ಟಿಇಟಿ ಪರೀಕ್ಷೆಗೆ ಸಿದ್ಧವೆ? ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಒತ್ತು ನೀಡಬೇಕು. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಕನಿಷ್ಠ ಅರ್ಹತೆ ಇರಬೇಕು ಎಂಬ ಉದ್ದೇಶದಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಯಸುವವರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯ ಗೊಳಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) 2011ರಿಂದಲೇ ಟಿಇಟಿಯನ್ನು ಕಡ್ಡಾಯಗೊಳಿಸಿದೆ. ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಅನುಷ್ಠಾನದಲ್ಲಿದೆ. ಆದರೆ, ಕರ್ನಾಟಕದಲ್ಲಿ ನಾಲ್ಕು ವರ್ಷ ತಡವಾಗಿ ಜಾರಿಯಾಗುತ್ತಿದೆ. ಎನ್‌ಸಿಟಿಇ ಮಾರ್ಗಸೂಚಿ ಪ್ರಕಾರ ಟಿಇಟಿ ಪರೀಕ್ಷೆ ನಡೆಸಲು ಸರ್ಕಾರ ಒಪ್ಪಿಗೆ ನೀಡಿದ ಬೆನ್ನಿಗೇ, ಕೇಂದ್ರೀಕೃತ ದಾಖಲಾತಿ ಘಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ. ಉಪನ್ಯಾಸಕರ ನೇಮಕಕ್ಕೆ ಅರ್ಹತೆ ಪಡೆಯಲು ವಿಶ್ವವಿದ್ಯಾಲಯ ಅನುದಾನ ಆಯೋಗ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಮಾದರಿಯಲ್ಲೇ ಟಿಇಟಿ ನಡೆಯಲಿದೆ. ಇನ್ನು ಮುಂದೆ ಪ್ರತಿವರ್ಷ ಟಿಇಟಿ ನಡೆಯಲಿದ್ದು, ಇದರಲ್ಲಿ ನಿಗದಿತ ಅಂಕ ಪಡೆದವರು ಮಾತ್ರ ಶಿಕ್ಷಕರಾಗಲು ಅರ್ಹತೆ ಪಡೆಯುತ್ತಾರೆ. ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿರುವ ನಿರೀಕ್ಷೆ ಇದೆ. ಸರ್ಕಾರಿ ಶಾಲೆಗಳಲ್ಲಿ ಅಷ್ಟೆ ಅಲ್ಲದೆ ಅನುದಾನಿತ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಬೇಕಾದರೂ ಟಿಇಟಿಯಲ್ಲಿ ತೇರ್ಗಡೆ ಆಗುವುದು ಕಡ್ಡಾಯ. ಹೀಗಾಗಿ ಡಿ.ಇಡಿ., ಬಿ.ಇಡಿ ವಿದ್ಯಾರ್ಹತೆ ಹೊಂದಿದವರೆಲ್ಲ ಈಗ ಟಿಇಟಿ ಮೊರೆ ಹೋಗಿದ್ದಾರೆ. ಎಲ್ಲ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕು. 14 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸಿದೆ. ಅದರ ಭಾಗವಾಗಿ ದೇಶಾದ್ಯಂತ ಏಕರೂಪದ ಟಿಇಟಿ ಜಾರಿಯಾಗುತ್ತಿದೆ. ಶಿಕ್ಷಕರ ಗುಣಮಟ್ಟ ಬಹುತೇಕ ಒಂದೇ ಆಗಿರುತ್ತದೆ. ಸರ್ಕಾರಿ ಶಾಲೆಗಳಿಗೂ ಗುಣಮಟ್ಟದ ಶಿಕ್ಷಕರು ಲಭ್ಯವಾಗುತ್ತಾರೆ ಎಂಬುದು ಸೇರಿದಂತೆ ಹಲವು ಆಶಯಗಳೊಂದಿಗೆ ಟಿಇಟಿ ಪರಿಚಯಿಸಲಾಗಿದೆ. ಕೆಲವು ಖಾಸಗಿ ಶಾಲೆಗಳು ನಿಗದಿತ ವಿದ್ಯಾರ್ಹತೆ ಇಲ್ಲದವರನ್ನೂ ಶಿಕ್ಷಕರನ್ನಾಗಿ ನೇಮಕ ಮಾಡಿಕೊಂಡಿದ್ದು, ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿವೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಟಿಇಟಿ ಆದವರನ್ನೇ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಖಾಸಗಿ ಶಾಲೆಗಳಿಗೂ ಸೂಚಿಸಿದೆ. ಹೀಗಾಗಿ ಇನ್ನು ಮುಂದೆ ಅರ್ಹತೆ ಇದ್ದವರು ಮಾತ್ರ ಶಿಕ್ಷಕರಾಗಿ ನೇಮಕಗೊಳ್ಳಲು ಸಾಧ್ಯ. ಈಗಾಗಲೇ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ನೇಮಕಾತಿಯು ಶಾಶ್ವತ ಅನುಮೋದನೆ ಆಗದೇ ಇದ್ದಲ್ಲಿ ಅಂತಹವರೂ ಟಿಇಟಿ ಪರೀಕ್ಷೆ ಬರೆಯಬೇಕಾಗುತ್ತದೆ. ಈ ವರ್ಷದ ಟಿಇಟಿ ಜೂನ್‌ 1ರಂದು ನಡೆಯಲಿದೆ. ಪ್ರಶ್ನೆಪತ್ರಿಕೆ ಸ್ವರೂಪ ಒಟ್ಟು 150 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಇದರಲ್ಲಿ 5 ಭಾಗಗಳು ಇರುತ್ತವೆ. ಪ್ರಶ್ನೆಪತ್ರಿಕೆಯ ಬಹುಆಯ್ಕೆ ಮಾದರಿಯದ್ದಾಗಿರುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿ ಮಾಡಲಾಗಿದೆ. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯುವುದಿಲ್ಲ. ಟಿಇಟಿಯಲ್ಲಿ ಎರಡು ಪ್ರಶ್ನೆಪತ್ರಿಕೆಗಳು ಇರುತ್ತವೆ. 1ರಿಂದ 5ನೇ ತರಗತಿಗೆ ಬೋಧನೆ ಮಾಡುವವರು, ಅಂದರೆ ಪಿಯುಸಿ, ಡಿ.ಇಡಿ ವಿದ್ಯಾರ್ಹತೆವುಳ್ಳವರು ಪ್ರಶ್ನೆಪತ್ರಿಕೆ –1 ಆಯ್ಕೆ ಮಾಡಿಕೊಳ್ಳುತ್ತಾರೆ. ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿದ್ದು, 6ರಿಂದ 8ನೇ ತರಗತಿಗೆ ಬೋಧನೆ ಮಾಡಲು ಬಯಸುವವರು ಪ್ರಶ್ನೆಪತ್ರಿಕೆ – 2 ಆಯ್ಕೆ ಮಾಡಿಕೊಳ್ಳಬಹುದು. ಡಿ.ಇಡಿ ನಂತರ ಪದವಿ ಪಡೆದು, ಬಿ.ಇಡಿ ವಿದ್ಯಾರ್ಹತೆ ಹೊಂದಿರುವವರು ಎರಡೂ ಪ್ರಶ್ನೆಪತ್ರಿಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ರಾಜ್ಯಮಟ್ಟದ ಪರೀಕ್ಷೆ ಆಗಿದ್ದು, ಕನ್ನಡ ಮತ್ತು ಆಂಗ್ಲಭಾಷೆ ಯಲ್ಲಿ ಪರೀಕ್ಷೆ ಬರೆಯಬಹುದು. ರಾಜ್ಯಮಟ್ಟದ ಪಠ್ಯಕ್ರಮದಲ್ಲಿ ಎನ್‌ಸಿಟಿಇ ಪಠ್ಯಕ್ರಮವನ್ನೂ ಸೇರಿಸಲಾಗಿದೆ. ಹೊರ ರಾಜ್ಯದ ವಿದ್ಯಾರ್ಥಿಗಳೂ ಪರೀಕ್ಷೆ ತೆಗೆದುಕೊಳ್ಳಬಹುದು. ಹೀಗಾಗಿ ಎನ್‌ಸಿಟಿಇ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಶ್ನೆಪತ್ರಿಕೆಯು ಕನ್ನಡ, ಆಂಗ್ಲಭಾಷೆ, ಶಿಶು ಮನೋವಿಜ್ಞಾನ ಮತ್ತು ವಿಕಸನ, ಗಣಿತ, ಪರಿಸರ ಅಧ್ಯಯನ ಎಂಬ ಐದು ವಿಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಭಾಗದಲ್ಲಿ 30 ಪ್ರಶ್ನೆಗಳನ್ನು ಕೇಳಲಾಗುತ್ತದೆ. ದೈಹಿಕ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಅಲ್ಲ. ಹೀಗಾಗಿ ಸಿಪಿಇಡಿ, ಬಿಪಿಇಡಿ ವಿದ್ಯಾರ್ಹತೆ ಇರುವವರು ಟಿಇಟಿ ಬರೆಯುವ ಅಗತ್ಯವಿಲ್ಲ. 7 ವರ್ಷ ಮಾನ್ಯತೆ: ಟಿಇಟಿ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಗಳಿಸಿ ಶಿಕ್ಷಕರಾಗಲು ಅರ್ಹತೆ ಪಡೆದರೆ ಅದಕ್ಕೆ 7 ವರ್ಷ ಮಾನ್ಯತೆ ಇರುತ್ತದೆ. ಆ ಅವಧಿಯಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ಟಿಇಟಿ ಪರೀಕ್ಷೆಯಲ್ಲಿ ಶೇ 60ರಷ್ಟು ಅಂಕಗಳನ್ನು ಪಡೆದಿರುವವರು, ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯಲು ಬಯಸಿದರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇದೆ. ಆಗ ಹೆಚ್ಚಿನ ಅಂಕಗಳನ್ನು ಪಡೆದರೆ ಆ ಅಂಕಗಳನ್ನು ಮಾನದಂಡ ಆಗಿ ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ರಾಜ್ಯದಲ್ಲಿ ಟಿಇಟಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ತೆಗೆದುಕೊಳ್ಳಬಹುದು. ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 1ರಿಂದ 8ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣ ಎಂದು ಪರಿಗಣಿಸಿದೆ. ಪಿಯುಸಿ, ಡಿ.ಇಡಿ ವಿದ್ಯಾರ್ಹತೆ ಹೊಂದಿದವರು 1ರಿಂದ 5ನೇ ತರಗತಿಗೆ ಶಿಕ್ಷಕರಾಗಲು ಅರ್ಹರು. ಪದವಿ ನಂತರ ಬಿ.ಇಡಿ ವಿದ್ಯಾರ್ಹತೆ ಹೊಂದಿದವರು 6ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಅರ್ಹರು. ಇದಕ್ಕೆ ಅನುಗುಣವಾಗಿಯೇ ಟಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಇದು ನೇಮಕಾತಿಗೆ ಅಲ್ಲ ಟಿಇಟಿಯಲ್ಲಿ ಅರ್ಹತೆ ಪಡೆದವರು ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಾಗ ಮೊದಲಿನ ಹಾಗೆ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಬರೆಯ ಬೇಕಾಗುತ್ತದೆ. ಟಿಇಟಿ ಕೇವಲ ಅರ್ಹತಾ ಪರೀಕ್ಷೆ ಆಗಿದೆಯೇ ಹೊರತು ನೇಮಕಾತಿ ಪರೀಕ್ಷೆ ಅಲ್ಲ. ಇದು ಅರ್ಹತಾ ಪರೀಕ್ಷೆ ಆಗಿರುವುದರಿಂದ ಹೈದರಾಬಾದ್‌ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ಇರುವುದಿಲ್ಲ. ಆದರೆ, ಮುಂದೆ ಶಿಕ್ಷಕರ ಹುದ್ದೆಗಳಿಗೆ ನಡೆಯುವ ನೇಮಕಾತಿಯಲ್ಲಿ ಮೀಸಲಾತಿ ಸೌಲಭ್ಯ ದೊರೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.