ಸುರಕ್ಷೆಗೂ ತರಬೇತಿ ಇತ್ತೀಚಿನ ವರ್ಷಗಳಲ್ಲಿ ಸುರಕ್ಷಾ ಕ್ಷೇತ್ರದ ಶಿಕ್ಷಣದಲ್ಲಿ ವಿಪುಲ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಫೈರ್‌ ಅ್ಯಂಡ್‌ ಸೇಫ್ಟಿ ಎಂಜಿನಿಯರಿಂಗ್‌ (ಎಂಐಎಫ್ಎಸ್ಇ) ಒಂದರಲ್ಲೇ ಪ್ರತಿ ವರ್ಷ ಒಂದು ಸಾವಿರದಿಂದ ಒಂದೂವರೆ ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದು ಇದನ್ನು ಪುಷ್ಟೀಕರಿಸುತ್ತದೆ. 2007ರಲ್ಲಿ ಆರಂಭವಾದ ಎಂಐಎಫ್ಎಸ್ಇಯು ಫೈರ್ ಆ್ಯಂಡ್‌ ಸೇಫ್ಟಿ ಎಂಜಿನಿಯರಿಂಗ್ ವಿಷಯದಲ್ಲಿ ಡಿಪ್ಲೊಮಾ ಮತ್ತು ಪದವಿ ಶಿಕ್ಷಣವನ್ನು ನೀಡುತ್ತಿದೆ. ಜಾಗತಿಕರಣದ ಪರಿಣಾಮದಿಂದಾಗಿ ಬಹುರಾಷ್ಟ್ರೀಯ ಕಂಪೆನಿಗಳು ದೇಶಕ್ಕೆ ಕಾಲಿಡುತ್ತಿದ್ದಂತೆ ಸುರಕ್ಷಾ ವಿಭಾಗ ಹುಟ್ಟಿಕೊಂಡಿತು. ಇತ್ತೀಚಿನ ವರ್ಷಗಳಲ್ಲಿ ಈ ಶಿಕ್ಷಣ ವಿಭಾಗಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಕೈಗಾರಿಕೆ, ನಿರ್ಮಾಣ ಕಂಪೆನಿಗಳಲ್ಲಿ ಇದರ ಅಗತ್ಯ ಅನಿವಾರ್ಯವಾಗಿದೆ. ಸುರಕ್ಷಿತತೆಗೆ ಸಂಬಂಧಿಸಿದ ಶಿಕ್ಷಣದಲ್ಲಿ ‘ಫೈರ್ ಟೆಕ್ನಾಲಜಿ’, ‘ಇಂಡಸ್ಟ್ರಿಯಲ್ ಸೇಫ್ಟಿ’, ‘ಡಿಸೈನ್ ಇನ್‌ಸ್ಟಲೇಶನ್’, ‘ಏರೋನಾಟಿಕಲ್ ಸೇಫ್ಟಿ’, ‘ಮರೈನ್ ಸೇಫ್ಟಿ’, ಪ್ರಥಮ ಚಿಕಿತ್ಸೆ, ಸಿವಿಲ್, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಸುರಕ್ಷಿತತೆ ವಿಚಾರದಲ್ಲಿ ಕಾನೂನು, ‘ಸೇಫ್ಟಿ ಮತ್ತು ಪೆಟ್ರೋ ಕೆಮಿಕಲ್ ಕೈಗಾರಿಕೆ’, ನಿರ್ಮಾಣ ಕ್ಷೇತ್ರ, ಹೆಲ್ತ್ ಕೇರ್ ಮತ್ತು ವೇಸ್ಟ್ ಮ್ಯಾನೇಜ್‌ಮೆಂಟ್ ಮುಂತಾದ ವಿಚಾರಗಳನ್ನು ತಿಳಿಸಿಕೊಡಲಾಗುತ್ತದೆ. ನಿರ್ಮಾಣ ಕಂಪೆನಿಗಳು, ಬಂದರು, ವಿಮಾನ ನಿಲ್ದಾಣ, ಎಲ್ಲಾ ವಿಧದ ಕಾರ್ಖಾನೆಗಳು, ತೈಲ ಮತ್ತು ಅನಿಲ ಸ್ಥಾವರಗಳಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿವೆ. ಅದರಲ್ಲೂ ಗಲ್ಫ್‌ ರಾಷ್ಟ್ರಗಳಲ್ಲಿ ಸುರಕ್ಷಾ ಕ್ಷೇತ್ರದಲ್ಲಿನ ಶಿಕ್ಷಣ ಪಡೆದವರಿಗೆ ಬೇಡಿಕೆ ಹೆಚ್ಚಾಗುತ್ತಿದೆಯಂತೆ. ಕಾರಣ ಅಲ್ಲಿ ಕಾರ್ಮಿಕರ ಸುರಕ್ಷೆಗೆ ಮುಖ್ಯವಾಗಿ ಆದ್ಯತೆ ನೀಡುತ್ತಿರುವುದು. ತಪ್ಪು ಕಲ್ಪನೆ ‘ಫೈರ್ ಅಂಡ್ ಸೇಫ್ಟಿ ಕೋರ್ಸ್‌ ಬಗ್ಗೆ ಜನಸಾಮಾನ್ಯರಲ್ಲಿ ಕೆಲವು ತಪ್ಪು ಅಭಿಪ್ರಾಯಗಳಿವೆ. ಇವರು ಅಗ್ನಿಶಾಮಕ ದಳದವರು. ಬೆಂಕಿ ನಂದಿಸುವ ಕೆಲಸ ಮಾಡಬೇಕು ಎಂದುಕೊಂಡಿರುತ್ತಾರೆ. ಆದರೆ ಇದು ಭಿನ್ನವಾದ ಕೋರ್ಸ್‌. ಸುರಕ್ಷಾ ಕ್ಷೇತ್ರದಲ್ಲಿನ ಉದ್ಯೋಗ ಯಾವತ್ತೂ ಬೆಂಕಿ ನಂದಿಸುವ ಕೆಲಸವಲ್ಲ. ಬೆಂಕಿ ನಂದಿಸಲು ಮತ್ತು ಇತರ ಬೆಂಕಿಗೆ ಸಂಬಂಧಿಸಿದ ಕಾರ್ಯಾಚರಣೆಗೆ ಅಗ್ನಿಶಾಮಕ ದಳ ಇದೆ. ಅಲ್ಲಿ ಈ ವಿದ್ಯಾರ್ಥಿಗಳಿಗೆ ಯಾವುದೇ ಪಾತ್ರ ಇರುವುದಿಲ್ಲ. ತಾವು ಕೆಲಸ ಮಾಡುವ ಕಂಪೆನಿಗಳಲ್ಲಿ ಅಪಘಾತಗಳಾಗದ ಹಾಗೆ, ಯಾವುದೇ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸುವ ಕೆಲಸ. ಹಾಗೂ ಕೈಗಾರಿಕೆ, ಕಂಪೆನಿಗಳಲ್ಲಿ ಸುರಕ್ಷೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಸಮಗ್ರ ಅಧ್ಯಯನ, ಸಂಶೋಧನೆ ನಡೆಸಿ ಕಾಲಕಾಲಕ್ಕೆ ಆಡಳಿತ ಮಂಡಳಿಗೆ ಸಲಹೆ, ಸೂಚನೆ ನೀಡುತ್ತಾ ಅವುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಈ ವಿಭಾಗದ ಉದ್ಯೋಗಿಗಳ ಮೇಲಿರುತ್ತದೆ. ಸುರಕ್ಷಾ ವಿಭಾಗ ಎಂಬುದು ವೈಟ್ ಕಾಲರ್ ಉದ್ಯೋಗ’ ಎನ್ನುತ್ತಾರೆ ಎಂಐಎಫ್‌ಎಸ್‌ಇ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಕೆ.ಜೆ. ಕಲಿಕಾ ಕೇಂದ್ರ ಎಲ್ಲೆಲ್ಲಿ ಮಂಗಳೂರು, ಉಡುಪಿ, ಬೆಂಗಳೂರು, ಮೈಸೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ಗುಲ್ಬರ್ಗ, ಹುಬ್ಬಳ್ಳಿ, ಹೊಸಪೇಟೆ ಸೇರಿದಂತೆ 12 ಕಡೆಗಳಲ್ಲಿ ಎಂಐಎಫ್ಎಸ್ಇಯ ಕೇಂದ್ರಗಳಿವೆ. ‘ದೇಶದಲ್ಲಿ ೨೩೦ಕ್ಕಿಂತಲೂ ಅಧಿಕ ಫೈರ್ ಆ್ಯಂಡ್ ಸೇಫ್ಟಿ ಸಂಸ್ಥೆಗಳಿವೆ. ನಮ್ಮ ಸಂಸ್ಥೆಯಿಂದ ಇದುವರೆಗೂ 6500 ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಅವರಲ್ಲಿ 1800 ವಿದ್ಯಾರ್ಥಿಗಳು ವಿದೇಶಗಳಲ್ಲಿ ನೌಕರಿ ಪಡೆದಿದ್ದಾರೆ. 1600ಕಂಪೆನಿಗಳು ನಮ್ಮ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿವೆ. ದೇಶ, ವಿದೇಶಗಳಲ್ಲಿ ಇರುವ ವಿಪುಲ ಉದ್ಯೋಗಾವಕಾಶದ ಬಗ್ಗೆ ನಿಧಾನವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸುರಕ್ಷಾ ಕ್ಷೇತ್ರದಲ್ಲಿನ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚು ಬೇಡಿಕೆ ಸೃಷ್ಟಿಯಾಗಲಿದೆ’ ಎನ್ನುತ್ತಾರೆ ವಿನೋದ್‌. ಎಕ್ಸಲೆನ್ಸ್ ಪ್ರಶಸ್ತಿ ಸುರಕ್ಷಾ ಕ್ಷೇತ್ರದ ಶಿಕ್ಷಣದಲ್ಲಿ ನಿರಂತರ ಅಧ್ಯಯನ, ಸಂಶೋಧನೆ ನಡೆಸಿ ಹೊಸ ರೂಪುರೇಷೆ ನೀಡಿದ ಮಂಗಳೂರಿನ ಎಂಐಎಫ್ಎಸ್ಇಗೆ ದೆಹಲಿಯ ‘ಇಂಡಿಯನ್‌ ವರ್ಲ್ಡ್‌ ವೈಡ್‌ ಅಚೀವರ್ಸ್‌’ನ ೨೦೧೪ನೇ ಸಾಲಿನ ‘ಇಂಡಿಯನ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ’ ದೊರೆತಿದೆ. ಭಾರತದಲ್ಲಿ ಪ್ರಥಮ ಸುರಕ್ಷಾ ಕ್ಷೇತ್ರದ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆ ಇದರದ್ದಾಗಿದೆ. 2007ರಲ್ಲಿ ಆರಂಭವಾದ ಎಂಐಎಫ್ಎಸ್ಇಗೆ ರಾಜ್ಯ ಸರ್ಕಾರದ ಅಂಗೀಕಾರ ಸಿಕ್ಕಿತು. 2010ರಲ್ಲಿ ಮಂಗಳೂರು ವಿಶ್ವವಿದ್ಯಾಲಯ, 2012ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ 2014ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನ್ಯತೆ ಪಡೆದುಕೊಂಡಿದೆ. ಎಸ್ಸೆಸ್ಸೆಲ್ಸಿ ಆದವರಿಗೆ ಡಿಪ್ಲೊಮಾ ಫೈರ್‌ ಆ್ಯಂಡ್‌ ಸೇಫ್ಟಿ, ಪದವಿ ಆದವರಿಗೆ ಪಿ.ಜಿ. ಡಿಪ್ಲೊಮಾ ಹಾಗೂ ಎಂ.ಬಿ.ಎಯಲ್ಲಿ ಎಚ್‌ಎಸ್‌ಇ ವಿಷಯವನ್ನು ಅಧ್ಯಯನ ಮಾಡಬಹುದು. (ಮಾಹಿತಿಗೆ: 0824-–2434933, 97399 33933. ../@.) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.