ಉಸಿರು–ಉಚ್ಚಾರ ಈ ಸರಣಿಯ ಹಿಂದಿನ ಕಂತುಗಳಲ್ಲಿ ಉಸಿರಾಟದ ಪ್ರಾಮುಖ್ಯತೆಯ ಕುರಿತು ಹೇಳಿದ್ದಾಗಿದೆ. ಇದನ್ನೇ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ. ಉಚ್ಚಾರಣೆ ಹಾಗೂ ಮಾತನಾಡುವಾಗಿನ ಸಮಸ್ಯೆಗಳಿಗೆ ಮುಖ್ಯ ಕಾರಣ ಅಸಮರ್ಪಕ ಉಸಿರಾಟ. ಇದು ಹಲವು ರೀತಿಯದ್ದಾಗಿರಬಹುದು. 1. ಲಘುವಾದ ಉಸಿರಾಟ: ಇದನ್ನು ಕೊರಳೆಲುಬಿನ ಉಸಿರಾಟ ( ) ಎಂದೂ ಹೇಳುತ್ತಾರೆ. ಭುಜಗಳನ್ನು ಮೇಲಕ್ಕೆತ್ತಿ, ಎದೆಯುಬ್ಬಿಸಿ ಶ್ವಾಸಕೋಶದ ಮೇಲ್ಭಾಗದವರೆಗೆ ಮಾತ್ರ ಉಸಿರೆಳೆದುಕೊಂಡಲ್ಲಿ ಮಾತನಾಡುವ ಸಾಮರ್ಥ್ಯ ಮತ್ತು ನಿಯಂತ್ರಣಗಳು ಕಡಿಮೆಯಾಗುತ್ತವೆ. ಇದರಿಂದಾಗಿ ಮಾತನಾಡುವಾಗ ಮಾತಿನೊಂದಿಗೆ ಉಸಿರಿನ ಸದ್ದು ಕೇಳಿಬರುತ್ತದೆ ಮತ್ತು ದೀರ್ಘವಾಗಿ ಮಾತನಾಡಲಾಗುವುದಿಲ್ಲ. 2. ಹೊಟ್ಟೆಯ ಉಸಿರಾಟ: ಇದನ್ನು ಎನ್ನುತ್ತಾರೆ. ಸಾಮಾನ್ಯವಾಗಿ ಇದು ಗಂಡಸರಲ್ಲಿ ಕಂಡು ಬರುವಂಥದ್ದು. ಉಸಿರೆಲ್ಲವೂ ವಪೆಯಿಂದ ಸೆಳೆದುಕೊಳ್ಳಲ್ಪಟ್ಟು ಹೊಕ್ಕುಳ ಕೆಳಗಿನ ಹೊಟ್ಟೆಯ ಭಾಗ ಉಬ್ಬಿದಂತೆ ತೋರುತ್ತದೆ. ಈ ಕಾರಣದಿಂದಾಗಿ ಶ್ವಾಸಕೋಶಗಳು ಹಿಗ್ಗುವುದಿಲ್ಲ. ಹೆಚ್ಚಿನ ಉಸಿರನ್ನು ಇದರಿಂದಾಗಿ ಹಿಡಿದಿಡಲಾಗುವುದಿಲ್ಲ. ಮಾತನಾಡಲು ಉಸಿರನ್ನು ಬಳಸುವ ಸಾಮರ್ಥ್ಯ ಮತ್ತು ನಿಯಂತ್ರಣಗಳು ಕಡಿಮೆಯಾಗುತ್ತವೆ. 3. ಸಶಬ್ದ ಉಸಿರಾಟ: ಇದನ್ನು ಎನ್ನುತ್ತಾರೆ. ಉಸಿರಾಡುವಾಗ ಗಂಟಲಿನ ಭಾಗದಲ್ಲಿ ಬಿಗಿತ ಬಂದು ಶ್ವಾಸನಾಳ ಸಂಕುಚಿತ ಗೊಂಡಲ್ಲಿ ಉಸಿರಾಡುವಾಗ ಅನಗತ್ಯವಾದ ಮತ್ತು ಅನಪೇಕ್ಷಿತ ಸದ್ದು ಬರುತ್ತದೆ. ಈ ರೀತಿಯ ಉಸಿರಾಟದ ತಪ್ಪು ಕ್ರಮಗಳಿಂದ ಮಾತನಾಡುವ ಸಾಮರ್ಥ್ಯ ಕುಂಠಿತವಾಗುತ್ತದೆ. ಒಂದು ಉಸಿರಿನಲ್ಲಿ ಹೇಳಬಹುದಾದಷ್ಟು ಪದಗಳನ್ನು, ದೀರ್ಘವಾದ ಪದಗಳನ್ನು ಹೇಳಲಾಗುವುದೇ ಇಲ್ಲ. ಕೆಲವೊಮ್ಮೆ ತಪ್ಪು ಅಭ್ಯಾಸದ ಕಾರಣ ಕೆಲವರು ತಮ್ಮ ಉಸಿರಿನ ಸಹಜ ಸಾಮರ್ಥ್ಯವನ್ನೂ ಮೀರಿ (ಉಸಿರುಗಟ್ಟಿ) ಮಾತನಾಡುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಅವರು ಮಾತು ಆಡುವುದನ್ನು ಕೇಳುವಾಗ ಧ್ವನಿ ದೋಷಪೂರ್ಣವಾಗಿದೆ ಎನ್ನಿಸದೆ ಇರದು. ಒಮ್ಮೆ ಪಿಸುಗುಟ್ಟುವುದು, ಇದ್ದಕ್ಕಿದ್ದಂತೆ ದೊಡ್ಡ ಧ್ವನಿಯಲ್ಲಿ - ಹೀಗೆ ನಿಯಮ ರಹಿತವಾಗಿ ಮಾತನಾಡುವ ಅಭ್ಯಾಸವಿದ್ದವರಿಗೆ ತಮ್ಮ ಉಸಿರಿನ ಮೇಲೆ ನಿಯಂತ್ರಣವಿರುವುದು ಕಡಿಮೆ. ಇಂತಹವರಲ್ಲಿ ಪಕ್ಕೆಲುಬು ಮತ್ತು ವಪೆಯ ಸಂಕುಚನ- ವಿಕಸನಗಳಲ್ಲಿ ತಾಳ-ಮೇಳ ತಪ್ಪುವುದರಿಂದ ಪ್ರತಿ ವಾಕ್ಯದ ಮೊದಲ ಪದದ ಮೇಲೆ ಹೆಚ್ಚು ಒತ್ತಡ ತಂದು ಮಾತನಾಡುತ್ತಾರೆ. ಮುಂದುವರೆದಂತೆ ಮಿಕ್ಕ ಪದಗಳು ಅಸ್ಪಷ್ಟವಾಗುತ್ತವೆ. ಕೆಲವರಿಗೆ ತಮ್ಮ ಕಂಠದ ಬಲ ಸಾಲದು ಎನ್ನಿಸುವುದು ಸಹಜ. ಇದಕ್ಕೆ ಕಾರಣ ನಿಯಮಿತವಾದ ಅಭ್ಯಾಸ ಮಾಡದೆ ಉಸಿರಾಟಕ್ಕೆ ಪೂರಕವಾದ ಸ್ನಾಯುಗಳಿಗೆ ವ್ಯಾಯಾಮ ಒದಗಿಸದೆ ಇರುವುದು. ಸಮರ್ಪಕ ಉಸಿರಾಟವೆಂದರೆ ಈ ಹಿಂದೆ ಅರ್ಥಮಾಡಿಕೊಂಡಿರುವಂತೆ ಭುಜ ಮತ್ತು ಎದೆಗಳನ್ನು ಎತ್ತರಿಸದೆ, ಕೆಳಹೊಟ್ಟೆಯನ್ನು ಉಬ್ಬಿಸದೆ ಶ್ವಾಸಕೋಶಗಳು ತುಂಬುವಂತೆ ಉಸಿರನ್ನು ಸೆಳೆದುಕೊಳ್ಳುವುದು. ಇನ್ನು ಶಬ್ದೋಚ್ಚಾರಣೆ ಮತ್ತು ಉಸಿರಾಟಗಳ ಮಧ್ಯೆ ಸಮರ್ಪಕ ಸಂಬಂಧ ಕಲ್ಪಿಸಿಕೊಳ್ಳಲು ಕೆಲವೊಂದು ವ್ಯಾಯಾಮದಂಥ ಕ್ರಮಗಳನ್ನು ಅನುಸರಿಸಬೇಕು ಎಂದು ಧ್ವನಿತಜ್ಞರು ಸೂಚಿಸುತ್ತಾರೆ. ಉದಾಹರಣೆಗೆ: 1. ನಿಧಾನ ಗತಿಯಲ್ಲಿ ಒಂದು, ಎರಡು ಮೂರು ಎಂದು ಎಣಿಸುತ್ತ ಶ್ವಾಸಕೋಶಗಳಲ್ಲಿ ಉಸಿರನ್ನು ತುಂಬಿಕೊಳ್ಳಿ. ನಂತರ ಒಂದು ಕ್ಷಣ ತಡೆದು, ಬಾಯಿ ತೆರೆದು ನಿಧಾನವಾಗಿ 1, 2, 3, 4, 5, 6 - ಎಂದು ಎಣಿಸುತ್ತ ಉಸಿರನ್ನು ಹೊರಹಾಕಿ. ಇದರ ಜೊತೆಗೆ, ಉಸಿರನ್ನು ಒಳಕ್ಕೆ ಎಳೆದುಕೊಳ್ಳುವಾಗ ಎರಡೂ ಕೈಗಳನ್ನು ಪಕ್ಕಕ್ಕೆ ಚಾಚಿ ಭುಜದ ಮಟ್ಟಕ್ಕೆ ಮೇಲಕ್ಕೆ ತರಬೇಕು. ಉಸಿರು ಹೊರಬಿಡುವಾಗ, ಆ ಕೈಗಳನ್ನು ಇಳಿಸಿ ಸಹಜ ಸ್ಥಿತಿಗೆ ತರಬೇಕು. ಈ ವ್ಯಾಯಾಮವನ್ನು ನಿಧಾನವಾಗಿ ಮಾಡಿ. 2. ಈ ವ್ಯಾಯಾಮ ಮಾಡುತ್ತ, ಉಸಿರು ಬಿಡುವಾಗ ಸಂಖ್ಯೆಗಳನ್ನು ಪಿಸುಗುಟ್ಟುವಂತೆ ಎಣಿಸಿ. 3. ಹಂತಹಂತವಾಗಿ ಎಣಿಕೆಗಳನ್ನು ಹೆಚ್ಚಿಸಿ. ಇದರಿಂದ ಉಸಿರಾಡುವ ಲಯ ಸಿದ್ಧಿಯಾಗುತ್ತದೆ. ಉಸಿರಾಟಕ್ಕೆ ಒದಗಿಬರುವ ಸ್ನಾಯುಗಳಿಗೆ ವ್ಯಾಯಾಮ ಒದಗಿ ಉಸಿರನ್ನು ತೆಗೆದುಕೊಳ್ಳುವ, ಹಿಡಿದಿಟ್ಟುಕೊಳ್ಳುವ, ಹೊರಹಾಕುವ ಕ್ರಿಯೆಗಳ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. 4. ಪ್ರತಿ ಬಾರಿಯೂ ಉಸಿರೆಳೆದುಕೊಂಡು ಈ ಕೆಳಗಿನ ವಾಕ್ಯಗಳನ್ನು ನಿಧಾನವಾಗಿ ಎರಡೆರಡು ಬಾರಿ ಉಚ್ಚರಿಸುವ ಪ್ರಯತ್ನ ಮಾಡಿ. ಎರಡು ಬಾರಿ ಉಚ್ಚರಿಸುವ ನಡುವೆ ಹೊಸ ಉಸಿರು ತೆಗೆದುಕೊಳ್ಳಬಾರದು ಎನ್ನುವ ನಿಯಮ ಪಾಲಿಸಿ * ಗೊಟ್ಟಿಗೆರೆ ಗೌಡ * ಗೊಟ್ಟಿಗೆರೆ ಗೌಡ, ಗೌಡನ ಹೆಂಡತಿ * ಗೊಟ್ಟಿಗೆರೆ ಗೌಡ, ಗೌಡನ ಹೆಂಡತಿ, ಹೆಂಡತಿಯ ಮಗಳು * ಗೊಟ್ಟಿಗೆರೆ ಗೌಡ, ಗೌಡನ ಹೆಂಡತಿ, ಹೆಂಡತಿಯ ಮಗಳು, ಮಗಳ ಗಂಡ * ಗೊಟ್ಟಿಗೆರೆ ಗೌಡ, ಗೌಡನ ಹೆಂಡತಿ, ಹೆಂಡತಿಯ ಮಗಳು, ಮಗಳ ಗಂಡ, ಗಂಡನ ಮಗಳು * ಗೊಟ್ಟಿಗೆರೆ ಗೌಡ, ಗೌಡನ ಹೆಂಡತಿ, ಹೆಂಡತಿಯ ಮಗಳು, ಮಗಳ ಗಂಡ, ಗಂಡನ ಮಗಳು, ಮಗಳ ಬೊಂಬೆ * ಗೊಟ್ಟಿಗೆರೆ ಗೌಡ, ಗೌಡನ ಹೆಂಡತಿ, ಹೆಂಡತಿಯ ಮಗಳು, ಮಗಳ ಗಂಡ, ಗಂಡನ ಮಗಳು, ಮಗಳ ಬೊಂಬೆ, ಬೆಂಗಳೂರಿಗೆ ಬಂದರು. ಮುಖ್ಯವಾಗಿ ನೀವು ಮಾತನಾಡುವಾಗ ಉಸಿರುಗಟ್ಟದೆ ಮಾತಿನ ಶಬ್ದದೊಂದಿಗೇ ಉಸಿರನ್ನೂ ಹೊರಹಾಕುವ ಪ್ರಜ್ಞಾಪೂರ್ವಕ ಪ್ರಯತ್ನ ಮಾಡಿ. ಉಸಿರೆಳೆದುಕೊಳ್ಳುವಾಗ ಯಾವ ಪದವನ್ನೂ ಉಚ್ಚರಿಸಲಾಗುವುದಿಲ್ಲ ಎನ್ನುವುದನ್ನೂ ಗಮನಿಸಿ. ಗಂಟಲಿನಿಂದ ಶಬ್ದೋಚ್ಚಾರಣೆಯಾಗಲು ಉಸಿರು ಹೊರಬರಲೇ ಬೇಕಾಗಿರುವುದರಿಂದ ಉಸಿರಿನ ನಿಯಂತ್ರಣ ಅತ್ಯಗತ್ಯ. ಈ ರೀತಿಯ ವ್ಯಾಯಾಮಗಳಿಂದ ಉಸಿರು ನಿಮ್ಮ ನಿಯಂತ್ರಣಕ್ಕೆ ಬರುವುದು ಸಾಧ್ಯವಿದೆ. ಪಾಶ್ಚಾತ್ಯ ಧ್ವನಿತಜ್ಞರು ವಿವಿಧ ರೀತಿಯ ವ್ಯಾಯಾಮಗಳನ್ನು ರೂಪಿಸಿದ್ದರಾದರೂ, ಭಾರತೀಯ ಪರಂಪರೆಯಲ್ಲಿನ ಯೋಗಾಸನ ಮತ್ತು ಪ್ರಾಣಾಯಾಮದ ವಿಧಾನಗಳು ಉಸಿರಾಟದ ನಿಯಂತ್ರಣಕ್ಕೆ ಹೆಚ್ಚು ಸಹಕಾರಿಯಾಗುತ್ತವೆ. ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳು (‘ತಿರುಕ’), ತಮ್ಮ ‘ಪ್ರಾಣಾಯಾಮ ಮತ್ತು ಸಾಕ್ಷಾತ್ಕಾರ’ ಎನ್ನುವ ಗ್ರಂಥದಲ್ಲಿ ವಿವಿಧ ರೀತಿಯ ಪ್ರಾಣಾಯಾಮದ ವಿಧಾನಗಳನ್ನು ಸರಳವಾಗಿ ವಿವರಿಸಿದ್ದಾರೆ. ಆಸಕ್ತರು ಅದನ್ನು ಓದಿಕೊಳ್ಳುವುದು ಸೂಕ್ತ. ಉಳಿದಂತೆ ಯಾವುದೇ ಯೋಗ ಗುರುಗಳ ಬಳಿಯೂ ಕಲಿಯಬಹುದು. ಉದ್ದೇಶವಿಷ್ಟೇ, ಗುರುಗಳ ನಿಗಾವಣೆಯಲ್ಲಿ ಕಲಿತರೆ, ಕಲಿಯುವಾಗಿನ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಸುಲಭ. ಒಮ್ಮೆ ತಪ್ಪಾಗಿ ಕಲಿತರೆ, ಆ ತಪ್ಪನ್ನು ತಿದ್ದಿಕೊಳ್ಳುವುದು ಬಹಳ ಕಷ್ಟ. ಪ್ರಾಣಾಯಾಮಕ್ಕೆ ಪೂರಕವಾಗಿ, ಉಸಿರಾಟಕ್ಕೆ ಒದಗಿಬರುವ ಸ್ನಾಯುಗಳ ಬಲವರ್ಧನೆಗೆ ಬೇಕಾದ ವಿಶಿಷ್ಟ ಯೋಗಾಸನಗಳನ್ನೂ ಜೊತೆಗೇ ಅಭ್ಯಾಸ ಮಾಡಿ. ಉತ್ತಮ ಧ್ವನಿ, ಸದೃಢ ಸಮಗ್ರ ಆರೋಗ್ಯದ ಸೂಚಕವೂ ಹೌದು. (ಉತ್ತಮ ಧ್ವನಿಯನ್ನು ಕಾಪಾಡಿಕೊಳ್ಳಲು ಬೇಕಾದ ಆಹಾರ ಪಥ್ಯಗಳ ಕುರಿತು ಮುಂದೆ ತಿಳಿಯಬಹುದು) ಇವೆಲ್ಲವೂ ತಜ್ಞರು ಹೇಳುವಂಥ ವಿಧಾನಗಳು. ಆದರೆ, ಧ್ವನಿಯನ್ನು ಉತ್ತಮಪಡಿಸಿಕೊಳ್ಳಬೇಕು ಎನ್ನುವ ಉತ್ಕಟವಾದ ಇಚ್ಛೆ ಇರುವವರಷ್ಟೇ ಈ ಕುರಿತು ಕಾರ್ಯಪ್ರ್ರವೃತ್ತರಾಗುತ್ತಾರೆ. ಇಂತಹ ಇಚ್ಛೆ ಮೂಡಲು ಕಾರಣ, ಅವರು ಅವಲಂಬಿಸಿರುವ ವೃತ್ತಿ ಮತ್ತು ಅದರ ಅಗತ್ಯಗಳು. ವೃತ್ತಿಯಲ್ಲಿ ಅವರು ಬಳಸುವ ಭಾಷೆ ಮತ್ತು ಆ ಭಾಷೆಗೆ ವಿಶಿಷ್ಟವಾದ ಉಚ್ಚಾರಣೆಗಳನ್ನು ಅಭ್ಯಾಸ ಮಾಡುವುದೂ ಅತ್ಯಂತ ಅಗತ್ಯವಾದ ವಿಷಯಗಳೇ. ಕನ್ನಡಕ್ಕೂ ಇಂಗ್ಲಿಷಿಗೂ ಉಚ್ಚಾರಣಾ ಭಿನ್ನತೆಗಳಿದ್ದೇ ಇವೆ. ಇಂಗ್ಲಿಷಿಗೂ, ಫ್ರೆಂಚ್, ಸ್ಪ್ಯಾನಿಷ್, ಜರ್ಮನ್, ರಶ್ಯನ್, ಚೈನೀ, ಜಪಾನೀ ಭಾಷೆಗಳಿಗೂ ಉಚ್ಚಾರಣಾ ಭಿನ್ನತೆಗಳೂ, ಆಯಾ ಭಾಷೆಗಳ ಅನನ್ಯ ಉಚ್ಚಾರಣೆಗಳೂ ಇರುತ್ತವೆ. ಹೀಗಾಗಿ, ಮಾತನಾಡುವಾಗ ಸಾಂದರ್ಭಿಕ ಶಬ್ದೋಚ್ಚಾರಣೆಯ ವಿಶಿಷ್ಟ ಅಗತ್ಯಗಳನ್ನು ಗಮನಿಸಿಯೇ ಮಾತನಾಡುವುದು ಅನಿವಾರ್ಯವಾಗುತ್ತದೆ. ಮಾನವನ ಎಲ್ಲ ಧ್ವನ್ಯಂಗಗಳನ್ನೂ ಬಳಸಿ ಮಾತನಾಡುವಂತಹ ಶಬ್ದೋಚ್ಚಾರಣೆ ರೂಪಿತವಾಗಿರುವ ಸಂಸ್ಕೃತ ಭಾಷೆಯಿಂದ ಕನ್ನಡ ಭಾಷೆ ಪ್ರಭಾವಿತವಾಗಿದೆ. ನಾವು ಸಂಸ್ಕೃತ ವರ್ಣಮಾಲೆಯ ಉಚ್ಚಾರಣಾ ವಿಧಾನವನ್ನೇ ಮಾದರಿಯನ್ನಾಗಿ ಇಟ್ಟುಕೊಂಡಿದ್ದೇವೆ. ಆದರೆ ಆ ಮಾದರಿಯನ್ನು ಎಷ್ಟು ಸರಿಯಾಗಿ ಅಭ್ಯಾಸ ಮಾಡಿದ್ದೇವೆ ಎಂದು ನಮ್ಮನ್ನೇ ನಾವೆಂದಾದರೂ ಕೇಳಿಕೊಂಡಿದ್ದೇವೆಯೇ? (ಮುಂದಿನ ವಾರ: ಕನ್ನಡ ಉಚ್ಚಾರಣೆ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.