ಮನೆಮಾತು ಉಚ್ಚಾರಣಾ ದೋಷ ‘ಕನ್ನಡ ನನ್ನ ಮನೆ ಮಾತು. ಆದ್ದರಿಂದ ನಾನು ಕನ್ನಡವನ್ನು ಮಾತನಾಡುವ ಕ್ರಮ ಸರಿಯಾಗಿದೆ’ ಎಂದು ಕನ್ನಡವನ್ನು ಮಾತೃಭಾಷೆಯನ್ನಾಗಿ, ಮನೆಮಾತನ್ನಾಗಿ ಹೊಂದಿರುವ ವ್ಯಕ್ತಿಗಳೆಲ್ಲರೂ ಹೇಳಬಹುದು. ಆದರೆ, ಈ ಮಾತನ್ನು ಅವರ ಬರೆವಣಿಗೆ ಮತ್ತು ಉಚ್ಚಾರಣೆ - ಇವೆರಡನ್ನೂ ಗಮನಿಸಿ ನಿರ್ಧರಿಸುವುದೇ ಸೂಕ್ತ. ಇತ್ತೀಚೆಗಿನ ಹಲವಾರು ಸಂದರ್ಭಗಳಲ್ಲಿ ಗಮನಿಸಿದಂತೆ, ಕನ್ನಡ ಮನೆಮಾತಿನ ವ್ಯಕ್ತಿಗಳೂ ಕನ್ನಡದ ಒಪ್ಪಿತ ಉಚ್ಚಾರಣೆಯ ಪ್ರಯತ್ನದಲ್ಲಿ ಸೋಲುತ್ತಿದ್ದಾರೆ. ಭಾಷೆಯೆನ್ನುವುದು ವ್ಯಕ್ತಿಗಳ ನಡುವಣ ಭಾವ ಮತ್ತು ಸಂದರ್ಭಗಳ ಸಮರ್ಪಕ ಸಂವಹನಕ್ಕೆ ರೂಪಿಸಿಕೊಳ್ಳಲಾಗಿರುವ ಸಾಂಕೇತಿಕ ‘ಸ್ವನ’ (ವರ್ಣ) ವ್ಯವಸ್ಥೆ. ಇಲ್ಲಿ ಉಪಯೋಗಿಸಲಾಗುವ ವಿವಿಧ ‘ಸ್ವನ’ಗಳನ್ನು ಕ್ರಮಬದ್ಧಗೊಳಿಸಲು ಲಿಪಿಯನ್ನು ರೂಪಿಸಲಾಗುತ್ತದೆ. ಲಿಪಿಯೆನ್ನುವುದು ‘ಸ್ವನ’ದ ಸಂಕೇತ ಮಾತ್ರ. ಎಷ್ಟೋ ಭಾಷೆಗಳಿಗೆ ಲಿಪಿಯೇ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೂ ಆ ಭಾಷೆಗಳು ಅಸ್ತಿತ್ವದಲ್ಲಿರುವುದು ಕೇವಲ ‘ಸ್ವನ’ ವ್ಯವಸ್ಥೆಯ ಸಮರ್ಪಕ ಬಳಕೆಯಿಂದ ಎನ್ನುವುದನ್ನು ಗಮನಿಸಬೇಕು. ಕನ್ನಡ ಭಾಷೆಗೆ ಸುಂದರವಾದ ಲಿಪಿಯೊಂದಿದೆ. ಅದನ್ನು ಕ್ರಮಬದ್ಧವಾದ ವರ್ಣಮಾಲೆಯಾಗಿ ರೂಪಿಸಲಾಗಿದೆ. ಸ್ವರಗಳು, ವರ್ಗೀಯ ಮತ್ತು ಅವರ್ಗೀಯ ವ್ಯಂಜನ ಮೊದಲಾಗಿ ವಿಭಾಗಿಸಿ ರೂಪಿಸಲಾಗಿರುವ ಈ ವರ್ಣಮಾಲೆ ನಮಗೆ ತಿಳಿಸುವುದು ಕನ್ನಡ ಭಾಷೆಯಲ್ಲಿ ಉಚ್ಚರಿಸಲಾಗುವ ವಿವಿಧ ‘ಸ್ವನ’ಗಳ ಲಿಪಿ ಸಂಕೇತಗಳನ್ನು. ನಾವು ಆ ಸಂಕೇತಗಳೊಂದಿಗೆ ಅದು ಸೂಚಿಸುವ ‘ಸ್ವನ’ದ ಉಚ್ಚಾರಣೆಯನ್ನು ಹೊಂದಿಸಿ ಅರ್ಥಮಾಡಿಕೊಳ್ಳುತ್ತೇವೆ. ಭಾಷೆಯೊಂದರ ನಿಜವಾದ ಕಲಿಕೆ ಅದರ ಲಿಪಿಯನ್ನು ಕಲಿಯುವುದು ಮಾತ್ರವಲ್ಲ, ಅದರ ಸ್ವನ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಅದನ್ನು ಉಚ್ಚರಿಸಲು, ಮಾತನಾಡಲು ಕಲಿಯುವುದು. ಪ್ರತಿಯೊಂದು ಭಾಷೆಗೂ ಅದರದ್ದೇ ಅನನ್ಯವಾದ ‘ಸ್ವನ’ ವ್ಯವಸ್ಥೆಯಿದೆ. ಕನ್ನಡ ಭಾಷೆಯ ‘ಸ್ವನ ವ್ಯವಸ್ಥೆ’ ಸ್ಥೂಲವಾಗಿ ಸಂಸ್ಕೃತ ಭಾಷೆಯ ಸ್ವನಗಳನ್ನು ಆಧರಿಸಿದೆ. ನಮ್ಮ ಉಚ್ಚಾರಣೆ ಸರಿಯಾಗಿ ಇರಬೇಕಾದರೆ, ಪ್ರತಿಯೊಂದು ವರ್ಣ(ಸ್ವನ)ವೂ ಹುಟ್ಟುವ ಸ್ಥಾನವನ್ನು ಮನಸ್ಸಿಗೆ ತಂದುಕೊಳ್ಳಬೇಕು. (ಮೇಲೆ ನೀಡಲಾದ ಸಾಂಪ್ರದಾಯಿಕ ಕೋಷ್ಟಕವನ್ನು ಗಮನಿಸಿ) ವ್ಯಾಕರಣಶಾಸ್ತ್ರ ಹೇಳುವ ಈ ಕ್ರಮವನ್ನು ನಾವು ನಿರಂತರವಾದ ಅಭ್ಯಾಸದಿಂದ ರೂಢಿಸಿಕೊಳ್ಳಬೇಕು. ಇದಕ್ಕಾಗಿ ನಮ್ಮ ಶಬ್ದಗ್ರಹಣದ ಸಾಮರ್ಥ್ಯ ಚುರುಕಾಗಿರಬೇಕು. ಬೆಳೆವ ಮಗುವಿಗೆ ಮನೆಯಲ್ಲಿ ಮೊದಲಿಗೆ ಹೇಳಿಕೊಡುವುದು ಈ ಸ್ವನ ವ್ಯವಸ್ಥೆಯನ್ನೇ. ಈ ಹಂತದಲ್ಲಿ ಸರಿಯಾಗಿ ಕಲಿತರೆ ಮಾತ್ರ ಮುಂದಿನ ದಿನಗಳಲ್ಲಿ ಭಾಷೆಯೊಂದರ ಉಚ್ಚಾರಣೆ ಸಮರ್ಪಕವಾಗಿ ಬಂದೀತು. ಇದರಲ್ಲಿ ಅಲ್ಪಪ್ರಾಣ, ಮಹಾಪ್ರಾಣ, ಹ್ರಸ್ವ ಮತ್ತು ದೀರ್ಘ ಸ್ವರಗಳು ಮೊದಲಾದ ವೈವಿಧ್ಯಮಯ ಉಚ್ಚಾರಣೆ ಗಳೆಲ್ಲ ಅಡಕವಾಗಿರುವುದನ್ನು ಗಮನಿಸಬೇಕು. ಮಾತೃಭಾಷೆಯನ್ನು ಕಲಿಯುವ ಹಂತದಲ್ಲಿ ಮನೆಯ ವಾತಾವರಣ ಅತಿ ಮುಖ್ಯವಾಗುತ್ತದೆ. ಕಾರಣಾಂತರಗಳಿಂದಾಗಿ ಅಲ್ಲಿ ಅಸಮರ್ಪಕ ಉಚ್ಚಾರಣೆಗಳು ಚಾಲ್ತಿಯಲ್ಲಿದ್ದರೆ, ಮಗುವೂ ಹಾಗೆಯೇ ಕಲಿಯುತ್ತದೆ. ಜೀವನದುದ್ದಕ್ಕೂ ಅದನ್ನೇ ಬಳಸುತ್ತದೆ. ಇಂತಹವುಗಳಲ್ಲಿ ಅಸಮರ್ಪಕ ಮಹಾಪ್ರಾಣದ ಬಳಕೆ, ‘ಸ’ ವರ್ಣಕ್ಕೆ ‘ಶ’ ವರ್ಣದ ಬಳಕೆ, ‘ಅ’ ಸ್ವರಕ್ಕೆ ‘ಹ’ ವ್ಯಂಜನದ ಇಲ್ಲವೇ ‘ಹ’ ವ್ಯಂಜನದ ಬದಲಿಗೆ ‘ಅ’ ಸ್ವರದ ಬಳಕೆ (ಅಗಲವಾದ್ಪಹಗಲವಾದ, ಅರಿವ್ಪೆಹರಿವೆ, ಹಲ್ಲ್ಪಿಅಲ್ಲಿ), ಪದವೊಂದರಲ್ಲಿನ ಮಹಾಪ್ರಾಣಾಕ್ಷರದ ಹಿಂದಿನ ಅಕ್ಷರವನ್ನು ಮಹಾಪ್ರಾಣವಾಗಿ ಹೇಳುವುದು (ಉದಾ: ವಿದ್ಯಾರ್ಥಿ ವಿಧ್ಯಾರ್ತಿ) - ಹೀಗೆ ಹಲವಾರು ವೈವಿಧ್ಯಮಯ ಅಸಮರ್ಪಕಗಳನ್ನು ನಾವು ಗಮನಿಸಬಹುದು. ಪ್ರತಿಯೊಂದು ಪದವೂ ನಿಶ್ಚಿತವಾದ ಅಕ್ಷರಗಳ (ವರ್ಣಗಳ) ಜೋಡಣೆಯಿಂದ ಸೂಚಿಸಲಾಗುತ್ತದೆ. ಆದ್ದರಿಂದ ಇದು ಕೇವಲ ದೃಷ್ಟಿಗೋಚರವಾದ ಲಿಪಿ ಸಂಕೇತ ಮಾತ್ರವಾಗದೆ ಒಂದು ನಿರ್ದಿಷ್ಟವಾದ ಸ್ವನ ವ್ಯವಸ್ಥೆಯನ್ನೂ ಸೂಚಿಸುತ್ತದೆ ಎನ್ನುವುದನ್ನು ನಾವು ಗಮನಿಸಲೇ ಬೇಕು. ಈ ಸ್ವನ ವ್ಯವಸ್ಥೆಯೇ ಸಾಮಾನ್ಯ ಸಂವಹನಕ್ಕಾಗಿ ಬಳಸಲಾಗುವ ಭಾಷೆಯ ಮೂಲಘಟಕವಾಗಿ ಕಾರ್ಯ ನಿರ್ವಹಿಸುವುದರಿಂದ ಪದವೊಂದರ ಲಿಪಿ ಸಂಕೇತ ಮತ್ತು ಅದರ ಸ್ವನರೂಪಗಳಲ್ಲಿ ಪರಸ್ಪರ ಹೊಂದಾಣಿಕೆ ಇರಬೇಕಾದ್ದು ಅನಿವಾರ್ಯವಾಗುತ್ತದೆ. ಭಾಷೆಯೊಂದರ ಪದಗಳು ಕೇವಲ ಲಿಪಿಯಿಂದಾಗಿಯಷ್ಟೇ ಅಲ್ಲದೆ ಉಚ್ಚಾರಣಾ ವೈಶಿಷ್ಟ್ಯಗಳಿಂದಲೂ ನಿರ್ದೇಶಿತವಾಗುವ ವಾಸ್ತವವನ್ನು ನಾವು ಗ್ರಹಿಸುವುದು ಮುಖ್ಯ. ಇಲ್ಲವಾದಲ್ಲಿ ಅಲ್ಲಿ ಹಲ್ಲಿ, ಅರಿವೆ ಹರಿವೆ, ಇಂಗು ಹಿಂಗು ಎನ್ನುವಂಥ ಉಚ್ಚಾರಣೆಗಳುಂಟಾಗಿ ಸಂದರ್ಭಕ್ಕೆ ಅಸಂಗತವಾದ ವಾಕ್ಯರಚನೆಯಾಗುವ ಸಾಧ್ಯತೆಗಳೇ ಹೆಚ್ಚು. ಭಾಷೆಯೊಂದರ ಪ್ರಾದೇಶಿಕ ವಿಭಿನ್ನತೆಯಲ್ಲಿ ಇಂತಹ ವ್ಯತ್ಯಾಸಗಳು / ಅಪಭ್ರಂಶಗಳು ಸಾಮಾನ್ಯ. ಪ್ರಾದೇಶಿಕತೆಯನ್ನು ಮೀರಿದ ಒಂದು ವಿಶ್ವಸಾಮಾನ್ಯ ಸಂದರ್ಭದಲ್ಲಿ ಲಿಪಿ ಮತ್ತು ಸ್ವನಗಳ ನಡುವಿನ ಹೊಂದಾಣಿಕೆಯಿಲ್ಲದಿದ್ದಲ್ಲಿ ಅರ್ಥಗ್ರಹಿಕೆಗೆ ತೊಡಕಾಗುತ್ತದೆ. ಅನರ್ಥ ಮತ್ತು ಅಪಾರ್ಥಗಳು ಮೂಡುವ ಸಂದರ್ಭಗಳೂ ಇಲ್ಲದಿಲ್ಲ. ಉತ್ತರಭಾರತದ ಮೈಥಿಲೀ, ಶೌರಸೇನಿ, ಅರ್ಧಮಾಗಧಿ ಮೊದಲಾದ ಅಪಭ್ರಂಶ ಭಾಷೆಗಳು ಪ್ರಾಕೃತ, ಸಂಸ್ಕೃತಗಳಿಂತ ಸ್ವಲ್ಪ ವಿಭಿನ್ನವಾದ ಸ್ವನವ್ಯವಸ್ಥೆಗಳನ್ನು ರೂಪಿಸಿಕೊಂಡಿರುವುದು ಇಲ್ಲಿ ಗಮನಾರ್ಹ. ಆದರೆ, ಸಂಸ್ಕೃತದಲ್ಲಿನ ನಿರ್ದಿಷ್ಟವಾದ ಮತ್ತು ನಿಷ್ಕೃಷ್ಟವಾದ ಸ್ವನ ವ್ಯವಸ್ಥೆ ಕನ್ನಡ ಭಾಷೆಗೆ ಮಾದರಿಯಾಗಿದೆ. ದೇಸಿ ಪದಗಳ ಮತ್ತು ಉಚ್ಚಾರಣೆಗಳ ಕಾರಣ ಅಲ್ಪ ವ್ಯತ್ಯಾಸಗಳನ್ನು ಗಮನಿಸುತ್ತೇವಾದರೂ ಸಾಮಾನ್ಯ ಸಂವಹನ ಭಾಷೆಯಾಗಿ ಕನ್ನಡಕ್ಕೆ ಒಂದು ಸ್ಪಷ್ಟ ಸ್ವೀಕೃತ ಸ್ವನರೂಪವಿದೆಯಲ್ಲವೇ? ಅದನ್ನು ಸರಿಯಾದ ಕ್ರಮದಲ್ಲಿ ಕಲಿತು ಬಳಸುವುದು ಸೂಕ್ತ. ಸಂಗೀತದಲ್ಲಿ ಏಳು (ಅಥವಾ ಹನ್ನೆರಡು ಎಂದೂ ಗ್ರಹಿಸಲಾಗುತ್ತದೆ) ಸ್ವರಗಳ ಮತ್ತು ಮೂರು ಸ್ಥಾಯಿಗಳ ವ್ಯವಸ್ಥೆಯಿದೆ. ಇದನ್ನು ಸಮರ್ಥವಾಗಿ ಬಳಸಿದಾಗಲಷ್ಟೇ ಸಮರ್ಪಕವಾದ ಸಂಗೀತದ ಸೃಷ್ಟಿ ಮಾಡಲು ಸಾಧ್ಯ. ಇದಕ್ಕೆ ಸಂವಾದಿಯಾಗಿ ಕನ್ನಡ ಭಾಷೆಯ 50 ವರ್ಣಗಳ ವಿಶಿಷ್ಟ ಸ್ವನವ್ಯವಸ್ಥೆಯನ್ನು ಶಾಸ್ತ್ರೋಕ್ತವಾಗಿ ಬಳಸಿದಾಗಲಷ್ಟೇ ಕನ್ನಡ ಭಾಷೆ ಸಂಗೀತದಂತೆ ಕೇಳಿಸುವುದು. ಕನ್ನಡ ತಿಳಿದಿದೆ ಎಂದು ಹೇಳಿಕೊಳ್ಳುವವರಿಗೂ ಇಂದು ಹಲವಾರು ಸಂಯುಕ್ತಾಕ್ಷರಗಳನ್ನು ಓದಲೇ ಆಗದಂತಹ ಪರಿಸ್ಥಿತಿಯಿರುವುದು ನಿಜಕ್ಕೂ ದುರದೃಷ್ಟಕರ. ಮನುಷ್ಯನ ಕಂಠವೇ ಒಂದು ವಾದ್ಯ. ಅದನ್ನು ಗಾತ್ರವೀಣೆ ಎಂದು ಕರೆಯುತ್ತೇವೆ. ನಮ್ಮ ಧ್ವನ್ಯಂಗಗಳಿಂದ ವಿವಿಧ ಸ್ವರಗಳನ್ನು ಮೂಡಿಸಬಲ್ಲ ಸಾಮರ್ಥ್ಯವನ್ನು ರೂಪಿಸಿಕೊಳ್ಳುವುದೇ ಒಂದು ಕಲೆ. ಅದು ಸಂಗೀತ ಕಲಿಯುವಷ್ಟೇ ಅವಧಾನವನ್ನು ನಿರೀಕ್ಷಿಸುತ್ತದೆ. ಸ್ವರೋಚ್ಚಾರಣೆಯನ್ನು ಈ ರೀತಿ ಕಲೆಯ ದೃಷ್ಟಿಯಿಂದ ನೋಡಿದಾಗ ನಾವಾಡುವ ಭಾಷೆ ಇತರರಿಗೆ ಕರ್ಣಮಧುರವಾಗಿದ್ದೀತು. ವ್ಯಾಕರಣಶಾಸ್ತ್ರ ನಮಗೆ ವಿಸ್ತಾರವಾದ ಸ್ವನವ್ಯವಸ್ಥೆಯ ಮಾದರಿಯನ್ನು ಒದಗಿಸಿಕೊಟ್ಟಿದೆ. ಅದನ್ನು ಅನುಸರಿಸುವಲ್ಲಿ ನಾವು ನಮ್ಮ ಸಾಮರ್ಥ್ಯಗಳನ್ನು ಹಿಗ್ಗಿಸಿಕೊಳ್ಳಬೇಕೇ ಹೊರತು ವ್ಯವಸ್ಥೆಯೇ ಸರಿಯಿಲ್ಲ ಎಂದು ದೂರುವುದು ಸರಿಯಲ್ಲ. ಕನ್ನಡ ಭಾಷೆಯ ಲಿಪಿಸಂಕೇತ ಮತ್ತು ಸ್ವನಗಳ ಪರಸ್ಪರ ಸಂಬಂಧವನ್ನು ಎಳವೆಯಿಂದಲೇ ಮಕ್ಕಳಿಗೆ ಹೇಳಿಕೊಡುವುದು ಎಲ್ಲ ಕನ್ನಡಿಗರ ಆದ್ಯ ಕರ್ತವ್ಯ. ಸಂಗೀತದಂತೆ ಕೇಳಲಿ ಕನ್ನಡ... ಸಂಗೀತದಲ್ಲಿ ಏಳು (ಅಥವಾ ಹನ್ನೆರಡು ಎಂದೂ ಗ್ರಹಿಸಲಾಗುತ್ತದೆ) ಸ್ವರಗಳ ಮತ್ತು ಮೂರು ಸ್ಥಾಯಿಗಳ ವ್ಯವಸ್ಥೆಯಿದೆ. ಇದನ್ನು ಸಮರ್ಥವಾಗಿ ಬಳಸಿದಾಗಲಷ್ಟೇ ಸಮರ್ಪಕವಾದ ಸಂಗೀತದ ಸೃಷ್ಟಿ ಮಾಡಲು ಸಾಧ್ಯ. ಇದಕ್ಕೆ ಸಂವಾದಿಯಾಗಿ ಕನ್ನಡ ಭಾಷೆಯ 50 ವರ್ಣಗಳ ವಿಶಿಷ್ಟ ಸ್ವನವ್ಯವಸ್ಥೆಯನ್ನು ಶಾಸ್ತ್ರೋಕ್ತವಾಗಿ ಬಳಸಿದಾಗಲಷ್ಟೇ ಕನ್ನಡ ಭಾಷೆ ಸಂಗೀತದಂತೆ ಕೇಳಿಸುವುದು. ನಮ್ಮ ಧ್ವನ್ಯಂಗಗಳಿಂದ ವಿವಿಧ ಸ್ವರಗಳನ್ನು ಮೂಡಿಸಬಲ್ಲ ಸಾಮರ್ಥ್ಯವನ್ನು ರೂಪಿಸಿಕೊಳ್ಳುವುದೇ ಒಂದು ಕಲೆ. ಅದು ಸಂಗೀತ ಕಲಿಯುವಷ್ಟೇ ಅವಧಾನವನ್ನು ನಿರೀಕ್ಷಿಸುತ್ತದೆ. (ಮುಂದಿನವಾರ: ಉಚ್ಚಾರಣೆಯ ವಿಶಿಷ್ಟ ಅಭ್ಯಾಸಗಳು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.