ವಿಟಿಯು ಸೇವೆಗೆ ಫೆಲೋಶಿಪ್‌ ತಾಂತ್ರಿಕ ಶಿಕ್ಷಣದಲ್ಲಿ ಮುಂಚೂಣೆಯಲ್ಲಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಇದೇ ಮೊದಲ ಬಾರಿಗೆ ಫೆಲೋಶಿಪ್‌ ಕಾರ್ಯಕ್ರಮ ರೂಪಿಸಿದೆ. ಹಿಂದೆ ಕರ್ನಾಟಕ ಜ್ಞಾನ ಆಯೋಗ ಆರಂಭಿಸಿದ್ದ ‘ಜ್ಞಾನ ಫೆಲೋಶಿಪ್‌’ ಮಾದರಿಯಲ್ಲೇ ‘ವಿಟಿಯು ಫೆಲೋಶಿಪ್‌’ ಯೋಜನೆಯನ್ನು ರೂಪಿಸಲಾಗಿದೆ. ಸರ್ಕಾರಿ, ಖಾಸಗಿ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಭಾವಂತರ ಸೇವೆಯನ್ನು ವಿಶ್ವವಿದ್ಯಾಲಯಕ್ಕೆ ಪಡೆಯುವ ಉದ್ದೇಶದಿಂದ ಫೆಲೋಶಿಪ್‌ ಆರಂಭಿಸಲಾಗಿದೆ. ಯಾವುದೇ ಉದ್ಯೋಗದಲ್ಲಿ ಇಲ್ಲದೆ ಇರುವವರು ಸಹ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರು ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್‌. ಮಹೇಶಪ್ಪ. ಜಿಡ್ಡುಗಟ್ಟಿರುವ ಆಡಳಿತ ವ್ಯವಸ್ಥೆ, ವಿಶ್ವವಿದ್ಯಾಲಯದ ಕಾರ್ಯವೈಖರಿಯಲ್ಲಿ ಬದಲಾವಣೆ ತರಬೇಕು. ಕಾರ್ಪೋರೇಟ್‌ ಕಂಪೆನಿಗಳ ಮಾದರಿಯಲ್ಲಿ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕು. ಹೊಸ ಆಲೋಚನೆಗಳನ್ನು ಹೊಂದಿರುವ ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಪ್ರಾಯೋಗಿಕವಾಗಿ ವಿಟಿಯು ಫೆಲೋಶಿಪ್‌ ಆರಂಭಿಸಲಾಗಿದೆ ಎಂದು ವಿವರಿಸಿದರು. ವಿಶ್ವವಿದ್ಯಾಲಯವು ಈಗಾಗಲೇ ಕೌಶಲ ಅಭಿವೃದ್ಧಿ, ವಿಟಿಯು ಮಿಷನ್‌ ಎಂಪವರ್‌ ಮೊದಲಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳು ಹಾಗೂ ಇತರೆ ಉದ್ಯಮಗಳೊಂದಿಗೆ ಉತ್ತಮ ಸಂಪರ್ಕ ಹೊಂದಲು ಫೆಲೋಶಿಪ್‌ ಯೋಜನೆ ನೆರವಾಗಲಿದೆ ಎಂಬುದು ಮಹೇಶಪ್ಪ ಅವರ ಆಶಯ. ಎಷ್ಟು ಮಂದಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಫೆಲೋಶಿಪ್‌ಗೆ ಆಯ್ಕೆ ಆದವರಿಗೆ ಲೆಕ್ಕಪತ್ರ, ಹಣಕಾಸು, ಪರೀಕ್ಷಾಂಗ ಮೊದಲಾದ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ. ಸರ್ಕಾರಿ ಸೇವೆ, ಮಾಹಿತಿ ತಂತ್ರಜ್ಞಾನ, ಇಂಡಸ್ಟ್ರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಹಾಗೂ ಸೇವೆಯಲ್ಲಿ ಇಲ್ಲದವರಿಗೂ ಅವಕಾಶ ನೀಡುತ್ತೇವೆ. ಪ್ರತಿಷ್ಠಿತ ಕಂಪೆನಿಗಳ ಮಾನವ ಸಂಪನ್ಮೂಲ ಕ್ಷೇತ್ರದ ತಜ್ಞರು ಸಂದರ್ಶನ ಮೂಲಕ ಅರ್ಹರನ್ನು ಆಯ್ಕೆ ಮಾಡುತ್ತಾರೆ ಎಂದು ವಿವರಿಸಿದರು. ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ಸಂಸ್ಥೆಗಾಗಿ ಏನಾದರೂ ಮಾಡಬೇಕು ಎಂಬ ಮನೋಭಾವ ಹೊಂದಿರುವ ವ್ಯಕ್ತಿಗಳು ಇದ್ದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ. ಕೆಲವೊಮ್ಮೆ ಅಂತಹ ವ್ಯಕ್ತಿಗಳಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ಅವಕಾಶ ಸಿಗುವುದಿಲ್ಲ. ಆ ರೀತಿಯ ಮನೋಭಾವ ಇರುವಂತಹವರಿಗೆ ಇಲ್ಲಿ ಅವಕಾಶ ಕಲ್ಪಿಸಿಕೊಡುವ ಉದ್ದೇಶವನ್ನು ಕುಲಪತಿಗಳು ಹೊಂದಿದ್ದಾರೆ. ‘ನನಗೆ ತಿಳಿದಿರುವ ಹಾಗೆ ದೇಶದ ಯಾವುದೇ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಫೆಲೋಶಿಪ್‌ ವ್ಯವಸ್ಥೆ ಇಲ್ಲ. ವಿಟಿಯು ಮೊದಲ ಬಾರಿಗೆ ಈ ಸಾಹಸಕ್ಕೆ ಕೈಹಾಕಿದೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ’ ಎನ್ನುತ್ತಾರೆ ಮಹೇಶಪ್ಪ. ಕ್ಷೇತ್ರಗಳು ಮುಖ್ಯವಾಗಿ ಆಡಳಿತ, ಶೈಕ್ಷಣಿಕ ಮತ್ತು ಟ್ಯಾಲೆಂಟ್‌ ಎಡ್ಜ್‌ ಕ್ಷೇತ್ರಗಳನ್ನು ಫೆಲೋಶಿಪ್‌ಗೆ ಗುರುತಿಸಲಾಗಿದೆ. ಫೆಲೋಶಿಪ್‌ಗೆ ಆಯ್ಕೆಯಾದವರು ಆಡಳಿತ ಪ್ರಕ್ರಿಯೆ, ವಿಶ್ವವಿದ್ಯಾಲಯದ ಆಡಳಿತ ಶ್ರೇಷ್ಠತೆ, ಮೂಲಸೌಕರ್ಯ ಅಭಿವೃದ್ಧಿ, ಶೈಕ್ಷಣಿಕ ಶ್ರೇಷ್ಠತೆ, ತಾಂತ್ರಿಕ ಯೋಜನೆಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಸೆಂಟರ್‌ ಆಫ್‌ ಎಕ್ಸಲೆನ್ಸ್‌, ಸಾರ್ವಜನಿಕ ಸಂಪರ್ಕ, ಇನೋವೇಷನ್‌, ಉದ್ಯಮಶೀಲತೆ, ಉದ್ಯಮದೊಂದಿಗೆ ಸಂಪರ್ಕ ವಿಷಯಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಅರ್ಜಿ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ತಿಂಗಳ 20ರವರೆಗೂ ಕಾಲಾವಕಾಶ ಇದೆ. ಆಸಕ್ತರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಬೇರೆ ರೂಪದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಕೊನೆಯ ದಿನಾಂಕದ ಒಳಗೆ ಅಗತ್ಯ ಮಾಹಿತಿಯೊಂದಿಗೆ ಆನ್‌ಲೈನ್‌ ಮೂಲಕ ಸಲ್ಲಿಸಬೇಕು. ಫೆಲೋಶಿಪ್‌ ಅವಧಿ ಒಂದು ವರ್ಷ. ಅಗತ್ಯಬಿದ್ದರೆ ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗುತ್ತದೆ. ಆಯ್ಕೆಯಾದವರಿಗೆ ತಿಂಗಳಿಗೆ ₨ 40 ಸಾವಿರ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಸಂಪರ್ಕಿಸಬಹುದು. ವೆಬ್‌ಸೈಟ್‌ ವಿಳಾಸ: ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.