ಅಂಗವಿಕಲರಿಗೆ ವಿದ್ಯಾರ್ಥಿ ವೇತನ ಅಂಗವಿಕಲರ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಕೆಲವು ಸ್ವಯಂ ಸೇವಾ ಸಂಸ್ಥೆಗಳು ವಿದೇಶಿ ಮತ್ತು ರಾಷ್ಟ್ರೀಯ ದೇಣಿಗೆ ಮುಖಾಂತರ ಶಿಕ್ಷಣ, ಆರೋಗ್ಯ, ವಸತಿ, ಅಗತ್ಯ ಸಾಧನ ಸಲಕರಣೆಗಳು ಮತ್ತು ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತಿವೆ. ಇದೇ ರೀತಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಸ್ವ ಉದ್ಯೋಗಕ್ಕೆ ಸಾಲ ಸೌಲಭ್ಯ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ, ವಿದ್ಯಾರ್ಥಿ ವೇತನ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿ ಮಾಡಿವೆ. ಅಂಗವಿಕಲರು ಸಾಮಾನ್ಯರಂತೆ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಭಾರತ ಸರ್ಕಾರ ನಾನಾ ವಿದ್ಯಾರ್ಥಿ ವೇತನ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಭಾರತ ಸರ್ಕಾರ ‘ರಾಷ್ಟ್ರೀಯ ಅಂಗವಿಕಲರ ಹಣಕಾಸು ಅಭಿವೃದ್ಧಿ ನಿಗಮ’ (ಎನ್‌ಎಚ್‌ಎಫ್‌ಡಿಸಿ) ಸ್ಥಾಪಿಸಿದ್ದು, ಇದರ ಮೂಲಕ ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಸ್ಕಾಲರ್‌­ಶಿಪ್‌ ಮತ್ತು ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ ನೀಡ­ಲಾಗು­ವುದು. ಈ ನಿಗಮಕ್ಕೆ ಅಂಗ­ವಿಕಲರ ಕಲ್ಯಾಣ ಇಲಾಖೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಹಣಕಾಸು ನೆರವು ನೀಡುತ್ತಿವೆ. ವಿದ್ಯಾರ್ಥಿ ವೇತನ... ಎನ್‌ಎಚ್‌ಎಫ್‌ಡಿಸಿಯು ಟ್ರಸ್ಟ್‌ ನಿಧಿ ಮತ್ತು ರಾಷ್ಟ್ರೀಯ ನಿಧಿ ಎಂಬ ಎರಡು ಬಗೆಯ ವಿದ್ಯಾರ್ಥಿ ವೇತನ ನೀಡುತ್ತಿದೆ. ಈಗಾಗಲೇ 2014–15ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ದೇಶವ್ಯಾಪಿಯಾಗಿ 2.500 ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್‌ ನೀಡಲಾಗುವುದು. * ಟ್ರಸ್ಟ್‌ ನಿಧಿ ವಿದ್ಯಾರ್ಥಿ ವೇತನ... ಟ್ರಸ್ಟ್‌ನಿಧಿ ವಿದ್ಯಾರ್ಥಿ ವೇತನ ಯೋಜನೆ ಅಡಿಯಲ್ಲಿ ಪ್ರತಿ ವರ್ಷ 2000 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲಾಗುವುದು. ಪದವಿ, ತಾಂತ್ರಿಕ ಪದವಿ, ಇತರೆ ವೃತ್ತಿಪರ ಕೋರ್ಸ್‌ಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ಅಭ್ಯರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2014–15) ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. (ಅಕ್ಟೋಬರ್‌ ತಿಂಗಳ ಒಳಗೆ ಅರ್ಜಿ ಸಲ್ಲಿಸುವುದು ಉತ್ತಮ) ಅರ್ಜಿಗಳನ್ನು ಆನ್‌ಲೈನ್‌ ಮುಖಾಂತರವೇ ಸಲ್ಲಿಸಬೇಕು. ತಾಂತ್ರಿಕ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ ಮಾಸಿಕ ಮೂರು ಸಾವಿರ ರೂಪಾಯಿ ನೀಡಲಾಗುವುದು. ಪಠ್ಯಪುಸ್ತಕ, ಶೈಕ್ಷಣಿಕ ಸಾಮಗ್ರಿ ಖರೀದಿಗೆ ಪ್ರತ್ಯೇಕವಾಗಿ 10 ಸಾವಿರ ರೂಪಾಯಿಗಳ ಸಹಾಯಧನ ನೀಡಲಾಗುವುದು. ಒಟ್ಟಾರೆ ವರ್ಷಕ್ಕೆ 40 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಲಭಿಸುವುದು. ಸಾಮಾನ್ಯ ಪದವಿ (ಕಲಾ/ವಿಜ್ಞಾನ/ವಾಣಿಜ್ಯ) ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ ಮಾಸಿಕ 2500 ರೂಪಾಯಿ ಹಾಗೂ ಇತರೆ ಶೈಕ್ಷಣಿಕ ವೆಚ್ಚಗಳಿಗಾಗಿ ವರ್ಷಕ್ಕೆ ಆರು ಸಾವಿರ ರೂಪಾಯಿ ನೀಡಲಾಗುವುದು. ಒಟ್ಟಾರೆ ವಾರ್ಷಿಕ 31 ಸಾವಿರ ರೂಪಾಯಿ ಲಭಿಸುವುದು. ಶೇ. 40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಹಾಗೂ ವಾರ್ಷಿಕ 3 ಲಕ್ಷ ರೂಪಾಯಿ ಒಳಗಿನ ಆದಾಯ ಇರುವವರು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ. * ರಾಷ್ಟ್ರೀಯ ನಿಧಿ ವಿದ್ಯಾರ್ಥಿ ವೇತನ... ರಾಷ್ಟ್ರೀಯ ನಿಧಿ ವಿದ್ಯಾರ್ಥಿ ವೇತನವನ್ನು ಐಟಿಐ/ಡಿಪ್ಲೊಮಾ ಅಥವಾ ತತ್ಸಮಾನ ತಾಂತ್ರಿಕ ಶಿಕ್ಷಣ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ನೀಡಲಾಗುವುದು. ಈ ಸ್ಕಾಲರ್‌ಶಿಪ್‌ ಅನ್ನು 500 ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುವುದು. ಮಾಸಿಕ ಒಂದು ಸಾವಿರ ರೂಪಾಯಿ ನೀಡುವುದರ ಜೊತೆಗೆ ಕೋರ್ಸ್‌ಗಳ ಪಠ್ಯ ಸಾಮಗ್ರಿ ಕೊಂಡುಕೊಳ್ಳಲು ಹತ್ತು ಸಾವಿರ ರೂಪಾಯಿ ನೀಡಲಾಗುವುದು. ಶೇ. 40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಹಾಗೂ ವಾರ್ಷಿಕ 1.80 ಲಕ್ಷ ರೂಪಾಯಿ ಒಳಗಿನ ಆದಾಯ ಇರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಯನ್ನು ಆನ್‌ಲೈನ್‌ ಮುಖಾಂತರ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಿದ ಬಳಿಕ ಆದರ ಪ್ರಿಂಟ್‌ಔಟ್‌ ಪ್ರತಿಯನ್ನು ತೆಗೆದಿರಿಸಿಕೊಂಡು ಅಗತ್ಯ ದಾಖಲೆಗಳೊಂದಿಗೆ ರಾಷ್ಟ್ರೀಯ ಅಂಗವಿಕಲರ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್‌ಎಚ್‌ಎಫ್‌ಡಿಸಿ), ರೆಡ್‌ ಕ್ರಾಸ್‌ ಭವನ, ಸೆಕ್ಟರ್‌–12, ಫರಿದಾಬಾದ್, ಪಿನ್ ಕೋಡ್: 121007. ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಅರ್ಜಿ ಸಲ್ಲಿಸುವ ಕಡೆ ದಿನಾಂಕ: ಟ್ರಸ್ಟ್‌ ನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕಾಲ ಮಿತಿ ಇಲ್ಲ. ರಾಷ್ಟ್ರೀಯ ನಿಧಿ ಸ್ಕಾಲರ್‌ಶಿಪ್ಗೆ ಅರ್ಜಿಸಲ್ಲಿಸಲು ಆಗಸ್ಟ್ 31 ಕಡೆಯ ದಿನ. ಹೆಚ್ಚಿನ ಮಾಹಿತಿಗೆ ಹಾಗೂ ಆನ್‌ಲೈನ್‌ ಮುಖಾಂತರ ಅರ್ಜಿಸಲ್ಲಿಸಲು ... ಈ ವೆಬ್‌ಸೈಟ್‌ಗೆ ಲಾಗಿನ್‌ ಆಗುವುದು. ದೂರವಾಣಿ ಸಂಖ್ಯೆ: 0129– 2226910/ 2287512/ 2287513 ಮುಂದಿನ ವಾರ: (ಇಂಡಿಯನ್‌ ಆಯಿಲ್‌ ಸ್ಕಾಲರ್‌ಶಿಪ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.