ಗ್ರಂಥಾಲಯ ವಿಜ್ಞಾನ ಡಿಪ್ಲೊಮಾ ಪಿಯುಸಿ ನಂತರ ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ಗೆ ಸೇರಲು ಇಷ್ಟವಿಲ್ಲ. ಪದವಿ ಪಡೆದರೆ ಉದ್ಯೋಗ ಸಿಗುತ್ತದೊ, ಇಲ್ಲವೊ ಎಂಬ ಆತಂಕದಲ್ಲಿರುವ ವಿದ್ಯಾರ್ಥಿಗಳು ಗ್ರಂಥಾಲಯ ವಿಜ್ಞಾನ ಹಾಗೂ ಮಾಹಿತಿ ನಿರ್ವಹಣೆ ಡಿಪ್ಲೊಮಾ ಕೋರ್ಸ್‌ ಆಯ್ಕೆ ಮಾಡಿಕೊಳ್ಳ ಬಹುದು. ಇದು ಎರಡು ವರ್ಷದ ಕೋರ್ಸ್‌ ಆಗಿದ್ದು, ಬೆಂಗಳೂರಿನ ಎಸ್‌.ಜೆ. ಪಾಲಿಟೆಕ್ನಿಕ್‌ ಆವರಣದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌, ಹಾಸನ ಮತ್ತು ಮಂಗಳೂರಿನ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮಾತ್ರ ಸದ್ಯಕ್ಕೆ ಈ ಕೋರ್ಸ್‌ ಲಭ್ಯವಿದೆ. ಎರಡು ವರ್ಷದ ಕೋರ್ಸ್ ಪೂರ್ಣಗೊಳಿಸಿದ ನಂತರ ಸರ್ಕಾರಿ ಮತ್ತು ಖಾಸಗಿ ರಂಗದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಈಗಾಗಲೇ ಕೋರ್ಸ್ ಪೂರ್ಣಗೊಳಿಸಿರುವವರು ಇಸ್ರೊ, ಎಚ್‌ಎಎಲ್‌, ಎನ್‌ಎಎಲ್‌ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಯಲ್ಲಿದ್ದಾರೆ. ಶಾಲಾ – ಕಾಲೇಜುಗಳು, ಪಾಲಿಟೆಕ್ನಿಕ್‌ಗಳು, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸ ಬಹುದು. ಕನಿಷ್ಠ ಎಂದರೂ ಆರಂಭದಲ್ಲೇ 10ರಿಂದ 12ಸಾವಿರ ರೂಪಾಯಿ ಸಂಬಳ ಗ್ಯಾರಂಟಿ. ಹೀಗಾಗಿ ಹೆಣ್ಣು ಮಕ್ಕಳು ಈ ಕೋರ್ಸ್ ಮಾಡಿಕೊಂಡರೆ ಆರ್ಥಿಕ ಸ್ವಾವಲಂಬನೆಗೆ ದಾರಿಯಾಗಲಿದೆ. ನಿರುದ್ಯೋಗ ಸಮಸ್ಯೆ ಅಂತೂ ಇರುವುದಿಲ್ಲ. ಅರ್ಹತೆ: ಪಿಯುಸಿಯಲ್ಲಿ ವಿಜ್ಞಾನ, ವಾಣಿಜ್ಯ, ಕಲೆ ಸೇರಿದಂತೆ ಯಾವುದೇ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದವರು ಈ ಕೋರ್ಸ್‌ಗೆ ಸೇರಬಹುದು. ವಿದ್ಯಾಭ್ಯಾಸ ಶುಲ್ಕವಿಲ್ಲ. ಪರೀಕ್ಷಾ ಶುಲ್ಕ ಸೇರಿ ₨ 6 ಸಾವಿರದಲ್ಲಿ ಎರಡು ವರ್ಷದ ಕೋರ್ಸ್ ಪೂರ್ಣಗೊಳಿಸಬಹುದು. ಪಿಯುಸಿ ನಂತರ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗದವರು, ಗ್ರಾಮೀಣ ಪ್ರದೇಶದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರಿಗೆ ಇದು ಹೇಳಿ ಮಾಡಿಸಿದ ಕೋರ್ಸ್. ಈಗಾಗಲೇ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು, ಜೂನ್‌ 15ರವರೆಗೂ ಅರ್ಜಿ ಸಲ್ಲಿಸಬಹುದು. ಜುಲೈನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ. ಪಿಯುಸಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ಯಾವುದೇ ರೀತಿಯ ಪ್ರವೇಶ ಪರೀಕ್ಷೆ ಇರುವುದಿಲ್ಲ. ಸರ್ಕಾರದ ಮೀಸಲಾತಿ ನಿಯಮಗಳಂತೆ ಮೀಸಲಾತಿ ಕಲ್ಪಿಸಲಾಗಿದೆ. ನಾಲ್ಕು ಸೆಮಿಸ್ಟರ್‌ಗಳನ್ನು ಒಳಗೊಂಡಿರುವ ಈ ಕೋರ್ಸ್‌ನಲ್ಲಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೊನೆಯ ಸೆಮಿಸ್ಟರ್‌ನಲ್ಲಿ ಒಂದೂವರೆ ತಿಂಗಳ ಕಾಲ ತರಬೇತಿ ಇರುತ್ತದೆ. ಡಿಪ್ಲೊಮಾ ನಂತರ ಇನ್ನೂ ಹೆಚ್ಚಿನ ವ್ಯಾಸಂಗ ಮಾಡಲು ಬಯಸುವವರು ಬಿ.ಲಿಬ್, ಎಂ.ಲಿಬ್ ಮಾಡಬಹುದು. ಡಿಪ್ಲೊಮಾ ಪೂರ್ಣಗೊಳಿಸಿ ಗ್ರಂಥಾಲಯ ಸಹಾಯಕರಾಗಿ ಕೆಲಸ ಮಾಡಬಹುದು. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡೂ ಇದೆ. ಹೀಗಾಗಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳೂ ಸೇರ್ಪಡೆಯಾಗ ಬಹುದು. ಮತ್ತೊಂದು ವಿಶೇಷ ಎಂದರೆ ಗಣಿತ, ವಿಜ್ಞಾನ ವಿಷಯ ಇರುವುದಿಲ್ಲ. ಇದರಿಂದಾಗಿ ಈ ಎರಡೂ ವಿಷಯಗಳು ಕಷ್ಟ ಎಂದು ಭಾವಿಸುವ ವಿದ್ಯಾರ್ಥಿಗಳು ಸಹ ಡಿಪ್ಲೊಮಾ ಕೋರ್ಸ್‌ಗೆ ಸೇರಬಹುದು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ, ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುವ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿನ ಎಸ್.ಜೆ. ಪಾಲಿಟೆಕ್ನಿಕ್ ಆವರಣದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಎಲ್ಲ ವರ್ಗದ ವಿದ್ಯಾರ್ಥಿನಿಯರಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ಕಂಪ್ಯೂಟರ್, ಆಟೊಮೇಷನ್, ಇ- – ಡಾಕ್ಯೂಮೆಂಟ್ ಇ–-ಲೈಬ್ರರಿ, ಇ-–ಜರ್ನಲ್ ಇತ್ಯಾದಿ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ವಿಷಯಗಳ ಬಗ್ಗೆ ಬೋಧಿಸಲಾಗುತ್ತದೆ. (ಮಾಹಿತಿಗೆ 080 – 22282515, 9481426691, 9901090654, 9739921754, 9964420060) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.