ಪ್ರಶ್ನೆ - ಉತ್ತರ ಮೊಹಮ್ಮದ್ ನೂರ್, ತುಮಕೂರು * ಇ ಮತ್ತು ಸಿ. ವಿಚಾರದಲ್ಲಿ ಬಿ.ಇ. ಮುಗಿಸಿದ್ದೇನೆ. ಮುಂದೆ ಸಾಫ್ಟ್‌ವೇರ್ ಕೆಲಸ ಮಾಡುವ ಹಂಬಲ ಇದೆ. ಇದಕ್ಕನುಗುಣವಾಗಿ ಯಾವ ಕೋರ್ಸ್‌ ಮಾಡಬೇಕು ಅಥವಾ ನೇರವಾಗಿ ಸಾಫ್ಟ್‌ವೇರ್ ಕೆಲಸಕ್ಕೆ ಸೇರಬಹುದೇ? ನೀವು ಈಗಾಗಲೇ ಬಿ.ಇ ಮುಗಿಸಿರುವಿರಿ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸಮಾಡುವ ಆಸಕ್ತಿಯೂ ಇದೆ. ಹಾಗಾಗಿ ನೀವು ನೇರವಾಗಿ ಖಾಸಗೀ ಕಂಪೆನಿಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಳ್ಳುವುದು ಸೂಕ್ತ. ಉದ್ಯೋಗಕ್ಕಾಗಿ ಯಾವ ಕೋರ್ಸುಗಳನ್ನು ಮಾಡಿಕೊಳ್ಳುವ ಅಗತ್ಯವಿಲ್ಲ. ಉದ್ಯೋಗ ಸಿಗುವ ತನಕ ನೀವು ಖಾಸಗೀ ಕಂಪ್ಯೂಟರ್ ಕೇಂದ್ರಗಳಲ್ಲಿ, ಜಾವಾ, ಸ್ಯಾಪ್, ಮೊದಲಾದ ತರಬೇತಿಗಳನ್ನು ಪಡೆಯಬಹುದು. ಅಖಿಲೇಶ್ ಕುಮಾರ್, ಸಾಗರ * ನಾನು ಪಿ.ಸಿ.ಎಂ.ಸಿ. ವಿಭಾಗದಲ್ಲಿ ಪಿ.ಯು. ಸೇರಿದ್ದೇನೆ. ಈಗ ಎಲ್ಲರೂ ಪಿ.ಸಿ.ಎಂ.ಸಿ. ಅನುಪಯುಕ್ತ ಪಿ.ಸಿ.ಎಂ.ಬಿ. ತೆಗೆದುಕೊಳ್ಳಬೇಕಿತ್ತು ಎನ್ನುತ್ತಿದ್ದಾರೆ. ಗೊಂದಲವಾಗುತ್ತಿದೆ. ಎಲ್ಲರ ಮಾತುಗಳನ್ನೂ ಕೇಳಿ ಬದುಕನ್ನು ಕಟ್ಟಿಕೊಳ್ಳಲಾಗುವುದಿಲ್ಲ. ಎಲ್ಲರೂ ತಮಗೆ ಸರಿ ಎನ್ನಿಸಿದ್ದನ್ನು ಹೇಳುತ್ತಾರೆ. ಆದರೆ ಅವೆಲ್ಲವೂ ನಿಮಗೆ ಸರಿಯಾಗದಿರಬಹುದು. ಆದ್ದರಿಂದ ನೀವು ನಿಮ್ಮ ಆಸಕ್ತಿಯಾನುಸಾರ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮಗೆ ಜೀವಶಾಸ್ತ್ರದಲ್ಲಿ ಆಸಕ್ತಿ ಇಲ್ಲದಿದ್ದರೆ ಅಥವಾ ಮುಂದೆ ವೈದ್ಯಕೀಯ ವೃತ್ತಿಗೆ ಹೋಗುವ ಆಸಕ್ತಿ ಇಲ್ಲದಿದ್ದರೆ ನೀವು ಪಿ.ಸಿ.ಎಂ.ಬಿ ತೆಗೆದುಕೊಳ್ಳಬೇಕಾಗಿಲ್ಲ. ನಿಮಗೆ ಕಂಪ್ಯೂಟರ್ ವಿಜ್ಞಾನದಲ್ಲಿ ಆಸಕ್ತಿ ಇದ್ದರೆ ಮತ್ತು ಮುಂದೆ ಇಂಜಿನಿಯರಿಂಗ್ ಓದುವ ಹಂಬಲವಿದ್ದರೆ ನೀವು ಪಿ.ಸಿ.ಎಂ.ಸಿ ಕೋರ್ಸನ್ನು ತೆಗೆದುಕೊಂಡಿದ್ದೇ ಸರಿ. ಆದ್ದರಿಂದ ಗೊಂದಲದಿಂದ ಹೊರಬಂದು, ಶ್ರದ್ಧೆಯಿಂದ ನೀವು ತೆಗೆದುಕೊಂಡಿರುವ ವಿಷಯಗಳಲ್ಲಿ ಓದನ್ನು ಮುಂದುವರಿಸಿ. ಅನಿಲ್ ಎಸ್., ಬೆಂಗಳೂರು ಗ್ರಾಮಾಂತರ ಜಿಲ್ಲೆ. * ನಾನು ದ್ವಿತೀಯ ಪಿ.ಯು. ಓದುತ್ತಿದ್ದೇನೆ. ಮುಂದೆ ಬಿ.ಎಸ್ಸಿ. ಅಗ್ರಿಕಲ್ಚರ್ ಓದಬೇಕೆಂಬ ಹಂಬಲ ಇದೆ. ಬಿ.ಎಸ್ಸಿ. ಅಗ್ರಿಕಲ್ಚರ್ ಓದಲು ಸಿ.ಇ.ಟಿ. ಬರೆದರೆ ಉತ್ತಮವೋ ಅಥವಾ ಎ.ಐ.ಇ.ಇ.ಇ ) ಪರೀಕ್ಷೆ ಬರೆದರೆ ಉತ್ತಮವೋ? ಬಿ.ಎಸ್ಸ್.ಸಿ ಅಗ್ರಿಕಲ್ಚರ್ ಕೋರ್ಸಿಗೆ ಸೇರಲು ನೀವು ದ್ವಿತೀಯ ಪಿ.ಯು. ನಂತರ ಸಿ.ಇ.ಟಿ ಆಯ್ಕೆ ಪರೀಕ್ಷೆ ತೆಗೆದುಕೊಳ್ಳಬೇಕು. ಇದಕ್ಕೆ ಈಗಿನಿಂದಲೇ ಸಿದ್ಧತೆ ಪ್ರಾರಂಭಿಬೇಕು. ಪ್ರತಿದಿನದ ಓದಿನಲ್ಲಿ ಸ್ವಲ್ಪ ಕಾಲವನ್ನು ಬೋರ್ಡ್ ಪರೀಕ್ಷೆಗೆ ಮತ್ತೆ ಸ್ವಲ್ಪ ಕಾಲವನ್ನು ಸಿ.ಇ.ಟಿ ಪರೀಕ್ಷೆಗೆ ಕಾದಿರಿಸಬೇಕು. ಎ.ಐ.ಇ.ಇ.ಇ ಪರೀಕ್ಷೆ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ತೆಗೆದುಕೊಳ್ಳಬೇಕಾದಂತಹುದು. ಈಗ ಈ ಪರೀಕ್ಷೆ ಐ.ಐ.ಟಿ.(ಮೈನ್ಸ್) ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಇದರೊಳಗೆ ಉತ್ತಮ ರ್‌್ಯಾಂಕ್ ಪಡೆದರೆ ಎನ್.ಐ.ಟಿ ಗಳಲ್ಲಿ ಬಿ.ಇ ವ್ಯಾಸಂಗ ಮಾಡಬಹುದು. ನಿಮ್ಮ ಆಸಕ್ತಿ ಕೃಷಿ ವಿಜ್ಞಾನದ ಕಡೆಗೋ ಅಥವಾ ತಂತ್ರ ವಿಜ್ಞಾನದ ಕಡೆಗೋ ಎಂದು ತೀರ್ಮಾನಿಸಿ ಸೂಕ್ತ ಪರೀಕ್ಷೆಯನ್ನು ತೆಗೆದುಕೊಳ್ಳಿ. ಸೌಮ್ಯ.ಎಂ, ಚಿಕ್ಕಬಳ್ಳಾಪುರ * ನಾನು ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಮಾಡುತ್ತಿದ್ದೇನೆ. ಇದು ಮುಗಿದ ನಂತರ ಮನೆಯ ಆರ್ಥಿಕ ಸ್ಥಿತಿಯಿಂದಾಗ ಉದ್ಯೋಗಕ್ಕೆ ಸೇರಲೇಬೇಕಾದ ಅನಿವಾರ್ಯ ಇದೆ. ನನಗೆ ಉದ್ಯೋಗ ದೊರಕುವುದೇ? ಜೊತೆಗೆ ನನಗೆ ಮುಂದೆ ನನಗೆ ಬಿ.ಇ. ಮಾಡುವ ಬಯಕೆಯೂ ಇದೆ. ಇದು ಸಾಧ್ಯವೇ? ಆರ್ಥಿಕ ಪರಿಸ್ಥಿತಿ ಅನುಕೂಲಕರವಿಲ್ಲದಿದ್ದರೆ, ನೀವು ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ನಂತರ ಉದ್ಯೋಗಕ್ಕೆ ಸೇರಿಕೊಳ್ಳುವುದು ಒಳ್ಳೆಯದು. ಕಂಪ್ಯೂಟರ್ ಸೈನ್ಸ್‌ನಲ್ಲಿ ನಿಮಗೆ ಉತ್ತಮ ತಿಳಿವು ಇದ್ದರೆ ಉದ್ಯೋಗ ಖಂಡಿತಾ ದೊರಕುತ್ತದೆ. ಆನಂತರ ಉದ್ಯೋಗವನ್ನು ಮಾಡುತ್ತಲೇ ಸಂಜೆ ಕಾಲೇಜಿನಲ್ಲಿ ಬಿ.ಇ ಮಾಡಬಹುದು. ವಿ.ರಾಕೇಶ್ ರಮ್ಯ, ಹುಬ್ಬಳ್ಳಿ. * ನಾನು 2010ರಲ್ಲಿ ಡೈರಕ್ಟ್ ಪರೀಕ್ಷೆ ಬರೆದು ಶೇ.57 ಅಂಕಗಳೊಂದಿಗೆ ಪಿ.ಯು. ಮುಗಿಸಿದ್ದೇನೆ. ನನಗೆ ಡಿ.ವೈ.ಎಸ್.ಪಿ. ಆಗುವ ಆಸೆ ಇತ್ತು. ಆರ್ಥಿಕ ಸಮಸ್ಯೆಯಿಂದ ಪದವಿ ಮುಗಿಸಲು ಸಾಧ್ಯವಾಗಲಿಲ್ಲ. ಎ.ಎಸ್.ಐ. ಆಗಬೇಕೆಂದಿದ್ದೇನೆ. ಇದು ಸಾಧ್ಯವೇ? ಇದಕ್ಕೆ ತಯಾರಿ ಹೇಗೆ? ಡಿ.ವೈ.ಎಸ್.ಪಿ ಅಥವಾ ಎ.ಎಸ್.ಐ ಆಗಬೇಕಾದರೆ ನೀವು ಕೆ.ಎ.ಎಸ್ ಪರೀಕ್ಷೆ ಬರೆಯಬೇಕು. ಇದಕ್ಕೆ ನೀವು ಯಾವುದಾದರೂ ಒಂದು ಪದವಿ ಪಡೆಯುವುದು ಅಗತ್ಯ. ನೀವು ಉದ್ಯೋಗದಲ್ಲಿದ್ದುಕೊಂಡೇ ಮುಕ್ತ ವಿಶ್ವವಿದ್ಯಾಲಯದ ಮುಖಾಂತರ ಪದವೀಧರರಾಗಬಹುದು. ಅನಂತರ ಕೆ.ಎ.ಎಸ್ ಪರೀಕ್ಷೆ ಬರೆಯಬಹುದು. ಬಿ.ಎಸ್.ಮಹೇಶ್, ಬೆಂಗಳೂರು * ನಾನು ಎಸ್.ಎಸ್.ಎಲ್.ಸಿ. ನಂತರ ಡಿಪ್ಲೊಮಾ ಮುಗಿಸಿ ನಂತರ ಬಿ.ಇ. ವ್ಯಾಸಂಗ ಮಾಡಬಹುದೇ? ಉದ್ಯೋಗಾವಕಾಶಗಳು ದೊರಕುತ್ತವೆಯೇ? ಡಿಪ್ಲೊಮಾ ನಂತರವೂ ಬಿ.ಇ ಮಾಡಬಹುದು. ಪಿ.ಯು ನಂತರವೂ ಬಿ.ಇ ಮಾಡಬಹುದು. ಉದ್ಯೋಗವಕಾಶಗಳು ಎರಡರಲ್ಲೂ ಒಂದೇ. ನೀವು ಹೇಗೆ ಬಿ.ಇ ಮಾಡಿದ್ದೀರಿ ಎಂಬುದಕ್ಕಿಂತ ನೀವು ಬಿ.ಇ ನಲ್ಲಿ ಗಳಿಸುವ ಜ್ಞಾನ ಕೌಶಲ್ಯಗಳೇ ಉದ್ಯೋಗಕ್ಕೆ ಮುಖ್ಯವಾಗುತ್ತದೆ. ಪರೀಕ್ಷಿತ್, ಬೆಂಗಳೂರು * ನಾನು ಪ್ರಥಮ ಪಿ.ಯು.ಸಿ. ಓದುತ್ತಿದ್ದೇನೆ. ಪಿ.ಯು.ನಂತರ ಶುದ್ಧವಿಜ್ಞಾನ ಕ್ಷೇತ್ರದ ವ್ಯಾಸಂಗದ ಕುರಿತು ಅದರ ವಿಭಾಗಗಳ ಕುರಿತು ಮಾಹಿತಿ ನೀಡಿ. ಶುದ್ಧ ವಿಜ್ಞಾನ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇರುವುದನ್ನು ತಿಳಿದು ಸಂತೋಷವಾಯಿತು. ನೀವು ಪಿ.ಯು ನಂತರ ನಿಮಗೆ ಆಸಕ್ತಿ ಇರುವ ವಿಷಯ ಸಮೂಹವನ್ನು ಆಯ್ಕೆ ಮಾಡಿಕೊಂಡು ಬಿ.ಎಸ್ಸಿ. ಮಾಡಬಹುದು. ವಸ್ತು ವಿಜ್ಞಾನದಲ್ಲಿ ಆಸಕ್ತಿ ಇದ್ದರೆ ಭೌತಶಾಸ್ತ್ರ, ರಸಾಯನ, ಗಣಿತ, ಜೀವ ವಿಜ್ಞಾನದಲ್ಲಿ ಆಸಕ್ತಿ ಇದ್ದರೆ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ - ಹೀಗೆ ಯಾವುದಾದರೂ ಮೂರು ಐಚ್ಚಿಕ ವಿಷಯಗಳೊಂದಿಗೆ ಬಿ.ಎಸ್ಸಿ. ಮಾಡಬಹುದು. ಬಿ.ಎಸ್ಸಿ. ನಂತರ ನಿಮಗೆ ಇಷ್ಟವಾದ ಒಂದು ವಿಷಯದಲ್ಲಿ ಎಂ.ಎಸ್ಸಿ ಮಾಡಬಹುದು. ನೀವು ಪಿ.ಯು ಓದಿನ ಜೊತೆಯಲ್ಲಿಯೇ ಕೆ.ವಿ.ಪಿ.ವೈ ಅಥವಾ ಐ.ಐ.ಟಿ.ಜೆ.ಇ.ಇ ಪರೀಕ್ಷೆಗಳಿಗೂ ಸಿದ್ಧತೆ ನಡೆಸಿ ಉತ್ತಮ ರ್‌್ಯಾಂಕ್ ಪಡೆದರೆ, ರಾಷ್ಟ್ರಮಟ್ಟದ ವಿಜ್ಞಾನ ಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನು ಅಭ್ಯಾಸ ಮಾಡಬಹುದು. ಆದಿತ್ಯ ಶಾಂಡೀಲ್ಯ, ಬೆಂಗಳೂರು. * ನಾನು ಈಗ ಬಿ.ಸಿ.ಎ ಓದುತ್ತಿದ್ದೇನೆ. ಇದರ ನಂತರ ಇರಬಹುದಾದ ಹೆಚ್ಚಿನ ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಕುರಿತು ತಿಳಿಸಿ. ಕಂಪ್ಯೂಟರ್ ಕ್ಷೇತ್ರದಲ್ಲಿ ನಿಮಗಿರುವ ಆಸಕ್ತಿಯ ಕಾರಣದಿಂದ ನೀವು ಬಿ.ಸಿ.ಎ ಮಾಡುತ್ತಿದ್ದೀರೆಂದು ಭಾವಿಸುತ್ತೇನೆ. ಬಿ.ಸಿ.ಎ ನಂತರ ನೀವು ಎಂ.ಸಿ.ಎ ಮಾಡಬಹುದು. ಆಗ ನೀವು ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ ಮಾಡಿದವರ ಮಟ್ಟಕ್ಕೆ ಕಂಪ್ಯೂಟರ್ ಜ್ಞಾನವನ್ನು ಪಡೆಯುತ್ತೀರಿ. ನಿಮಗೆ ಆಸಕ್ತಿ ಇದ್ದರೆ ಕಂಪ್ಯೂಟರ್ ಶಿಕ್ಷಕರಾಗಿ ಸೇವೆ ಸಲ್ಲಿಸಬಹುದು. ಸಾಫ್ಟವೇರ್ ಉದ್ಯಮಗಳಲ್ಲೂ ಉದ್ಯೋಗವನ್ನು ಪಡೆಯಬಹುದು. ಅಕ್ಷತಾ, ಬೆಂಗಳೂರು * ನಾನು 9ನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ. ಕೆ.ವಿ.ಪಿ.ವೈ ಪರೀಕ್ಷೆ ಬರೆದೆ ಇದಕ್ಕೆ ಪಿ.ಯು.ನಂತರ ನೇರ ಪ್ರವೇಶ ದೊರೆಯುತ್ತದೆ ಎನ್ನುತ್ತಾರೆ. ಇದು ನಿಜವೇ? ಇಲ್ಲದಿದ್ದರೆ ಇದಕ್ಕೆ ಪ್ರವೇಶ ಪರೀಕ್ಷೆ ಯಾವಾಗ ಇರುತ್ತದೆ? ಕೆ.ವಿ.ಪಿ.ವೈ ಪರೀಕ್ಷೆಯನ್ನು ನೀವು ಪ್ರಥಮ ಪಿ.ಯು ಅಥವಾ ದ್ವಿತೀಯ ಪಿ.ಯು ಓದುವಾಗ ಬರೆಯಬಹುದು. ಈ ಪರೀಕ್ಷೆಯಲ್ಲಿ ನೀವು ಉತ್ತಮ ರ್‌್್ಯಾಂಕ್ ಪಡೆದರೆ ಶುದ್ಧ ವಿಜ್ಞಾನವನ್ನು ರಾಷ್ಟ್ರಮಟ್ಟದ ಖ್ಯಾತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಅವಕಾಶ ಸಿಗುತ್ತದೆ. ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ನೀವು ಈಗ ಎನ್.ಟಿ.ಎಸ್.ಸಿ ಪರೀಕ್ಷೆ ಬರೆಯಬಹದು. ನಿಮ್ಮ ಶಾಲೆಯ ಓದಿನ ಜೊತೆ ಜೊತೆಯಲ್ಲಿಯೇ ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅಧ್ಯಯನ ಮಾಡುವುದು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪಾವನಿ, ಕೆ.ಆರ್.ನಗರ * ನಾನು ಮುಕ್ತ ವಿಶ್ವವಿದ್ಯಾಲಯದ ಮೂಲಕ ಬಿ.ಎಸ್ಸಿ. ಮಾಡುತ್ತಿದ್ದೇನೆ. ನಾನು ಇದರ ಆಧಾರದ ಮೇಲೆ ಸಾರ್ವಜನಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದೇ? ಮುಕ್ತ ವಿಶ್ವವಿದ್ಯಾಲಯ ಅಥವಾ ದೂರಶಿಕ್ಷಣದ ಮೂಲಕ ಪಡೆದ ಪದವಿಗಳಿಗೆ ಮಾನ್ಯತೆ ಇರುತ್ತದೆಯೆ? ನಾವೂ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಹುದೇ? ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ. ಮುಕ್ತ ವಿಶ್ವವಿದ್ಯಾಲಯದ ಮೂಲಕ ಪಡೆದ ಡಿಗ್ರಿಗಳೂ ಉಳಿದ ವಿಶ್ವವಿದ್ಯಾಲಯದ ಡಿಗ್ರಿಗಳಷ್ಟೇ ಮೌಲಿಕವಾದವು. ಇದರ ಆಧಾರದ ಮೇಲೂ ನೀವು ಸರಕಾರಿ ಕೆಲಸಗಳಿಗೆ ಸೇರಬಹುದು ಅಥವಾ ಐ.ಎ.ಎಸ್, ಕೆ.ಎ.ಎಸ್ ಮೊದಲಾದ ಪರೀಕ್ಷೆಗಳನ್ನೂ ಬರೆಯಬಹುದು. ಪದವಿಗಳನ್ನು ಎಲ್ಲಿಂದ ಪಡೆದಿದ್ದೇವೆ ಎನ್ನುವುದಕ್ಕಿಂತ ಆ ಪದವಿಗೆ ತಕ್ಕುದಾದ ಜ್ಞಾನವನ್ನು ನಾವು ಪಡೆದಿದ್ದೇವೆಯೇ ಎಂಬುದು ಮುಖ್ಯವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.