ಸಮಾಜಮುಖಿ ಪದವಿ ‘ಎಂಎಸ್ಇ’ ಒಬ್ಬ ಯಶಸ್ವಿ ಉದ್ಯಮಿಯಾಗಬೇಕು ಎಂಬ ಹಂಬಲದ ಜೊತೆಗೆ ಸಮಾಜದ ಕೆಲವಾದರೂ ಸಮಸ್ಯೆಗಳಿಗೆ ಈ ಉದ್ದಿಮೆ ಸ್ಪಂದಿಸಬೇಕು. ಉದ್ದಿಮೆ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಹಾತೊರೆಯುವವರಿಗೆ “ಮಾಸ್ಟರ್ ಆಫ್ ಸೋಷಿಯಲ್ ಎಂಟರ್‌ಪ್ರಿನರ್‌ಶಿಪ್’ (ಸಾಮಾಜಿಕ ಉದ್ಯಮಶೀಲತೆಯಲ್ಲಿ ಸ್ನಾತಕೋತ್ತರ ಪದವಿ- ಎಂಎಸ್ಇ) ಸೂಕ್ತವಾದ ಆಯ್ಕೆಯಾಗಬಲ್ಲದು. ಹೌದು, ಇದು ಹೊಸ ಪರಿಕಲ್ಪನೆ. ವ್ಯವಹಾರ ನಿರ್ವಹಣೆ, ಹಣಕಾಸು ನಿರ್ವಹಣೆಗೆ ಸಂಬಂಧಪಟ್ಟಂತೆ ದೇಶದಲ್ಲಿ ಹಲವಾರು ಕೋರ್ಸ್‌ಗಳಿವೆ. ಇತ್ತ ಸಮಾಜ ಸೇವೆ ಮಾಡಬೇಕು ಎಂಬುವವರಿಗಾಗಿ ಎಂಎಸ್‌ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳೂ ಇವೆ. ಇನ್ನು, ಮುಂಬೈಯಲ್ಲಿ ಟಾಟಾ ಒಡೆತನದ ಕಾಲೇಜಿನಲ್ಲಿ ಸಾಮಾಜಿಕ ಉದ್ಯಮಶೀಲತೆ ವಿಷಯದಲ್ಲಿ ಎಂ.ಎ. ಅಧ್ಯಯನ ಮಾಡಲು ಅವಕಾಶ ಇದೆ. ಆದರೆ, ಇದು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಆಗಿದೆ. ಸಂಪೂರ್ಣವಾಗಿ ಸಾಮಾಜಿಕ ಉದ್ಯಮಶೀಲತೆ ವಿಷಯದಲ್ಲಿ ಅಧ್ಯಯನ ಮಾಡಬೇಕು. ಸಾಮಾಜಿಕ ಉದ್ಯಮವನ್ನು ಸ್ಥಾಪಿಸಬೇಕು ಎಂದು ನಿರ್ಧರಿಸಿರುವವರಿಗೆ ಹುಬ್ಬಳ್ಳಿಯಲ್ಲಿ ದೇಶಪಾಂಡೆ ಪ್ರತಿಷ್ಠಾನ ಆರಂಭಿಸಿರುವ “ಮಾಸ್ಟರ್ ಆಫ್ ಸೋಷಿಯಲ್ ಎಂಟರ್‌ಪ್ರಿನರ್‌ಶಿಪ್’ ಹೇಳಿ ಮಾಡಿಸಿದಂತಹ ಕೋರ್ಸ್ ಎನ್ನಲಡ್ಡಿಯಿಲ್ಲ. ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಪ್ರತಿಷ್ಠಾನದ ಸುಂದರ ಕಟ್ಟಡದಲ್ಲಿ “ದೇಶಪಾಂಡೆ ಸೆಂಟರ್ ಆಫ್ ಸೋಷಿಯಲ್ ಎಂಟರ್‌ಪ್ರಿನರ್‌ಶಿಪ್’ ಇದ್ದು, ಎರಡು ವರ್ಷಗಳ ಈ ಕೋರ್ಸ್ ಅಧ್ಯಯನಕ್ಕೆ ಪೂರಕ ವಾತಾವರಣ ಹೊಂದಿದೆ. “ಈ ಪದವಿಯ ಹೆಸರನ್ನು ಕೇಳಿದವರು ಹುಬ್ಬೇರಿಸಿದ್ದು ಸಹಜ. ಇದೊಂದು ನೂತನ ಪರಿಕಲ್ಪನೆ. ಇದು ಎಂಬಿಎ ಮತ್ತು ಎಂಎಸ್ಡಬ್ಯ್ಲೂ ಕೋರ್ಸ್ ಗಳ ಉತ್ತಮ ಸಂಯೋಜನೆಯಾಗಿದೆ’ ಎಂದು ಸಂಸ್ಥೆಯ ಮುಖ್ಯಸ್ಥೆ ಆ್ಯನಿ ವಿಜಯಾ ಹೇಳುತ್ತಾರೆ. “ನಾನು ಮೂಲತಃ ಎಂಬಿಎ ಪದವೀಧರೆ. ಆದರೆ, ಈ ಸಂಸ್ಥೆಯನ್ನು ಸೇರಿದ ನಂತರ, ನಾನು ಕಲಿಯುವಾಗ ಇಂತಹ ಕೋರ್ಸ್ ಇರಬೇಕಾಗಿತ್ತು’ ಎಂದು ಅನಿಸಿತ್ತು ಎನ್ನುವ ಮೂಲಕ ಕೋರ್ಸ್‌ನ ವೈಶಿಷ್ಟ್ಯವನ್ನು ವಿವರಿಸುತ್ತಾರೆ. “2012ರಲ್ಲಿ ಈ ಕೋರ್ಸ್ಅನ್ನು ಆರಂಭಿಸಲಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಮಾನ್ಯತೆ ನೀಡಿದೆ. ಮೊದಲ ವರ್ಷ 13 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಎರಡನೇ ವರ್ಷ 20 ವಿದ್ಯಾರ್ಥಿಗಳು ಅಧ್ಯಯನ ಕೈಗೊಂಡಿದ್ದಾರೆ’ ಎಂದು ಹೇಳಿದರು. ಅರ್ಹತೆ: ಎಂಎಸ್ಇಗೆ ಪ್ರವೇಶ ಪಡೆಯಲು ಯಾವುದೇ ಪದವಿ ಹೊಂದಿದ್ದರೆ ಸಾಕು ಎನ್ನುವ ವಿಜಯಾ, ಪ್ರಸಕ್ತ ವರ್ಷ ಮೂವರು ಎಂಜಿನಿಯರಿಂಗ್ ಪದವೀಧರರು ಪ್ರವೇಶ ಪಡೆದಿದ್ದಾರೆ ಎಂದೂ ಹೇಳಿದರು. ಒಟ್ಟು ನಾಲ್ಕು ಸೆಮಿಸ್ಟರ್ ಕೋರ್ಸ್ ನಲ್ಲಿ 25 ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಕ್ರೆಡಿಟ್ ಪದ್ಧತಿಯನ್ನು ಒಳಗೊಂಡಿದೆ. ಹೊಸದಾಗಿ ಆರಂಭಗೊಳ್ಳುವ ಉದ್ದಿಮೆಗಳು, ಕೃಷಿ ಆಧಾರಿತ ಉದ್ದಿಮೆ ಹಾಗೂ ಕರಕುಶಲ ಕಲೆಗಳ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಸಮಾಜಮುಖಿ, ಜವಾಬ್ದಾರಿಯುತ ಪದವೀಧರರನ್ನಾಗಿ ತಯಾರು ಮಾಡಲಾಗುತ್ತದೆ. ಸ್ವತಂತ್ರವಾಗಿ ಯೋಚಿಸಿ ಉದ್ದಿಮೆ ಸ್ಥಾಪಿಸುವುದು, ಅವಕಾಶಗಳನ್ನು ಸೃಷ್ಟಿಸುವುದು, ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಸಾಮಾಜಿಕ ಉದ್ಯಮ ಸ್ಥಾಪಿಸಲು ಅಗತ್ಯವಿರುವ ತರಬೇತಿ ನೀಡಲಾಗುವುದು. ಎಂಎಸ್ಇ ಅಧ್ಯಯನ ಮಾಡುತ್ತಲೇ ಕೆಲವು ವಿದ್ಯಾರ್ಥಿಗಳು ಈಗಾಗಲೇ ಸಣ್ಣ ಪ್ರಮಾಣದ ಉದ್ದಿಮೆಯನ್ನು ಸ್ಥಾಪಿಸಿದ್ದಾರೆ ಎಂದು ವಿಜಯಾ ಹೇಳುತ್ತಾರೆ. ಕೃಷಿ ಆಧಾರಿತ ಉದ್ದಿಮೆ ಸ್ಥಾಪನೆಗೆ ಒತ್ತು ಎಂದ ಮೇಲೆ ಗ್ರಾಮೀಣ ಪ್ರದೇಶದ ಪರಿಚಯ ಬೇಕೇಬೇಕು. ಹೀಗಾಗಿ ವಿದ್ಯಾರ್ಥಿಗಳು ಕೋರ್ಸ್ ಅವಧಿಯಲ್ಲಿ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ, ಗ್ರಾಮೀಣ ಪ್ರದೇಶದ ಸಮಸ್ಯೆ, ಅವರ ಅಗತ್ಯಗಳು, ಆ ಭಾಗದಲ್ಲಿ ಸಿಗುವ ಕಚ್ಚಾ ವಸ್ತುಗಳಿಂದ ಸ್ಥಾಪನೆ ಮಾಡಬಹುದಾದ ಉದ್ಯಮದ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗುತ್ತದೆ ಎನ್ನುತ್ತಾರೆ. ಈಗಾಗಲೇ ಹಲವಾರು ಕಂಪೆನಿಗಳು ಸಂಸ್ಥೆಯ ವಿದ್ಯಾರ್ಥಿಗಳ ಸಾಮರ್ಥ್ಯ, ಕಾರ್ಯ ಕ್ಷಮತೆಯನ್ನು ಮನಗಂಡು ತಮ್ಮ ಕಂಪೆನಿಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ ಎನ್ನುತ್ತಾರೆ ಸಂಸ್ಥೆಯ ವಿದ್ಯಾರ್ಥಿ ಘಟಕದ ಕಾರ್ಯಕ್ರಮ ವ್ಯವಸ್ಥಾಪಕ ಸುನಿಲ ಪಾಟೀಲ. ಸ್ಕೈಪ್ ಮೂಲಕ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಿಂದ ಬೆಲ್ಜಿಯಂ ಮೂಲದ ಉದ್ಯಮಿ ಇಂಗೆ () ಎಷ್ಟು ಪ್ರಭಾವಿತರಾಗಿದ್ದರು ಎಂದೆ, ಸ್ವತಃ ತಮ್ಮ ಖರ್ಚಿನಲ್ಲಿ ಹುಬ್ಬಳ್ಳಿಗೆ ಬಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಲ್ಲಿನ ಕಾರ್ಯ ಚಟುವಟಿಕೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ಸತ್ಯಮೇವ ಜಯತೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಡಿಯೋ ಸ್ವಯಂ ಸೇವಕ ಗೋವಾ ಮೂಲದ ಸ್ಟ್ಯಾಲಿನ್ ಕೆ. ಸಹ ಸಂಸ್ಥೆಗೆ ಭೇಟಿ ನೀಡಿದ್ದರು ಎಂದು ಹೇಳುತ್ತಾರೆ. ಪ್ರವೇಶ ಹೇಗೆ? ಪ್ರವೇಶ ಪರೀಕ್ಷೆ, ಸಂದರ್ಶನ ಮೂಲಕವೇ ಎಂಎಸ್ಇಗೆ ಪ್ರವೇಶ ಪಡೆಯಬೇಕು. ವಾರ್ಷಿಕ ಶುಲ್ಕ ₨ 50,000 ನಿಗದಿಪಡಿಸಲಾಗಿದೆ. ಅಲ್ಲದೇ, ಸಂಸ್ಥೆಯ ಹಾಸ್ಟೆಲ್‌ನಲ್ಲಿಯೇ ವಾಸ್ತವ್ಯ ಮಾಡುವುದು ಕಡ್ಡಾಯ. ಕೆಲವೊಮ್ಮೆ ದೇಶ-–ವಿದೇಶದ ತಜ್ಞರ ಉಪನ್ಯಾಸ, ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಇದಕ್ಕೆ ನಿರ್ದಿಷ್ಟ ಸಮಯ ಇರುವುದಿಲ್ಲ. ಇಂತಹ ಉಪನ್ಯಾಸ, ಸಂವಾದ ಕಾರ್ಯಕ್ರಮಗಳನ್ನು ಸ್ಕೈಪ್ ಮೂಲಕ ನಡೆಸಲಾಗುತ್ತದೆ. ಈ ಕಾರಣದಿಂದ ವಿದ್ಯಾರ್ಥಿಗಳು ಸಂಸ್ಥೆಯ ಹಾಸ್ಟೆಲ್‌ನಲ್ಲಿಯೇ ಇರುವುದು ಅನಿವಾರ್ಯವಾಗುತ್ತದೆ ಎಂದೂ ಪಾಟೀಲ ವಿವರಿಸುತ್ತಾರೆ. 2014–16 ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ವಿವರಗಳಿಗೆ ../ 2014. ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಮೊಬೈಲ್ ಸಂಖ್ಯೆ 9686113996 ಸಂಪರ್ಕಿಸಬಹುದು. ವಿಶೇಷ ತರಬೇತಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಲಕ್ಷಣಬೆಳೆಸಲು ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ. ವ್ಯಕ್ತಿತ್ವ ವಿಕಸನ ಶಿಬಿರ, ಗ್ರಾಮೀಣ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಇಂಗ್ಲಿಷ್‌ ತರಬೇತಿ, ಸಂವಹನ ಕಲೆ ಮುಂತಾದವುಗಳನ್ನು ಹೇಳಿಕೊಡಲಾಗುತ್ತದೆ. ಮಹತ್ವಾಕಾಂಕ್ಷೆ, ಸೇವೆ, ಅಭಿವೃದ್ಧಿ, ಬೆಳವಣಿಗೆ ಮತ್ತು ಸುಧಾರಣೆ ಎಲ್ಲವೂ ಒಟ್ಟೊಟ್ಟಿಗೆ ನಿಭಾಯಿಸುವ ಸಾಮರ್ಥ್ಯ ಉಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಈ ಕೋರ್ಸು ಎನ್ನುವುದು ನೆನಪಿರಲಿ. ಸಂಸ್ಥೆಗೆ ಭೇಟಿ ನೀಡಿರುವ ಖ್ಯಾತನಾಮರು: ರತನ್ ಟಾಟಾ ಮತ್ತು ರಾಜು ರೆಡ್ಡಿ, ಫಣೀಂದ್ರ ಸೋಮ, ಗುರುರಾಜ ದೇಶಪಾಂಡೆಯಂತಹ ಯಶಸ್ವಿ ಉದ್ಯಮಿಗಳೂ ಭೇಟಿ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.