ಸೋಲಾರ್‌ ‘ರೇಸ್‌’ ಕಾರ್‌ ಶರವೇಗದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಹೊಟ್ಟೆಗೆ ಪಳೆಯುಳಿಕೆ ಇಂಧನ ಅರೆಕಾಸಿನ ಮಜ್ಜಿಗೆ ಇದ್ದಂತೆ. ಧರೆಯ ಒಡಲಲ್ಲಿರುವ ಇಂಧನ ಬರಿದಾಗುತ್ತಿದ್ದು 2050ರ ವೇಳೆಗೆ ಇಂಧನ ಕ್ಷಾಮ ಉಂಟಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಭೂಗರ್ಭಶಾಸ್ತ್ರಜ್ಞರು. ಜಗತ್ತು ಪೆಟ್ರೋಲ್‌ ಮತ್ತು ಡಿಸೇಲ್‌ ಮೇಲೆ ಅವಲಂಬಿತವಾಗಿದ್ದು ಇವು ಬರಿದಾಗುವ ಭೀತಿ ಇದೆ. ಹಾಗಾಗಿ ಪರ್ಯಾಯ ಇಂಧನ ಹುಡುಕಾಟದ ಅನಿವಾರ್ಯ ಎದುರಾಗಿದೆ. ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯ ಇಂಧನ ಬಳಸಬೇಕು ಎಂಬ ಚರ್ಚೆ ಬಹಳ ಹಳೆಯದ್ದು. ಇವುಗಳ ಬದಲಿಗೆ ಪವನಶಕ್ತಿ, ಸೌರಶಕ್ತಿ ಬಳಸಬೇಕೆಂಬ ವಾದವೂ ಹಳೆಯದೇ. ಆದರೆ ಇವಾವೂ ಉತ್ಪಾದನಾ ಸ್ನೇಹಿ ಆಗಿರದ ಕಾರಣ ಈವರೆಗೂ ವಾಣಿಜ್ಯ ಉತ್ಪಾದನೆ ಆರಂಭವಾಗಿಲ್ಲ. ಪೆಟ್ರೋಲ್, ಡೀಸೆಲ್‌ ಬದಲಿಗೆ ಅತ್ಯುತ್ತಮ ಇಂಧನ ಸಾಧ್ಯತೆಗಳನ್ನು ವಿಜ್ಞಾನಿಗಳು ದಶಕಗಳ ಹಿಂದೆಯೇ ಕಂಡು ಹಿಡಿದಿದ್ದಾರೆ. ಅವೆಲ್ಲಾ ಒಂದೊಂದಾಗಿ ಫ್ಯೂಯೆಲ್ ಸೆಲ್, ಆ್ಯಂಟಿ ಮ್ಯೋಟರ್ ಮುಂತಾದ ಸ್ವರೂಪಗಳಲ್ಲಿ ಆಚೆ ಬರುತ್ತಿವೆ. ಸೌರಶಕ್ತಿ ಮೇಲೆ ಹಲವಾರು ಪ್ರಯೋಗಗಳು ಈಗಲೂ ನಡೆಯುತ್ತಿವೆ. ಈ ಮೂಲಕ ಕಾರು, ಬಸ್ಸು ಟ್ರಕ್ಕು, ಯಂತ್ರ ಚಾಲನೆಯ ಪ್ರಯೋಗಗಳು ಯಶಸ್ವಿಯಾಗಿವೆ. ಬೆಂಗಳೂರಿನ ಎಂ.ಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಮೆಕಾನಿಕಲ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಖಿಲ್‌ ಅನಿರುದ್ಧ್, ಅಮಿತ್‌, ಪಯಾಜ್‌, ಫಾರೂಕ್‌ ಸೌರಶಕ್ತಿಯನ್ನು ದಕ್ಷ ಇಂಧನವನ್ನಾಗಿ ಬಳಸಿಕೊಂಡು ರೇಸ್‌ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನದಿಂದ ಕಾರು ಹೆಚ್ಚು ವೇಗದಲ್ಲಿ ಚಲಿಸಲಾರದು ಎಂಬ ಸಂಶೋಧನೆಯನ್ನೇ ಬುಡಮೇಲು ಮಾಡಿರುವ ಈ ವಿದ್ಯಾರ್ಥಿಗಳು ಪೆಟ್ರೋಲ್‌ ಅಥವಾ ಡಿಸೇಲ್‌ ವಾಹನಗಳಂತೆ ವೇಗವಾಗಿರುವ ಸೌರ ಕಾರು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೌರ ಫಲಕದ ಮೇಲೆ ಬೀಳುವ ಸೂರ್ಯನ ಕಿರಣಗಳು ವಿದ್ಯುತ್‌ಕೋಶಗಳಲ್ಲಿ ವಿದ್ಯುತ್‌ ಆಗಿ ಪರಿವರ್ತನೆಗೊಂಡು ಬ್ಯಾಟರಿಯಲ್ಲಿ ಸಂಗ್ರಹವಾಗುತ್ತದೆ. ಇಲ್ಲಿ ಬಳಸಲಾಗಿರುವ ವಿದ್ಯುತ್‌ ಕೋಶಗಳನ್ನು ಸಿಲಿಕಾನ್, ಇಂಡಿಯಮ್, ಗ್ಯಾಲಿಯಂ ಮತ್ತು ಸಾರಜನಕ ಅರೆವಾಹಕ ವಸ್ತುಗಳಿಂದ ನಿರ್ಮಿಸಲಾಗಿದೆ. ಈ ವಿದ್ಯುತ್‌ ಕೋಶಗಳಲ್ಲಿರುವ ಎಲೆಕ್ಟ್ರಾನ್‌ಗಳು ಸೌರ ವಿದ್ಯುತ್‌ ಅನ್ನು ವರ್ಧಿಸುವಲ್ಲಿ ಸಹಕಾರಿಯಾಗುತ್ತವೆ. ಹಾಗಾಗಿ ಈ ವಿದ್ಯುತ್‌ ಹೆಚ್ಚು ದಕ್ಷತೆ ಹೊಂದಿದ್ದು ಸೌರ ಕಾರಿನ ವೇಗವು ಸಾಮಾನ್ಯ ಕಾರಿನಂತೆ ಇರುತ್ತದೆ ಎನ್ನುತ್ತದೆ ವಿದ್ಯಾರ್ಥಿಗಳ ತಂಡ. ಹಳೆಯ ತಂತ್ರಜ್ಞಾನ ಸುಧಾರಿಸಿ ಎಲೆಕ್ಟ್ರಾನುಗಳ ಮೂಲಕ ಇಂಧನ ಶಕ್ತಿಯನ್ನು ವೃದ್ಧಿಸುವ ನಮ್ಮ ನೂತನ ತಂತ್ರಜ್ಞಾನ ವಾಣಿಜ್ಯ ಬಳಕೆಗೆ ಮುಕ್ತವಾಗಿದೆ ಎಂಬುದು ಸಂಶೋಧಕ ವಿದ್ಯಾರ್ಥಿಗಳ ಅಭಿಮತ. ಹಣದ ಉಳಿತಾಯ ಮತ್ತು ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸೋಲಾರ್‌ ಕಾರ್‌ ಅನಿವಾರ್ಯ ಆಯ್ಕೆ ಎನ್ನುತ್ತಾರೆ ಮೆಕಾನಿಕಲ್‌ ವಿಭಾಗದ ಮುಖ್ಯಸ್ಥರು. ರೇಸ್‌ ಕಾರು ಅಭಿವೃದ್ಧಿಗೆ ಕಾಲೇಜು ಮುಖ್ಯಸ್ಥರಾದ ಮುನಿಸ್ವಾಮಿ ಅವರು ಹಣಕಾಸು ನೆರವು ನೀಡಿ ಪ್ರೊತ್ಸಾಹಿಸಿದ್ದಾರೆ. ಹಾಗೇ ಪ್ರಾಂಶುಪಾಲ ಬದ್ರಿನಾರಾಯಣ್‌ ಮತ್ತು ವಿಭಾಗದ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಸೋಲಾರ್‌ ಕಾರನ್ನು ತಯಾರಿಸಲಾಯಿತು ಎನ್ನುತ್ತಾರೆ ವಿದ್ಯಾರ್ಥಿಗಳು. ಆವಿಷ್ಕಾರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಮಾದರಿಗಳನ್ನು ಪರಿಚಯಿಸಲು ವೇದಿಕೆಯಾಗಲಿದೆ ಈ ಅಂಕಣ. ತಮ್ಮ ಕಾಲೇಜಿನ ಪ್ರಮಾಣ ಪತ್ರದೊಡನೆ ಮಾಹಿತಿ, ವಿವರ ಮತ್ತು ಚಿತ್ರಗಳನ್ನು ನಮಗೆ ಮೇಲ್‌ ಮಾಡಬೇಕು. ಲೇಖನ ನುಡಿ ತಂತ್ರಾಂಶದಲ್ಲಿರಲಿ. ಉತ್ತಮ ಗುಣಮಟ್ಟದ ಚಿತ್ರವಿರಲಿ. ಇ–ಮೇಲ್‌: @.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.