ಪಿ.ಜಿ ವೈದ್ಯಕೀಯ ವಿವಿಧ ಕೋರ್ಸ್‌: ಒಂದೇ ಪ್ರವೇಶ ಪರೀಕ್ಷೆ ಸ್ನಾತಕೋತ್ತರ ವೈದ್ಯಕೀಯ/ ದಂತವೈದ್ಯಕೀಯ ಪದವಿ, ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾಮಂಡಳಿ ಈ ಬಾರಿ ಒಂದೇ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ಅಖಿಲ ಭಾರತ ಕೋಟಾ ಸೀಟುಗಳಿಗೆ ಅಷ್ಟೆ ಅಲ್ಲದೆ ರಾಜ್ಯಮಟ್ಟದ ಸರ್ಕಾರಿ ಕೋಟಾ ಸೀಟುಗಳ ಭರ್ತಿಗೂ ಪ್ರವೇಶ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮಾನದಂಡವಾಗಲಿವೆ. ಶೇ.50ರಷ್ಟು ಸೀಟುಗಳನ್ನು ಅಖಿಲ ಭಾರತ ಕೋಟಾದಡಿ ಭರ್ತಿ ಮಾಡಲಾಗುತ್ತದೆ. ಉಳಿದ ಶೇ.50ರಷ್ಟು ಸೀಟುಗಳಿಗೆ ಪರೀಕ್ಷಾ ಮಂಡಳಿಯು ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ ಆಯಾ ರಾಜ್ಯಗಳಿಗೆ ನೀಡಲಿದೆ. ಆ ಮೆರಿಟ್‌ ಪಟ್ಟಿಯನ್ನು ಆಧರಿಸಿ ರಾಜ್ಯಮಟ್ಟದ ಸರ್ಕಾರಿ ಕೋಟಾ ಸೀಟುಗಳನ್ನು ಮೀಸಲಾತಿಗೆ ಅನುಗುಣವಾಗಿ ಭರ್ತಿ ಮಾಡಲಾಗುತ್ತದೆ. ಶೇ.50ರಲ್ಲಿ ಸರ್ಕಾರಿ ಕೋಟಾ ಸೀಟುಗಳು ಎಷ್ಟು, ಕಾಮೆಡ್‌ – ಕೆ ಕೋಟಾ ಹಾಗೂ ಆಡಳಿತ ಮಂಡಳಿ ಕೋಟಾ ಸೀಟುಗಳು ಎಷ್ಟು ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸಬೇಕಾಗುತ್ತದೆ. 2015–16ನೇ ಸಾಲಿನ ಪ್ರವೇಶ ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಈ ವರ್ಷದ ಡಿಸೆಂಬರ್‌ ಒಂದರಿಂದ 6ರವರೆಗೆ ದೇಶದ 33 ನಗರಗಳಲ್ಲಿ ಕಂಪ್ಯೂಟರ್‌ ಆಧಾರಿತ ಪ್ರವೇಶ ಪರೀಕ್ಷೆ ನಡೆಯಲಿದೆ. ಈ ತಿಂಗಳ 29ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್‌ 10ರವರೆಗೂ ಕಾಲಾವಕಾಶ ಇದೆ. ಪರೀಕ್ಷೆಯ ವಿಧಾನ, ಪಠ್ಯಕ್ರಮ, ಲಭ್ಯವಿರುವ ಸೀಟುಗಳು ಇತ್ಯಾದಿ ವಿವರಗಳನ್ನು ಕಾಲ ಕಾಲಕ್ಕೆ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಅಖಿಲ ಭಾರತ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆ – 2015ಕ್ಕೆ (ಎಐಪಿಜಿಎಂಇಇ) ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪಡೆಯಲು ಬಯಸುವ ಆಕಾಂಕ್ಷಿಗಳು ಅಖಿಲ ಭಾರತ ಕೋಟಾ ಹಾಗೂ ರಾಜ್ಯಮಟ್ಟದ ಸರ್ಕಾರಿ ಕೋಟಾ ಸೀಟುಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ಬರೆಯುವುದು ತಪ್ಪಲಿದೆ. ಅಖಿಲ ಭಾರತ ಕೋಟಾ ಮತ್ತು ರಾಜ್ಯಮಟ್ಟದ ಕೋಟಾ ಸೀಟುಗಳ ಭರ್ತಿಗೆ ಇದುವರೆಗೆ ಪ್ರತ್ಯೇಕ ಪರೀಕ್ಷೆ ನಡೆಯುತ್ತಿತ್ತು. ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಬಯಸುವವರು ಎರಡೂ ಪರೀಕ್ಷೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ, ಎರಡೂ ಪರೀಕ್ಷೆಗಳನ್ನು ಬರೆಯಲು ಅಲೆದಾಡಬೇಕಾಗಿತ್ತು. ಅಲ್ಲದೆ ಎರಡೂ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಹೆಚ್ಚು ಸಮಯವನ್ನು ಮೀಸಲಿಡಬೇಕಾಗಿತ್ತು. ಆದರೆ, ಈಗ ಒಂದೇ ಪರೀಕ್ಷೆ ನಡೆಸುವುದರಿಂದ ಸ್ವಲ್ಪಮಟ್ಟಿಗೆ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಎರಡು ಬಾರಿ ಶ್ರಮ ಹಾಕಿ ಪರೀಕ್ಷೆ ಬರೆಯುವುದು ತಪ್ಪಲಿದೆ. ಡಿಸೆಂಬರ್ ವೇಳೆಗೆ ಸ್ಪಷ್ಟ ಚಿತ್ರಣ: ರಾಜ್ಯ ಸರ್ಕಾರಿ ಕೋಟಾದಡಿ ಎಷ್ಟು ಪ್ರಮಾಣದ ಸೀಟುಗಳು ಹಂಚಿಕೆಯಾಗಲಿವೆ ಎಂಬ ಸ್ಪಷ್ಟಚಿತ್ರಣ ಡಿಸೆಂಬರ್ ವೇಳೆಗೆ ಸಿಗುವ ಸಾಧ್ಯತೆ ಇದೆ. ಕರ್ನಾಟಕ ವೃತ್ತಿಶಿಕ್ಷಣ ಕೋರ್ಸ್‌ಗಳ (ಪ್ರವೇಶ ಮತ್ತು ಶುಲ್ಕನಿಯಂತ್ರಣ) ಕಾಯ್ದೆ 2006ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಈಗಾಗಲೇ ಚಿಂತನೆ ನಡೆಸಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಶಿಕ್ಷಣ ತಜ್ಞರು, ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಗಳು, ಶಾಸಕರೊಂದಿಗೆ ಚರ್ಚೆ ನಡೆಸಿದ ನಂತರ ಉದ್ದೇಶಿತ ತಿದ್ದುಪಡಿಗಳಿಗೆ ಸ್ಪಷ್ಟರೂಪ ನೀಡಲಾಗುತ್ತದೆ. ವಿಧಾನಮಂಡಲದ ಮುಂಬರುವ ಅಧಿವೇಶದಲ್ಲಿ ತಿದ್ದುಪಡಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ. ಶುಲ್ಕ ಹಾಗೂ ಸೀಟು ಹಂಚಿಕೆ ಪ್ರಮಾಣಕ್ಕೆ ಮಾತ್ರ ತಿದ್ದುಪಡಿಗಳು ಸೀಮಿತವಾಗಿರುತ್ತವೆ. ಪರೀಕ್ಷಾ ಸ್ವರೂಪದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೀಗಾಗಿ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಆಕಾಂಕ್ಷಿಗಳು ತಿದ್ದುಪಡಿ ಬಗ್ಗೆ ತಲೆಕೆಡಿಸಿಕೊಳ್ಳದೆ ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸಿದರೆ ಉತ್ತಮ ರ್‌್ಯಾಂಕ್‌ಗಳಿಸಲು ಸಾಧ್ಯವಾಗಲಿದೆ. ರಾಜ್ಯಮಟ್ಟದ ಕೋಟಾ ಸೀಟುಗಳ ಭರ್ತಿಗೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ನಡೆಸುತ್ತಿದ್ದಾಗ ಪಾರದರ್ಶಕತೆ ಇರುತ್ತಿರಲಿಲ್ಲ. ಪರೀಕ್ಷೆಯಲ್ಲಿ ಅಕ್ರಮಗಳು ನಡೆಯುತ್ತವೆ ಎಂಬ ದೂರುಗಳು ಕೇಳಿಬರುತ್ತಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡು 2014–15ನೇ ಸಾಲಿನಲ್ಲಿ ಪಿಜಿಸಿಇಟಿ ನಡೆಸುವ ಹೊಣೆಯನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ವಹಿಸಲಾಗಿತ್ತು. ಮಂಡಳಿ ನೀಡಿದ ಮೆರಿಟ್‌ ಪಟ್ಟಿ ಆಧರಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸೆಲಿಂಗ್‌ ಮೂಲಕ ಸೀಟು ಹಂಚಿಕೆ ಮಾಡಿತ್ತು. 2015–16ನೇ ಸಾಲಿನ ಸೀಟು ಹಂಚಿಕೆಯನ್ನು ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಮಾಡಲಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ ಕೇವಲ ಪ್ರವೇಶ ಪರೀಕ್ಷೆ ನಡೆಸಿ ಅರ್ಹತಾ ಪಟ್ಟಿ ನೀಡಲಿದೆ. ಅದನ್ನು ಆಧರಿಸಿ, ರಾಜ್ಯ ಸರ್ಕಾರದ ಮೀಸಲಾತಿಗೆ ಅನುಗುಣವಾಗಿ ಪ್ರಾಧಿಕಾರ ಆನ್‌ಲೈನ್‌ ಮೂಲಕ ಸೀಟು ಹಂಚಿಕೆ ಮಾಡಲಿದೆ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಯಾವ ರೀತಿಯಿಂದಲೂ ತೊಂದರೆ ಆಗುವುದಿಲ್ಲ. ಅರ್ಹತೆ: 2015ರ ಮಾರ್ಚ್‌ 31ರ ಒಳಗೆ ಎಂಬಿಬಿಎಸ್‌ ವಿದ್ಯಾರ್ಹತೆ ಹೊಂದಿ ಇಂಟರ್ನ್‌ಶಿಪ್‌ ಮುಗಿಸಿರುವ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₨ 3750 ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಂಗವಿಕಲರಿಗೆ ₨ 2750 ಶುಲ್ಕ ನಿಗದಿಯಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವೆಬ್‌ಸೈಟ್‌ ವಿಳಾಸ: ... ಇ–ಮೇಲ್‌: @.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.