ರೇನಿಂಗ್ ಸೆಂಟರ್’ಗಳಲ್ಲಿ ಲಭ್ಯ. (://.../) ಜತೆಗೆ, ಬೆಂಗಳೂರು, ಧಾರವಾಡ, ತುಮಕೂರು ಮತ್ತು ಬಳ್ಳಾರಿಯ್ಲಲಿರುವ ಎನ್‌ಟಿಟಿಎಫ್ ಕೇಂದ್ರಗಳಲ್ಲಿ (://.) ಕೂಡ ಇವೆ. 2. ಡಿಪ್ಲೊಮಾ ಇನ್ ಪ್ರೀಟಿಂಗ್ ಟೆಕ್ನಾಲಜಿ ಕೋರ್ಸ್: ಇದು ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ, ಅರಮನೆ ರಸ್ತೆ, ಬೆಂಗಳೂರು -560001 ಇಲ್ಲಿ ಲಭ್ಯವಿದೆ. 3. ಡಿಪ್ಲೊಮಾ ಇನ್ ಪ್ಲ್ಯಾಸ್ಟಿಕ್ ಮೋಲ್ಡ್ ಟೆಕ್ನಾಲಜಿ ಕೋರ್ಸ್: ಇದು ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್ ಸಂಸ್ಥೆಯಲ್ಲಿ (..) ಲಭ್ಯವಿದೆ. 4. ಡಿಪ್ಲೊಮಾ ಇನ್ ಇಂಟಿರಿಯರ್ ಡಿಸೈನಿಂಗ್: ಇದು ಬೆಂಗಳೂರಿನ ಪೀಣ್ಯದಲ್ಲಿರುವ ಸಣ್ಣ ಕೈಗಾರಿಕೆಗಳ ಸೇವೆಗಳ ಸಂಸ್ಥೆ (..), ಶೇಷಾದ್ರಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಮತ್ತು ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಲಭ್ಯ. 5. ಡಿಪ್ಲೊಮಾ ಇನ್ ಲೆದರ್ ಟೆಕ್ನಾಲಜಿ ಕೋರ್ಸ್: ಬೆಂಗಳೂರಿನ ಕೆ.ಜಿ ಹಳ್ಳಿಯಲ್ಲಿರುವ ಕರ್ನಾಟಕ ಲೆದರ್ ಟೆಕ್ನಾಲಜಿ ಸಂಸ್ಥೆ ಮತ್ತು ಚೆನ್ನೈನ ಆದ್ಯಾರ್‌ನಲ್ಲಿರುವ ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆಯಲ್ಲಿ (..) ಲಭ್ಯವಿದೆ. 6. ಡಿಪ್ಲೊಮಾ ಇನ್ ಜುವೆಲ್ಲರಿ ಡಿಸೈನ್ ಕೋರ್ಸ್: ಇದು ಮೈಸೂರಿನ ಎಸ್‌ಜೆಸಿಇ ಕ್ಯಾಂಪಸ್‌ನಲ್ಲಿರುವ ಜೆಎಸ್‌ಎಸ್ ಅಂಗವಿಕಲರ ಪಾಲಿಟೆಕ್ನಿಕ್‌ನಲ್ಲಿ (ಸಾಮಾನ್ಯ ವಿದ್ಯಾರ್ಥಿಗಳು ಕೂಡ ಅರ್ಜಿ ಸ್ಲಲಿಸಬಹುದು) ಲಭ್ಯವಿದೆ. 7. ಡಿಪ್ಲೊಮಾ ಇನ್ ಪ್ಯಾಟರ್ನ್ ಮೇಕಿಂಗ್; ಫ್ಯಾಶನ್ ಡಿಸೈನಿಂಗ್; ಗಾರ್ಮೆಂಟ್ ಮ್ಯಾನ್ಯುಫ್ಯಾಕ್ಚರಿಂಗ್ ಟೆಕ್ನಾಲಜಿ ಕೋರ್ಸ್‌ಗಳು: ಇವು ಬೆಂಗಳೂರು ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯಲ್ಲಿ (..) ಲಭ್ಯ ಇವೆ. ( ವಿದ್ಯಾರ್ಥಿಗಳು ಮಾರ್ಗದರ್ಶನಕ್ಕಾಗಿ ಅಮೀನ್ ಇ ಮುದಸ್ಸರ್ ಅವರನ್ನು ಸಂಪರ್ಕಿಸಬಹುದು: 080 - 41554225 / 9241 778866 .after10thwhat. .after12thwhat.) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.